Story

ಭೂಪೋತ್ತಮನಂ...

 

"ವೇಲೂ ಇನ್ನೂ ಎಲ್ಲಿದಿಯೋ ಮಾರಾಯ!? ಮನಸಿನ್ವಿಗೆ ಧಾರೆ ಎರೆಯೋ ಮುಹೂರ್ತ ಬಂತು. ನೀನು ಇನ್ನೂ ಬರಲಿಲ್ಲ! ನಿನ್ನೆ ರಾತ್ರಿನೇ ಹೊರಟಿದ್ರೆ ಇಷ್ಟೊತ್ತಿಗೆ ಇಲ್ಲಿರತಿದ್ದಿ. ಅಲ್ಲಾ, ಮನಸ್ವಿನಿ ನಿನ್ನ ಮಗಳು. ನೀನೇ ಅವಳ ಬಯಾಲಾಜಿಕಲ್ ಫಾದರ್. ನೀನಿಲ್ಲದೇ ನಾನು ಧಾರೆ ಎರೆಯೋದು ಹೇಗೆ ಮಾರಾಯ!!?"

ಮದುವೆ ಮನೆಯ ಆ ವಧುವಿನ ಕೋಣೆಯಲ್ಲಿ ಅಸಹಜ ಮೌನವೊಂದು ಮಿಡುಕಾಡಹತ್ತಿತು. ಮನಸ್ವಿನಿ ಮತ್ತು ಅವಳ ತಾಯಿ ಪವಿತ್ರ ಈ ಪಾರ್ಥಸಾರಥಿಯ ಮಾತಿಗೆ ಸ್ಥಂಭೀಭೂತರಾಗಿದ್ದರು. ಅತ್ತಲಿಂದ ವೇಲಾಯುಧನ್ "ಪಾರ್ತನ್ನ" ಎಂದಷ್ಟೇ ಉಲಿದು ಮೌನವಾಗಿದ್ದ. ಆ ಕೋಣೆಯ ಮೌನವನ್ನು ಮಿಸುಕಾಡಿಸಿದ್ದು ಪುರೋಹಿತರ ಗಟ್ಟಿ ದನಿಯ ಕೂಗು. "ಎಲ್ಲಿ ವಧೂನ ಕರೆತನ್ನಿ" ಎಂದದ್ದೇ ವಧುವಿನ ಸೋದರ ಮಾವ ಪ್ರಸಾದ್ ಲಗುಬಗೆಯಿಂದ ಕೋಣೆಯೊಳಗೆ ಬಂದ. ನಿರ್ವಿಣ್ಣರಾಗಿದ್ದ ಅಕ್ಕ ಮತ್ತವಳ ಮಗಳು, ತೀರದ ಗೊಂದಲದಲ್ಲಿದ್ದ ಭಾವ ಪಾರ್ಥಸಾರಥಿಯನ್ನು ನೋಡಿದವ, ಗಲಿಬಿಲಿಗೊಂಡರೂ "ಅಕ್ಕಾ, ಭಾವ ಮುಹೂರ್ತದ ಟೈಮಾಯ್ತು. ಇಲ್ಲೇನು ಮಾಡ್ತಿದ್ದೀರಿ!!? ಹೊರಡಿ ಹೊರಡಿ" ಎಂದು ಅವಸರಿಸಿ, ವಧುವಿನ ಕೈ ಹಿಡಿದು ಹೊರನಡೆದ.

ಮಗಳನ್ನು ಧಾರೆ ಎರೆದು ಕೊಡಲು ಹಸೆ ಮಣೆಯ ಮೇಲೆ ಕುಳಿತ ಪವಿತ್ರಳಿಗೆ ಹೊಟ್ಟೆ ತೊಳಸಿದಂತಾಗುತ್ತಿತ್ತು. ’ಇದೇನು ನಾನು ಕೇಳಿದ್ದು? ಮನಸಿನ್ವಿ ವೇಲಾಯುಧನ್ ಮಗಳಾ!!? ಅದ್ಹೇಗೆ ಸಾಧ್ಯ? ಮನಸ್ವಿನಿ ನಾನು ಹೆತ್ತ ಮಗಳು. ವೇಲು ನಮ್ಮ ಮನೆಗೆ ಆಪ್ತನಾದರೂ ನನ್ನೊಂದಿಗೆ ಗೌರವದಿಂದಲೇ ನಡೆದುಕೊಂಡವನು. ನಾನೂ ಯಾವತ್ತೂ ಮೇರೆ ಮೀರಿದವಳಲ್ಲ. ಹಾಗಾದರೆ ವೇಲು ಮನಸ್ವಿನಿಯ ಬಯಾಲಾಜಿಕಲ್ ತಂದೆ ಹೇಗಾಗ್ತಾನೆ!?’ ಈ ಗೊಂದಲದಲ್ಲೇ ಪವಿತ್ರ ಪಕ್ಕದಲ್ಲಿ ಕೂತ ಗಂಡ ಪಾರ್ಥಸಾರಥಿಯನ್ನು ನೋಡಿದಳು. ಅವ ಪುರೋಹಿತರ ಮಂತ್ರಗಳಲ್ಲಿ ಮಗ್ನನಾಗಿ ’ಮಮ’ ಎನ್ನುತ್ತಿದ್ದ. ಪವಿತ್ರ ಮಗಳ ಮುಖ ನೋಡಿದಳು. ಇವಳ ಗೊಂದಲವೇ ಅವಳ ಮುಖದಲ್ಲೂ ಪ್ರತಿಫಲಿಸುತ್ತಿತ್ತು!!

***

ಅಮರಾವತಿಯಲ್ಲಿ ಪ್ರೈಮರಿ ಶಾಲೆ ಮೇಷ್ಟ್ರಾಗಿದ್ದ ಪಾರ್ಥಸಾರಥಿ ಎಂಬ ವರನ ವಿಚಾರವನ್ನು ಮನೆಯಲ್ಲಿ ಪ್ರಸ್ತಾಪಿಸಿದ್ದವನು ಪ್ರಸಾದ. ತಂದೆಯನ್ನು ಕಳೆದುಕೊಂಡು ಅವರ ಸಾವಿನ ಅನುಕಂಪದಿಂದ ಸಿಕ್ಕ ತಾಲ್ಲೂಕಾಫೀಸಿನ ಕ್ಲರ್ಕ್ ಕೆಲಸ ಮಾಡುತ್ತಿದ್ದ ಈ ಸುಬ್ರಹ್ಮಣ್ಯ ಪ್ರಸಾದನಿಗೆ ಪವಿತ್ರ ಸೇರಿದಂತೆ ಮೂವರು ಅಕ್ಕಂದಿರು. ಅವರೆಲ್ಲರ ಮದುವೆ ಬಾಣಂತನ ಮಾಡದೇ ಪ್ರಸಾದ ಮದುವೆಯಾಗುವಂತಿರಲಿಲ್ಲ. ಮೊದಲಿಬ್ಬರು ಅಕ್ಕಂದಿರ ಬೇಡಿಕೆಯಂತೆ ಒಳ್ಳೆಯ ಕಡೆ ಮದುವೆ ಮಾಡಿ ಮುಗಿಸುವುದರ ಒಳಗೆ ಹೈರಾಣಾಗಿದ್ದ ಪ್ರಸಾದನ ಬವಣೆ ಕಂಡಿದ್ದ ಪವಿತ್ರ, ಪಾರ್ಥಸಾರಥಿಯ ಪ್ರಸ್ತಾಪ ಬಂದುದೇ ಹುಡುಗ ಹೇಗಿದ್ದರೂ ಮದುವೆ ಆಗುವುದಾಗಿ ನಿರ್ಧರಿಸಿದ್ದಳು. ಪವಿತ್ರಳನ್ನು ಪಾರ್ಥಸಾರಥಿಯೂ ನಿರಾಕರಿಸುವಂತಿರಲಿಲ್ಲ. ಮಧ್ಯಮ ವರ್ಗದ, ಮದುವೆ ಆಗಲೆಂದೇ ಹುಟ್ಟಿದ ಆ ಹುಡುಗಿ ’ಹದಿಬದೆಯ ಧರ್ಮ’ವನ್ನು ಅರೆದು ಕುಡಿದವಳು! ತೆಳ್ಳಗೆ ಬೆಳ್ಳಗೆ ಲಕ್ಷಣವಾಗಿದ್ದ ಆ ಉದ್ದ ಜಡೆಯ ಹುಡುಗಿಗೆ ಪಾರ್ಥಸಾರಥಿ ಎಂಬ ಬೊಕ್ಕ ತಲೆಯ ಉಬ್ಬು ಹಲ್ಲಿನ ಕನ್ನಡಕಧಾರಿ ಸಾಮ್ಯ ಅನ್ನಿಸಿರಲಿಲ್ಲ. ಆದರೂ ಮೊದಲೇ ನಿರ್ಧರಿಸಿದ್ದ ಪವಿತ್ರ ತನ್ನ ಒಪ್ಪಿಗೆ ತಿಳಿಸಿದಾಗ ಪಾರ್ಥಸಾರಥಿ ಇರಲಿ ಪ್ರಸಾದನೇ ನಂಬಿರಲಿಲ್ಲ! ಮನೆಯಲ್ಲಿರುವ ವಯೋವೃದ್ಧ ತಾಯಿ, ಬುದ್ದಿಮಾಂದ್ಯ ಅಕ್ಕ, ಸ್ವಂತ ಮನೆ ಸಂಬಳದ ಹೊರತು ಬೇರೆ ವರಮಾನ ಇಲ್ಲದ ಪಾರ್ಥಸಾರಥಿಯ ಯಾವ ಇಲ್ಲಗಳೂ ಈ ಮದುವೆಗೆ ತೊಡಕಾಗಲಿಲ್ಲ.

