Story

ಧರ್ಮದ ಬೀಜ

ಕಾದಂಬರಿಗಾರ್ತಿ, ಕತೆಗಾರ್ತಿ ಆಶಾ ರಘು ಅವರು ಮೂಲತಃ ಬೆಂಗಳೂರಿನವರು. ಇವರು ಬೆಂಗಳೂರು ವಿಶ್ವವಿದ್ಯಾಲಯದಿಂದ ಕನ್ನಡ ಸ್ನಾತಕೋತ್ತರ ಪದವಿ ಪಡೆದಿರುತ್ತಾರೆ. 'ಆವರ್ತ', 'ಗತ', 'ಮಾಯೆ', 'ಆರನೇ ಬೆರಳು', 'ಬೊಗಸೆಯಲ್ಲಿ ಕಥೆಗಳು', 'ಅಪರೂಪದ ಪುರಾಣ ಕಥೆಗಳು', 'ಚೂಡಾಮಣಿ' ಹೀಗೆ ಅನೇಕ ಸಾಹಿತ್ಯ ಕೃಷಿಯನ್ನು ಮಾಡಿರುವ ಅವರ ‘ಅಪರೂಪದ ಪುರಾಣ ಕಥೆಗಳು’ ಸಂಕಲದಿಂದ ಆಯ್ದ ಕತೆ ‘ಧರ್ಮದ ಬೀಜ’ (ಪುರಾಣ ಕಥೆಯ ಮರುನಿರೂಪಣೆ) ನಿಮ್ಮ ಓದಿಗಾಗಿ...

ಮಹಾಭಾರತದಲ್ಲಿ ಕುರುಭೂಪತಿಯ ಹೆಸರು ಯಾರು ಕೇಳಿಲ್ಲ..? ಚಂದ್ರವಂಶಾವಳಿಯ ಪಟ್ಟಿ ಬಹಳ ದೊಡ್ಡದು. ರಾಜ ಸಂವರಣ ಹಾಗೂ ಸೂರ್ಯಪುತ್ರಿಯಾದ ತಪತಿಯ ಮಗ ಆತ. ಒಮ್ಮೆ ಆತನಿಗೆ ಒಂದು ವಿಚಿತ್ರವಾದ ಹಾಗೂ ಮಹತ್ತರವಾದ ಯಜ್ಞವನ್ನು ಮಾಡುವ ಸಂಕಲ್ಪ ಬಂದಿತಂತೆ! ಅದಕ್ಕಾಗಿ ಆತ ಆರಿಸಿಕೊಂಡ ಕ್ಷೇತ್ರ ಅಂತಿಂತಹುದಲ್ಲ. ಹಿಂದೆ ಅವತಾರ ಪುರುಷ ಪರಷುರಾಮ ಕ್ಷತ್ರಿಯ ಸಂಹಾರ ಮಾಡಿ, ಪಿತೃತರ್ಪಣ ಕೊಟ್ಟ ಸ್ಯಮಂತಪಂಚಕದ ಪರಿಸರ ಅದು. ಅದಕ್ಕೆ ಅಂಟಿಕೊಂಡಂತೆ ಸಮೀಪದಲ್ಲಿ ಸರಸ್ವತಿ ಮತ್ತು ದೃಷದ್ವತಿ ಎಂಬರೆಡು ನದಿಗಳು ಹರೀತಿದ್ದುವು. ತರಂತುಕ, ರಾಮಹ್ರದ, ಮಚುಕ್ನಕ, ಆರಂತುಕ ಮತ್ತು ವಿಶಸನ ಎಂಬ ಪಂಚಕ್ಷೇತ್ರಗಳ ಪುಣ್ಯಭೂಮಿ. ಬ್ರಹ್ಮ ಮತ್ತಿತರೆ ದೇವಾದಿದೇವತೆಗಳೂ ಅಲ್ಲಿ ಹೋಮಹವನಾದಿಗಳನ್ನು ಮಾಡಿದ್ದರಂತೆ. ಉತ್ತರವೇದಿ, ಅಂತರ್ವೇದಿ ಎಂಬ ಯಜ್ಞಪಶುಗಳ ವಿಕಸನವಾದ ಸ್ಥಳವೂ ಅದೇ ಆದ್ದರಿಂದ ಅದಕ್ಕೆ ವಿಕಸನ ಕ್ಷೇತ್ರ ಎಂದೂ ಹೆಸರು.

