Poem

ಬಯಲ ಬೆಳಕಿಗೆ ಬಾಗಿ 

ಎದೆಯೊಳಗೆ ಧಗಧಗಿಸುವ ಕಾಡ್ಗಿಚ್ಚು
ಕಾಣೆಯಾಗಿವೆ ನಂದಿಸುವ ಮೋಡಗಳು
ಬತ್ತಿಹೋಗಿವೆ
ಭುವಿಯ ಮೇಲಿನ ನೀರಿನೊರೆತೆಗಳು
ಮಾಡಿನ ಸನಿಹದಲ್ಲೇ ಹಾರಾಡುತ್ತಿವೆ
ರಣಹದ್ದುಗಳು
ನಡುಹಗಲೇ ಮನುಷ್ಯತ್ವದ ಕೊಲೆಯಾಗಿರಬೇಕು

 

ಕತ್ತರಿಸುವ ಕೊಡಲಿ ಕುಯ್ಯುವ ಗರಗಸ
ಅಬ್ಬರಿಸುತ್ತಲೇ ಇವೆ ಹರಿತಗೊಂಡು
ಹೆಣವಾಗಿ ನೆಲಕ್ಕುರುಳುವ ಮರಗಳು
ಹಣವಾಗಿ ಜೇಬು ಭರ್ತಿ
ತಿಂದು ತೇಗುತ್ತಿರುವ ಮಹಲುಗಳು
ನೊಂದವರ ಹಸಿರಕ್ತ ಕುಡಿದಿವೆ ಕಂಠಪೂರ್ತಿ

 

ಹಿಂದೂ ಕ್ರೈಸ್ತ ಮುಸ್ಲಿಂ ಬೌದ್ಧ ಜೈನ ಪಾರ್ಸಿ
ಊರ ತುಂಬಾ ಮುಖವಾಡದ ಮಂದಿ
ಧರ್ಮಾಂಧತೆಯ ಆಕ್ರಮಣದ ಕ್ರೂರತೆಗೆ
ಅಸುನೀಗಿದ ಮನುಷ್ಯತ್ವ ಅನಾಥ ಗಾಂಧಿಯ ತತ್ತ್ವ

 

ತುಂಬು ಬಸುರಿಯ ಬಯಕೆಯ ಚಿವುಟಿದೆ
ಹೊಳೆವ ತ್ರಿಶೂಲದ ಚೂಪು
ಭಕ್ತಗಣದ ನಶೆಯೇರಿದ ಹಳದಿ ಕಣ್ಣಲ್ಲಿ
ಪಟಪಟಿಸುವ ಕೇಸರಿಯ ಪತಾಕೆ
ಇರಿಯಲು ಹವಣಿಸುವ ಜಾತಿ ಸಲಾಕೆ
ತತ್ತರಿಸಿದೆ ಲೇಖನಿಯ ಕಣ್ಣಲಿ ದನಿಯ ಮೊಳಕೆ
ಹಾಳೆಯಲ್ಲಿ ನೆಲೆಗೊಳ್ಳಲಾಗದ ಅಸಹಾಯಕತೆಗೆ

 

ಒಡಲ ಕಸುವೆಲ್ಲವ ಒಗ್ಗೂಡಿಸಿಕೊಂಡು
ಬಿಕ್ಕುವ ಮನ ವಿನಂತಿಸುತ್ತಿದೆ ಪ್ರತಿದಿನ
ಬಯಲ ಬೆಳಕಿಗೆ ಬಾಗಿ
ಜೀವದೊಲವ ಮೌನದಿಬ್ಬದ ಆಸರೆಗೊರಗಿ

 

ಎಂದೂ ಮುಳುಗದಿರಲಿ ಉಸಿರಿನ ದೋಣಿ
ಬೆವರಿನ ಕಡಲಲಿ ದುಃಖದ ಮಡುವಿನಲಿ
ಸೋಲದಿರಲಿ ಹುಟ್ಟು ಹಾಕುವ ಕೈಗಳು

 

ಋತುಮಾನದ ನೆಳಲಲ್ಲಿ ಕಾಲದ ಕೊಳಲಲ್ಲಿ
ಚಿಮ್ಮುವ ಕರುಣೆಯ ಗಾನ
ಕೀವು ಒಸರುವ ಗಾಯದ ಕಣಿವೆಯಲ್ಲಿ
ಅರಳಿಸಲಿ ಬಣ್ಣದ ಹೂಗಳ ಗೊಂಚಲು

 

ಗರಿಕೆಯ ಎಸಳಿನ ಮಂಜಿನ ಹಣತೆಯಲ್ಲಿ
ಪ್ರತಿಫಲಿಸಿ ಬೆಳದಿಂಗಳು
ಚಿಟ್ಟೆಯ ಚುಂಬನಕ್ಕೆ ಪುಳಕಗೊಂಡ ಹೂಬನ
ಬಿಸಿಯೇರಿದ ಗಾಳಿಯ ತಣ್ಣಗಾಗಿಸಿ
ಕಳವಳದ ಬಾಳಿನಲ್ಲಿ ಪರಿಮಳದ ಬೀಜ ಬಿತ್ತಲಿ

 