ಪಡಿ ಎಡವಿ ಮನೆ ಹೊಕ್ಕ ಪವಿತ್ರ ಮೊದಲು ಮಾಡಿದ್ದು ಮನೆಯ ಜಾಡು ತೆಗೆಯುವ ಕೆಲಸ. ಬೆಳಗ್ಗೆ ಎದ್ದು ಸೊಂಟಕ್ಕೆ ಸೆರಗ ಸಿಕ್ಕಿಸಿದರೆ ಅತ್ತೆಗೆ ಅತ್ತಿಗೆಗೆ ಮೀಯಿಸಿ, ಗಂಡನಿಗೆ ಅಡುಗೆ ಬೇಯಿಸಿ, ತಾನೂ ತುತ್ತು ತಿನ್ನುವ ಹೊತ್ತಿಗೆ ಸೂರ್ಯ ನೆತ್ತಿಗೆ ಬಂದಿರುತ್ತಿದ್ದ. ಮೂಗಿಗೆ ಕವಡೆ ಕಟ್ಟಿದಂತೆ ಕಸ ಮುಸುರೆ ಬಟ್ಟೆ ಅಡುಗೆ ಎಂದು ಗೇಯ್ದರೇ ಮನೆಯ ದಿನ ಪೂರ್ಣವಾಗುತ್ತಿತ್ತು. ಆ ಒಂದೇ ಉಸಿರಿನ ಓಟ ನಿಲ್ಲಿಸಿ ಸಾವರಿಸುವುದು, ಸೊಂಟಕ್ಕೆ ಸಿಕ್ಕಿಸಿದ್ದ ಸೆರಗ ಬಿಚ್ಚಿ ಹಾಸುವುದು ರಾತ್ರಿಯೇ. ಆ ದಣಿದ ದೇಹದ ಮೇಲೆ ಕೈ ಹಾಕಲು ಪಾರ್ಥಸಾರಥಿಗೆ ಮನಸ್ಸೇ ಬರುತ್ತಿರಲಿಲ್ಲ. ಬದಲಿಗೆ ಅವನೇ ಅವಳಿಗೆ ಅಮೃತಾಂಜನ ಹಚ್ಚಿ, ಅಯೋಡೆಕ್ಸ್ ನಿಂದ ಸೊಂಟ ನೀವಿ ಎಚ್ಚರವಿಲ್ಲದಂತೆ ಮಲಗಿದ್ದ ಮಡದಿಯ ಹಣೆಗೆ ಮುತ್ತಿಡುತ್ತಿದ್ದ. ಆ ಮುತ್ತನ್ನು ಮಡಿಲಿಗಿರಿಸಲು ಬಯಸಿದ್ದು ಪವಿತ್ರ.

ವಯಸ್ಸಾದ ತಾಯಿ, ಬುದ್ದಿ ಮಾಂದ್ಯ ಅಕ್ಕನ ಚಿಕಿತ್ಸೆ ಮತ್ತಿತರೆ ವೆಚ್ಚಗಳೇ ಅಧಿಕವಾದ ಆ ಕಾಲದಲ್ಲಿ ಪವಿತ್ರಳ ಬಸಿರೂ ದುಬಾರಿ ಎನ್ನಿಸಿ ಕಂಗಾಲಾಗಿದ್ದ ಪಾರ್ಥಸಾರಥಿ. ಮೊದಲ ಬಸಿರು ಮೂರು ತಿಂಗಳಲ್ಲೇ ಇಳಿದಾಗ ಖಿನ್ನನಾಗಿದ್ದೂ ಅವನೇ. ಮನೆಯ ಕೆಲಸದ ಭಾರವೇ ಬಸಿರ ಇಳಿಸಿದ್ದು ಎನ್ನಿಸಿ, ಎರಡನೆಯ ಬಾರಿ ಬಸಿರು ನಿಂತಿದ್ದೇ ಹೆಂಡತಿಯನ್ನು ತವರಿಗೆ ಕಳಿಸಿದ್ದ. ತವರಿನಲ್ಲಿ ಮನೆ ನಿಭಾಯಿಸುವ ತಮ್ಮ, ಅಮ್ಮನ ದೇಖರೀಕೆಗಳಿಂದ ನಿರಾಳವಾಗಿ ಮೈದುಂಬಿಕೊಂಡ ಪವಿತ್ರಳನ್ನು ಕಾಣಲು ಪ್ರತಿ ವಾರ ಪಾರ್ಥಸಾರಥಿ ಬರುತ್ತಿದ್ದ. ಪ್ರತಿ ಸಂಜೆ ಶಾಲೆ ಮುಗಿದ ಕೂಡಲೇ ಫೋನಾಯಿಸಿ ವಿಚಾರಿಸುತ್ತಿದ್ದ. ರೋಮ್ಯಾಂಟಿಕ್ ಆಗಿರುತ್ತಿದ್ದ ಅವರಿಬ್ಬರ ಸಂಭಾಷಣೆಯಲ್ಲಿ ಹೊಟ್ಟೆಯಲ್ಲಿದ್ದ ಮಗುವೂ ಮಾತಾಡುತ್ತಿತ್ತು!

’ಏನು ಮಾಡ್ತಿದ್ದೀ?’ ಎಂದೇ ಆರಂಭವಾಗುತ್ತಿದ್ದ ಪಾರ್ಥಸಾರಥಿಯ ಮಾತಿಗೆ ಪವಿತ್ರ "ನಾನೂ ಪುಟ್ಟೀ ಇಬ್ಬರೂ ಕೋಸಂಬರಿ ತಿನ್ತಾ ಇದ್ವಿ" ಎನ್ನುತ್ತಿದ್ದಳು. "ಪುಟ್ಟಿಯಾ!?" ಎಂಬ ಉದ್ಗಾರಕ್ಕೆ "ಹೌದು. ನಿಮಗೆ ಹೆಣ್ಣು ಮಗೂ ಅಂದ್ರೆ ಇಷ್ಟ ಅಲ್ವಾ. ಅದಕ್ಕೆ ಈ ಮಗೂ ಹೆಣ್ಣೇ ಆಗುತ್ತೆ ಅಂತ ನನ್ನ ನಂಬಿಕೆ. ನಾನು ಮೋಕ್ಷ ಅಂತ ಹೆಸರೂ ಇಟ್ಟಿದ್ದೀನಿ" ಎನ್ನುತ್ತಿದ್ದಳು ಪವಿತ್ರ. ಅಂದಿನಿಂದ ಆ ಕಲ್ಪಿತ ಮಗುವಿಗೆ ಪಾರ್ಥಸಾರಥಿಯೂ ಮೋಕ್ಷ ಎಂದೇ ಕರೆಯುತ್ತಿದ್ದ. ಆದರೆ ಆ ಮಗು ಹುಟ್ಟುವ ಮೊದಲೇ ಮೋಕ್ಷ ಪಡೆದದ್ದು ಮಾತ್ರ ವಿದ್ರಾವಕ ಸಂಗತಿ.

