Story

ಭೂಮಿಯೊಡೆಯನೆ ಕೇಳು

ಮನಶಾಸ್ತ್ರಜ್ಞ ಡಾ. ಕಿರಣ್‍ಗೆ ಸುಮಿತ್ರಳ ಕೇಸು ಬಿಡಿಸಲಾರದ ಕಗ್ಗಂಟಾಗಿ ಪರಿಣಮಿಸುತಿತ್ತು. ಯಾವ ರೀತಿಯಲ್ಲಿ ಪ್ರಯತ್ನಿಸಿದರೂ ಅವಳಿಂದ ಒಂದು ಮಾತನ್ನು ಹೊರಡಿಸಲೂ ಅವನು ಶಕ್ತನಾಗಿರಲಿಲ್ಲ.

ಡಾಕ್ಟರ್ ಕಿರಣ್‍ಗೆ ಸುಮಿತ್ರ ಮಾತನಾಡದಿದ್ದುದಕ್ಕಿಂತ ದೊಡ್ಡ ಸಮಸ್ಯೆಯಾಗಿದ್ದುದು ಆಕೆ ಯಾರ ಜೇಬಿನಲ್ಲಿದಾರೂ ದುಡ್ಡು ಕಂಡರೆ ನೋಟುಗಳನ್ನು ಜೇಬಿನಿಂದ ಕಿತ್ತು ಬಾಯಿಗೆ ಹಾಕಿ ಕಚಕಚ ಜಗಿದು ಉಗಿದು ಬಿಡುತ್ತಿದ್ದುದು. ಗಂಡ ಸುಬ್ಬಯ್ಯನ ಜೇಬಿನಲ್ಲಿದ್ದುದಲ್ಲ್ಲದೆ ಆಸ್ಪತ್ರೆಗೆ ಬಂದ ರೋಗಿಗಳ ಕಡೆಯವರ ಜೇಬನ್ನು ಹರಿದು ಸುಮಿತ್ರ ನೋಟುಗಳನ್ನು ಅಗಿದು ಉಗಿಯುತ್ತಿದ್ದಳು. ಆಕೆ ಆಸ್ಪತ್ರೆಗೆ ಸೇರಿ ವಾರದೊಳಗೆ ಒಟ್ಟಾರೆ ನಾಲ್ಕಾರು ಸಾವಿರ ರೂಪಾಯಿಗಳಷ್ಟು ನೋಟುಗಳನ್ನು ಅಗಿದು ಉಗಿದಿದ್ದಳು. ಇದರಿಂದ ರೋಸಿ ಹೋದ ಸುಬ್ಬಯ್ಯ ನಿನ್ನ ಸಂಜೆಯಷ್ಟೆ ಹೆಂಡತಿಗೆ ಒಂದೆರೆಡು ಪೆಟ್ಟು ಬಾರಿಸಿದ್ದ.

ನಾವೆಲ್ಲಾ ದುಡ್ಡನ್ನು ಕಂಡರೆÀ ಇಷ್ಟು ಪ್ರೀತಿಸುವಾಗ ಸುಮಿತ್ರ ಯಾಕೆ ದುಡ್ಡನ್ನು ದ್ವೇಷಿಸುತ್ತಾಳೆ ಎಂಬುದು ಡಾ. ಕಿರಣ್‍ಗೆ ಬಿಡಿಸಲಾರದ ಒಗಟಾಯಿತು.

‘ಎಂದಿನಿಂದ ನಿಮ್ಮ ಹೆಂಡತಿ ಈ ರೀತಿ ಮೂಕವಾಗಿ ವರ್ತಿಸಲಾರಂಭಿಸಿದರು’ ಎಂದು ಕೇಳಿದಾಗ ಸುಬ್ಬಯ್ಯ ‘ಹದಿನೈದು ದಿನ ಆಯ್ತು ಸಾರ್’ ಎಂದಿದ್ದ.

‘ಅದಲ್ಲ ನಾನು ಕೇಳಿದ್ದು, ಏನಾದರೂ ಘಟನೆ ನಡೆದ ನಂತರ ಹೀಗಾಯಿತಾ ಅಂv’ ಕಿರಣ್ ಸ್ಪಷ್ಟಪಡಿಸಿದ್ದ.

ಸುಬ್ಬಯ್ಯ ನೆನಪಿನಾಳಕ್ಕೆ ಇಳಿದ.

