Poem

ಬಸವನ ಬಂಧು

ಲೇಖಕ ವಿದ್ಯಾಕುಮಾರ.ಮ.ಬಡಿಗೇರ ಅವರು ಬರೆದ 'ಬಸವನ ಬಂಧು' ಕವಿತೆಯ ಸಾಲುಗಳು ಹೀಗಿವೆ...

ತೊದಲಬಾಗಿ ಊರಿನಲ್ಲಿದ್ದನೊಬ್ಬ ರೈತ
ಮೂಡಲಗಿ ಸಂತೆಗೋದ ತರಲು ಜೋಡಿ ಎತ್ತ
ಲಕ್ಷ ಲಕ್ಷ ಎನಿಸಿ ತಂದ ಭಾರಿ ಜೋಡಿ ಎತ್ತ
ಹೂಡಿ ಹೊಡೆದ ರೆಂಟೆಯನ್ನು ಹೊಲದಿ ಸುತ್ತಮುತ್ತ
ಮಳೆಗಾಗಿ ಹಾ ತೊರೆದು ಕಾಯುತ್ತ ಕುಂತ
ಬರಲಿಲ್ಲ ಬರುವ ಮಳೆ ರೈತ ದಿಗ್ಬ್ರಾಂತ
ಇದ್ದಂತಹ ಕಾಳುಕಡಿ ಬಂತು ಮುಗಿಯುತ್ತ
ಬರಸಿಡಿಲಿಗಾಗಿ ಶರೀರ ಸೊರಗಿ ಸೋತು ಹೋತ
ಮೂಲಭೂತ ಅವಶ್ಯಕತೆಗಳೆನಗೆ ಇಲ್ಲದಾತ
ಮೇವಿಲ್ಲದೆ ಜೋಡಿ ಎತ್ತ ಹೊರಗಟ್ಟುದಾತ
ಲಕ್ಷ ಲಕ್ಷ ಕೊಟ್ಟ ಹಣ ಬಾತಿಗೆ ಬಾರದಾತ
ಹೆಂಡತಿ ಮಕ್ಕಳೆಲ್ಲರೂ ಉಪವಾಸವಿರುವುದಾತ
ಹೊಲ ಮನೆ ಬಿಟ್ಟು ದೇಶಾಂತರ್ಹೋಗುದಾತ
ದೇಶಾಂತರ್ಹೋದ ಸ್ವಲ್ಪ ದಿನಕ್ಕೆ ಮುಂಗಾರು ಮಿಂಚಿತ
ಮಿಂಚುತ ಮುಸಲಧಾರೆಯೆರಗಿ ಧರೆಯ ತಣಿಸಿತ
ಕರವೆತ್ತಿ ನಮಿಸಿದ ದೇವರನ್ನು ನೆನೆಯುತ
ಉಳುಮೆಗಾಗಿ ಓಡಿ ಬಂದ ಊರಿಗೆ ಹಿಗ್ಗುತ
ಹುಡುಕಿದ ಎತ್ತುಗಳ ಬೀಜಗಳ ಬಿತ್ತಲು
ಬಿತ್ತಿಬಂದು ಬೀರಿದ ನಗುವಿನ ಹೊನಲು
ಬಂತು ನೋಡು ರೈತಗೆ ಭಾರಿ ಭಾರಿ ಫಸಲು
ತಂತು ನೋಡು ಕಂತೆ ಕಂತೆ ಹಣದ ಚೀಲು
ಹಾರಿ ಹೋತು ಒಡಲಿನ ದುಃಖದ ಕಡಲು
ರೈತರೇ ದೇಶದ ಬೆನ್ನೆಲುಬೆಂಬ ಮಾತ
ತಿಳಿಯುವಂತೆ ಮಾಡಿತ್ತ ರೈತನಾ ಕಿಮ್ಮತ್ತ
ಲಕ್ಷ ಲಕ್ಷ ಕೊಟ್ಟದ್ದು ಸಾರ್ಥಕತೆಯ ಮೆರೆದಿತ್ತು
ತೆಗಳಿದವರ ಬಾಯಿಗೆ ಬೀಗ ಹಾಕಿದಂತಿತ್ತು
ರೈತನ ಬದುಕು ಈಗ ಬಂಗಾರದಂಗಾಗಿತ್ತು
ಎದೆ ಸೆಟಿಸಿ ಹೆಡಕ್ಕೆತ್ತಿ ತಿರುಗುವಂತಾಗಿತ್ತ
ಮನದಲ್ಲಿ ಸಂತೋಷ ಉಕ್ಕಿ ಉಕ್ಕಿ ಹರಿದಿತ್ತ
ರೈತರಿಲ್ಲದ ಬಾಳು ಬೆಂಗಾಡ್ ಎಂದು ತಿಳಿದಿತ್ತ

ವಿದ್ಯಾಕುಮಾರ ಮ ಬಡಿಗೇರ

ಯಾದಗಿರಿ ಜಿಲ್ಲೆಯ, ಹುಣಸಗಿ ತಾಲೂಕಿನ ಕವಿ ವಿದ್ಯಾಕುಮಾರ .ಮ.ಬಡಿಗೇರ.ವೃತ್ತಿಯಲ್ಲಿ  ಸ. ಕಿ.ಪ್ರಾ.ಶಾಲೆ ಹೆಬ್ಬಾಳದ ಪ್ರಾಧ್ಯಾಪಕರು.ತಬಲಾ ವಾದನ,ಪದಬಂಧ ರಚನೆ,ಕವನ ರಚನೆ, ನಾಟಕ ರಚನೆ ಇವರ ಹವ್ಯಾಸ.

ಶಿಕ್ಷಕ ರತ್ನ ಪ್ರಶಸ್ತಿ, ಮಕ್ಕಳು ಮೆಚ್ಚಿದ ಮೆಷ್ಟ್ರುವಿಶ್ವಕರ್ಮ ಅನರ್ಘ್ಯ ಸೇವಾ ರತ್ನ ಪ್ರಶಸ್ತಿ,ಸಾಹಿತ್ಯ ಶ್ರೀ-ಪ್ರಶಸ್ತಿ,ರಾಜ್ಯೋತ್ಸವ ಪ್ರಶಸ್ತಿಗಳು ಲಭಿಸಿದೆ. ಇವರು ಬರೆದ ಅನೇಕ ಕವನಗಳು ಪ್ರತಿಷ್ಠಿತ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ.ಸುಮಾರು ನೂರಕ್ಕೂ ಹೆಚ್ಚು ಕವಿಗೋಷ್ಠಿಯಲ್ಲಿ ಭಾಗವಹಿಸಿರುವ ಅನುಭವಿ. 

ಪ್ರಕಟಿತ ಕೃತಿಗಳು 

ಸುಧಾ ರಸಧಾರೆ - ಕವನ ಸಂಕಲನ 2013
ಹೃನ್ಮಣಿ - ಕವನ ಸಂಕಲನ 2015

More About Author