ದೇವಶಿಲ್ಪಿ ವಿಶ್ವಕರ್ಮ ಕುಸುರಿ ಮಾಡಿಕೊಟ್ಟ ಚಿನ್ನದ ನೇಗಿಲಿಗೆ, ಯಮಧರ್ಮನಿಂದ ಪಡೆದ ಕೋಣವನ್ನು ಒಂದು ಬದಿಗೆ, ಶಿವ ಕೊಟ್ಟ ನಂದಿಯನ್ನು ಒಂದು ಬದಿಗೆ ಕಟ್ಟಿಕೊಂಡು ಉಳುವುದಕ್ಕೆ ಅಣಿ ಮಾಡಿಕೊಂಡ ಕುರುಭೂಪನನ್ನು ನೋಡಿ, ಇಂದ್ರ ಹಠಾತ್ತನೆ ಪ್ರತ್ಯಕ್ಷವಾಗಿ ‘ಏನಯ್ಯಾ ನೀನು ಉಳುತ್ತಿರೋದು?’ ಅಂದ. ಅದಕ್ಕೆ ಕುರುಭೂಪ ‘ಧರ್ಮದ ಬೀಜವನ್ನು ಬಿತ್ತಿ ಬೆಳೀಬೇಕು ಅಂತಿದ್ದೀನಿ’ ಅಂತ ಉತ್ತರ ಕೊಟ್ಟ. ಇಂದ್ರ ಕಕ್ಕಾಬಿಕ್ಕಿಯಾದ.. ತಲೆಕೊಡವಿಕೊಂಡು ಮರುಪ್ರಶ್ನೆ ಮಾಡೋಣ ಅಂದುಕೊಂಡ. ದೇವತೆಗಳ ಅಧಿಪತಿಯಾದ ಇಂದ್ರನಿಗೆ ಇದು ಅರ್ಥವಾಗಲಿಲ್ಲವೇ ಎಂದು ಈ ಹುಲುಮಾನವ ನಕ್ಕರೆ ತನ್ನ ಮುಖವನ್ನು ಎತ್ತಕಡೆಗೆ ತಿರುಗಿಸುವುದು ಅನ್ನಿಸಿತು. ಆದರೆ ಅಭಿಮಾನ ಭಂಗವಾಗದಿರಲೆಂದು ಮುಖದ ಮೇಲೆ ಬಿಳುಪು ನಗೆ ತಂದುಕೊಂಡು ‘ತಥಾಸ್ತು’ ಅಂದು ಗಾಳಿಯಲ್ಲಿ ಕಲೆಸಿಕೊಂಡ.