ಒಂದು ನಡು ರಾತ್ರಿ ಕರೆ ಮಾಡಿದ್ದ ಪ್ರಸಾದ್

"ಭಾವಾ. . . . ಪವಿತ್ರಕ್ಕನಿಗೆ ಈ ರಾತ್ರಿ ಊಟ ಮಾಡಿದ ಸ್ವಲ್ಪ ಹೊತ್ತಿಗೇ ನೋವು ಕಾಣಿಸಿಕೊಳ್ತು. ಇನ್ನೂ ಐದೂವರೆ ತಿಂಗಳು, ಹೆರಿಗೆ ನೋವಲ್ಲ ಅಂತ ನಾವೂ ಸುಮ್ನಾದ್ವಿ. ಆದ್ರೆ ರಾತ್ರಿ ಅವಳ ಸಂಕಟ ನೋಡಲಾಗ್ದೇ ಆಸ್ಪತ್ರೆಗೆ ಕಕೊಂಡ್ಬಂದ್ವಿ. ಡಾಕ್ಟರ್ ಹರಸಾಹಸ ಮಾಡಿದರೂ. . " ಬಿಕ್ಕಿದ್ದ.

"ಪ್ರಸಾದೂ ನಾನೀಗ್ಲೇ ಹೊರಡ್ತೀನಿ. ಮಗೂಗೆ ಏನಾದ್ರೂ ಆಗ್ಲಿ. ದೊಡ್ಡ ಜೀವಕ್ಕೆ ಏನೂ ಆಗದಿರಲಿ" ಅಂತ ಹಲುಬಿದ್ದ ಪಾರ್ಥಸಾರಥಿ.

ಕನಸುಗಳನ್ನೂ ಗರ್ಭದಲ್ಲಿ ಧರಿಸಿದ್ದ ಪವಿತ್ರಳಿಗೆ ಈ ಗರ್ಭಪಾತ ಬರಿಯೇ ನೋವನ್ನು ಕೊಟ್ಟಿರಲಿಲ್ಲ. ಮತ್ತೆ ಕನಸು ಕಾಣಲೂ ಭಯಪಡುವಷ್ಟು ಆಘಾತಕ್ಕೊಳಗಾಗಿದ್ದ ಆಕೆ "ಸಾರಿ ಕಣ್ರೀ. ನಿಮಗೆ ಮಗು ಹೆತ್ತು ಕೊಡಲಾಗದ ಪಾಪಿ ನಾನು" ಅಂತ ಹಲುಬಿದ್ದಳು. ಪಾರ್ಥಸಾರಥಿ ಬಗೆಬಗೆಯಾಗಿ ಅವಳನ್ನು ಸಮಾಧಾನಗೊಳಿಸಲು ಯತ್ನಿಸಿದ್ದ. "ಬಿಡು ಪವಿ. ನೀನು ಒಂದು ಶಾಪಗ್ರಸ್ಥ ಆತ್ಮಕ್ಕೆ ಒಂದು ಜನ್ಮವನ್ನು ಕಳೆಯಲು ನೆರವು ನೀಡಿದ್ದೀಯ. ಅದು ಒಂದು ಜನ್ಮ ಕಳೆದೇ ಮೋಕ್ಷ ಹೊಂದಬೇಕಿತ್ತೇನೋ!? ನೀನು ಅದಕ್ಕೆ ಮೋಕ್ಷ ಅಂತ ಹೆಸರಿಟ್ಟು, ತಾಯ್ತನದ ಪ್ರೀತಿ ತೋರಿಸಿ ಬೀಳ್ಕೊಟ್ಟಿದ್ದೀಯ" ಯಾವುದೋ ನಂಬಿಕೆಯ ಲೋಕದ ಈ ಮಾತುಗಳು ಪವಿತ್ರಳಿಗೆ ಸಮಾಧಾನ ಮಾಡಿರಲಿಲ್ಲ. ಸ್ವತಃ ಪಾರ್ಥಸಾರಥಿಗೂ!!

ಅದಾಗಿ ಎರಡು ವರ್ಷದ ನಂತರ ಪವಿತ್ರ ಮತ್ತೆ ಗರ್ಭ ಧರಿಸಿದರೂ ಮೂರನೆಯ ತಿಂಗಳ ನಂತರ ಸ್ಕ್ಯಾನಿಂಗ್ ಮಾಡಿಸಿದ್ದ ಡಾಕ್ಟರ್ ಭ್ರೂಣದ ಅಸಮರ್ಪಕ ಬೆಳವಣಿಗೆಯಿಂದ ಅದನ್ನು ತೆಗೆದುಬಿಟ್ಟಿದ್ದರು. ಪವಿತ್ರ ಮಾತು ನಗೆ ಎಲ್ಲಾ ಮರೆತು ಕುಸಿದು ಹೋಗಿದ್ದಳು. ಸೂತಕದ ಮ್ಲಾನತೆಯೇ ರಾಜ್ಯಭಾರ ಮಾಡುತ್ತಿದ್ದ ಆ ಮನೆಗೆ ಮತ್ತೆ ಸಹಜತೆಯ ಗಾಳಿ ಬೀಸಿದ್ದು ವೇಲಾಯುಧನ್ ಆಗಮನದೊಂದಿಗೆ.

ಅಮರಾವತಿಯ ಫಾರ್ಮಸಿ ಕಾಲೇಜಿನಲ್ಲಿ ಡಿ.ಫಾರ್ಮಾ ಓದಲು ಎಲ್ಲೆಂಲ್ಲಿಂದಲೋ ಜನ ಬರ್ತಿದ್ದರು. ಹಾಗೆ ಬಂದವರಲ್ಲಿ ಹಾಸ್ಟೆಲ್ ಒಗ್ಗದವರು ಮೂರು ನಾಲ್ಕು ಜನ ಸೇರಿ ಪುಟ್ಟ ಮನೆಯೊಂದನ್ನು ಬಾಡಿಗೆಗೆ ಹಿಡಿದು, ಸ್ವತಃ ಅಡುಗೆ ಮಾಡಿಕೊಂಡು ಓದುತ್ತಿದ್ದರು. ಹಾಗೆ ಫಾರ್ಮಸಿ ಓದಲೆಂದು ಬಂದ ಈ ವೇಲಾಯುಧನ್ ತನ್ನ ಗೆಳೆಯರೊಂದಿಗೆ ಪಾರ್ಥಸಾರಥಿ ಪಕ್ಕದ ಮನೆಯನ್ನೇ ಬಾಡಿಗೆಗೆ ಹಿಡಿದಿದ್ದ. ಮೂವರೂ ಮಲೆಯಾಳಿಗಳೇ ಆದರೂ ವೇಲಾಯುಧನನ ತಂದೆ ಕಾಸರಗೋಡಿನವರಾದ ಕಾರಣ ಆತನಿಗೆ ಕನ್ನಡವೂ ಬರ್ತಿತ್ತು. ವಠಾರದಂತೆ ಒಂದೇ ಕಾಂಪೌಂಡಿನಲ್ಲಿ ಇದ್ದ ಹತ್ತು ಮನೆಗಳಿಗೂ ವೇಲಾಯುಧನ್ ಬಹುಬೇಗ ಪರಿಚಯವಾದುದು, ನೆರೆಹೊರೆಯವರ ಮಕ್ಕಳಿಗೆಲ್ಲಾ ಪ್ರೀತಿಯ ವೇಲಾಂಡಿಯಾದುದು ಈ ಕನ್ನಡದ ದೆಸೆಯಿಂದ. ತನ್ನ ಅಜ್ಜಿಯಿಂದ ನಾಟಿ ವೈದ್ಯ ಪದ್ಧತಿಯನ್ನೂ ಕಲಿತಿದ್ದ, ತಾನು ಕಲಿಯುತ್ತಿದ್ದ ಫಾರ್ಮಸಿಯಿಂದಾಗಿ ಇಂಗ್ಲೀಷ್ ಮೆಡಿಸಿನ್ನೂ ಗೊತ್ತಿದ್ದ ಈ ಅರೆ ವೈದ್ಯ ವಠಾರದವರ ಆಪದ್ಭಾಂದವನೂ ಆಗಿದ್ದು ಬಲುಬೇಗ. ಸಾಮಾನ್ಯ ಕೆಮ್ಮು ನೆಗಡಿ ಮೈಕೈ ನೋವಿನೊಂದಿಗೇ, ಹೆಂಗಸರಿಗೆ ಬೇಕಾದ ಪೋಸ್ಟ್ ಪೋನ್ ಮಾತ್ರೆಯವರೆಗೆ ವೇಲಾಯುಧನ್ ಹತ್ತಿರ ಬೇಡಿಕೆ ಹೋಗುತ್ತಿತ್ತು. ಎಲ್ಲರನ್ನೂ ಅಕ್ಕ, ಅನ್ನ ಎಂದೇ ಕರೆದು ಮಾತಾಡಿಸುವ ಆತ ಹಿರಿಯರಿಗೆ ವೇಲೂ ಕಿರಿಯರಿಗೆ ವೇಲಾಂಡಿ!