‘ಸಾರ್, ನನ್ನ ತಮ್ಮ ನಮ್ಮ ಮನೆ ಹಿಂದೆ ಇದ್ದ ಅವನ ಜಾಗವನ್ನು ಮಾರ್ತೀದಿನಿ ಎಂದು ಹೇಳಿದ. ನಂತರ ಸುಮಿತ್ರ ಹುಚ್ಚುಚ್ಚಾಗಿ ಆಡಲಾರಂಭಿಸಿದಳು. ಒಂದೆರಡು ದಿನದಲ್ಲೆ ಮೂಕಳಂತೆ ಹೀಗಾದಳು ಸಾರ್.’ ಎಂದ.

‘ಐ.ಸೀ.’... ಕಿರಣ್ ಅದೇ ಜಾಡು ಹಿಡಿದು ಆಕೆಯ ಮನಸ್ಸನ್ನು ಅಂದಾಜಿಸುತ್ತಿರುವಾಗ ಅದಕ್ಕೆ ಪೂರಕವೆಂಬಂತೆ ಸುಬ್ಬಯ್ಯ ‘ಆಕೆಗೆ ಕೊಂಚ ದುರಾಶೆ ಸಾರ್, ತಮ್ಮನ ಜಾಗದಲ್ಲಿ ಆಕೆ ಒಂದಷ್ಟು ಗಿಡ ಹಾಕಿದಾಳೆ, ಅದನ್ನು ನಮಗೇ ಕೊಡಲಿ ಎಂಬ ಹಂಚಿಕೆ ಅವಳದು ಸಾರ್’ ಎಂದು ಗುಟ್ಟಿನಲ್ಲೆಂಬಂತೆ ಹೇಳಿದ.

ಸುಬ್ಬಯ್ಯ ಹಾಗೆ ಹೇಳುವುದಕ್ಕೂ ಕಾರಣವಿತ್ತು. ಮೈದುನ ತನ್ನ ಜಾಗವನ್ನು ಮಾರುತ್ತಾನೆ ಎಂಬ ವಿಚಾರ ತಿಳಿದಾಗ ಸುಮಿತ್ರ ‘ಜಾಗ ಅವನದಿರಬಹುದು, ಆದರೆ ಗಿಡ ಬೆಳಿಸಿದ್ದು ನಾನು’ ಎಂದು ಅರಚಿದ್ದಳು.

‘ರಾಜಶೇಖರನ ಔದಾರ್ಯ ದೊಡ್ಡದು. ಅವನು ತನ್ನ ಜಾಗದಲ್ಲಿ ತನ್ನ ಅಣ್ಣನ ಹೆಂಡತಿಗೆ ತೋಟ ಮಾಡಲು ಅವಕಾಶ ನೀಡಿದ್ದು ಸಾಮಾನ್ಯವಾದದ್ದಲ್ಲ. ಈಗ ತೋಟ ಬೆಳೆಸಿದ ಕಾರಣಕ್ಕೆ ಸುಮಿತ್ರ ಆ ಜಾಗದ ಮೇಲೆ ತನ್ನ ಹಕ್ಕು ಚಲಾಯಿಸುತ್ತಿದ್ದಾಳೆ. ಈಗ ಹುಚ್ಚಿಯಂತೆ ನಾಟಕವಾಡುತ್ತಿದ್ದಾಳೆ. ಈ ಜಗತ್ತಿನಲ್ಲಿ ಒಳ್ಳೆಯತನಕ್ಕೆ ಬೆಲೆಯಿಲ್ಲ. ಬಾಡಿಗೆಗೆ ಬಂದವರು ಮನೆಯನ್ನೇ ತಮ್ಮದೆನ್ನುತ್ತಾರೆ. ಖಾಲಿಜಾಗವಿದೆ, ಏನಾದರೂ ಬೆಳೆದುಕೊಳ್ಳಿ ಎಂದು ಅವಕಾಶ ನೀಡಿದರೆ ಈ ಜಮೀನೇ ತಮ್ಮದು ಎಂದು ಹಕ್ಕು ಚಲಾಯಿಸುತ್ತಾರೆ……’ ಹಿಂದಿನ ದಿನ ಸುಬ್ಬಯ್ಯ ನೀಡಿದ ಮಾಹಿತಿ ಕಿರಣನ ಯೋಚನಾಲಹರಿಯನ್ನು ಹೀಗೆ ಸಾಗಿಸಿತ್ತು. ಕಿರಣನ ಯೇಚನಾಲಹರಿಗೆ ತಡೆ ಒಡ್ಡಿದವಳು ಅವರ ಕ್ಯಾಬಿನ್ನಿನÀ ಬಾಗಿಲನ್ನು ತಳ್ಳಿಕೊಂಡು ಒಳಬಂದ ಒಬ್ಬಳು ಯುವತಿ. ಮುಖಚಹರೆ ನೋಡುತ್ತಿದ್ದಂತೆ ಈಕೆ ಸುಮಿತ್ರಳ ತಂಗಿ ಇರಬಹುದು ಎಂದು ಕಿರಣ್ ಅಂದುಕೊಂಡಿದ್ದು ಸುಳ್ಳಾಗಲಿಲ್ಲ.