ಇದನ್ನು ದೂರದ ಮರದ ಮರೆಯಲ್ಲಿ ಕದ್ದು ನೋಡುತ್ತಿದ್ದ ನಾರದ, ಒಂದೇ ಉಸಿರಿಗೆ ಹೋಗಿ ವಿಷ್ಣುವಿಗೆ ನಿವೇದಿಸಿಕೊಂಡ. ವಾಸುಕಿಯ ಮೇಲೆ ಮಲಗಿದ್ದ ವಿಷ್ಣು ಆಕಳಿಸಿ ಎದ್ದವನು ವಿಚಾರವನ್ನು ಕೇಳಿ ಮುಗುಳ್ನಕ್ಕು, ಮಹಾಲಕ್ಷ್ಮಿಯ ಕೈಲಿ ಕೊಟ್ಟಿರಿಸಿದ್ದ ಸುದರ್ಶನ ಚಕ್ರವನ್ನು ಮರೆಯದೆ ಪಡೆದುಕೊಂಡು, ಬ್ರಾಹ್ಮಣನಂತೆ ಕಚ್ಚೆಯುಟ್ಟು, ಜುಟ್ಟುಬಿಟ್ಟು ಯಜ್ಞಕ್ಷೇತ್ರವನ್ನು ತಲುಪಿದ. ಉಳೋದಕ್ಕೆ ಅಣಿ ಮಾಡಿಕೊಂಡು, ಇನ್ನೂ ಆರಂಭಿಸದೆ ನೆಲವನ್ನೇ ನೋಡುತ್ತ ನಿಂತ ಕುರುವನ್ನು ಕೂಗಿ ಕರೆದು ಇಂದ್ರನ ಪ್ರಶ್ನೆಯನ್ನೇ ಮತ್ತೆ ಹಾಕಿದ. ಕುರುವೂ ಕೂಡ ದೃಢವಾಗಿ ಮತ್ತೆ ಅದೇ ಉತ್ತರವನ್ನೇ ಕೊಟ್ಟ. ವಿಷ್ಣು ಜಾಣ.. ಇಂದ್ರನಂತೆ ಕಿರೀಟವಿಟ್ಟುಕೊಂಡು ಪ್ರಭಾವಳಿ ಮೆರೆಸುತ್ತ ಬರಲಿಲ್ಲ.. ದಾರಿ ಹೋಕ ಬ್ರಾಹ್ಮಣ ಎಂತಹ ಬಾಲಿಶ ಪ್ರಶ್ನೆಯನ್ನು ಬೇಕಾದರೂ ಕೇಳಬಹುದು. ‘ಹೇಗೆ?’ ಎಂದ ಜುಟ್ಟಿಗೆ ಮುಡಿದ ಹೂವನ್ನು ಸವರಿಕೊಳ್ಳುತ್ತ. ‘ಈ ಕ್ಷೇತ್ರವನ್ನು ಧರ್ಮಕ್ಷೇತ್ರವನ್ನಾಗಿ ಮಾಡುವ ಹಂಬಲ ನನ್ನದು. ನಶ್ವರವಾದ ಈ ದೇಹವನ್ನು ಚೆಲ್ಲಿಯಾದರೂ ಅದನ್ನು ಸಾಧಿಸಬೇಕು ಅಂತಿದ್ದೀನಿ. ಮುಂದೆ ಈ ಕ್ಷೇತ್ರದಲ್ಲಿ ನಡೆಯುವ ಎಲ್ಲಾ ಸತ್ಕಾರ್ಯಗಳಿಗೂ ಒಂದಕ್ಕೆ ನೂರರಷ್ಟು ಫಲ ಸಿದ್ಧಿಸಬೇಕು ಅನ್ನೋದು ನನ್ನ ಸಂಕಲ್ಪ’ ಅಂದ.

ಬ್ರಾಹ್ಮಣರೂಪಿ ವಿಷ್ಣುವಿಗೆ ಸಂತೋಷವಾಯಿತು. ಒಂದೇ ಏಟಿಗೆ ‘ಆಗಲಿ, ನೀನು ಉಳುತ್ತಿರು, ಬಿತ್ತುವ ಕೆಲಸ ನಾನು ಮಾಡುತ್ತೀನಿ. ನಾನು ನಿನ್ನ ಸಹಾಯಕ’ ಅಂದು ಕುರುವನ್ನು ಮುಂದಕ್ಕೆ ಬಿಟ್ಟು ಹಿಂದಿನಿAದ ಸುದರ್ಶನ ಚಕ್ರ ಹಾರಿಸಿದ. ಕುರುಪತಿಯ ಶರೀರ ಛಿದ್ರಛಿದ್ರವಾಗಿ ಮಣ್ಣು ಸೇರಿತು. ಕ್ಷೇತ್ರಪಾಲಕನಾಗಿ ಸರ್ವಾರ್ಪಣ ಭಾವದಿಂದ ತನ್ನ ದೇಹವನ್ನೇ ಮಣ್ಣಿಗೆ ಅರ್ಪಿಸಿದ ಕುರುರಾಜನ ಹೆಸರೇ ಆ ಕ್ಷೇತ್ರಕ್ಕೆ ನಿಂತಿತು. ಆ ಭೂಮಿ ಧರ್ಮಕ್ಷೇತ್ರವಾದ ಕುರುಕ್ಷೇತ್ರವೆಂದು ಪ್ರಸಿದ್ಧಿ ಪಡೆಯಿತು. ಅಂತಹ ಕುರುಕ್ಷೇತ್ರದಲ್ಲಿ ನಡೆದ ಕುರುಪಾಂಡವರ ಹದಿನೆಂಟು ದಿನಗಳ ಘೋರಯುದ್ಧದಲ್ಲಿ, ಹೆಣಗಳ ರಾಶಿಯೇ ಬಿದ್ದರೂ, ಧರ್ಮ ತನ್ನ ಗೆಲುವು ಸಾಧಿಸಿತು ಅನ್ನೋದು ನಂತರದ ಕಥೆಯಷ್ಟೇ!

