Poem

ಬಟ್ಟೆ

ಅಪ್ಪ ಕೊಡಿಸಿದ ಬಣ್ಣದ ಬಟ್ಟೆ ಹೇಳುತ್ತಿತ್ತು
ಮೈಕೊಡವಿ ದುಡಿದ ಅವನ ಶ್ರಮದ ಫಲ
ನನ್ನ ಮೈಯಪ್ಪಿ ಕುಳಿತ ಬಗೆಯ

ಆತನ ಹರಿದ ಅಂಗಿಗೆ ಅವ್ವ ಹತ್ತಾರು ಬಾರಿ
ತೇಪೆ ಹಾಕಿ ಭದ್ರಗೊಳಿಸಿದ್ದಳು
ಆದರೆ ನನ್ನ ಪಾಲಿಗದು ಸ್ವಪ್ನ !!
ಹರಿದಂದೇ ಹೊಸ ಬಟ್ಟೆ ಉಡುಗೊರೆಯಾಗುತ್ತಿತ್ತು.

ಅವನಿಗೊಂದು ಕನಸು
ನಾನು ಕಲಿಯಬೇಕು; ಕಲಿತು ಬಾಗಬೇಕು.
ಅಂತೆಯೇ ಅವರಿಬ್ಬರನ್ನೂ
ಕೈಹಿಡಿದು ನಡೆಸಬೇಕು

ನಾನೂ ಅದೇ ಮಾರ್ಗದಲ್ಲಿದ್ದೆ.
ಅದಾರೋ ಬಣ್ಣದ ಬಟ್ಟೆಯ ಬದಲಿಸಿದರು
ಸಾಂಕೇತಿಕ ಉಡುಪುಗಳ ಕೊಟ್ಟರು
ನಾನೂ ಮಾರು ಹೋದೆ

ಕೇಸರಿ, ಕಪ್ಪು, ನೀಲಿ, ಹಸಿರು
ಕಣ್ಣಾಯಿಸಿದಷ್ಟೂ ಬಣ್ಣಗಳು;
ಬಣ್ಣದ ಶಾಲುಗಳು....
ಯಾವುದು ನನ್ನದು; ನನ್ನ ಧರ್ಮದ್ದು ?
ಇದೇ ಗೊಂದಲದೊಳಗೆ ನಡೆದುಬಿಟ್ಟೆ

ಈಗ ಅಪ್ಪನ ಹರಿದ ಅಂಗಿಯಾಗಲಿ
ಅವನ ಕನಸಾಗಲಿ ನನಗೆ ಮುಖ್ಯವಲ್ಲ
ಏಕೆಂದರೆ ಹರಿದ ಅಂಗಿಯ ತಾ ತೊಟ್ಟು
ಬಣ್ಣ ಬಣ್ಣದ ಬಟ್ಟೆಯ ನನಗಿಟ್ಟ

ಇದವನ ತಪ್ಪಲ್ಲವೆ ?
ಅದಕ್ಕಾಗಿಯೇ ಅಪ್ಪನಿಗಿಂತ,
ಅವನ ಪ್ರೀತಿಗಿಂತ
ಧರ್ಮವೇ ನನಗೀಗ ಮುಖ್ಯ;
ಇದೇ ಸತ್ಯ ನೋಡಿ ಮತ್ತೆ !!

✍️ ಮನು ಗುರುಸ್ವಾಮಿ

 ಮನು ಗುರುಸ್ವಾಮಿ 

ಮನು ಗುರುಸ್ವಾಮಿ ಮೂಲತಃ ಮೈಸೂರು ಜಿಲ್ಲೆಯ ತಲಕಾಡಿನವರು. ಮೈಸೂರು ವಿಶ್ವವಿದ್ಯಾನಿಲಯ, ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಿಂದ ಕನ್ನಡ ಸ್ನಾತಕೋತ್ತರ ಪದವಿಯನ್ನು ಪಡೆದಿರುವ ಅವರು ಬೆಂಗಳೂರಿನ ಕೆ ಎಲ್ ಇ -ಎಸ್ ನಿಜಲಿಂಗಪ್ಪ ಕಾಲೇಜಿನಲ್ಲಿ ಅಧ್ಯಾಪಕ ವೃತ್ತಿಯನ್ನು ಆರಂಭಿಸಿದ ಇವರು ಕನ್ನಡ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ಪ್ರಸ್ತುತ ಬೆಂಗಳೂರಿನ ವಿದ್ಯಾವನ ಪಿಯು ಮತ್ತು ಪದವಿ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.  ಅವಳೂ ಕತೆಯಾದಳು, ವ್ಯಭಿಚಾರಿ ಹೂವು, ಕಲ್ಲು ದೇವರು ದೇವರಲ್ಲ, ಗಾಂಧಿ ನೀ ನನ್ನ ಕೊಂದೆ  ಕೃತಿಗಳು ಪ್ರಕಟಣಾ ಹಂತದಲ್ಲಿವೆ. 

ಕೃತಿಗಳು : ನಿಬ್ಬೆರಗು

 

 

 

More About Author