ಅಕ್ಕನನ್ನು ಮಾನಸಿಕ ರೋಗಿಗಳ ಆಸ್ಪತ್ರೆಗೆ ಸೇರಿಸಿದ್ದಾರೆ ಎಂಬ ವಿಚಾರ ತಿಳಿದ ತಕ್ಷಣ ಲಲಿತ ಗಡಬಡಿಸಿ ಓಡಿ ಬಂದಿದ್ದಳು.

“ಡಾಕ್ಟರೇ ನನ್ನ ಅಕ್ಕನಿಗೆ ಏನಾಗಿದೆ?” ಕಿರಣ್ ತೋರಿದ ಖುರ್ಚಿಯಲ್ಲಿ ಕುಳಿತುಕೊಳ್ಳುತ್ತಲೇ ಲಲಿತ ಆತಂಕದಿಂದ ಕೇಳಿದಳು.

“ಅದನ್ನು ನೀವೇ ಹೇಳಬೇಕು” ಕಿರಣ್ ಹುಸಿನಗೆ ಬೀರುತ್ತ ಲಲಿತಳತ್ತ ನೋಡಿದರು.

ಅದಕ್ಕೆ ಏನೊಂದೂ ಉತ್ತರಿಸಿದ ಲಲಿತ, ‘ತಮಾಶೆ ಮಾಡಬೇಡಿ ಡಾಕ್ಟರೆ’ ಎಂಬ ಮುಖಭಾವದಲ್ಲಿ ಕೊಂಚ ಸಿಟ್ಟನ್ನು ತೋರಿದಳು.

ಇದನ್ನು ಗ್ರಹಿಸಲು ಕಿರಣ್‍ಗೆ ಕಷ್ಟವಾಗಲಿಲ್ಲ. ಅವರೆಂದರು “ಇಲ್ಲಿ ನಾನು ತಮಾಷೆ ಮಾಡುತ್ತಿಲ್ಲ, ನಿಮ್ಮ ಅಕ್ಕನಿಂದ ಆಕೆಯ ಸಮಸ್ಯೆಗೆ ಕಾರಣ ತಿಳಿಯಲು ನನಗೆ ಸಾಧ್ಯವಾಗಲಿಲ್ಲ, ಆಕೆ ಯಾವುದಕ್ಕೂ ಸ್ಪಂದಿಸುತ್ತಿಲ್ಲ. ಆಕೆಯ ಜೀವನದಲ್ಲಿ ಇತ್ತೀಚಿಗೆ ನಡೆದ ಘಟನೆಗಳು ನಿಮಗೆ ಗೊತ್ತಿರುವುದೇ ಆಗಿರುತ್ತವೆ. ಅದನ್ನು ನೀವು ಹೇಳಿದರೆ ನಿಮ್ಮ ಅಕ್ಕನ ಮನೋಕ್ಲೇಶಕ್ಕೆ ಕಾರಣಗಳನ್ನು ಕಂಡುಹಿಡಿಯಬಲ್ಲೆ. ರೋಗದ ಲಕ್ಷಣ ತಿಳಿದರೆ ಅದಕ್ಕೆ ಚಿಕಿತ್ಸೆ ಮಾಡುವುದು ಕಷ್ಟದ ಕೆಲಸವಲ್ಲ”

“ಸರಿ ಡಾಕ್ಟರ್, ನನಗೆ ಗೊತ್ತಿದ್ದನ್ನು ಹೇಳುತ್ತೇನೆ” ಒಮ್ಮೆ ದೀರ್ಘ ನಿಟ್ಟುಸಿರುಬಿಟ್ಟು ಲಲಿತ ಅಕ್ಕನ ಬದುಕಿನ ವಿವರಗಳನ್ನು ಹೇಳತೊಡಗಿದಳು.

