Poem

ಬೈಟೂ ಚಹಾ

ನಾವು ಒಂದೇ ಕಪ್ ಚಹಾ ತಗೊಂಡು
ಬೈಟೂ ಮಾಡಿ ಕುಡಿತೀವಿ... ಯಾಕೆ?

ಯಾಕಂದ್ರೆ, ಹಂಚಿಕೊಳ್ಳುವುದರಲ್ಲಿ
ಸುಖವಿದೆ.

ಒಟ್ಟಿಗೆ ಕೂತು ಬೈ ಟೂ ಮಾಡಿ
ಬಗೆ ಬಗೆ ಮಾತುಗಳಾಡಿ
ಸುಖ ದುಃಖ ಹಂಚಿಕೊಂಡು
ಪ್ರೀತಿ ಪ್ರೇಮ ಬೆರೆಸಿಕೊಂಡು
ಉಫ್ ಅಂತ ಆರಿಸಿ ಕುಡಿತೀವಲ್ಲ...

ಹಾಗೇನೇ, ಬದುಕಿನ ಎಲ್ಲ ಕಷ್ಟವನ್ನು
ನಿರಾಳತೆಯಿಂದ ಬಿಡುಗಡೆಗೊಂಡಂತೆ
ಭಾಸವಾಗುತ್ತದೆ.

ಅದಕ್ಕೆ
ನಾವು ಒಂದೇ ಕಪ್ ಚಹಾ ತಗೊಂಡು
ಬೈಟೂ ಮಾಡಿ ಕುಡಿತೀವಿ...

ಓದುವಾಗ ದುಡ್ಡಿರತಿರ್ಲಿಲ್ಲ
ಆದ್ರೆ ಬೈಟೂ ಮಾಡಿ ಕುಡಿಯುವಾಗಿನ
ಮಜಾ...
ಹಸಿವಿನಿಂದ ಮುಕ್ತವಾಗುವುದರ ಜೊತೆಜೊತೆಗೆ
ಗೆಳೆತನ ಭಾರವೇ ಹೊತ್ತು ತರ್ತಿದ್ವಿ.

ಅದಕ್ಕೆ
ನಾವು ಒಂದೇ ಕಪ್ ಚಹಾ ತಗೊಂಡು
ಬೈಟೂ ಮಾಡಿ ಕುಡಿತೀವಿ...

ಎಲ್ಲೋ ಪಾರ್ಕ್ ಬಳಿ ನಿಂತು
ಆಫೀಸಿನಲ್ಲಿ ಕೂತು
ಆಸ್ಪತ್ರೆಯ ಹಾಸಿಗೆಯ ಮೇಲೆ ಮಲಗಿ
ಒಂದು ಗುಟುಕಿನ ಸ್ವಾದ..

ಬೆಳಗ್ಗಿನ ಆಹ್ಲಾದ
ಕೆಲಸದ ಒತ್ತಡ
ಮಾತ್ರೆಗಳ ಕಹಿ
ಹೀಗೆ ಎಲ್ಲವನ್ನು ಸಮನಾಗಿ ದೂರ ಮಾಡಿ
ನಾವು, ನಮ್ಮದಲ್ಲದ ಬದುಕಿನ ಜೊತೆಗೆ
ನಮ್ಮವರು, ತಮ್ಮವರನ್ನೆಲ್ಲ ಒಂದು ಮಾಡುವ ಈ ಅಮೃತಾನ

ಮೂಗಿನ ಎರಡು ಹೊಳ್ಳೆಗಳ ಅರಳಿಸಿ ಘಮ ಹೀರಿ
ಒಂದೇ ಗುಟುಕು... ಬೈಟೂ ಚಹಾ ಕುಡಿತೀವಿ!

- ಸಂಗಮೇಶ ಸಜ್ಜನ ಕಲಬುರ್ಗಿ.

ಸಂಗಮೇಶ ಸಜ್ಜನ

ಸಂಗಮೇಶ ಸಜ್ಜನ ಅವರು ಮೂಲತಃ ಕಲಬುರ್ಗಿಯವರು, ಪ್ರಸ್ತುತ ಬೆಂಗಳೂರಿನ ಕಾರ್ಪೋರೇಟ್ ಕಂಪನಿಯೊಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಓದು, ಸಾಹಿತ್ಯ ಬರವಣಿಗೆ, ಪುಸ್ತಕ ವಿಮರ್ಶಾ ಹವ್ಯಾಸವನ್ನು ಚಿಕ್ಕಂದಿನಿಂದಲೆ ರೂಢಿಸಿಕೊಂದ್ದ ಅವರ ಹಲವಾರು ಚುಟುಕು ಕವಿತೆ, ಬರಹಗಳು ಕನ್ನಡದ ಹಲವಾರು ನಿಯತಕಲಿಕೆ, ಪತ್ರಿಕೆಯಲ್ಲಿ ಪ್ರಕಟವಾಗಿವೆ.

More About Author