Story

ಭಾವ-ನೆ ನಾನು ಅಂದುಕೊಂಡಂತೆಯೇ ಭಾಗ - 2

''ಕಾ.ವಿ. ರಮೇಶ್ ಕುಮಾರ್ ಅವರು ಬೆಂಗಳೂರಿನವರು. ಪದವಿ ಶಿಕ್ಷಣವನ್ನು ಪಡೆದಿರುತ್ತಾರೆ. ಬೆಂಗಳೂರಿನ ಈಸ್ಟ್ ಪಾಯಿಂಟ್ ಗ್ರೂಪ್ ಆಫ್ ಎಜುಕೇಷನಲ್ ಇನ್ಸ್ಟಿಟ್ಯೂಷನ್ಸ್ ನಲ್ಲಿ ಚೀಫ್ ಆಫೀಸ್ ಸುಪೆರಿಂಟೆಂಡಂಟ್ ಆಗಿ ಕಾರ್ಯನಿರ್ವಹಿಸುತ್ತಿರುವ ಅವರಿಗೆ ಸಾಹಿತ್ಯದಲ್ಲಿ ವಿಶೇಷ ಆಸಕ್ತಿ. ಪ್ರಸ್ತುತ ಅವರು ಬರೆದಿರುವ ‘ಭಾವ -ನೆ' ನಾನು ಅಂದುಕೊಂಡಂತೆಯೇ ಭಾಗ - 2' ಕತೆ ನಿಮ್ಮ ಓದಿಗಾಗಿ...

ಯೋಚನೆ ಮಾಡದೇ ಇರುವುದು ಹೇಗೆಂದು ಯೋಚಿಸುತ್ತ ಮೌನವಾಗಿ ಸಂಜೆಯ ಪಯಣ ಗೆಳೆಯನೊಂದಿಗೆ ಸಾಗುತ್ತಿತ್ತು. ಏನಾದರೊಂದು ಮಾತನಾಡುವುದು ಇಲ್ಲವೇ ಮಾತುಗಳನ್ನ ಆಲಿಸುವುದು ಅವನ ಹವ್ಯಾಸ, ಮಾತಿಲ್ಲದ ಮೌನದ ನಡಿಗೆ ಗೆಳೆಯನ ತವಕವನ್ನು ಹೆಚ್ಚಿಸುತ್ತಿತ್ತು. ತಾಳ್ಮೆಯನ್ನು ಕಳೆದುಕೊಂಡು ನನ್ನ ಆಪ್ತ ಗೆಳೆಯ ನನ್ನನ್ನು ಪ್ರಶ್ನಿಸಿಯೇ ಬಿಟ್ಟ .

"ಇದೆಂತಹುದು ಕನಕಕ್ಕ ನಮ್ಮ ಮೌನದ ಮೆರವಣಿಗೆ ಮನಸ್ಸಿನಲ್ಲಿರುವ ನೋವಿನ ಸಂಗತಿಗಳನ್ನು ಹೇಳಿದರಲ್ಲವೇ ನಮ್ಮ ಮನಸ್ಸು ತಿಳಿಯಾಗುವುದು. ಹಿಂದಿನ ದಿನದ ಕಹಿಯನ್ನು ಶುಧ್ಧ ಮಾಡಿಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಬದಲಾವಣೆಗಳು ಕಾಣಲು ಹೇಗೆ ಸಾದ್ಯ. ನಿನ್ನಲ್ಲಿ ಹುದುಗಿರುವ ಯೋಚನೆಗಳಾದರೂ ಏನು?. ನನ್ನಿಂದ ಸಾದ್ಯವಾದರೆ ಮಾರ್ಗೋಪಾಯವನ್ನು ಹೇಳುತ್ತೇನೆ ಇಲ್ಲದಿದ್ದಲ್ಲಿ ನಾನು ನಿನ್ನಂತೆಯೇ ಮೌನವಾಗಿಯೇ ಜೊತೆಯಲ್ಲಿ ಇರುತ್ತೇನೆ. ಗೆಳೆಯನ ಪ್ರೆಶ್ನೆಗಳಿಗೆ ಉತ್ತರಿಸಬೇಕೆನಿಸಿತು ಆದರೂ ಸ್ವಲ್ಪ ಕಿಚಾಯಿಸ ಬೇಕೆನಿಸಿದರು ಮತ್ತೊಮ್ಮೆ ಬೇಡವೆನಿಸಿತು. ಗೆಳೆಯನ ಮುಖವನ್ನೊಮ್ಮೆ ನೋಡಿ ಅವನ್ನನ್ನೇ ಪ್ರಶ್ನಿಸಿದೆ.