ಸುಬ್ಬಯ್ಯ ಮತ್ತು ಸುಮಿತ್ರ ಇಬ್ಬರೂ ಮಲೆನಾಡಿನ ತೀರ್ಥಹಳ್ಳಿ ತಾಲ್ಲೂಕಿನ ಹಳ್ಳಿಗಳಿಂದ ಬಂದವರು. ಸುಬ್ಬಯ್ಯನದು ಮೇಗರವಳ್ಳಿಯಾದರೆ ಸುಮಿತ್ರಳದು ಹೊನ್ನಾನಿ. ಸುಬ್ಬಯ್ಯ ಬ್ಯಾಂಕ್ ಉದ್ಯೊಗಿ. ಮಕ್ಕಳು ಇರದಿದ್ದುದರಿಂದ ಗಂಡ ಬ್ಯಾಂಕಿಗೆ ಹೋದ ನಂತರ ಸುಮಿತ್ರಳಿಗೆ ವೇಳೆ ಕಳೆಯುವುದು ತುಂಬ ಕಷ್ಟವೆನಿಸಿತು. ರೈತ ಕುಟುಂಬದಿಂದ ಬಂದ ಸುಮಿತ್ರಾಳಿಗೆ ಕೃಷಿ ಬಗ್ಗೆ ಒಲವು ಇತ್ತಾದ್ದರಿಂದ ಶಿವಮೊಗ್ಗ ನಗರದ ಮಧ್ಯ ಭಾಗದಲ್ಲಿದ್ದ ದುರ್ಗಿಗುಡಿಯಲ್ಲಿನ ತಮ್ಮ ಮನೆಯನ್ನು ಮಾರಿ ನಗರದ ಹೊರವಲಯದ ಮಲ್ಲಿಗೇನಹಳ್ಳಿಯಲ್ಲಿ ಒಂದು ಎಕರೆ ಜಾಗ ಕೊಂಡು ಚಿಕ್ಕ ಮನೆಯೊಂದನ್ನು ಕಟ್ಟಿ, ಮನೆಯ ಮುಂದಿನ ಜಾಗದಲ್ಲಿ, ಬಾಳೆ, ಚಿಕ್ಕು, ಸೀಬೆಯಂತಹ ಹಣ್ಣಿನ ಗಿಡಗಳನ್ನು ಬೆಳೆಯಲಾರಂಭಿಸಿದಳು.

ಸುಬ್ಬಯ್ಯನ ತಮ್ಮ ರಾಜಶೇಖರ ಶಿವಮೊಗ್ಗ ನಗರದಲ್ಲಿ ಕಬ್ಬಿಣದ ವಸ್ತುಗಳ ದೊಡ್ಡ ವ್ಯಾಪಾರಿ. ಆತ ತನಗೆ ಬರುತ್ತಿದ್ದ ಲಾಭದ ಹಣದಲ್ಲಿ ಅಲ್ಲಲ್ಲಿ ಸೈಟು, ಭೂಮಿ ಖರೀದಿಸುತ್ತಿದ್ದ, ಹೊಸ ಸರ್ಕಾರ ಬಂದ ನಂತರ ನಗರದ ಅಭಿವೃದ್ದಿಗೆ ನೂರಾರು ಕೋಟಿ ಹರಿದು ಬಂದು ರಸ್ತೆಗಳು ಅಗಲವಾಗಿ, ಆಸ್ಪತ್ರೆ ಬಸ್‍ಸ್ಟ್ಯಾಂಡ್‍ಗಳು ಆಧುನೀಕರಣಗೊಳ್ಳತೊಡಗಿದ್ದವು. ಇದರೊಂದಿಗೆ ರಾಜಕಾರಣಿಗಳು ಭೂಮಿ ಮೇಲೆ ಹಣ ತೊಡಗಿಸತೊಡಗಿದ್ದರು. ಮಹಾಚತುರನಾದ ರಾಜಶೇಖರ ಮುಂದಿನ ದಿನಗಳಲ್ಲಿ ಭೂಮಿಗೆ ಚಿನ್ನದ ಬೆಲೆ ಬರುವ ಸೂಕ್ಷ್ಮವನ್ನು ಅರಿತ. ತನ್ನ ವ್ಯವಹಾರದ ಲಾಭದ ಹಣದಲ್ಲಿ ಕಂಡಲೆಲ್ಲ ಭೂಮಿಯನ್ನು ಖರೀದಿಸತೊಡಗಿದ. ಶಿವಮೊಗ್ಗದ ಹೊರವಲಯದಲ್ಲಿದ್ದ ತನ್ನ ಅಣ್ಣನ ಮನೆಯ ಹಿಂಭಾಗದಲ್ಲಿದ್ದ ಅರ್ಧ ಎಕರೆ ಜಾಗವನ್ನು ಖರೀದಿಸಿದ. ರಾಜಶೇಖರನ ಜಾಗದಲ್ಲೂ ಸುಮಿತ್ರ ಹಣ್ಣಿನ ಗಿಡಗಳನ್ನು ಬೆಳೆಸಿದಳು. ರಾಜಶೇಖರ ಮನೆಗೆ ಬಂದಾಗ ಒಂದಷ್ಟು ಹಣ್ಣುಗಳನ್ನು ಇವರಿಂದ ಪಡೆಯುತ್ತಿದ್ದನೇ ವಿನಃ ಬೇರೆನೂ ನಿರೀಕ್ಷಿಸುತ್ತಿರಲಿಲ್ಲ. ಸುಮಿತ್ರಳಿಗಾದರೂ ಅದೇನು ಅಂತಹ ಲಾಭ ತರುವ ವ್ಯವಹಾರವಾಗಿರಲಿಲ್ಲ, ಆದರೆ ಆ ಗಿಡಗಳ ಸಹವಾಸದಲ್ಲಿ ತನ್ನ ಬದುಕಿನ ಸಾರ್ಥಕತೆಯನ್ನು ಆಕೆ ಕಂಡಿದ್ದಳು.

