Poem

ಭರವಸೆ

ಜಾತ್ರೆಯದು ಮುಗಿದಿರಲು ಬಯಲು ಬರಿದಾಗಿರಲು
ದೇವನೊಬ್ಬನೇ ಗುಡಿಯಲೊಳಗುಳಿದನು,
ಮಂತ್ರಘೋಷಗಳಿಲ್ಲ ನಗುವಿನಬ್ಬರವಿಲ್ಲ
ಮೌನ ಧ್ಯಾನಸ್ಥಭಾವವ ತಳೆದನು...

ವಾರಗಳವರೆಗೆ ಜನರನು ಹೊತ್ತು ಗರಗರನೆ
ಸುತ್ತಿ ತೊಟ್ಟಿಲು ಕಳಚಿ ಮಲಗುತಿತ್ತು,
ಬೀದಿಯಲಿ ತೆರೆದು ಕುಳಿತಿದ್ದ ಅಂಗಡಿಯೆಲ್ಲ
ಗಂಟು ಮೂಟೆಯ ಕಟ್ಟಿ ಸಾಗುತಿತ್ತು...

ಬೆಳದಿಂಗಳಿರುಳಲ್ಲಿ ಚಂದಿರನು ಹೊಳೆದಿರಲು
ತಂಗಾಳಿಯೊಂದು ಸುಳಿದಾಡುತಿಹುದು,
ಹಬ್ಬದಬ್ಬರ ಕಳೆದು ರಥಬೀದಿಯದು ಒರಗಿ
ತನ್ನ ದೇಹದ ದಣಿವ ತಣಿಸುತಿಹುದು...

ಗುಡಿಯ ದೇವರ ಹೊತ್ತು ಪುರದ ಬೀದಿಯ ಮೆರೆದ
ರಥವು ಕದಗಳ ಹಿಂದೆ ಭದ್ರವಿತ್ತು,
ತೊರೆದು ತನ್ನಯ ಚಕ್ರ, ಮುಕುಟ ಮಣಿಗಳನೆಲ್ಲಾ
ವರುಷವುರುಳಲು ಮತ್ತೆ ಕಾಯುತಿತ್ತು,
ಆ ದೇವನನು ಹೊರುವ ಕನಸ ಕಟ್ಟಿ,
ಭರವಸೆಯ ನಾಳೆಯನು ಮನದಿ ಬಿತ್ತಿ...

- ಗುರುರಾಜ ಹೇರ್ಳೆ

ಗುರುರಾಜ ಹೇರ್ಳೆ

ಗುರುರಾಜ ಹೇರ್ಳೆ ಅವರು ಮೂಲತಃ ಕರಾವಳಿಯ ಉಡುಪಿಯವರು. ಪ್ರಸ್ತುತ ಬೆಹರ್‍ರೈನ್ ನಲ್ಲಿ ವಾಸವಿದ್ದಾರೆ. ಬರವಣಿಗೆ ಅವರ ಆಸಕ್ತಿ ಕ್ಷೇತ್ರವಾಗಿದೆ. ಲೇಖನ ಹಾಗು ಕಾವ್ಯ ಪ್ರಕಾರದ ಸಾಹಿತ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

More About Author