ಎರಡನೆಯ ಗರ್ಭಪಾತದ ನಂತರ ಮಾತಿರಲಿ, ನಗುವನ್ನೇ ಮರೆತಿದ್ದ ಪವಿತ್ರಳೂ ಮತ್ತೆ ನಕ್ಕಿದ್ದು ಈ ವೇಲಾಯುಧನನ ಮಾತಿಗೆ. ಅವನ ಮಲೆಯಾಳಂ ಮಿಶ್ರಿತ ಕನ್ನಡ, ಸದಾ ನಗು ಮೊಗ, ಮಾತಿನಲ್ಲೇ ಮಂಟಪ ಕಟ್ಟುವ ಆತನ ಚತುರತೆಯಿಂದ ವಠಾರದ ಹೆಂಗಳೆಯರು ಅವನ ಅಭಿಮಾನಿಗಳಾದರೆ, ಅವರ ಮನೆಯ ಗಂಡಸರು ಅನಾವಶ್ಯಕ ಬಿಗುಮಾನಿಗಳೂ ಆಗಿದ್ದರು! ವೇಲು ಪಾರ್ಥಸಾರಥಿಗೂ ಆಪ್ತ ಗೆಳೆಯನೇ ಆದ. ಈತನ ಅಮ್ಮನ ಮಂಡಿನೋವು, ಅಕ್ಕನ ಗೂರಲುಗಳಿಗೆ ಅವ ಯಾವ್ಯಾವುದೋ ಬೇರು ತೈಲ ಎಲ್ಲಾ ತಂದು ಕೊಟ್ಟಿದ್ದಲ್ಲದೇ ಅದರ ದುಡ್ಡು ಕೇಳಿದಾಗ "ಅದೆಲ್ಲಾ ಬೇಡ ಪಾರ್ತನ್ನ. ನಾನು ನನ್ನ ಅಮ್ಮನಿಗೆ ತೈಲ ಹಚ್ಚಿ, ಕಾಸು ಪಡೆಯುವುದೇ!?" ಎಂದು ಪ್ರಶ್ನಿಸಿ ತಬ್ಬಿಬ್ಬುಗೊಳಿಸುತ್ತಿದ್ದ. ಅವನು ಮನೆಯೊಳಗೆ ಬರುತ್ತಿದ್ದಂತೇ ಪವಿತ್ರಳ ಮುಖದಲ್ಲಿ ಕಾಣುತ್ತಿದ್ದ ಆ ಉತ್ಸಾಹ, ಅವಳ ವರ್ತನೆಯ ಆ ಲಗುಬಗೆಯನ್ನು ಕಂಡು ಪಾರ್ಥಸಾರಥಿ ಮೊದಮೊದಲು ನಿರಾಳನಾಗ್ತಿದ್ದ. ಬರುಬರುತ್ತಾ ಅವನ ಒಳಗಿನ ಗಂಡನಿಗೆ ಅಸೂಯೆಯೂ ಆರಂಭವಾಗಿತ್ತು. ಆ ಅಸೂಯೆ ಎದೆಯ ಆವೇಗವಾಗಿದ್ದು ಒಂದು ಸಂಜೆ ಶಾಲೆಯಿಂದ ಮನೆಗೆ ಬಂದಾಗ. ಇವನು ಮನೆಯಂಗಳದಲ್ಲಿ ಚಪ್ಪಲಿ ಕಳಚುತ್ತಿದ್ದಂತೆ ಒಳಗಿನಿಂದ ಕೇಳಿಸಿದ ನಗು ಮತ್ತು ’ಹೋಗತ್ತ’ ಎಂಬ ಪವಿತ್ರಾಳ ದನಿ ಪಾರ್ಥಸಾರಥಿಯನ್ನು ಕಸಿವಿಸಿಗೊಳಿಸಿತ್ತು. ತುಂಟ ನಗೆಯೊಂದಿಗೆ ಹೊರಬಂದ ವೇಲು ತನ್ನ ಲುಂಗಿಯನ್ನ ಸೊಂಟಕ್ಕೆ ಬಿಗಿಗೊಳಿಸಿದ್ದು ಪಾರ್ಥಸಾರಥಿಯ ಮುಖದ ಸ್ನಾಯುವನ್ನೂ ಬಿಗಿಗೊಳಿಸಿತ್ತು. ವೇಲಾಯುಧನನ ಹಿಂದೇ ಹೊರ ಬಂದ ಪವಿತ್ರ ಗಂಡನನ್ನ ನೋಡಿ

"ಈ ವೇಲೂ ಪಕ್ಕಾ ಪಾಕಡ ಕಣ್ರೀ. ಅಲ್ಲ, ನಮಗೆ ಮಕ್ಕಳಾಗಲಿ ಅಂತ ಇವನೇ ಹರಕೆ ಹೊತ್ತಿದ್ದಾನಂತೆ! ಸಾಲ್ದೂ ಅಂತ ಈ ಬೇಸಿಗೆ ರಜೆಯಲ್ಲಿ ನಮ್ಮನ್ನ ಅವನ ಊರಿನ ದೇವಸ್ಥಾನಕ್ಕೆ ಕರೆದೊಯ್ದು ದರ್ಶನ ಮಾಡಿಸ್ತಾನಂತೆ!!" ಪವಿತ್ರ ಹೇಳುತ್ತಿದ್ದ ಮಾತುಗಳು ಕಿವಿಗೆ ಬಿದ್ದರೂ ಪಾರ್ಥಸಾರಥಿಯ ಮುಖದ ಸ್ನಾಯುಗಳು ಸಡಿಲವಾಗಿರಲಿಲ್ಲ.

ಎಂದೂ ಕುಡಿಯದ, ಇಸ್ಪೇಟ್ ಆಡದ ಈ ಪಾರ್ಥಸಾರಥಿ ನೌಕರರ ರಿಕ್ರಿಯೇಶನ್ ಕ್ಲಬ್ಬಿಗೆ ಬರುವುದು ಹಲವರಿಗೆ ವಿಸ್ಮಯ. ಆದರೆ ಪಾರ್ಥಸಾರಥಿಗೆ ಅದು ಅನಿವಾರ್ಯ. ದಿನಪೂರ್ತಿ ದುಡಿದು ಮನೆಗೆ ಬಂದರೆ ಅವನಿಗಾಗಿಯೇ ಕಾದಿದ್ದಂತಿದ್ದ ಅಮ್ಮ ಅಕ್ಕ ಪವಿತ್ರಳ ಬಗ್ಗೆ ಹೇಳುವ ಚಾಡಿಯಿಂದಾಗಿ ಮೊದಲು ರೇಗುತ್ತಿದ್ದವ, ಪವಿತ್ರಳನ್ನು ಗದರಿಸಿದರೂ ಅವಳ ಕಣ್ಣ ಹನಿ ಕಂಡು ಕರಗಿಬಿಡುತ್ತಿದ್ದ. ಅಮ್ಮನ ಮೂದಲಿಕೆಯಿಂದ ವಿಚಲಿತನೂ ಆಗುತ್ತಿದ್ದ. "ಅದೇನು ಮಾಟ ಮಾಡಿದ್ದಾಳೋ ಈ ಮಾಟಗಾತಿ. ಮದುವೆಯಾಗಿ ಐದು ವರ್ಷ ಆದರೂ ಒಂದು ಮಗು ಹೆತ್ತು ಕೊಡಲಿಲ್ಲ. ಮನೆ ಕೆಲಸ ಎಲ್ಲಾ ಬಿಟ್ಟು ಪುಸ್ತಕ ಓದೋ ಈ ಲೌಡಿ ಆ ಮಲೆಯಾಳಿ ಮಾಂತ್ರಿಕನಿಗೆ ಮರುಳಾಗ್ಬಿಟ್ಟಿದ್ದಾಳೆ. ಗಂಡ ಬಂದ ಕೂಡ್ಲೇ ಗರತಿ ಹಂಗಾಡ್ತಾಳೆ" ಎಂಬ ಅಮ್ಮನ ದೂರಿಗೆ ಬುದ್ದಿ ಮಾಂದ್ಯ ಅಕ್ಕನೂ ಎಲ್ಲಾ ಅರ್ಥವಾದವಳಂತೆ ತಲೆಯಾಡಿಸಿ ಇವನ ತಾಳ್ಮೆಯನ್ನು ಕಲಕಿಬಿಡ್ತಿದ್ದರು. ಅಸಹನೆಯಿಂದ ಸಿಡಿಸಿಡಿ ಎನ್ನುತ್ತಿದ್ದ ಪಾರ್ಥಸಾರಥಿ ಪವಿತ್ರಳ ನೀರು ತುಂಬಿದ ಕಣ್ಣು ನೋಡಿ, ಮಾತಾಡದೇ ಹೊರ ನಡೆಯುತ್ತಿದ್ದ. ಅಂತಹ ದುರ್ದಾನದ ಘಳಿಗೆಗಳಿಗೆ ಅವನಿಗೆ ಸಿಕ್ಕುತ್ತಿದ್ದುದು ಈ ಕ್ಲಬ್. ಒಂದಾದ ಮೇಲೆ ಒಂದರಂತೆ ಬುಸುಬುಸನೇ ಸಿಗರೇಟ್ ಸುಟ್ಟು, ದೀರ್ಘ ಉಸಿರಿಡುತ್ತಿದ್ದ ಪಾರ್ಥಸಾರಥಿಗೆ ಆ ಹೊತ್ತು ಪಂಪನ ಪದ್ಯವೊಂದು ನೆನಪಾಯ್ತು.