ಸುಬ್ಬಯ್ಯ ಬೆಳಿಗ್ಗೆ ಕಛೇರಿಗೆ ಹೋದರೆ ಮರಳಿ ಬರುತ್ತಿದ್ದುದು ಗೆಳೆಯರೊಂದಿಗೆ ಕುಡಿದು, ಇಸ್ವಿಟ್ ಆಡಿ ರಾತ್ರಿ 10-11ರ ಗಂಟೆ ಹೊತ್ತಿಗೆ ಸುಬ್ಬಯ್ಯ ಬ್ಯಾಂಕಿಗೆ ಹೋದ ನಂತರ ಸುಮಿತ್ರಳ ದಿನಚರಿ ಪÀÇರ್ತಿ ಹಣ್ಣಿನ ತೋಟದಲ್ಲಿಯೇ ನಡೆಯುತ್ತಿತ್ತು. ಖಾಲಿ ಇದ್ದ ಜಾಗದಲ್ಲಿ ಬೀಜ ಬಿತ್ತುವುದು, ಗೊಬ್ಬರ ಹಾಕುವುದು ನೀರುಣಿಸುವುದು ಹೀಗೆ ಒಂದಲ್ಲಾ ಒಂದು ಕೆಲಸದಲ್ಲಿ ತೊಡಗುತ್ತಿದ್ದಳು. ಹಣ್ಣಿನ ತೋಟಕ್ಕೆ ಅನೇಕ ಬಗೆಯ ಹಕ್ಕಿಗಳು ಲಗ್ಗೆ ಇಡುತ್ತಿದ್ದವು. ಸುಮಿತ್ರ ಅವುಗಳನ್ನು ಓಡಿಸುವ ಬದಲು ಅವುಗಳು ಹಣ್ಣುಗಳನ್ನು ತಿನ್ನುವುದನ್ನು ನೋಡಿ ಸಂತೋಷಪಡುತ್ತಿದ್ದಳು. ಇದನ್ನು ಗಮನಿಸಿದ ಹಕ್ಕಿಗಳು ಸುಮಿತ್ರಳ ಬಳಿಯೇ ಹಾರಾಡುತ್ತ ತಮ್ಮ ಪ್ರೀತಿಯನ್ನು ತೋರುತ್ತಿದ್ದವು. ಗಿಡಮರಗಳ ಸಹವಾಸ, ಹಕ್ಕಿಗಳ ಸಂಗ ಸುಮಿತ್ರಳಿಗೆ ಪ್ರತಿದಿನವನ್ನು ಹೊಸದಿನವನ್ನಾಗಿ ಮಾಡುತ್ತಿದ್ದವು. ಆದರೆ ಸರ್ಕಾರದ ಒಂದು ನಿರ್ಧಾರ ಸುಮಿತ್ರಳ ಬಾಳಿನಲ್ಲಿ ದೊಡ್ಡ ಆಘಾತವನ್ನೇ ನೀಡಿತು.

ಶಿವಮೊಗ್ಗ ನಗರದಿಂದ ಸಾಗರ ಪಟ್ಟಣದವರೆಗೆ ಚತುಷ್ಪತ ರಸ್ತೆ ನಿರ್ಮಾಣಕ್ಕೆ ಸರ್ಕಾರ ಅಧಿಸೂಚನೆ ಹೊರಡಿಸಿದಾಗ ಸಾರ್ವಜನಿಕ ಹಿತಕ್ಕಾಗಿ ಸುಮಿತ್ರಳ ಮನೆಯ ಮುಂದಿನ ತೋಟ ಸಂಪÀÇರ್ಣ ನೆಲಸಮವಾಯಿತು. ಈ ದೃಶ್ಯವನ್ನು ಕಂಡ ಸುಮಿತ್ರ ತನ್ನ ಮಗುವನ್ನು ಕಳಕೊಂಡಂತೆ ರೋಧಿಸಿದಳು. ಆಗ ಅವಳಿಗೆ ಕೊಂಚÀ ಸಮಾಧಾನ ಮೂಡಿಸಿದ್ದು ಮನೆಯ ಹಿಂದೆ ಮೈದುನನ ಜಾಗದಲ್ಲಿ ಬೆಳೆಸಿದ್ದ ತೋಟ,