ಗೆಳೆಯ ನನ್ನ ಪ್ರಶ್ನೆಯನ್ನು ಚೆನ್ನಾಗಿ ಕೇಳಿಸಿಕೋ, ನಾವು ಯೋಚನೆ ಮಾಡದೇ ಇರುವುದಾದರೂ ಹೇಗೆ? ನಮ್ಮ ಜೀವನದ ಅಂತರಂಗದ ಭಾವನೆಗಳ ಮೌಲ್ಯಗಳನ್ನು ಅರ್ಥೈಸಿಕೊಳ್ಳುವ ನಿಟ್ಟಿನಲ್ಲಿ ಒಮ್ಮೆಯಾದರೂ ಯೋಚಿಸಬೇಕಲ್ಲವೇ? ಯೋಚನೆಯೇ ಬೇಡವೆಂದಾದರೆ ಯೋಚನೆ ಇಲ್ಲದ ಯೋಜನೆಯನ್ನು ರೂಪಿಸಿಕೊಳ್ಳುವುದಾದರೂ ಹೇಗೆ?. ಹಾಗಾದರೆ ಯೋಚನೆಯ ಪರಿಮಿತಿಗಳಾದರೂ ಏನು?. ಮಾತನಾಡುವುದಕ್ಕಿಂತ ಮೊದಲು ಚೆನ್ನಾಗಿ ಯೋಚಿಸಿ ಮಾತನಾಡು ಎಂದು ಹೇಳುವ ಬುದ್ದಿವಂತರು ಹೆಚ್ಚು ಯೋಚನೆ ಮಾಡಬೇಡಿ ಆರೋಗ್ಯ ಕೆಡುತ್ತದೆ ಎಂಬುದನ್ನೂ ಸಹ ಹೇಳುತ್ತಾರೆ.

ತನಗೇನೋ ಹೊಳೆಯಿತು ಎಂಬಂತೆ ಗೆಳೆಯ ನನ್ನ ಮಾತುಗಳನ್ನು ಪೂರ್ಣಗೊಳಿಸಲು ಬಿಡದೆ ಮಧ್ಯದಲ್ಲಿಯೇ ಮಾತನಾಡತೊಡಗಿದ.

ಕನಕಕ್ಕ ನಿನಗೆ ತಿಳಿಯದ ವಿಷಯವೇ ಅವರು ಅಂದುಕೊಂಡಂತೆ ಅದು ಅವರವರ ಭಾವನೆಗಳು. ಯೋಚಿಸಿ ನಿರ್ಧರಿಸುವವರ ತಿಳುವಳಿಕೆ ವಿಕಾಸನಗೊಂಡಿರುತ್ತದೆ. ಪ್ರಾಜ್ಞರು ಮಾತನಾಡುವುದು ಬಹಳ ಬುದ್ದಿವಂತಿಕೆಯಿಂದ. ನಮಗಿಷ್ಟವಾದಲ್ಲಿ ಸ್ವೀಕರಿಸುವುದು ಇಲ್ಲವಾದಲ್ಲಿ ಮರೆತಂತೆ ಇರುವುದು.

