Poem

ಛತ್ರಪತಿ ಶಿವಾಜಿ

ರಾಷ್ಟ್ರವೀರ ಯುಗಾವತಾರಿ, ಛತ್ರಪತಿ ಶಿವಾಜಿಯು!
ಪೇಳಿಹುದು ಕಥೆಯೊಂದ ಧ್ವಜವು,
ಗತಕಾಲದ್ಯುಗವನು ಮೆಲುಕುತಲಿ,
ಶಿಖರಾಗ್ರದಲ್ಲಿ ತನ್ನ ಪೂಜಿಪ,
ಧ್ಯೇಯಜೀವಿಯ ನೆನೆವುತಲಿ.

ಭರತಭುವಿಯ, ಬಾನರವಿಯ,
ಬದಿಗೆ ಸರಿಸಿ ಮೆರೆಯಿತು,
ಅಧರ್ಮಕಲಿಯ ಬಾಹುಬಲವು,
ಧರ್ಮತೀರವ ನಾಟಿತು.

ಮಾಸಗಳು ವರುಷವಾಗಿ,
ದಶಕವು ಶತಮಾನವಾಗಿ,
ಉರುಳಿ ಸಾಗಿದ ದಾಸ್ಯ ಪಂಜರ,
ಭೇಧಿಸಿತ್ತು ದಿವ್ಯ ಹಂದರ.

ಸುಯೋಗಕೆಂದು ಕಾದ ಕಾಲದ,
ಸುಸಂಧಿಯಲಿ ಜನಿಸಿದನು,
ರಾಷ್ಟ್ರವೀರ ಯುಗಾವತಾರಿ,
ಛತ್ರಪತಿ ಶಿವಾಜಿಯು.

ಮೂರ್ತಿಭಂಜಕನುದರ ಸೀಳಿ,
ಕುತಂತ್ರಿರಾಜನಂಗುಲಿಯ ಕೀಳಿ,
ದೇವದುರ್ಲಭ ಸಹಚರರೊಡಗೂಡಿ,
ಮತ್ತೆ ಕಟ್ಟಿದ, ಸ್ವರಾಜ್ಯ ಕೋಟೆಯ.

ರಾಜಧರ್ಮಕೆ ಅಂಕಿತನಾಗಿ,
ದೈವಕೃಪೆಗೆ ಪಾತ್ರನಾಗಿ,
ಅನುಶಾಸನಕೆ ಮೂರ್ತರೂಪನಾಗಿ,
ಅಬೇಧ್ಯ ಸಾಮ್ರಾಜ್ಯದ ನಿರ್ಮಾತೃವಾಗಿ.

ಸಹ್ಯಾದ್ರಿಯ ಗಿರಿಕಂದಕಗಳಿಂದ,
ಉತ್ತರದಕ್ಷಿಣವೆನ್ನದೆ, ಪೂರ್ವಪಶ್ಚಿಮವೆನ್ನದೆ,
ಘಮಲುಸೂಸಿ, ಧ್ಯೇಯಪುಷ್ಪವರಳಿತ್ತು,
ಸ್ಪೂರ್ತಿಪ್ರದ ನಾಯಕತ್ವದಲಿ ಮೆರೆದಿತ್ತು.

ಇನಿತು ಕಥೆಯನು ಪೇಳಿ ಧ್ವಜವು,
ಯುವಚೇತನಗಳ ಭಿನ್ನವಿಸಿತು,
ನವದಿಗಂತಕೆ ನಾಂದಿಹಾಡಿಹ,
ಧೀರಪುರುಷನಪಥದಲಿ ನಡೆಯೆಂದಿತು!

ಸೋಮೇಶ್ವರ ಗುರುಮಠ

ಸೋಮೇಶ್ವರ ಗುರುಮಠ ಅವರು ಲೇಖಕ, ಕಿರುಚಿತ್ರ ನಿರ್ದೇಶಕ, ಹಾಡುಗಾರ, ಕವಿ, ನಿರೂಪಕ, ಅಂಕಣಗಾರ ಹಾಗೂ ನಟನಾಗಿ ಗುರುತಿಸಿಕೊಂಡವರು. ಈಗಾಗಲೇ 'ನಾನು ನನ್ನ ಜಗತ್ತು', 'ಪಯಣಿಗನ ಕಾವ್ಯಗಳು' ಮತ್ತು 'ಅನನ್ಯ ನಮನಗಳು' ಎಂಬ ಮೂರು ಕವನ ಸಂಕಲನಗಳನ್ನು ಹೊರತಂದಿದ್ದಾರೆ. ತಮ್ಮ ಬರವಣಿಗೆಯ ಮೂಲಕ ವಿಭಿನ್ನ ಛಾಪನ್ನು ಸಾಹಿತ್ಯ ಲೋಕದಲ್ಲಿ ಮೂಡಿಸಲು ಪ್ರಯತ್ನಿಸುತ್ತಿದ್ದಾರೆ.

More About Author