Poem

ದೇವ ಪುಷ್ಪದ ಕರುಳ ಹಾಡು

ಮತ್ತೆ ದೀಪಗಳು ಹೊತ್ತಿಕೊಂಡವು
ಮುಂಬಾಗಿಲ ಸಜ್ಜೆಗೆ  ಬಣ್ಣ ಬಣ್ಣದ
ಆಕಾಶ ಬುಟ್ಟಿಗಳನ್ನು ತೂಗು ಬಿಡಲಾಗಿದೆ
ಝಗಮಗಿಸುವಂತೆ

ಮಲ್ಲಿಗೆ ಹೂವು ದಂಡೆಗಳು ಕೋಣೆ ಸೇರಿಕೊಂಡಿವೆ
ಕತ್ತಲನ್ನು ಉನ್ಮತ್ತಿಸುವಂತೆ  ಮಂದ ಬೆಳಕು ..

ನಾನಿನ್ನೂ ರೆಡಿಯಾಗಿಲ್ಲ.
ಹಜಾರದಲ್ಲಿ ಸಾಲು ನಿಂತಿದ್ದಾರೆ ಅವರಿಗೀಗ ಹೊಸದೊಬ್ಬಳು
ಹಾದರಗಿತ್ತಿಗೆ ಮೊಹರು ಒತ್ತುವ  ಉತ್ಸಾಹ.

ದಟ್ಟ ಕಡುಗಪ್ಪಿನ  ತುರುಬಿನಲ್ಲಿ ಹೆಣಿಗೆ ಸಿಕ್ಕು ಬಿಡಿಸುವುದು ಮುಗಿದಿಲ್ಲ
ಅವನು  ಮನಬಂದಂತೆ ಬೆರಳಾಡಿಸಲು
ಮದ ಏರಿ  ಹಿಡಿದೆಳೆದು  ಜುಮ್ಮಿರಿದು
ಎಳೆ ಎಳೆ ಹೆರಳು ಹಾಸಿಗೆ ತುಂಬೆಲ್ಲಾ ಚೆಲ್ಲಾಡಲು
ಸಲೀಸು ಮಾಡಿಕೊಡಬೇಕಿದೆಯಲ್ಲಾ.

ಕೆನ್ನೆ-ತುಟಿಗಳು ಇನ್ನೂ ಈಗಷ್ಟೇ ಅರಳಿದ ದೇವಪುಷ್ಪಗಳಂತಿವೆ ನಿಜ,
ಆದರೂ ಅವು ಇನ್ನಷ್ಟು ಮೆತ್ತಗೆ, ದಪ್ಪಗೆ, ಕೆಂಪಗೆ ಕಾಣಲು
ಸ್ನೋ, ಪೌಡರ್, ತುಟಿಬಣ್ಣ ಮೆತ್ತಿಕೊಳ್ಳಲೇ ಬೇಕು

ಅವುಗಳಿಗಿಂದು ಮ..ಧುರ ನೋವನ್ನು ಪರಿಚಯಿಸಬೇಕಿದೆ..

ಗಂಧದುಡಿಯ
ಪರಾಗವನ್ನು ಚಿಮುಕಿಸಿಕೊಳ್ಳಬೇಕು
ಅವನ ಬೆವರ ಗಟಾರ ಘಮಲನ್ನೂ ಸುಗಂಧಗೊಳಿಸಲು
ಕಪ್ಪನ್ನು ರೆಪ್ಪೆಗಳಿಗೆ ತೀಡಿ ಇನ್ನಷ್ಟು ತಾಜಾ ಗೊಳಿಸಬೇಕು
ಮಿಂಚು ಮಿಣುಕಿನ ಸೀರೆ ಒಂದರಗಳಿಗೆಯಾದರೂ ಇರಲಿ

ಉಳಿದಂತೆ ಬೆತ್ತಲಾಗುವುದು ಇದ್ದಿದ್ದೆ.
ಅವನಿಗಿಷ್ಟವಂತೆ- ಅವನಿಷ್ಟದಂತೆ
ಮಬ್ಬುಗತ್ತಲಲ್ಲಿ ಕಣ್ಣಿಗೆ ಕಣ್ಣು ನೆಟ್ಟು ನೋಡಲಾರದವನ
ಕಣ್ಣುಗಳೆಲ್ಲಾ ಹೆಣ್ತನದ ಮೇಲೆಯೇ ಹರಿದಾಡುತ್ತಿವೆ