ಗೆಳೆಯನ ಮಾತು ಸಮ್ಮತವೆನಿಸಿತು. ನಾವು ಅವಶ್ಯಕತೆ ಇದ್ದಾಗ ಅವಶ್ಯವಿದ್ದಷ್ಟು ಮಾತ್ರ ಯೋಚಿಸಬೇಕು, ಯೋಚಿಸುವ ಮನಸ್ಸುಗಳು ಸುಮ್ಮನೆ ಭಾರವಾಗಬಾರದಷ್ಟೇ. ಅಂದು ನಾನು ಅವರೊಂದಿಗೆ ಸ್ವಲ್ಪವೂ ಯೋಚಿಸದೆ ಆಡಿದ ಆ ಒಂದು ಮಾತು ದೊಡ್ಡ ರಾದ್ದಂತವನ್ನೇ ಮಾಡಿಬಿಟ್ಟಿತು.ನನಗೇಕೋ ಆದಿನ ಅವರನ್ನು ಕ್ಷಮೆ ಕೇಳಬೇಕೆಂದೇ ಅನಿಸಲಿಲ್ಲ. ಮೊಂಡು ತನದಿಂದ ಅವರ ಭಾವನೆಯ ಭಾವಗಳನ್ನು ಅರ್ಥ ಮಾಡಿಕೊಳ್ಳದೆ ಮಲಗಿ ನಿದ್ರಿಸಿಬಿಟ್ಟೆ. ಅಂದು ರಾತ್ರಿ ಅವರು ಅದೆಷ್ಟು ನೊಂದುಕೊಂಡರೋ!, ಅಂದು ನಾನು ತಪ್ಪು ಮಾಡಿಬಿಟ್ಟೆನೆಂದು ಈಗ ನನಗನಿಸುತ್ತಿದೆ ಆದರೆ ಸಮಯ ಮೀರಿ ಹೋಗಿದೆ.

ನಮ್ಮ ಬದುಕಿನ ಎಲ್ಲ ನೋವುಗಳನ್ನು ಕಾಲಘಟ್ಟದಲ್ಲಿ ಮರೆಯುತ್ತೇವೆಂದು ಅರಿತವರು ಹೇಳುತ್ತಾರೆ ಗೆಳೆಯ ಆದರೆ ಅದು ನನ್ನ ಪ್ರಕಾರ ಸರ್ವದಾ ತಪ್ಪು ಕಲ್ಪನೆ. ಜೀವನದಲ್ಲಿ ನಮ್ಮ ಬದುಕಿಗಾದ ಕೆಲವು ಹೊಡೆತಗಳು ಮಾಸಲಾರದ ನೋವುಗಳೇ. ನಮ್ಮ ಅವಿವೇಕ ಮತ್ತು ನಾನೆ ಎನ್ನುವ ಅಹಃನಿಂದ ಮಾಡಿಕೊಂಡ ಸ್ವಯಂಕೃತ ಅಪರಾಧದ ನೋವುಗಳು ಆಗಾಗ ನಮ್ಮನ್ನು ಹಿಂಡುತ್ತಿರುತ್ತವೆ. ಅಂತಹ ನೋವುಗಳು ನಾವು ಬದುಕಿರುವ ತನಕ ಅನುಭವಿಸುತ್ತಲೇ ಇರಬೇಕಾಗುತ್ತದೆ.

ಅಂತಹುದು ಏನಾಯಿತು ಕನಕಕ್ಕ?
ಗೆಳೆಯನ ಕುತೂಹಲದ ಪ್ರೆಶ್ನೆ ನಾನು ಮತ್ತೆ ಮಾತನಾಡುವಂತೆ ಮಾಡಿತು.

ಅವರು ಸಮಯ ಸಿಕ್ಕಾಗಲೆಲ್ಲ ನನಗೆ ಅರ್ಥ ಮಾಡಿಸಲು ಪ್ರಯತ್ನಿಸುತ್ತಲೇ ಇರುತ್ತಿದ್ದರು. ಅದೊಂದು ರಾತ್ರಿ ಊಟ ಮುಗಿಸಿ ಇಬ್ಬರೂ ನಮ್ಮ ಮಲಗುವ ಕೊಠಡಿಯಲ್ಲಿ ತಾಂಬೂಲ ಸವಿಯುತ್ತಿದ್ದೆವು, ಆಗ ನನ್ನನ್ನೇ ನೋಡುತ್ತ ಕೇಳಿದರು.