ತನ್ನ ಜಾಗದ ಮುಂದೆ ಚತುಷ್ಪತ ರಸ್ತೆ ಹಾದು ಹೋಗಿದ್ದರಿಂದ ರಾಜಶೇಖರ ನಿರೀಕ್ಷಿಸಿದಂತೆ ಆತನ ಜಾಗಕ್ಕೆ ಚಿನ್ನಕ್ಕಿಂತಲೂ ಅಧಿಕ ಬೆಲೆ ಬಂದಿತ್ತು. ರಾಜಶೇಖರ ಅದನ್ನು ಭದ್ರಾವತಿಯ ಕೈಗಾರಿಕೋದ್ಯಮಿ ಥಾಮಸ್‍ಗೆ ಮಾರಾಟ ಮಾಡಲು ಉದ್ಯುಕ್ತನಾದ, ಮೂರುವರ್ಷಗಳ ಹಿಂದೆ ಕೇವಲ ಎಂಟು ಲಕ್ಷಕ್ಕೆ ಕೊಂಡ ಆ ಜಮೀನನ್ನು ಈಗ ಥಾಮಸ್‍ಗೆ 60 ಲಕ್ಷಕ್ಕೆ ಮಾರಾಟ ಮಾಡಲು ರಾಜಶೇಖರ ಮಾತುಕತೆ ನಡೆಸಿದ್ದ. ತಮ್ಮ ಮನೆಯ ಮುಂದಿನ ಹಣ್ಣಿನ ತೋಟವನ್ನು ಸರ್ಕಾರ ನೆಲಸಮಗೊಳಿಸಿ ವಶಪಡಿಸಿಕೊಂಡಾಗ ಬಂದ ಪರಿಹಾರದ ಹಣ ಹದಿನೈದು ಲಕ್ಷವನ್ನು ಸುಬ್ಬಯ್ಯ ತನ್ನ ಹವ್ಯಾಸಗಳಿಗೆ ಖಾಲಿ ಮಾಡಿದ್ದ.

ಸುಮಿತ್ರ ಆ ತೋಟದ ಪ್ರತಿಯೊಂದು ಗಿಡದೊಂದಿಗೂ ಮಾತನಾಡಬಲ್ಲವಳಾಗಿದ್ದಳು. ಅಲ್ಲಿಗೆ ಬರುವ ಹಕ್ಕಿಗಳ ಜೊತೆ ಹಾಡಬಲ್ಲವಳಾಗಿದ್ದಳು. ಸುಮಿತ್ರಳ ದುಃಖಕ್ಕೆ ಏಕತಾನತೆಗೆ ಆ ಗಿಡ ಮರÀ ಬಳ್ಳಿಗಳು ಸಾಂತ್ವನ ಹೇಳುತ್ತಿದ್ದವು. ಇಂತಹ ಗಿಡ ಮರ ಬಳ್ಳಿಗಳಿಗೆ ಸದ್ಯದಲ್ಲಿಯೇ ಕೊಡಲಿಯೇಟು ಬೀಳಲಿದ್ದವು.

ಹಿಂದೆ ರಸ್ತೆ ಅಗಲೀಕರಣಕ್ಕಾಗಿ ಸುಮಿತ್ರಳ ಹಣ್ಣಿನ ತೋಟ ಮಾತ್ರವೇ ನೆಲಸಮವಾಗಿರಲಿಲ್ಲ. ನೂರಾರು ಮೈಲಿಗಳ ರಸ್ತೆಗಳ ಎರಡೂ ಬದಿಯ ನೂರಾರು ವರ್ಷಗಳಿಂದ ಬೆಳದಿದ್ದ ಸಾವಿರಾರು ಹುಣಿಸೆ, ಅರಳಿ, ಮಾವಿನ ಬೃಹದಾಕಾರದ ಮರಗಳೂ ನೆಲಕ್ಕೊರಿಳಿದ್ದವು. ಈ ಮರಗಳನ್ನು ಆಶ್ರಯಿಸಿದ್ದ ಲಕ್ಷಾಂತರ ಹಕ್ಕಿ-ಪಕ್ಷಿಗಳು ಅನಾಥವಾಗಿದ್ದವು.

