Poem

ಧಾವಿಸಬೇಕು ಎಲ್ಲಿಗೆ

ಧಾವಿಸಬೇಕು ಎಲ್ಲಿಗೆ
ಉದುಗಿ ಕಮರುತ್ತಿರುವ ಕತ್ತಲೆ ಎಳೆಯಲೋ?
ಅಥವಾ ಬೆಳಕು ಹಚ್ಚಿದ ಸೋಗ ಬೆಳಕಲ್ಲೇ ಉಳಿಯಲೋ?
ಧಾವಿಸಬೇಕು ಎಲ್ಲಿಗೆ?

ಆಸ್ಪತ್ರೆಗೆಂದು ಹೊರಟ ಬಸುರಿ ಒಡಲೊಳಗೆ ಸತ್ತ ದಾರಿಯ ಸರಿಪಡಿಸಲೋ?
ಅಥವಾ ಸಾರ್ವಭೌಮರು ಸುಯ್ಂದು ಜಾರಿ ಹೋಗುವ ಸಲುವಾಗಿನ ಗುದ್ದಲಿ ಪೂಜೆಗೋ?
ದಾವಿಸಬೇಕು ಎಲ್ಲಿಗೆ?

ನೂರಾರು ಹೆಣ್ಣು ಮಕ್ಕಳ ಸಾತ್ವಿಕ ಹೃದಯವನ್ನೇ ಕೊಂದ ಜಂತು ಹುಳುಗಳ ವಿರುದ್ಧ ಗುಡುಗುವುದೋ?
ಅಥವಾ ರಾಜಕೀಯ ಕುತಂತ್ರದ ಒಳ ಮನೆಯಲ್ಲಿ ಬೆಚ್ಚಗೆ ಕೂತು ಗೋನಾಡಿಸುವುದೋ?
ಹೇಳಿ ಧಾವಿಸಬೇಕಾದದ್ದು ಎಲ್ಲಿಗೆ?

ಕೆಲ ಕಾವಿ ನಮ್ಮ ಮನೆಯ ಹೆಣ್ಣಿನ ದೇಹದ ಮೇಲೆ ಸೋಕಿದಾಗಲೂ ಮಂದಮತಿಗಳಾಗಿ ಕೈಮುಗಿಯುತ್ತಿದ್ದಾಗ. ..
ರಕ್ತದ ತಿಲಕ ಹಚ್ಚಿ ಧರ್ಮ ಬೆಳೆಸುವಲ್ಲಿ ಕೈ ಎತ್ತುತ್ತಿದ್ದಾಗ. ..
ನಮ್ಮನ್ನ ಸರಾಯಿಗೆ, ಕಾಸಿಗೆ ಮಾರಿಕೊಂಡಾಗಲೂ ಭ್ರಷ್ಟಾಚಾರದ ಭಾಷಣ ಕೇಳುತ್ತಿದ್ದಾಗ. ..
ದೇಶ ಹೊಡೆಯುವ ಜನರಿಗೆ ರೆಡ್ ಕಾರ್ಪೆಟ್ ಹಾಸುತ್ತಿದ್ದಾಗ. .
ಕಣ್ಣಿಗೆ ಕಪ್ಪು ಬಟ್ಟೆ ಕಟ್ಟಿ ಕತ್ತಲಲ್ಲಿ ಮೂಕಾಭಿನಯ ಮಾಡಿದ ನಮ್ಮೆಲ್ಲರ ತಪ್ಪಿದೆ

ಈ ಸತ್ಯಕ್ಕೆ ಗಡುಸಾಗಿ ಪ್ರಶ್ನೆ ಕೇಳಿದ ಕೈಗಳಿಗೆ ಬೇಡಿ ಹಾಕಿದ್ದಾರೆ ,
ನಕ್ಸಲೆಟ್ ಪಟ್ಟ ಕಟ್ಟಿದ್ದಾರೆ, ಇನ್ನು ಕೆಲವರನ್ನು ಗುರುತು ಸಿಗದ ಹಾಗೆ ಕೊಂದಿದ್ದಾರೆ.
ಈ ಸತ್ಯವನ್ನು ತಿಳಿದು ಕೂಡ ಜೇಬೋಳಗೆ ಕೈ ಹಾಕಿ ಮಲಗಿದವರ ಎದೆ ಮೇಲೆ ಚಿನ್ನದ ಬಿಸ್ಕೆಟ್ ಸುರಿದಿದ್ದಾರೆ
ಈಗಲಾದರೂ ಹೇಳಿ ನಾವು ದಾವಿಸಬೇಕಾದದ್ದು ಎಲ್ಲಿಗೆ

ಇಲ್ಲಿ ಬೇಡುವ ಕೈಗಳಿಗೆ ಹೂವು ಇಟ್ಟರು
ಕೇಳುವ ಕೈಗಳಿಗೆ ಚಾಟಿ ಏಟ ಕೊಟ್ಟರು
ಕೊನೆಗೆ ಅವರಿಗೆ ನಮ್ಮ ಅವಶ್ಯಕತೆ ಬಂದಾಗ
ತಲೆ ಸವರಿ ನಮ್ಮ ಬೆರಳಿನಿಂದಲೇ
ತಮ್ಮ ಭವಿಷ್ಯ ಬರೆಸಿಕೊಂಡರು
ಹೇಳಿ ನಾವು ದಾವಿಸಬೇಕಾದದ್ದು ಎಲ್ಲಿಗೆ

ಈ ನೆಲದ ಮೇಲೆ ಸಾವಿರಾರು ನದಿಗಳು
ಸಾವಿರಾರು ಬಣ್ಣ ತಾಳಿವೆ
ಎಲ್ಲವೂ ಕಲುಷಿತ
ಇದರೊಳಗೆ ಎಷ್ಟು ಮುಗ್ಧಜೀವಿಗಳು
ಹಕ್ಕಿಗಾಗಿ ಕೈ ಎತ್ತಲಾಗದೆ ನಿಶಕ್ತ ಜೀವಿಗಳಾಗಿದ್ದಾವೆ
ಈ ಎಲ್ಲಾ ನದಿಗಳನ್ನು ಸೋಸಿ ಒಂದೇ ಬಣ್ಣಕ್ಕೆ ತರಬೇಕಿದೆ
ಅದು ನೆಲದ ಬಣ್ಣಕ್ಕೆ ಜಗದ ಬಣ್ಣಕ್ಕೆ

ಈಗಲಾದರೂ ಹೇಳಿ ನಾವು ಧಾವಿಸಬೇಕಾದದ್ದು ಎಲ್ಲಿಗೆ. .?

_ ಹನುಪ ಭಾವ

ವಿಡಿಯೋ
ವಿಡಿಯೋ

ಪಂಪನಗೌಡ

ಪಂಪನಗೌಡ ಅವರು ಮೂಲತಃ ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನವರು. ‘ಹನುಪ ಭಾವ’ ಎಂಬ ಕಾವ್ಯನಾಮದಿಂದ ಬರವಣಿಗೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಕಾವ್ಯ ಅವರ ಆಸಕ್ತಿ ಪ್ರಕಾರ.

More About Author