" ನನ್ನ ತಂಗಿಯ ಮಗನನ್ನು ಕರೆದುಕೊಂಡು ಬಂದಿದ್ದರಿಂದ ಅಂದು ನಿನಗೆ ಇಷ್ಟವಾಗಲಿಲ್ಲ. ಹೋಗಲಿ ನಾವಿಬ್ಬರು ಯಾವುದಾದರೊಂದು ಅನಾಥ ಆಶ್ರಮಕ್ಕೆ ಹೋಗಿ ಇಬ್ಬರಿಗೂ ಸಮ್ಮತವಾಗುವಂತಹ ಪುಟ್ಟ ಮಗುವೊಂದನ್ನು ತಂದು ಬೆಳೆಸೋಣವೇ. ಅದು ಹೆಣ್ಣಾದರೂ ಸರಿ ಇಲ್ಲವೇ ಗಂಡಾದರು ಸರಿ, ನಿನಗೊಪ್ಪಿಗೆಯಾಗುವ ಮಗುವನ್ನೇ ಕರೆದುಕೊಂಡು ಬರೋಣ. ನಾವು ನಮ್ಮ ಮುಂದಿನ ದಿನಗಳನ್ನು ನೆಮ್ಮದಿಯಿಂದ ಕಳೆಯಬೇಕಲ್ಲವೇ.

ನನ್ನ ಧೋರಣೆಯೋ ಅಥವಾ ಹಠಮಾರಿತನವೂ ತಿಳಿಯಲಿಲ್ಲ ಅವರ ಮಾತುಗಳಿಗೆ ನಾನು ತಟ್ಟನೆ ಪ್ರತಿಕ್ರಿಯಿಸಿಬಿಟ್ಟೆ.

"ಅಶುದ್ಧ ಮನಸ್ಸಿನವರ ಸಂಗಮದಿಂದ ಜನ್ಮಿಸಿದ ಪಾಪದ ಪಿಂಡಗಳನ್ನು ತಂದು ನಮ್ಮ ಮನೆಯ ಸಂಸ್ಕಾರವನ್ನು ಮಿಲನ ಮಾಡಿಕೊಳ್ಳುವುದು ನನಗೆ ಸ್ವಲ್ಪವೂ ಹಿಡಿಸುವುದಿಲ್ಲ. ನನಗೆ ಮಕ್ಕಳಾಗಲಿಲ್ಲ ಎಂದು ನೀವು ಪದೇ ಪದೇ ಹೀಗೆ ಮತ್ತೊಂದು ರೂಪದಲ್ಲಿ ಚುಚ್ಚಿ ಹೇಳುವುದು ನನ್ನನ್ನು ಘಾಸಿ ಗೊಳಿಸುತ್ತಿದೆ. ಮತ್ತೊಮ್ಮೆ ಈ ವಿಷಯವಾಗಿ ನೀವು ಮಾತನಾಡಿದರೆ ನನ್ನ ಮೇಲಾಣೆ, ನಾನು ಸುಮ್ಮನಿರಲಾರೆ."

ನಾನು ಕುಳಿತಲ್ಲಿಂದ ತಟ್ಟನೆ ಮೇಲೆದ್ದು ನಿಂತೆ, ಅವರ ಮುಖ ಉಘ್ರ ರೂಪ ತಾಳಿತು ಅವರೂ ಅಷ್ಟೇ ರಭಸದಲ್ಲಿ ಮೇಲೆದ್ದು ನಿಂತು ತಾಂಬೂಲದ ತಟ್ಟೆಯನ್ನು ಜೋರಾಗಿ ಶಬ್ದ ಬರುವಂತೆ ನೆಲದ ಮೇಲೆ ಬೀಳಿಸಿದರು.