ಸುಮಿತ್ರ ಏನು ಯೋಚಿಸಿದರೂ, ಹೇಗೆ ಯೋಚಿಸಿದರೂ ತನ್ನ ಮೈದುನನಿಗೆ ಆ ಹಣ್ಣಿನ ತೋಟವನ್ನು ಮಾರಾಟ ಮಾಡದಿರುವಂತೆ ಹೇಳಲು ಸಾಧ್ಯವಿಲ್ಲ ಎಂದುಕೊಂಡಳು. ತಾನು ನೆಟ್ಟು ಬೆಳೆಸಿದ ಹಣ್ಣಿನ ತೋಟ ತನಗೆ ಬೇಕು ಎಂದು ಸುಮಿತ್ರಳಿಗೆ ಗಾಢವಾಗಿ ಅನ್ನಿಸಿದರೂ ಅದು ಸಾಧ್ಯವಿಲ್ಲ ಎನಿಸಿದಾಗ ಆಕೆ ದಿನದಿನಕ್ಕೆ ಅಂತರ್ಮುಖಿಯಾಗತೊಡಗಿದಳು.

‘ನಾನು ನಿಷ್ಕಲ್ಮಶವಾಗಿ ಆ ಹಣ್ಣಿನ ಗಿಡಗಳನ್ನು ಬೆಳೆಸಿದೆ. ಹಕ್ಕಿ-ಪಕ್ಷಿಗಳನ್ನು ಪ್ರೀತಿಸಿದೆ. ತನ್ನ ಮಕ್ಕಳಂತೆ ಆರೈಕೆ ಮಾಡಿದೆ. ಹೀಗೆ ಒಂದು ದಿನ ತನ್ನ ಈ ಮಕ್ಕಳನ್ನು ಯಾರೋ ಕಸಿದುಕೊಳ್ಳುತ್ತಾರೆ ಎಂದು ನಾನು ಅಂದುಕೊಳ್ಳಲೇ ಇಲ್ಲವಲ್ಲ.’

ಸುಮಿತ್ರ ಮುಗಿಯದ ಚಿಂತೆಯಲ್ಲಿ ಮುಳುಗಿದಳು.

‘‘ಲಲಿತ, ಈ ಮಣ್ಣು, ಈ ಗಿಡಮರ ಬಳ್ಳಿಗಳು, ಹಕ್ಕಿ ಪಕ್ಷಿಗಳೊಂದಿಗಿನ ನಮ್ಮ ಸಂಬಂಧಕ್ಕೆ ಬೆಲೆಯೇ ಇಲ್ಲವೇನೇ?” ಹೀಗೆಂದು ಅಕ್ಕ ನನ್ನ ಬಳಿ ರೋಧಿಸುತ್ತಿದ್ದಳು.’ ಅಕ್ಕನ ಕಥೆ ಹೇಳಿ ಮುಗಿಸುವಾಗ ಲಲಿತಳ ಕಣ್ಣಿನಲ್ಲಿ ಅಪ್ರಯತ್ನಪÀÇರ್ವಕವಾಗಿ ನೀರು ಜಿನುಗುತ್ತಿರುವುದನ್ನು ಕಿರಣ್ ಗಮನಿಸಿದ.

ಕಣ್ಣೀರನ್ನು ಒರೆಸಿಕೊಂಡು ಲಲಿತ ವಿಷಾದದಿಂದ ಕೇಳಿದಳು “ಡಾಕ್ಟರ್ ನನ್ನದೊಂದು ಪ್ರಶ್ನೆ , ರಾಜಶೇಖರ ಕಾನೂನು ಬದ್ದವಾಗಿ ಈ ಜಾಗದ ಒಡೆಯ ಹೌದು. ಆದರೆ ಈ ನೆಲವನ್ನು ಪ್ರೀತಿಸಿದ್ದು, ಅದಕ್ಕೆ ನೀರುಣಿಸಿದ್ದು, ಗಿಡಗಳನ್ನು ನೆಟ್ಟ್ಟು ಆರೈಕೆ ಮಾಡಿದ್ದು, ಹಕ್ಕಿ-ಪಕ್ಷಿಗಳಿಗೆ ಆಶ್ರಯ ನೀಡಿದ್ದು ಎಲ್ಲವೂ ನನ್ನ ಅಕ್ಕ. ನಿಜಕ್ಕೂ ಈ ಜಾಗದ ಒಡತಿ ನಮ್ಮಕ್ಕ ಅಲ್ಲವೇ ಡಾಕ್ಟರ್”

ಡಾ. ಕಿರಣ್ ಏನು ಉತ್ತರಿಸುವುದೆಂದು ತಿಳಿಯದೇ ಮೌನಕ್ಕೆ ಶರಣಾದ.