"ನೆತ್ತಮನಾಡಿ ಭಾನುಮತಿ ಸೋಲ್ತೊಡೆ ಸೋಲಮನೀವುದೆಂದು ಕಾ

ಡುತ್ತಿರೆ ಲಂಬಣಂ ಪರಿಯೆ ಮುತ್ತಿನ ಕೇಡನೆ ನೋಡಿ ನೋಡಿ ಬ

ಬಳ್ಕುತ್ತಿರೆಯೇವಮಿಲ್ಲದಿವನಾವುದೊ ತಪ್ಪದೆ ಪೇಳಿಮೇಮ್ಬ ಭೂ

ಪೊತ್ತಮನಂ . . "

ದುರ್ಯೋಧನನ ಅಂತಃಪುರದಲ್ಲಿ ಕರ್ಣನೊಂದೊಂದಿಗೆ ಪಗಡೆಯಾಡಿದ ಭಾನುಮತಿ ಸೋತ ಪಣವಾದ ಮುತ್ತಿನ ಹಾರ ಕೊಡಲು ನಿರಾಕರಿಸಿ, ಅದನ್ನು ಪಡೆಯಲು ಕೊರಳಿಗೇ ಕೈ ಹಾಕಿದ ಕರ್ಣನ ರಭಸಕ್ಕೆ ಆ ಹಾರ ಹರಿದು ಮುತ್ತುಗಳು ಅಂತಃಪುರದ ತುಂಬಾ ಚೆಲ್ಲಿದ ಆ ಹೊತ್ತು ದುರ್ಯೋಧನ ಬಂದಿದ್ದ ಪ್ರಸಂಗ ಅದು. ಗೆಳೆಯ ಗೆದ್ದ ಹಾರದ ಮುತ್ತುಗಳನ್ನು ಆರಿಸಲು ಅನುವಾದ ದುರ್ಯೋಧನನಲ್ಲಿ ತನ್ನ ಕಂಡ ಪಾರ್ಥಸಾರಥಿ ಮತ್ತೊಂದು ನಿಟ್ಟುಸಿರಿಟ್ಟ. ಅಂದು ರಾತ್ರಿ ಮೆಲ್ಲನೇ ಪವಿತ್ರಳನ್ನು ಸಮೀಪಿಸಿ ಕಿವಿಯಲ್ಲಿ ಪಿಸುಗುಟ್ಟಿದ "ವೇಲೂಗೆ ಹೇಳಿದ್ದೇನೆ. ಈ ಸಲ ಬೇಸಿಗೆಯ ರಜೆಯಲ್ಲಿ ಕೇರಳ ಪ್ರವಾಸ ಮಾಡುವಾ. ಮೊದಲು ಅವನ ಊರು. ನಂತರ ಕೇರಳದ ಪ್ರೇಕ್ಷಣೀಯ ಸ್ಥಳಗಳು. ಸರಿಯಾ??" ಪವಿತ್ರಾಳ ಕಣ್ಣಲ್ಲಿ ಅಚ್ಚರಿಯ ಬೆಳಕು ಹೊಮ್ಮಿತು. ಈ ಮಾತನ್ನು ಹೇಳಿದ್ದು ಗಂಡನೇ ಎಂದು ಮುಟ್ಟಿ ನೇವರಿಸಿ ಧೃಡಪಡಿಸಿಕೊಂಡಳು. ಆ ಸ್ಪರ್ಶ ಏನೆಲ್ಲಾ ಹೇಳಿತು.

ವೇಲೂಗೂ ಏನೆಲ್ಲಾ ಹೇಳಲಿಕ್ಕಿತ್ತು. ಅವ ಪಾರ್ಥಸಾರಥಿ ದಂಪತಿಗಳನ್ನು ತನ್ನೂರಿಗೆ ಕರೆದೊಯ್ಯುವ ಮಾರ್ಗದ ತುಂಬಾ ಮಾತನಾಡಿದ್ದ. ತನ್ನ ಬಾಲ್ಯ, ಕೌಟುಂಬಿಕ ಬದುಕು, ಕನಸುಗಳು ಏನೆಲ್ಲಾ. . !! ಅವನ ಮಾತುಗಳಿಗೆ ಪಾರ್ಥಸಾರಥಿ ಬರಿಯೇ ಹೂಂಗುಟ್ಟಿದರೆ, ಪವಿತ್ರ ಕಣ್ಣರಳಿಸಿ ಎಲ್ಲವನ್ನೂ ದೃಷ್ಯೀಕರಿಸಿಕೊಳ್ಳುತ್ತಿದ್ದಳು. ಅವಳು ಕಲ್ಪಿಸಿಕೊಂಡಂತೇ ಇತ್ತು ವೇಲುವಿನ ಮನೆ. ಆದರೆ ಆತನ ಅಮ್ಮ ಮಾತ್ರ ಕಲ್ಪನೆಗೆ ಮೀರಿದ್ದ ಸ್ನಿಗ್ಧ ಸುಂದರಿ.

ವೇಲೂ ಅಮ್ಮನ ಆ ತರವಾಡು ಮನೆ, ಅವರ ಅವಿಭಕ್ತ ಕುಟುಂಬದ ಜೀವನಕ್ರಮ, ಅಮ್ಮನ ಕೈಯಲ್ಲೇ ಇರುವ ಆಡಳಿತ, ಕೇರಳದ ಸಾಮಾಜಿಕತೆ, ನಾಯರ್ ಮತ್ತು ನಂಬೂದರಿಗಳ ಹೊಕ್ಕು ಬಳಕೆ. .. ಈ ಎಲ್ಲಾ ವಿವರಗಳು ಪಾರ್ಥಸಾರಥಿಗೆ ವಿಸ್ಮಯ, ಪವಿತ್ರಾಳಿಗೆ ಬೆರಗು. ಅನಂತ ಪದ್ಮನಾಭ ದೇವಳದ ನೆಲಮಾಳಿಗೆಯಲ್ಲಿ ಇರುವ ನಿಧಿಯಂತೆ ಮೊಗೆದಷ್ಟೂ ಬೊಗಸೆ ತುಂಬುತ್ತಿದ್ದ ಈ ವಿವರಗಳನ್ನು ಮರೆಯದಂತೆ ಪಾರ್ಥಸಾರಥಿ ಡೈರಿಯಲ್ಲಿ ದಾಖಲಿಸುತ್ತಿದ್ದ, ಪವಿತ್ರ ಕೇರಳವನ್ನು ಮನದಲ್ಲಿ ಧರಿಸಿಬಿಟ್ಟಿದ್ದಳು!!

ಎಷ್ಟೇ ಹರಕೆ ಹೊತ್ತರು, ಹಲುಬಿ ಹಂಬಲಿಸಿದರೂ ಪವಿತ್ರ ಗರ್ಭ ಧರಿಸಲೇ ಇಲ್ಲ. ಇದರಿಂದ ಹೆಚ್ಚು ಕಳವಳಪಟ್ಟವನು ವೇಲು. ಆತನ ದೈವ ನಂಬುಗೆ, ಮನುಷ್ಯ ಪ್ರೀತಿ, ಪಾರ್ಥಸಾರಥಿಯನ್ನು ’ಅನ್ನಾ’ ಎನ್ನುವ ಮಮಕಾರ ಎಲ್ಲಾ ಅಗ್ನಿದಿವ್ಯದಲ್ಲಿದ್ದ ಹೊತ್ತು ಅವ ವೈಜ್ಞಾನಿಕ ಮನೋಧರ್ಮಕ್ಕೂ ಅಡ್ಡಬಿದ್ದಿದ್ದ!

