Poem

ಬೆಳಗು

ಮೂಡಲ ಮನೆಯಾ ಮುತ್ತಿನ ನೀರಿನ
ಎರಕsವ ಹೊಯ್ದಾ
ನುಣ್ಣ್-ನ್ನೆರಕsವ ಹೊಯ್ದಾ
ಬಾಗಿಲ ತೆರೆದೂ ಬೆಳಕು ಹರಿದೂ
ಜಗವೆಲ್ಲಾ ತೊಯ್ದಾ
ಹೋಯ್ತೋ-ಜಗವೆಲ್ಲಾತೊಯ್ದಾ

ರತ್ನದರಸದಾ ಕಾರಂಜೀಯೂ
ಪುಟಪುಟನೇ ಪುಟಿದು
ತಾನೇ-ಪುಟಪುಟನೇ ಪುಟಿದು
ಮಘಮಘಿಸುವಾ ಮುಗಿದ ಮೊಗ್ಗೀ
ಪಟಪಟನೇ ಒಡೆದು
ತಾನೇ-ಪಟಪಟನೇ ಒಡೆದು

ಎಲೆಗಳ ಮೇಲೇ ಹೂಗಳ ಒಳಗೇ
ಅಮೃತsದ ಬಿಂದು
ಕಂಡವು-ಅಮೃತsದ ಬಿಂದು
ಯಾರಿರಿಸಿದವರು ಮುಗಿಲsಮೇಲಿಂ-
ದಿಲ್ಲಿಗೇ ತಂದು
ಈಗ -ಇಲ್ಲಿಗೇ ತಂದು

ತಂಗಾಳೀಯ ಕೈಯೊಳಗಿರಿಸೀ
ಎಸಳೀನಾ ಚವರೀ
ಹೂವಿನ-ಎಸಳೀನಾ ಚವರಿ
ಹಾರಿಸಿ ಬಿಟ್ಟರು ತುಂಬಿಯ ದಂಡು
ಮೈಯೆಲ್ಲಾ ಸವರಿ
ಗಂಧಾ-ಮೈಯೆಲ್ಲಾ ಸವರಿ

ಗಿಡಗಂಟೆಯಾ ಕೊರಳೊಳಗಿಂದ
ಹಕ್ಕಿಗಳಾ ಹಾಡು
ಹೊರಟಿತು-ಹಕ್ಕಿಗಳಾ ಹಾಡು
ಗಂಧರ್ವರಾ ಸೀಮೆಯಾಯಿತು
ಕಾಡಿನಾ ನಾಡು
ಕ್ಷಣದೊಳು-ಕಾಡಿನಾ ನಾಡು.

ಕಂಡಿತು ಕಣ್ಣು ಸವಿದಿತು ನಾಲಗೆ
ಪಡೆದೀತೀ ದೇಹ
ಸ್ಪರ್ಶಾ-ಪಡೆದೀತೀ ದೇಹ
ಕೇಳಿತು ಕಿವಿಯು ಮೂಸಿತು ಮೂಗು
ತನ್ಮಯವೀ ಗೇಹಾ
ದೇವರ-ದೀ ಮನಸಿನ ಗೇಹಾ

ಅರಿಯದು ಅಳವು ತಿಳಿಯದು ಮನವು
ಕಾಣsದೋ ಬಣ್ಣ
ಕಣ್ಣಿದೆ-ಕಾಣsದೋ ಬಣ್ಣ
ಶಾಂತಿರಸವೇ ಪ್ರೀತಿಯಿಂದಾ
ಮೈದೋರಿತಣ್ಣ
ಇದು ಬರಿ-ಬೆಳಗಲ್ಲೋ ಅಣ್ಣಾ

-ಅಂಬಿಕಾತನಯದತ್ತ

ದ.ರಾ. ಬೇಂದ್ರೆ (ಅಂಬಿಕಾತನಯದತ್ತ)

ಕನ್ನಡ ಕಾವ್ಯದ ಸೊಬಗು-ಸೊಗಸು ಹೆಚ್ಚಿಸಿದ ‘ಅಂಬಿಕಾತನಯದತ್ತ’ ಕಾವ್ಯನಾಮದ ದತ್ತಾತ್ರೇಯ ರಾಮಚಂದ್ರ ಬೇಂದ್ರೆ ಅವರನ್ನು ‘ವರಕವಿ’, ‘ಗಾರುಡಿಗ’ ಎಂದು ಗುರುತಿಸಲಾಗುತ್ತದೆ. ತಂದೆ ರಾಮಚಂದ್ರ ತಾಯಿ ಅಂಬವ್ವ. ಧಾರವಾಡದಲ್ಲಿ 1896ರ ಜನವರಿ 31ರಂದು ಜನಿಸಿದರು. ಧಾರವಾಡದಲ್ಲಿ ಮೆಟ್ರಿಕ್ (1913) ಮುಗಿಸಿದ ಮೇಲೆ ಪುಣೆಯ ಫರ್ಗ್ಯುಸನ್ ಕಾಲೇಜಿನಲ್ಲಿ ವ್ಯಾಸಂಗ ಮಾಡಿ ಬಿ.ಎ. (1918) ಪದವಿ ಪಡೆದರು. ಕೆಲವು ಕಾಲ ಅಧ್ಯಾಪಕ ವೃತ್ತಿ ಮಾಡಿದ ಮೇಲೆ ಮುಂಬಯಿ ವಿಶ್ವವಿದ್ಯಾನಿಲಯದಿಂದ ಎಂ.ಎ. (1935) ಪದವಿ ಪೂರ್ಣಗೊಳಿಸಿದರು.