"ಕನಕ ನಿನ್ನ ಬುದ್ದಿ ಹಿಡಿತದಲ್ಲಿದೆಯೇ? ಬಾಯಿಗೆ ಬಂದಂತೆ ಅವಿವೇಕದ ಮಾತನಾಡುವುದು ನಿನಗೆ ಶೋಭೆ ತರುವುದಿಲ್ಲ. ಎಲ್ಲರನ್ನು ಒಂದೇ ರೀತಿಯಲ್ಲಿ ತೂಗುವುದು, ಬೇರೆಯವರ ಬಗ್ಗೆ ಅಸಂಬದ್ಧವಾಗಿ ಮಾತನಾಡುವುದು ನಮ್ಮ ಸಂಸ್ಕಾರವನ್ನು ತೋರಿಸುವುದಿಲ್ಲ. ಎಲ್ಲವೂ ಅವರವರ ಕರ್ಮಫಲದ ಮೇಲೆ ನಿರ್ಧರಿತವಾಗಿರುತ್ತದೆ. ಹಾಗಿದ್ದಲ್ಲಿ ನಾವು ಯಾರನ್ನು ಯಾರು ದೂಷಿಸಿಕೊಳ್ಳುವುದು, ಜನ್ಮದಾತರನ್ನೋ, ಸೃಷ್ಠಿಕರ್ತನನ್ನೂ ಇಲ್ಲ ನಮ್ಮ ಕರ್ಮಫಲವನ್ನೋ?. . ಮನುಷ್ಯರಾದವರು ಪಾಪಗಳನ್ನು ತೊಳೆದುಕೊಳ್ಳಲು ಪ್ರಯತ್ನಿಸಬೇಕೇ ವಿನಃ ಮತ್ತೆ ಮತ್ತೆ ಹೆಗಲೇರಿಸಿಕೊಳ್ಳಬಾರದು. ದೇವರು ಪ್ರತಿಯೊಬ್ಬರಿಗೂ ಅವಕಾಶಗಳನ್ನು ಕೊಡುತ್ತಿರುತ್ತಾನೆ, ದಾರಿಯನ್ನು ತೋರಿಸಿರುತ್ತಾನೆ. ಕಣ್ಮುಚ್ಚಿ ಕುಳಿತುಕೊಳ್ಳದೆ ವಿವೇಚನೆಯಿಂದ ಅದನ್ನು ಉಪಯೋಗಿಸಿಕೊಳ್ಳಬೇಕು. ಈ ನಿನ್ನ ಅಹಂಕಾರದ ಮಾತುಗಳಿಗೆ ಕಡಿವಾಣವಿರಲಿ." ಎಂದವರೇ ನಮ್ಮ ಕೊಠಡಿಯಿಂದ ಹೊರನಡೆದು ಬಿಟ್ಟರು ನಾನೂ ಸಹ ಅವರನ್ನು ತಡೆದು ನಿಲ್ಲಿಸುವ ಗೋಜಿಗೆ ಹೋಗಲೇ ಇಲ್ಲ.

"ಹೌದು ಕನಕಕ್ಕ ನಿನ್ನದು ಆ ಸಮಯದಲ್ಲಿ ಸ್ವಲ್ಪ ಉದ್ಧಟತನವಾಯಿತು ಎಂದು ಅನಿಸುತ್ತಿದೆ. ನೀನು ವಿಷಯವನ್ನು ಅರ್ಥೈಸಿಕೊಂಡ ರೀತಿ ಬೇರೆಯದೇ ಆಗಿ ಹೋಯಿತು. ಕೊಂಚ ಸಮಾಧಾನದಿಂದ ಪ್ರವರ್ತಿಸಿದ್ದಿದ್ದರೆ ಚೆನ್ನಾಗಿರುತ್ತಿತ್ತು ಭಾವನವರು ಸಹ ಸಿಟ್ಟಿಗೇಳುವ ಪ್ರಮೇಯವೇ ಬರುತ್ತಿರಲಿಲ್ಲ."

ಗೆಳೆಯನ ಮಾತುಗಳನ್ನು ಕೇಳುತ್ತಾ ಎಂದಿನಂತೆ ಅರಳಿ ಕಟ್ಟೆಯ ಮೇಲೆ ಗೆಳೆಯನೊಂದಿಗೆ ಮೆಲ್ಲನೆ ಕುಳಿತುಕೊಂಡು ತನ್ನ ಮಾತುಗಳನ್ನು ಮತ್ತೆ ಮುಂದುವರೆಸಿದಳು.

ಅವರೆಷ್ಟು ಒಳ್ಳೆಯವರು ಗೆಳೆಯ, ಮರುದಿನ ನಾನು ಇನ್ನೂ ನಮ್ಮ ಮಲಗುವ ಕೊಠಡಿಯಿಂದ ಹೊರಗೆ ಬಂದಿರಲೇ ಇಲ್ಲ. ಅವರೇ ಪ್ರತಿ ನಿತ್ಯದ ದೇವರ ಪೂಜೆಗೆಲ್ಲ ಸಿದ್ಧತೆ ಮಾಡಿಕೊಂಡು, ಪೂಜೆಯನ್ನು ಮುಗಿಸಿ, ತೀರ್ಥ ಮತ್ತು ಪ್ರಸಾದದೊಂದಿಗೆ ಕೊಠಡಿಯ ಒಳಗೆ ಬಂದಿದ್ದರು. ಹಾಸಿಗೆಯಲ್ಲೇ ಇನ್ನೂ ಮಲಗಿದ್ದ ನನ್ನನ್ನೇ ನೋಡುತ್ತಾ ಹೇಳಿದ ಹೃದಯವಂತಿಕೆಯ ನುಡಿಗಳು ನಾನು ಕರಗುವಂತೆ ಮಾಡಿತು.