ಒಂದು ಸಂಜೆ ಮನೆಗೆ ಬಂದವನೇ "ಪಾರ್ತನ್ನ, ನೀವು ತಪ್ಪು ತಿಳಿಯೋದಿಲ್ಲ ಅಂದ್ರೆ ಒಂದು ವಿಚಾರ ಹೇಳಲಾ?" ಅಂತ ಪೀಠಿಕೆ ಪ್ರಾರಂಭಿಸಿದ. ಪಾರ್ಥಸಾರಥಿ ಹೂಂ ಅಂದ ಮೇಲೆ "ನನ್ನ ಫ್ರೆಂಡ್ ಒಬ್ಬ ಬೆಂಗಳೂರಿನಲ್ಲಿ ಆರ್ಟಿಫಿಶಿಯಲ್ ಫರ್ಟಿಲಿಟಿ ಸೆಂಟರ್ ಓಪನ್ ಮಾಡಿದ್ದಾನೆ. ಮೊನ್ನೆ ಬಾಂಬೆಯಲ್ಲಿ ಮೊದಲ ಪ್ರಣಾಳ ಶಿಶು ಹುಟ್ಟಿದ ಬಗ್ಗೆ ಸುದ್ದಿಯಾಗಿತ್ತಲ್ಲ, ಇದೂ ಅಂತಹದೇ ಪ್ರಯೋಗಾಲಯ. ವೀರ್ಯ ಮತ್ತು ಅಂಡಾಣುವನ್ನು ಟೆಸ್ಟ್ ಟ್ಯೂಬ್‌ನಲ್ಲಿ ಸೇರಿಸಿ ಒಂದು ಹಂತದ ನಂತರವೇ ಅದನ್ನು ಮತ್ತೆ ಗರ್ಭದಲ್ಲಿ ಇರಿಸುವ ವಿಧಾನ ಇದು. ಪವಿತ್ರರಿಗೆ ಮಕ್ಳು ಆಗ್ಲಿ ಅಂತ ನಾನು ಹರಕೆಯೇನೋ ಹೊತ್ತಿದ್ದೆ, ಆದ್ರೆ ಅದರಿಂದ ಏನೂ ಫಲ ಆಗಲಿಲ್ಲ. ನಿಮ್ಮಿಬ್ಬರಿಗೂ ಮೆಡಿಕಲ್ ಹೆಲ್ಪ್ ಬೇಕಿದೆ ಅನ್ನಿಸ್ತು. ಅದಕ್ಕೇ ಹೇಳ್ದೆ, ತಪ್ಪು ತಿಳ್ಕೋಬೇಡಿ" ವೇಲಾಯುಧನನ ಮಾತುಗಳು ಅರ್ಥವಾದರೂ ಅರಗಲು ಒಂದಷ್ಟು ದಿನ ಬೇಕಾಯ್ತು ಪವಿತ್ರ ಪಾರ್ಥಸಾರಥಿ ಇಬ್ಬರಿಗೂ. ಕೊನೆಗೂ ಪಾರ್ಥಸಾರಥಿಯೇ ಸಮ್ಮತಿ ಸೂಚಿಸಿದ್ದ. ಅಮರಾವತಿಯಿಂದ ಬೆಂಗಳೂರಿಗೇ ವರ್ಗ ಮಾಡಿಸಿಕೊಂಡು ನೆಲೆ ನಿಂತ ಪ್ರಸಾದೂ ಈ ಪ್ರಯತ್ನಕ್ಕೆ ಬೆಂಬಲವಾಗಿ ನಿಂತ. ಈ ರೀತಿ ಕೃತಕ ಸಂಯೋಜನೆ ನಂತರ ಗರ್ಭ ಧರಿಸಿದ ಮೇಲೆ ಹೆರಿಗೆಯವರೆಗೂ ಅವರ ಕಣ್ಗಾವಲಿನಲ್ಲೇ ಇರಬೇಕು ಎಂಬ ವೈದ್ಯಕೀಯ ಜರೂರತ್ತಿಗೂ ಪ್ರಸಾದ ಜೊತೆಗಿದ್ದ.

ಗರ್ಭಧಾರಣೆಯಾಗಿ ಕೆಲ ತಿಂಗಳು ಕಳೆದರೂ ಪವಿತ್ರಳ ಮನದಲ್ಲಿ ಆತಂಕ ಕಡಿಮೆಯಾಗಿರಲಿಲ್ಲ. ಪಾರ್ಥಸಾರಥಿ ದಿನವೂ ಕರೆ ಮಾಡಿದರೂ ಅಪ್ಪಿ ತಪ್ಪಿ ಗರ್ಭದಲ್ಲಿರುವ ಪಿಂಡದ ಬೆಳವಣಿಗೆ ಬಗ್ಗೆ ಮಾತಾಡುತ್ತಿರಲಿಲ್ಲ. ಇಂತಹ ವಾತಾವರಣದಲ್ಲೇ ನವ ಮಾಸ ತುಂಬಿ ಸಿಸೇರಿಯನ್ ಮೂಲಕ ಜನಿಸಿದ್ದು ಹೆಣ್ಣು ಮಗು. ಅಮ್ಮ ಹೋದ ವರ್ಷದಲ್ಲೇ ಹುಟ್ಟಿದ ಮಗುವಿಗೆ ಅಮ್ಮನ ಹೆಸರೇ ಇಡಬೇಕು ಎಂಬ ಪಾರ್ಥಸಾರಥಿಯ ಅಭಿಪ್ರಾಯ, ಮನಸ್ಸಿನಲ್ಲಿದ್ದ ಕೂಸು ಕೈಗೆ ಬಂದಿದ್ದರಿಂದ ಮಗುವಿಗೆ ’ಮನಸ್ವಿನಿ’ ಎಂದೇ ಕರೆಯಬೇಕೆಂಬ ಪವಿತ್ರಳ ಅಭಿಮತ. ಮಾತು ಮಾತು ಮಥಿಸಿ ಕೊನೆಗೂ ನಿಕ್ಕಿಯಾಗಿದ್ದು ಮನಸ್ವಿನಿಯೇ. ವೇಲಾಯುಧನನೂ ಪವಿತ್ರಾಳ ಅಭಿಪ್ರಾಯ ಬೆಂಬಲಿಸಿದ್ದರಿಂದ ಪಾರ್ಥಸಾರಥಿ ಮತ್ತೆ ಮಾತನಾಡದೇ ಸುಮ್ಮನಾಗಿದ್ದ.

ಮೂಕವಾಗಿದ್ದ ಮನೆಗೆ ಮಾತು ತುಂಬುವಂತೆ ತೊದಲುಲಿಯುತ್ತಿದ್ದಳು ಮನಸ್ವಿನಿ. ಅವಳ ಗೆಜ್ಜೆ ಗಿಲಕಿ ಗುಜುಗುಜು ಮಾತು ಸರಭರ ಓಡಾಟಗಳೇ ಸದ್ದಾಗಿದ್ದ ಆ ಮನೆ ಮತ್ತೆ ಮೊದಲಿನಂತೆ ಲವಲವಿಕೆ ಪಡೆಯುತ್ತಿತ್ತು. ಪಾರ್ಥಸಾರಥಿಗೋ ಅವಳು ಕಣ್ಮಣಿ. ಮನೆಯಲ್ಲಿದ್ದ ಅಷ್ಟೂ ಹೊತ್ತು ಮಗಳನ್ನು ಎತ್ತಿ ಹೊತ್ತು ಆಡಿಸಿ ಪಾಡಿಸಿ ಪಾಲನೆ ಮಾಡುತ್ತಿದ್ದ. ಮನಸ್ವಿನಿ ಎಂದರೆ ಅಪ್ಪ ಅಮ್ಮನಿಗಷ್ಟೇ ಅಲ್ಲ, ಅಮರಾವತಿಯ ಕೇರಿಗೇ ಕಣ್ಣ ಮಣಿ. ಆದರೆ ಮನಸ್ವಿನಿ ಎಂದರೆ ವೇಲಾಯುಧನ್‌ಗೆ ಮುಕುಟಮಣಿ. ಅವನ ಫಾರ್ಮಸಿ ಪದವಿ ಮುಗಿದು, ಬೆಂಗಳೂರಿನ ಫಾರ್ಮಾಸ್ಯೂಟಿಕಲ್ ಕಂಪೆನಿಯೊಂದರಲ್ಲಿ ಉದ್ಯೋಗಿಯಾಗಿದ್ದ ಅವ ಒಂದೆರಡು ದಿನ ರಜೆ ಸಿಕ್ಕರೂ ಅಮರಾವತಿಗೆ ಓಡಿ ಬರುತ್ತಿದ್ದ! ಅವನ ಎಲ್ಲಾ ಮೊದಲುಗಳು ಮನಸ್ವಿನಿಗೇ ಅರ್ಪಿತ. ಅವನ ಮೊದಲ ಸಂಬಳ, ಕಾರು, ಅಪಾಟ್ಮೆಂಟ್ ಮನೆ, ಮದುವೆಯ ಮೊದಲ ಆಹ್ವಾನ. . ಎಲ್ಲಾ. ರಜೆ ಬಂತೆಂದರೆ ಮನಸ್ವಿನಿಗೆ ಬೆಂಗಳೂರಿನಲ್ಲಿ ಎರಡು ಮನೆ. ಬೆಂಗಳೂರು, ಕೇರಳದ ಕೊಯಿಕ್ಕೋಡು, ಅಮರಾವತಿಯಷ್ಟೇ ಮನಸ್ವಿನಿಗೆ ಇಡೀ ಭಾರತದ ಪ್ರೇಕ್ಷಣೀಯ ಸ್ಥಳಗಳೂ ಪರಿಚಯ ಆಗಿದ್ದೇ ಚಿಕ್ಕಪ್ಪ ವೇಲಾಂಡಿಯ ಜೊತೆಗಿನ ಸುತ್ತಾಟದಿಂದ!