(ಇದು ನನ್ನ ಸಂಕಲನದಿಂದ ಆಯ್ದ ಕಥೆ)

ಆಶಾ ರಘು

ಆಶಾ ರಘು ಅವರು ಕನ್ನಡದ ಪ್ರಮುಖ ಕಾದಂಬರಿಗಾರ್ತಿಯರಲ್ಲಿ ಒಬ್ಬರು. ಇವರು ಕೇಶವ ಅಯ್ಯಂಗಾರ್ ಹಾಗೂ ಸುಲೋಚನ ದಂಪತಿಗಳ ಹಿರಿಯ ಮಗಳಾಗಿ 1979ರ ಜೂನ್ 18 ನೇ ತಾರೀಖಿನಂದು ಬೆಂಗಳೂರಿನಲ್ಲಿ ಹುಟ್ಟಿದರು. ಇವರು ಬೆಂಗಳೂರು ವಿಶ್ವವಿದ್ಯಾಲಯದಿಂದ ಕನ್ನಡ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಉಪನ್ಯಾಸಕರಾಗಿ ಕೆಲಕಾಲ ಕಾರ್ಯ ನಿರ್ವಹಿಸಿರುವ ಇವರು, ರಂಗಭೂಮಿ, ಕಿರುತೆರೆ, ಬೆಳ್ಳಿತೆರೆಗಳಲ್ಲಿಯೂ ಕಲಾವಿದೆಯಾಗಿ, ಸಂಭಾಷಣೆಕಾರರಾಗಿ, ಸಹಾಯಕ ನಿರ್ದೇಶಕರಾಗಿ ಕೂಡ ಕಾರ್ಯ ನಿರ್ವಹಿಸಿದ್ದಾರೆ.

'ಆವರ್ತ', 'ಗತ', 'ಮಾಯೆ', 'ಚಿತ್ತರಂಗ' ಮೊದಲಾದ ಕಾದಂಬರಿಗಳನ್ನೂ, 'ಆರನೇ ಬೆರಳು', 'ಬೊಗಸೆಯಲ್ಲಿ ಕಥೆಗಳು', 'ಅಪರೂಪದ ಪುರಾಣ ಕಥೆಗಳು' ಮೊದಲಾದ ಕಥಾಸಂಕಲನಗಳನ್ನೂ, 'ಚೂಡಾಮಣಿ', 'ಕ್ಷಮಾದಾನ', 'ಬಂಗಾರದ ಪಂಜರ ಮತ್ತು ಇತರ ಮಕ್ಕಳ ನಾಟಕಗಳು' 'ಪೂತನಿ ಮತ್ತಿತರ ನಾಟಕಗಳು'  ಮೊದಲಾದ ನಾಟಕ ಕೃತಿಗಳನ್ನು ರಚಿಸಿದ್ದಾರೆ. ಇವರ 'ಆವರ್ತ' ಕಾದಂಬರಿಯ ಕುರಿತ ಕೃತಿ 'ಆವರ್ತ-ಮಂಥನ' ಕೂಡಾ ಪ್ರಕಟಗೊಂಡಿದೆ. ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ (2014), ಸೂರ್ಯನಾರಾಯಣ ಚಡಗ ಪ್ರಶಸ್ತಿ (2014), ಕನ್ನಡ ಸಾಹಿತ್ಯ ಪರಿಷತ್ತಿನ ಪಳಕಳ ಸೀತಾರಾಮಭಟ್ಟ ಪ್ರಶಸ್ತಿ (2019), ರಾಯಚೂರು ಕನ್ನಡ ಸಾಹಿತ್ಯ ಪರಿಷತ್ತಿನ ರಾಜಲಕ್ಷ್ಮಿ ಬರಗೂರು ರಾಮಚಂದ್ರಪ್ಪ ಪ್ರಶಸ್ತಿ (2020), ಸೇಡಂನ ಅಮ್ಮ (2021), ಕರ್ನಾಟಕ ಲೇಖಕಿಯರ ಸಂಘದ ತ್ರಿವೇಣಿ ದತ್ತಿನಿಧಿ ಪ್ರಶಸ್ತಿ (2023)ಗಳನ್ನು ಪಡೆದಿದ್ದಾರೆ. ಮಂಡ್ಯಾ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು 2023 ರಲ್ಲಿ ಇವರಿಗೆ 'ಸಾಹಿತ್ಯಾಮೃತ ಸರಸ್ವತಿ' ಎಂಬ ಬಿರುದು ನೀಡಿ ಗೌರವಿಸಿದೆ.

More About Author