ಚಿತ್ರ : ಎಂ. ಆರ್‌. ಭಗವತಿ

ಸರ್ಜಾಶಂಕರ ಹರಳಿಮಠ

ಲೇಖಕ, ಚಿಂತಕ, ಡಾ. ಸರ್ಜಾಶಂಕರ್ ಹರಳಿಮಠ ಅವರು ಮೂಲತಃ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕು ಹರಳಿಮಠ ಗ್ರಾಮದವರು. ತೀರ್ಥಹಳ್ಳಿಯ ತುಂಗಾ ಮಹಾವಿದ್ಯಾಲಯದಲ್ಲಿ ಪದವಿ ಮುಗಿಸಿ ಉದ್ಯೋಗವರಸಿ ಬೆಂಗಳೂರಿಗೆ ತೆರಳಿದರು. ಅಲ್ಲಿ ಬಹುರಾಷ್ಟ್ರೀಯ ಕಂಪನಿ ಸೇರಿದಂತೆ ಕೆಲವು ಕಂಪನಿಗಳಲ್ಲಿ ಒಂದು ದಶಕದ ಕಾಲ ಸೇವೆ ಸಲ್ಲಿಸಿದ ನಂತರ ಹುದ್ದೆಗೆ ರಾಜೀನಾಮೆ ನೀಡಿ ಊರಿಗೆ ಮರಳಿ ಶಿವಮೊಗ್ಗದಲ್ಲಿ  ಗ್ರಾಮೀಣ ಮಹಿಳೆಯರು ಉತ್ಪಾದಿಸುವ ಕೈಮಗ್ಗದ ಉಡುಪುಗಳೂ ಸೇರಿದಂತೆ ಗೃಹ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸುವ ‘ದೇಸಿ ಸಂಸ್ಖೃತಿ’ ಎಂಬ ಮಾರುಕಟ್ಟೆ ಕೇಂದ್ರವನ್ನು ಆರಂಭಿಸಿದರು. ಜತೆ ಜತೆಗೆ ಜನಪರ ಹೋರಾಟಗಳಲ್ಲಿ ಸಕ್ರೀಯವಾಗಿ ತೊಡಗಿಸಿಕೊಳ್ಳುತ್ತಲೇ ಕುವೆಂಪು ವಿಶ್ವವಿದ್ಯಾಲಯದಲ್ಲಿ ಕನ್ನಡ ಎಂ.ಎ ಪದವಿಗಳಿಸಿದರು.  ಮೈಸೂರು ವಿಶ್ವವಿದ್ಯಾಲಯದಲ್ಲಿ ಪತ್ರಿಕೋದ್ಯಮದಲ್ಲಿ ಡಿಪ್ಲೋಮಾ ಪೂರ್ಣಗೊಳಿಸಿದರು. 

ಆನಂತರ ಡಾ. ರಹಮತ್ ತರೀಕೆರೆ ಅವರ ಮಾರ್ಗದರ್ಶನದಲ್ಲಿ ‘ಕನ್ನಡ ವಿಚಾರ ಸಾಹಿತ್ಯದಲ್ಲಿ ಕನ್ನಡ ಅಸ್ಮಿತೆಯ ಹುಡುಕಾಟದ ನೆಲೆಗಳು’ ಎಂಬ ಮಹಾಪ್ರಬಂಧಕ್ಕೆ ಕನ್ನಡ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿ ಪಡೆದರು.  ಕನ್ನಡ ಪ್ರಾಧ್ಯಾಪಕರಾಗಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಹಲವು ವರ್ಷ ಸೇವೆ ಸಲ್ಲಿಸಿದರು. ಸಧ್ಯ ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರದಲ್ಲಿ ಸಹ ಸಂಶೋಧಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.  ಅಂತರಾಳ (ಸಾಹಿತ್ಯ ಸಂಕಲನ), ಬೆಚ್ಚಿ ಬೀಳಿಸಿದ ಬೆಂಗಳೂರು (ಅಂಕಣಬರಹಗಳು), ಜೀವದನಿ (ಅಂಕಣ ಬರಹಗಳು), ಬಾರಯ್ಯ ಬೆಳದಿಂಗಳೇ (ಕಥಾ ಸಂಕಲನ), ಸುಡುಹಗಲ ಸೊಲ್ಲು (ಲೇಖನಗಳ ಸಂಕಲನ), ಕೃತಿಗಳನ್ನ ಪ್ರಕಟಿಸಿದ್ದಾರೆ. ಮತ್ತು  ಜನಸಂಸ್ಕೃತಿಯ ಬಾಬಾಬುಡನ್ ಗಿರಿ, ನವಿಲು ಕಲ್ಲು, ನವಿಲ ಹೆಜ್ಜೆ ಸೇರಿದಂತೆ ಹಲವು ಕೃತಿಗಳ ಸಂಪಾದಕರಾಗಿ ದುಡಿದಿದ್ದಾರೆ.

More About Author