ವೇಲಾಯುಧನ್ ಮದುವೆ ಆದ ನಂತರ ಅವನ ಮದುವೆಯ ಆಲ್ಬಂ, ಅವನ ಬಾಲ್ಯದ ಹಳೆಯ ಫೋಟೋಗಳನ್ನು ನೋಡುತ್ತಿದ್ದಾಗ ಪವಿತ್ರಳೇ ಹೇಳಿದ್ದಳು "ನಮ್ ವೇಲಾಯುಧನ್ನನ ಅಮ್ಮ ಚಿಕ್ಕ ವಯಸ್ಸಲ್ಲಿ ಮನಸ್ವಿನಿ ತರಹಾನೇ ಕಾಣಿಸ್ತಾರೆ ಅಲ್ವಾ!?" ಆಗ ಪಾರ್ಥಸಾರಥಿಗೆ ಕಸಿವಿಸಿಯಾದರೂ ತೋರಗೊಡದೇ ’ಹೌದು ಹೌದು’ ಎಂದಿದ್ದ. ಮನಸ್ವಿನಿ ಇವರ ಕಣ್ಣ ಗೊಂಬೆಯಂತೆ, ಅಮರಾವತಿಯ ಅಪ್ಸರೆಯಂತೆ ಬೆಳೆದು ನಿಂತಳು. ಅವಳ ಸ್ನಾತಕೋತ್ತರ ಪದವಿ ಓದು ಮುಗಿಯುವ ಹೊತ್ತಿಗೆ ಮದುವೆಯ ಚಿಂತೆ ಹತ್ತಿದ್ದು ಪಾರ್ಥಸಾರಥಿಗೆ. ಯಾವುದರಲ್ಲೂ ತೆಗೆದು ಹಾಕಲು ಸಾಧ್ಯವೇ ಇಲ್ಲದ ಅವಳಿಗೆ ಅನುರೂಪ ವರನನ್ನ ಹುಡುಕಿ ಜೋಡಿಸುವುದೇ ಬಹು ದೊಡ್ಡ ಜವಾಬ್ದಾರಿ. ಆಗಲೂ ಈ ಮದುವೆಯ ಪ್ರಪೋಸಲ್ ತಂದವನು ವೇಲಾಯುಧನ್ನನೇ. ಬೆಂಗಳೂರಿನಲ್ಲಿ ಇಂಜಿನಿಯರ್ ಆಗಿರುವ ಸ್ಪುರದ್ರೂಪಿ ವರ, ಅನುಕೂಲಸ್ಥ ಮನೆತನ, ಸುಸಂಸ್ಕೃತರೂ ನಿಗರ್ವಿಗಳೂ ಆದ ಬೀಗರು, . . . ಪಾರ್ಥಸಾರಥಿ ನಿಂತು ಮದುವೆ ಮಾಡುವುದಷ್ಟೇ ಕೆಲಸ. ಮದುವೆ ಮನೆಯ ಸಂಪೂರ್ಣ ಹೊಣೆಯನ್ನು ಭಾಮೈದ ಸುಬ್ರಹ್ಮಣ್ಯ ಪ್ರಸಾದ ಹೊತ್ತಿದ್ದರೂ ವೇಲಾಯುಧನ್ ಬರುವವರೆಗೆ ಚಡಪಡಿಸಿದ್ದ ಪಾರ್ಥಸಾರಥಿ.

ಅಂತೂ ಮನಸ್ವಿನಿಯ ಧಾರೆ ಮುಗಿದು ಭೂಮದೂಟಕ್ಕೆ ಕೂರಿಸುವ ಹೊತ್ತಿಗೆ ವೇಲಾಯುಧನ್ ತನ್ನ ಹೆಂಡತಿ ಮಗನೊಂದಿಗೆ ಬಂದ. ಆ ವರೆಗೆ ಚಡಪಡಿಸಿದ್ದ ಪಾರ್ಥಸಾರಥಿ ನಿರಾಳವಾದರೂ ಈಗ ವಿಲಕ್ಷಣ ಕುತೂಹಲದ ಚಡಪಡಿಕೆ ಪವಿತ್ರಳಲ್ಲಿ ಆರಂಭವಾಗಿತ್ತು. ಹಾಗಾಗಿ ಭೂಮದೂಟ ಮುಗಿಸಿ ಹೆಣ್ಣು ಒಪ್ಪಿಸುವ ಕಾರ್ಯಕ್ರಮದವರೆಗಿನ ಬಿಡುವಿನಲ್ಲಿ ವಧುವಿನ ಕೋಣೆ ಹೊಕ್ಕ ಪವಿತ್ರ ತಾನೇ ಮಾತು ತೆಗೆದಳು "ನಮ್ಮ ಮನಸ್ವಿನಿಗೆ ವೇಲಾಯುಧನ್ನೇ ಬಯಾಲಜಿಕಲ್ ಫಾದರ್ ಅಂದ್ರಲ್ಲ, ಹೇಗೆ!!? ಹೇಳಿ" ಪವಿತ್ರಳ ಮಾತೇ ಮನಸ್ವಿನಿಯದ್ದೂ ಆಗಿತ್ತು. ವೇಲಾಯುಧನ್ನನ ಹೆಂಡತಿಗೆ ಮನಸ್ವಿನಿಯಲ್ಲಿ ಅತ್ತೆಯ ಎಳೆಯ ವಯಸ್ಸಿನ ಮುಖವನ್ನು ಕಂಡಾಗೆಲ್ಲಾ ಮೂಡುತ್ತಿದ್ದ ಗೊಂದಲದ ಪ್ರಶ್ನೆಗಳಿಗೆ ಈಗ ಪವಿತ್ರಳೇ ದನಿಯಾಗಿಸಿದಂತಿತ್ತು. ಏನು ಹೇಳಲೂ ತಿಳಿಯದ ವೇಲಾಯುಧನ್ ಪಾರ್ಥಸಾರಥಿಯ ಮುಖವನ್ನೇ ನಿರುಪಾಯವಾಗಿ ನೋಡುತ್ತಿದ್ದ. ಆಗ ಈ ಎಲ್ಲಾ ಗೊಂದಲಗಳಿಗೆ ತೆರೆ ಎಳೆಯುವಂತೆ ಪಾರ್ಥಸಾರಥಿ ಮಾತನಾಡಿದ.

"ನಿಜ, ಮನಸ್ವಿನಿಗೆ ವೇಲಾಯುಧನ್‌ನೇ ಬಯಾಲಾಜಿಕಲ್ ತಂದೆ. ಆದರೆ ಈ ಸತ್ಯ ಅವನಿಗೂ ಗೊತ್ತಿಲ್ಲ. ಅದು ಆಗಿದ್ದು ಹೀಗೆ. ಮನಸ್ವಿನಿ ಹುಟ್ಟಲಿ ಅಂತ ನಾವು ಬೆಂಗಳೂರಿನ ಆ ಫರ್ಟಿಲಿಟಿ ಸೆಂಟರ್‌ಗೆ ಹೋಗಿದ್ವಲ್ಲ, ಆಗ ನನ್ನ ಪುರುಷತ್ವ ಪರೀಕ್ಷೆ ಮಾಡಿದ ಡಾಕ್ಟರ್ ವೀರ್ಯಾಣುಗಳ ಕೌಂಟ್ ಕಡಿಮೆ ಇದೆ ಅಂತ ಟ್ರೀಟ್ಮೆಂಟ್ ಹಾಕಿದ್ದರು. ಆನಂತರ ಮತ್ತೆ ಪರೀಕ್ಷೆ ಮಾಡಿಸಿದಾಗ, ಕೌಂಟ್ ಸರಿಯಾಗಿತ್ತು ಆದರೂ. . ."

