Poem

ಬ್ರಾ ಬಗ್ಗೆ ಬರೆಯುವುದೆಂದರೆ... 

ಕಲ್ಲು ಬೆಟ್ಟದ ನಾಡಿನವರಾದ ಬರಹಗಾರ, ಕವಿ ಆನಂದ್ ಋಗ್ವೇದಿ ಮೂಲತಃ ಚಿತ್ರದುರ್ಗದವರು. ‘ಜನ್ನ ಮತ್ತು ಅನೂಹ್ಯ ಸಾಧ್ಯತೆ’ ಅವರ ಕತಾ ಸಂಕಲನ. ‘ಉರ್ವಿ’ ಅವರ ನಾಟಕ, ‘ನಿತ್ಯ ನೆನಪಿಗೊಂದು ನವಿಲುಗರಿ’ ಅವರ ಕವನ ಸಂಕಲನ. ಕರ್ನಾಟಕ ಸಾಹಿತ್ಯ ಅಕಾಡೆಮಿ ಫೆಲೋಶಿಪ್, ಡಾ. ಪಾಟೀಲ ಪುಟ್ಟಪ್ಪ ಕಥಾ ಪುರಸ್ಕಾರ ಮುಂತಾದ ಪ್ರಶಸ್ತಿಗಳು ಅವರಿಗೆ ಸಂದಿವೆ. ಅವರ ‘ಬ್ರಾ ಬಗ್ಗೆ ಬರೆಯುವುದೆಂದರೆ... ’ ಕವಿತೆ ಇಲ್ಲಿದೆ.

 

ಬ್ರಾ ಬಗ್ಗೆ ಬರೆಯುವುದೆಂದರೆ -
ಅದೂ ಗಂಡಸೊಬ್ಬ;
ತನಗೆ ಹಾಲೂಡಿದ ಅಮೃತಮಯಿ
ಅಮ್ಮನ ಮಮತೆ ಬಗ್ಗೆ,
ತನ್ನ ಮಗ್ಗುಲ ಚುಚ್ಚುತ್ತಿದ್ದ ಕಂ-
-ಬಳಿ ಹುಳು ಸಹ ಉದರಿ
ತನ್ನೆರಡೂ ಪಕ್ಕಗಳಲ್ಲಿ ಬಣ್ಣದ
ಹುಡಿಯಲ್ಲೇ ಚಿತ್ತ ಚಿತ್ತಾರ ಬರೆಸಿಕೊಂಡು
ನೆಲದಿಂದ ತನ್ನ ಕನಸಿನ ನಭಕ್ಕೆ ಹಾರಿದ
ಚಿಟ್ಟೆಯಾದ ಬಗ್ಗೆ,
ತನಿ ಕಳಶಗಳ ಕೂಚುಪುಡಿಗೆ
ನಿಬ್ಬೆರಗ ಜಿಂಕೆ ಕೆನೆದು ಗೊರಸೊತ್ತಿ
ಓಡಿ ಅಡವಿಯಗಲ ಅಲೆದು ಮುಗಿಲ
ಸಡಿಲಗೊಂಡ ಅಂತರಂಗವ ತನ್ನತ್ತ
ಸೆಳೆದ ತನ್ನಿನಿಯೆ ಬಗ್ಗೆ
ಬರೆವುದಷ್ಟೇ ಅಲ್ಲ...

 

ಹರೆಯವ ಸೆಳೆವ
ತನಯನಿಗೆ ಊಡುವ
ಈ ಕಸಿಯ
ಸನಾತನತೆಯಲ್ಲಿ ಬಂಧಿಸಿ ಸರಾಗ
ಉಸಿರೂ ಆಡದಂತೆ ಬಿಗಿದು ಬೆವರು
ತೊಟ್ಟಿಕ್ಕಿ ಸೀಳ ಕಣಿವೆಯ ಇಳಿದು
ಹಸಿ ಹಸಿ ಸುವಾಸಿನಿಗೆ ಕಸಿವಿಸಿ
ಬಗ್ಗೆ ಬರೆವುದಷ್ಟೇ
ಅಲ್ಲ...

 

ಸೀರೆಯಂಗಡಿಯ ಮುಂದೆ
ಎದೆಯುಬ್ಬಿಸಿ ಉಬ್ಬುಸ ಏರಿಳಿತವಿಲ್ಲದೇ
ಹೊಸ ಸೀರೆಯ ಉಟ್ಟ ವಾರೆ ಬೈ
ತಲೆಯ ಬೆಡಗಿಯ ಕಂಡಾಗೊಮ್ಮೆ
ಕಳವಳಿಸಿ ತನ್ನತನದ ಆ
ಎರಡೂ ಅರೆ ಬೊಗಸೆಗಳ ಕತ್ತರಿಸಿ
ತೆಗೆದ ಕ್ಯಾನ್ಸರಿನ ಕರುಣೆಯಿಲ್ಲದ
ಬೆರಳ ಬೈಯುತ್ತಲೇ ಮೇಲುದ
ಹೊದೆವ ಸೆರಗ ಸರಿಪಡಿಸುವ
ಮಡದಿಯ ಮುಡಿಗೆ ಮಲ್ಲೆ ಹೂ
ಮುಡಿಸಿ...