" ಕನಕಾ! ನಿನಗೆ ಬೇಸರವಾಗಿದೆಯಲ್ಲವೆ, ಸಮಾಧಾನ ಮಾಡಿಕೋ ಹೋಗಿ ಸ್ನಾನ ಮಾಡಿಕೊಂಡು ಬಂದು ದೇವರ ತೀರ್ಥ ಪ್ರಸಾದಗಳನ್ನು ತೆಗೆದುಕೋ ನಂತರ ಹೊರಗೆ ಹೋಗಿ ಸುತ್ತಾಡಿ ಬರೋಣ. ಮನಸ್ಸುಗಳಿಗೆ ಆಗಿರುವ ದುಗುಡತೆ ಕಡಿಮೆಯಾಗಿ ಹೃದಯಗಳು ಸ್ವಲ್ಪ ಹಗುರವಾಗುತ್ತದೆ."

ಅರಿತವರ ಭಾವನೆಗಳನ್ನು ಅರ್ಥೈಸಿಕೊಂಡವರಿಗೆ, ಅಳೆದು ತೂಗಿ ಹೇಳುವ ನುಡಿನುತ್ತುಗಳು ಮನಮುಟ್ಟುತ್ತವೆ ಅಂತೆಯೇ ಅವರ ಮಾತುಗಳನ್ನು ಕೇಳಿದ ನನಗೆ ಕಣ್ಣಲ್ಲಿ ನೀರು ತುಂಬಿ ಬಂದಿತು ಅವರ ಮಡಿಯನ್ನೂ ಸಹ ಲೆಕ್ಕಿಸದೆ ಹಾಸಿಗೆಯಿಂದೆದ್ದು ಹೋಗಿ ಅವರನ್ನು ಅಪ್ಪಿಕೊಂಡುಬಿಟ್ಟೆ. ಗಳಗಳನೆ ಅಳುತಿದ್ದ ನನ್ನ ತಲೆಯನ್ನು ಅವರ ಕೈ ಮೆಲ್ಲನೆ ಸವರುತಿತ್ತು.

- ಕಾ ವಿ ರಮೇಶ್ ಕುಮಾರ್

ಭಾವ-ನೆ ನಾನು ಅಂದುಕೊಂಡಂತೆಯೇ(ಭಾಗ-1) ಕತೆಯನ್ನು ಓದಲು ಈ ಲಿಂಕ್ ಅನ್ನು ಕ್ಲಿಕ್ ಮಾಡಿ...

ಕಾ.ವಿ. ರಮೇಶ್ ಕುಮಾರ್

ಕಾ.ವಿ. ರಮೇಶ್ ಕುಮಾರ್ ಅವರು ಬೆಂಗಳೂರಿನವರು. ತಂದೆ ಕೆ ಎಸ್ ವಿಶ್ವೇಶ್ವರಯ್ಯ ಶಾಸ್ತ್ರಿ, ತಾಯಿ ವಿಜಯಲಕ್ಷ್ಮಮ್ಮ. 1970 ಜುಲೈ 21 ರಂದು ಜನನ. ಪದವಿ ಶಿಕ್ಷಣವನ್ನು ಪಡೆದಿರುತ್ತಾರೆ. ಬೆಂಗಳೂರಿನ ಈಸ್ಟ್ ಪಾಯಿಂಟ್ ಗ್ರೂಪ್ ಆಫ್ ಎಜುಕೇಷನಲ್ ಇನ್ಸ್ಟಿಟ್ಯೂಷನ್ಸ್ ನಲ್ಲಿ ಚೀಫ್ ಆಫೀಸ್ ಸುಪೆರಿಂಟೆಂಡಂಟ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.

More About Author