ಪಾರ್ಥಸಾರಥಿ ನಿಲ್ಲಿಸಿದ ಮಾತಿನಿಂದ ಹುಟ್ಟಿದ ಆ ನಿರ್ವಾತ ಕೋಣೆಯ ಮೌನದ ಜೊತೆ ಹತ್ತು ನಿಮಿಷ ಕಳೆಯಿತು. ಪಾರ್ಥಸಾರಥಿ ದೀರ್ಘ ಉಸಿರಿನೊಂದಿಗೆ ಮತ್ತೆ ಮಾತನ್ನ ಮೆಲುವಾಗಿ ಆರಂಭಿಸಿದ "ನಾನು ಮೊದಲೇ ಕುರೂಪಿ. ಜೊತೆಗೆ ಅಸ್ತಮಾ ರೋಗಿ. ನನ್ನ ಮನೆತನದ ಬಹುತೇಕರು ಗೂರಲು ಕೆಮ್ಮಿನವರೇ. ಅಲ್ಪಾಯುಗಳಾಗಿದ್ದ ನನ್ನ ಹಿರಿಯರ ರೋಗಿಷ್ಠ ಬವಣೆಯ ಬದುಕು ನೋಡಿದ್ದ ನನಗೆ ನನ್ನ ಮಗುವೂ ಹಾಗೇ ಆಗುತ್ತದೆ ಅನ್ನಿಸಿ ಭಯವಾಗಿತ್ತು. ಅದೇನೋ ನನ್ನ ಕಾರಣದಿಂದಲೇ ಆರೋಗ್ಯವಂತ ಪವಿತ್ರಳಿಗೆ ಗರ್ಭ ನಿಲ್ಲುತ್ತಿಲ್ಲ ಎಂಬ ಪರಿತಾಪವೂ ನನಗಿತ್ತು. ಹಾಗಾಗಿ ತುಂಬಾ ಯೋಚಿಸಿ, ಗಂಡಾಗಲಿ ಹೆಣ್ಣಾಗಲಿ ಪವಿತ್ರಳ ಕನಸಿನಂತೆ ಒಂದಾದರೂ ಆರೋಗ್ಯ ಪೂರ್ಣ ಮಗು ಹುಟ್ಟಲಿ ಅಂತ ತೀರ್ಮಾನಿಸಿದೆ. ಉಪಾಯವಾಗಿ ವೇಲೂನ ವೀರ್ಯ ಪಡೆದು ಅದನ್ನೇ ನನ್ನ ವೀರ್ಯಾಣು ಅಂತ ಡಾಕ್ಟರ್‌ಗೆ ಕೊಟ್ಟಿದ್ದೆ. ಮುಂದಿನದು ನಿಮಗೆಲ್ಲಾ ಗೊತ್ತಿದೆ."

ಪಾರ್ಥಸಾರಥಿ ಮಾತು ಮುಗಿಸಿ ದೊಡ್ಡ ಉಸಿರಿನೊಂದಿಗೆ ತಲೆ ಬಗ್ಗಿಸಿ ಕೂತ. ಮತ್ತೆ ಕೋಣೆಯ ತುಂಬಾ ವಿಲಕ್ಷಣ ಮೌನ ಮತ್ತು ಮಾತಿಲ್ಲದ ನಿರ್ವಾತ ಓಡಾಡಿದವು. ಒಂದಷ್ಟು ಹೊತ್ತಿನ ಮೌನದ ನಂತರ "ಅಪ್ಪಾ, ಪುರೋಹಿತರು ಕರೆಯುತ್ತಿದ್ದಾರೆ" ಎಂದಳು ಮನಸ್ವಿನಿ. ಪಾರ್ಥಸಾರಥಿ ಮತ್ತು ವೇಲಾಯುಧನ್ ಇಬ್ಬರೂ ಒಟ್ಟಿಗೇ ಎದ್ದರು.

ಕಲೆ: ಕಂದನ್ ಜಿ. ಮಂಗಳೂರು

ಆನಂದ ಋಗ್ವೇದಿ

ಬರಹಗಾರ ಡಾ. ಆನಂದ್ ಋಗ್ವೇದಿ ಅವರು ಜನಿಸಿದ್ದು 1974ರ ಮೇ 24 ಚಿತ್ರದುರ್ಗ ಜಿಲ್ಲೆ ಗುಂಜಿಗನೂರಿನಲ್ಲಿ. ತಂದೆ-  ರಾಘವೇಂದ್ರ ರಾವ್ ತಿರುಮಲಾರಾಯ ಕುಕ್ಕವಾಡ, ತಾಯಿ ಜಿ.ಎಸ್. ಸುಶೀಲಾದೇವಿ ಆರ್. ರಾವ್. ವೃತ್ತಿಯಲ್ಲಿ ದಾವಣಗೆರೆಯ ಸರ್ಕಾರಿ (ಚಿಗಟೇರಿಯವರ ಸ್ಮಾರಕ) ಜಿಲ್ಲಾ ಆಸ್ಪತ್ರೆಯಲ್ಲಿ ಸಹಾಯಕ ಆಡಳಿತ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ವಿಜ್ಞಾನ ಪದವೀಧರರು. ಕನ್ನಡದಲ್ಲಿ ಸ್ನಾತಕೋತ್ತರ ಪದವೀಧರರು. ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ಪಿ.ಎಚ್.ಡಿ ಪದವಿ ಪಡೆದಿದ್ದಾರೆ.  ಕತೆ, ಕವಿತೆ, ಪ್ರಬಂಧ, ವಿಮರ್ಶೆ, ನಾಟಕ, ಸಂಶೋಧನೆ. . ಮೊದಲಾದ ಪ್ರಕಾರಗಳಲ್ಲಿ ಬರಹ. 

‘ಜನ್ನ ಮತ್ತು ಅನೂಹ್ಯ ಸಾಧ್ಯತೆ’, ‘ಮಗದೊಮ್ಮೆ ನಕ್ಕ ಬುದ್ಧ’ ‘ಕರಕೀಯ ಕುಡಿ’ ( ಕಥಾ ಸಂಕಲನಗಳು), ‘ಉರ್ವಿ’ (ನಾಟಕ), ‘ನಿನ್ನ ನೆನಪಿಗೊಂದು ನವಿಲುಗರಿ’ ‘ತಥಾಗತನಿಗೊಂದು ಪದ್ಮ ಪತ್ರ’ ( ಕವನ ಸಂಕಲನಗಳು) 

‘ತಳಮಳದ ಹಾದಿ ಪೂರ್ವೋತ್ತರ’ ‘ಕುಣಿದು ಕಾಡುವ ಗಾಳಿ’ ( ವಿಮರ್ಶಾ ಸಂಕಲನಗಳು), ‘ಕಥಾ ಸ್ವರೂಪ’, ‘ಅನುಭವದ ಅಮೃತತ್ವ’ ( ಸಂಶೋಧನೆ) - ಈವರೆಗೆ ಪ್ರಕಟಿತ ಕೃತಿಗಳು. ಕರ್ನಾಟಕ ಸಾಹಿತ್ಯ ಅಕಾಡೆಮಿ ಪುಸ್ತಕ ಬಹುಮಾನ ಮತ್ತು ಕಡೆಂಗೋಡ್ಲು ಕಾವ್ಯ ಪ್ರಶಸ್ತಿ,  ಡಾ. ಪಾಟೀಲ ಪುಟ್ಟಪ್ಪ ಕಥಾ ಪುರಸ್ಕಾರ ಜೋಳದರಾಶಿ ದೊಡ್ಡನಗೌಡ ಪ್ರಶಸ್ತಿ  ಕರ್ನಾಟಕ ಸಾಹಿತ್ಯ ಅಕಾಡೆಮಿ ಸಂಶೋಧನಾ ಫೆಲೋಶಿಪ್ ಸೇರಿದಂತೆ ಹಲವು ಪುರಸ್ಕಾರಗಳು ಲಭಿಸಿವೆ. ಜಿಲ್ಲಾ ತರಬೇತಿ ಕೇಂದ್ರ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಸಂಪನ್ಮೂಲ ವ್ಯಕ್ತಿಯಾಗಿ  ಆಡಳಿತ ಕನ್ನಡ ಮತ್ತು ಸೇವಾ ನಿಯಮಗಳ ಕುರಿತು ನೂರಾರು ತರಬೇತಿ ಉಪನ್ಯಾಸಗಳನ್ನು ನೀಡಿದ್ದಾರೆ. 

More About Author