ಕಲಾಕೃತಿ : ಅಶೋಕ ಶೆಟಕಾರ್‌

ಆನಂದ ಋಗ್ವೇದಿ

ಬರಹಗಾರ ಡಾ. ಆನಂದ್ ಋಗ್ವೇದಿ ಅವರು ಜನಿಸಿದ್ದು 1974ರ ಮೇ 24 ಚಿತ್ರದುರ್ಗ ಜಿಲ್ಲೆ ಗುಂಜಿಗನೂರಿನಲ್ಲಿ. ತಂದೆ-  ರಾಘವೇಂದ್ರ ರಾವ್ ತಿರುಮಲಾರಾಯ ಕುಕ್ಕವಾಡ, ತಾಯಿ ಜಿ.ಎಸ್. ಸುಶೀಲಾದೇವಿ ಆರ್. ರಾವ್. ವೃತ್ತಿಯಲ್ಲಿ ದಾವಣಗೆರೆಯ ಸರ್ಕಾರಿ (ಚಿಗಟೇರಿಯವರ ಸ್ಮಾರಕ) ಜಿಲ್ಲಾ ಆಸ್ಪತ್ರೆಯಲ್ಲಿ ಸಹಾಯಕ ಆಡಳಿತ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ವಿಜ್ಞಾನ ಪದವೀಧರರು. ಕನ್ನಡದಲ್ಲಿ ಸ್ನಾತಕೋತ್ತರ ಪದವೀಧರರು. ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ಪಿ.ಎಚ್.ಡಿ ಪದವಿ ಪಡೆದಿದ್ದಾರೆ.  ಕತೆ, ಕವಿತೆ, ಪ್ರಬಂಧ, ವಿಮರ್ಶೆ, ನಾಟಕ, ಸಂಶೋಧನೆ. . ಮೊದಲಾದ ಪ್ರಕಾರಗಳಲ್ಲಿ ಬರಹ. 

‘ಜನ್ನ ಮತ್ತು ಅನೂಹ್ಯ ಸಾಧ್ಯತೆ’, ‘ಮಗದೊಮ್ಮೆ ನಕ್ಕ ಬುದ್ಧ’ ‘ಕರಕೀಯ ಕುಡಿ’ ( ಕಥಾ ಸಂಕಲನಗಳು), ‘ಉರ್ವಿ’ (ನಾಟಕ), ‘ನಿನ್ನ ನೆನಪಿಗೊಂದು ನವಿಲುಗರಿ’ ‘ತಥಾಗತನಿಗೊಂದು ಪದ್ಮ ಪತ್ರ’ ( ಕವನ ಸಂಕಲನಗಳು) 

‘ತಳಮಳದ ಹಾದಿ ಪೂರ್ವೋತ್ತರ’ ‘ಕುಣಿದು ಕಾಡುವ ಗಾಳಿ’ ( ವಿಮರ್ಶಾ ಸಂಕಲನಗಳು), ‘ಕಥಾ ಸ್ವರೂಪ’, ‘ಅನುಭವದ ಅಮೃತತ್ವ’ ( ಸಂಶೋಧನೆ) - ಈವರೆಗೆ ಪ್ರಕಟಿತ ಕೃತಿಗಳು. ಕರ್ನಾಟಕ ಸಾಹಿತ್ಯ ಅಕಾಡೆಮಿ ಪುಸ್ತಕ ಬಹುಮಾನ ಮತ್ತು ಕಡೆಂಗೋಡ್ಲು ಕಾವ್ಯ ಪ್ರಶಸ್ತಿ,  ಡಾ. ಪಾಟೀಲ ಪುಟ್ಟಪ್ಪ ಕಥಾ ಪುರಸ್ಕಾರ ಜೋಳದರಾಶಿ ದೊಡ್ಡನಗೌಡ ಪ್ರಶಸ್ತಿ  ಕರ್ನಾಟಕ ಸಾಹಿತ್ಯ ಅಕಾಡೆಮಿ ಸಂಶೋಧನಾ ಫೆಲೋಶಿಪ್ ಸೇರಿದಂತೆ ಹಲವು ಪುರಸ್ಕಾರಗಳು ಲಭಿಸಿವೆ. ಜಿಲ್ಲಾ ತರಬೇತಿ ಕೇಂದ್ರ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಸಂಪನ್ಮೂಲ ವ್ಯಕ್ತಿಯಾಗಿ  ಆಡಳಿತ ಕನ್ನಡ ಮತ್ತು ಸೇವಾ ನಿಯಮಗಳ ಕುರಿತು ನೂರಾರು ತರಬೇತಿ ಉಪನ್ಯಾಸಗಳನ್ನು ನೀಡಿದ್ದಾರೆ. 

More About Author