ಹೂವುಗಳು ಕಪ್ಪಿಡಬೇಕು ಮಗ್ಗುಲಿಗೆ  ಸಿಲುಕಿ
ನರಳಬೇಕು  ಅವನು ಇನ್ನಷ್ಟು ಉನ್ಮತ್ತ ಗೊಂಡು
ಹೊರಳಾಡಲು
ಸುರತ ರಾತ್ರಿಯಲ್ಲಿ ಸುರಿದು ಹೋದ ಕಣ್ಣೀರಿನ
ಪರಿಚಯ  ಅವನಿಗೆ ಬೇಕಿಲ್ಲ

ಎದೆಯಲ್ಲಿ ಮಡುಗಟ್ಟಿದ್ದ ಹಾಡು ಹಿತವೆನಿಸಿಲ್ಲ
ಅವನೀಗ ಸೊಕ್ಕಿ ಸೊಲ್ಲಡಗಿ  ಬೆನ್ನು ತಿರುಗಿಸಿದ್ದಾನೆ.
ತೇಗಿ ಬಣ್ಣ ಬಣ್ಣದ ನೋಟುಗಳ ತೂರಿದ್ದಾನೆ
ಬಟ್ಟೆ ಹುಡುಕಾಡುವ ಹೊತ್ತಿಗೆ ಕೈಗೆ ಸಿಕ್ಕವನ್ನೆಲ್ಲಾ
ಆಯುತ್ತಿದ್ದೇನೆ.....          

ಕಣ್ಣೀರಿನಲ್ಲಿ ನೆಂದ ನೋಟುಗಳನ್ನೆಲ್ಲಾ..
ಛಾವಣಿಯಲ್ಲಿ ಒಣ ಹಾಕಿದ್ದೇನೆ.

ಪೇಟೆಯಲ್ಲಿ ಜನಜಂಗುಳಿ ನೆರೆದಿತ್ತು
ನನ್ನನ್ನು ಕೊಂಡಾಡಲಾಗುತ್ತಿತ್ತು.  ಮೆರವಣಿಗೆಯೂ ಇತ್ತು
ಅವನಿದ್ದ, ಅವನಂತೆ ಹಲವರಿದ್ದರು
ನನಗಾಗಿ ನ್ಯಾಯ ಕೇಳಲಾಗುತ್ತಿತ್ತು
ನಕ್ಕು ಕಿಟಕಿ ಮುಚ್ಚಿದೆ
ಮತ್ತೆ ದೀಪಗಳು ಹೊತ್ತಿಕೊಂಡವು
ಹಜಾರದಲ್ಲಿ ಸಾಲು ನೆರೆದಿತ್ತು.

ಆಡಿಯೋ
ವಿಡಿಯೋ

ಎನ್‌.ರವಿಕುಮಾರ್‌ ಟೆಲೆಕ್ಸ್‌

ಪತ್ರಕರ್ತ, ಕವಿ ಎನ್. ರವಿಕುಮಾರ್ ಅವರು ಮೂಲತಃ ಶಿವಮೊಗ್ಗ ಜಿಲ್ಲೆಯವರು. ತಂದೆ- ನಾಗಯ್ಯ, ತಾಯಿ- ಗಂಗಮ್ಮ. ಶಿವಮೊಗ್ಗ ಮತ್ತು ಮೈಸೂರಿನಲ್ಲಿ ವಿದ್ಯಾಭ್ಯಾಸ ಪೂರ್ಣಗೊಳಿಸಿದ ಅವರು ಪತ್ರಿಕೋದ್ಯಮವನ್ನು ವೃತ್ತಿಯಾಗಿ ಆಯ್ಕೆ ಮಾಡಿಕೊಂಡರು. ಲಂಕೇಶ್ ಪತ್ರಿಕೆ ಸೇರಿದಂತೆ ನಾಡಿನ ಹಲವು ವಾರಪತ್ರಿಕೆ, ದಿನಪತ್ರಿಕೆಗಳಲ್ಲಿ ವರದಿಗಾರರಾಗಿ ಸೇವೆ ಸಲ್ಲಿಸಿರುವ ರವಿಕುಮಾರ್ ಸದ್ಯ ಶಿವಮೊಗ್ಗ ಟೆಲೆಕ್ಸ್ ಎಂಬ ಕನ್ನಡ ದಿನಪತ್ರಿಕೆಯ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. 