ಗದುಗಿನ ವಿದ್ಯಾದಾನ ಸಮಿತಿ ಪ್ರೌಢಶಾಲೆಯಲ್ಲಿ ಹೆಡ್ ಮಾಸ್ಟರ್ ಆಗಿ ವೃತ್ತಿ ಆರಂಭಿಸಿದ ಅವರು ನಂತರ ಹುಬ್ಬಳ್ಳಿಯ ನ್ಯೂ ಇಂಗ್ಲಿಷ್ ಸ್ಕೂಲಿನಲ್ಲಿ (1942) ಒಪ್ಪೊತ್ತಿನ ಶಿಕ್ಷಕರಾದರು. ಸೊಲ್ಲಾಪುರದ ಡಿಎವಿ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕ (1944) ನೇಮಕಗೊಂಡರು. ನಿವೃತ್ತರಾದ ಮೇಲೆ ಧಾರವಾಡದ ಆಕಾಶವಾಣಿ ಕೇಂದ್ರದಲ್ಲಿ ಸಲಹೆಗಾರ (1956) ಆಗಿ ಕೆಲಸ ಮಾಡಿದರು.

ಮುಂಬಯಿಯಲ್ಲಿ ನಡೆದ 21 ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಗೆ ಅಧ್ಯಕ್ಷರಾಗಿದ್ದ ಅವರು ಮೈಸೂರಿನಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ (1930) ಲೇಖಕ ಗೋಷ್ಠಿಯನ್ನು ನಿರ್ವಹಿಸಿದರು. ಕೆಲವು ಕಾಲ ‘ಜೀವನ’ ಮಾಸಪತ್ರಿಕೆ ಮತ್ತು ‘ಜಯಕರ್ನಾಟಕ’ ಪತ್ರಿಕೆ ಸಂಪಾದಕರಾಗಿಯೂ ಕಾರ್ಯ ನಿರ್ವಹಿಸಿದ್ದರು.

ಬೇಂದ್ರೆ ಅವರಿಗೆ ಮೈಸೂರು ವಿಶ್ವವಿದ್ಯಾಲಯ, ಕರ್ನಾಟಕ ವಿಶ್ವವಿದ್ಯಾನಿಲಯ ಡಾಕ್ಟರೇಟ್ (1968) ಪದವಿ , ಕಾಶಿಯ ವಿದ್ಯಾಪೀಠ ಗೌರವ ಡಾಕ್ಟರೇಟ್ (1976) ನೀಡಿದವು. ಕೇಂದ್ರ ಸರ್ಕಾರ ಪದ್ಮಶ್ರೀ (1968)ಪ್ರಶಸ್ತಿ ನೀಡಿತು. ಕೇಂದ್ರದ ಸಾಹಿತ್ಯ ಅಕಾಡೆಮಿ ಫೆಲೋ ಗೌರವಕ್ಕೆ ಪಾತ್ರರಾಗಿದ್ದ ಬೇಂದ್ರೆ ಅವರಿಗೆ ಅದಮಾರು ಮಠದವರು ಕರ್ನಾಟಕ ಕವಿಕುಲತಿಲಕ (1972) ಬಿರುದು ನೀಡಿದ್ದರು. ಶಿವಮೊಗ್ಗದಲ್ಲಿ ನಡೆದ 27 ನೇ ಕನ್ನಡ ಸಾಹಿತ್ಯ ಸಮ್ಮೇಳನ (1943) ಅಧ್ಯಕ್ಷತೆ ವಹಿಸಿದ್ದರು. ಅರಳು ಮರಳು ಕವನಸಂಗ್ರಹಕ್ಕೆ ಕೇಂದ್ರಸಾಹಿತ್ಯ ಅಕಾಡೆಮಿ (1956) ನಾಕುತಂತಿಗೆ ಜ್ಞಾನಪೀಠ ಪ್ರಶಸ್ತಿ (1974) ದೊರಕಿದವು. ಬೇಂದ್ರೆಯವರು 1981ರ ಅಕ್ಟೋಬರ್ 26ರಂದು ಮುಂಬಯಿಯಲ್ಲಿ ನಿಧನರಾದರು.

ಕೆಲವು ಕೃತಿಗಳ: ಕೃಷ್ಣಕುಮಾರಿ, ಸಖೀಗೀತ, ಉಯ್ಯಾಲೆ, ಗರಿ, ನಾದಲೀಲೆ, ಅರುಳುಮರುಳು ಇತ್ಯಾದಿ ೨೫ ಕವನ ಸಂಕಲನಗಳು. ಸಾಹಿತ್ಯ ಮತ್ತು ವಿಮರ್ಶೆ, ಕಾವ್ಯೋದ್ಯೋಗ, ಸಾಹಿತ್ಯ ವಿರಾಟ ಸ್ವರೂಪ, ನಾಕುತಂತಿ, ನಿರಾಭರಣ ಸುಂದರಿ, ಶಾಂತಲಾ (ಅನುವಾದ) ಇತ್ಯಾದಿ.

More About Author