ಮಣಭಾರದ ಬ್ಯಾಗನು ಬೆನ್ನಲ್ಲಿ ಹೊತ್ತು
ತೆಂಗಿನ ತೋಟದ ದಾರಿಯಲ್ಲಿ
ಉದುರಿ ಬಿದ್ದಿರುವ ನವಿಲು ಗರಿಗಳ
ಹಾಯುತ್ತಿವೆ
ಉಮೇದು ಉರಿಗೊಂಡ ಶಾಲಾ ಮಕ್ಕಳು
ಪುಳಕಗೊಂಡಿದೆ ಹರಿದ ಪುಸ್ತಕದ ಹೊಕ್ಕಳು

ಚಿತ್ರ : ಮಲ್ಲಿಕಾರ್ಜುನಗೌಡ ತೂಲಹಳ್ಳಿ

ಸತೀಶ್ ಜವರೇಗೌಡ

ಬಹುಮುಖ ಪ್ರತಿಭೆಯ ಸಾಹಿತಿ ಟಿ. ಸತೀಶ್ ಜವರೇಗೌಡ ಮಂಡ್ಯ ನೆಲದ ಅಪ್ಪಟ ದೇಸಿ ಪ್ರತಿಭೆ. ಮಂಡ್ಯ ತಾಲ್ಲೂಕಿನ ಮಂಗಲ ಗ್ರಾಮ ಹುಟ್ಟೂರು. ತಾಯಿ ಮಂಚಮ್ಮ, ತಂದೆ ಎಂ.ಜೆ. ತಿಮ್ಮೇಗೌಡ. ಎಂ.ಎ.. ಬಿ.ಇಡಿ. ಪದವೀಧರರು. ವೃತ್ತಿಯಲ್ಲಿ ಕ್ರಿಯಾಶೀಲ ಶಿಕ್ಷಕರಾಗಿ ಮೈಸೂರು ತಾಲ್ಲೂಕಿನ ಮೆಲ್ಲಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅವರು 'ಕಾವ್ಯ' ಪ್ರಕಾರದಲ್ಲಿ ಜೀವನ್ಮುಖಿ, ಹೊಳೆ ಜಂಗಮನ ಜೋಳಿಗೆ, ಸಂಜೆ ಮಳೆ, ಗಾಳಿಪಟ, ಕುಹೂ ಕುಹೂ ಕೋಗಿಲೆ, ದಿವ್ಯ ದೀವಿಗೆ ಕೃತಿಗಳನ್ನು ರಚಿಸಿದ್ದಾರೆ. ಜೊತೆಗೆ ಕಾವ್ಯಸಿರಿ, ಸೇವಾಚೇತನ, ವಿಜ್ಞಾನ ಪಥಿಕ ಕೃತಿಗಳನ್ನು ಸಂಪಾದನೆ ಮಾಡಿದ್ದಾರೆ. ಮೂರು ಬಾರಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿ ಮತ್ತು ಎರಡು ಬಾರಿ ದಸರಾ ಪ್ರಧಾನ ಕವಿಗೋಷ್ಠಿಯಲ್ಲಿ ಭಾಗವಹಿಸಿದ್ದಾರೆ. ಇವರ ಎರಡು ದಶಕದ ಬಹುಮುಖ ಕ್ಷೇತ್ರದ ಸೇವಾ ಸಾಧನೆಗಾಗಿ ಸರ್ವಜ್ಞ ಕಾವ್ಯ ಪ್ರಶಸ್ತಿ, ಡಾ.ಜಿ.ಪಿ. ರಾಜರತ್ನಂ ಸಾಂಸ್ಕೃತಿಕ ಪ್ರಶಸ್ತಿ, ಪ್ರತಿಭಾ ಸಾಹಿತ್ಯ ಪ್ರಶಸ್ತಿ, ಡಾ. ನಲ್ಲೂರು ಪ್ರಸಾದ್ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ, ಗಾಂಧೀ-ವಿವೇಕಾನಂದ ಸದ್ಯಾವನ ಪ್ರಶಸ್ತಿ, ಅರಳು ಸಾಹಿತ್ಯ ಪ್ರಶಸ್ತಿ, ಕುವೆಂಪು ಸಾಹಿತ್ಯ ಪ್ರಶಸ್ತಿ, ಡಾ.ಎಸ್.ಕೆ. ಕರೀಂಖಾನ್ ಸಾಂಸ್ಕೃತಿಕ ಮತ್ತು ಸಾಹಿತ್ಯ ಪ್ರಶಸ್ತಿ, ಕಾವ್ಯಶ್ರೀ ಪ್ರಶಸ್ತಿ, ರೋಟರಿ ಆದರ್ಶ ಶಿಕ್ಷಕ ಪ್ರಶಸ್ತಿ, ನೌಕರರ ಸೇವಾರತ್ನ ಪ್ರಶಸ್ತಿ, ಕನ್ನಡ ಚೇತನ ಪ್ರಶಸ್ತಿ, ಸಾಹಿತ್ಯಶ್ರೀ ಪ್ರಶಸ್ತಿ ಮುಂತಾದ ಪ್ರಶಸ್ತಿಗಳು ಅವರಿಗೆ ಸಂದಿವೆ.

More About Author