2006ನೇ ಸಾಲಿನಲ್ಲಿ ಅತ್ಯುತ್ತಮ ಅಪರಾಧ ವರದಿಗಾಗಿ ಕಾರ್ಯನಿರತ ಪತ್ರಕರ್ತರ ಸಂಘದಿಂದ ರಾಜ್ಯಮಟ್ಟದ  " ಗಿರಿಧರ ಪ್ರಶಸ್ತಿ" ಪಡೆದಿದ್ದ ಅವರು ಸಾಹಿತ್ಯ, ರಂಗಭೂಮಿಗಳಲ್ಲೂ ತೊಡಗಿಕೊಂಡಿದ್ದಾರೆ. ಅಲ್ಲದೇ 2016 -2018ನೇ ಸಾಲಿನಲ್ಲಿ ಕರ್ನಾಟಕ ರಾಜ್ಯ ಸರ್ಕಾರದ ಮಾಧ್ಯಮ ಅಕಾಡೆಮಿ ಸದಸ್ಯರಾಗಿ ಸೇವೆಸಲ್ಲಿಸಿದ್ದಾರೆ. ಇವರ ಚೊಚ್ಚಲ ಕವನ ಸಂಕಲನ ‘ನಂಜಿಲ್ಲದ ಪದಗಳು’ ಹಸ್ತಪ್ರತಿಗೆ ರಾಜ್ಯಮಟ್ಟದ ಪ್ರತಿಷ್ಠಿತ ವಿಭಾ ಸಾಹಿತ್ಯ ಪ್ರಶಸ್ತಿ, ಎರಡನೇ ಕವನ ಸಂಕಲನ "ನೆರ್ಕೆಗೋಡೆಯ ರತ್ನಪಕ್ಷಿ"  ಹಸ್ತಪ್ರತಿಗೆ  ರಾಜ್ಯಮಟ್ಟದ "ಗವಿಸಿದ್ದ ಬಳ್ಳಾರಿ ಕಾವ್ಯಪ್ರಶಸ್ತಿಗಳು ಸಂದಿವೆ. ಜೊತೆಗೆ ಸಾಹಿತ್ಯ ಕ್ಷೇತ್ರದ ಸಾಧನೆಗಾಗಿ 2004 ನೇ ಸಾಲಿನಲ್ಲಿ ರಾಜ್ಯಮಟ್ಟದ ದುಂ.ನಿ .ಬೆಳಗಲಿ (ರಬಕವಿ) ಸಾಹಿತ್ಯ ಪ್ರಶಸ್ತಿ ಪುರಸ್ಕಾರ, 2007ರಲ್ಲಿ ಮಂಡ್ಯ ಯುವ ಬರಹಗಾರ ಬಳಗದ ರಾಜ್ಯ ಮಟ್ಟದ "ಬಿ.ಎಂ.ಶ್ರೀ ಕಾವ್ಯ ಪುರಸ್ಕಾರ",  ಪತ್ರಿಕೋದ್ಯಮದಲ್ಲಿನ ಗಣನೀಯ ಸಾಧನೆಗಾಗಿ ಕರ್ನಾಟಕ ಸರ್ಕಾರದಿಂದ 2014ನೇ ಸಾಲಿನ ಪ್ರತಿಷ್ಠಿತ  ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ, ಸೇರಿದಂತೆ ಪತ್ರಿಕೋದ್ಯಮ ಮತ್ತು ಸಾಹಿತ್ಯಿಕ ಕ್ಷೇತ್ರಗಳ ಕಾರ್ಯಕ್ಕಾಗಿ ಹಲವು ಗೌರವ ಪ್ರಶಸ್ತಿಗಳನ್ನು ಪಡೆದಿದ್ದಾರೆ. 

More About Author