Poem

ದೋಸೆ ಮತ್ತು ಅಡುಗೆ ಸೋಡಾ

ಕವಿ ಎಂ. ಆರ್. ಭಗವತಿ ಅವರದ್ದು ಮೂಲತಃ ಚಿಕ್ಕಮಗಳೂರು. ಹಾರುವ ಹಕ್ಕಿಗಳನ್ನು ತಮ್ಮ ಕ್ಯಾಮೆರಾದಲ್ಲಿ ಸೆರೆ ಹಿಡಿಯುವ ಇವರು ಮನದ ಲೆನ್ಸ್‌ನಲ್ಲಿ ಕವಿತೆಯನ್ನೂ ಸೆರೆಹಿಡಿಯಬಲ್ಲರು. ಇವರ ಮೊದಲ ಸಂಕಲನ “ಏಕಾಂತದ ಮಳೆ”ಗೆ “ಬಿಎಂಶ್ರೀ ಸಾಹಿತ್ಯ ಪ್ರಶಸ್ತಿ" ಮತ್ತು ಎರಡನೆಯ ಸಂಕಲನ “ಚಂಚಲ ನಕ್ಷತ್ರಗಳು” “ಹರಿಹರ ಶ್ರೀ" ಪ್ರಶಸ್ತಿಗೆ ಪಾತ್ರವಾಗಿದೆ. ಅವರ ‌‘ದೋಸೆ ಮತ್ತು ಅಡುಗೆ ಸೋಡಾ’ ಕವಿತೆ ಇಲ್ಲಿದೆ.

 

ಒಲೆಯ ಮೇಲಿಟ್ಟ ಹಾಲು, ಉಕ್ಕಿ ಹರಿದಿದೆ

ಪಾತ್ರೆಯ ತಲೆಸವರಿ, ಮುಚ್ಚಳ ಮುಚ್ಚಿದೆ

 

ದೋಸೆಯ ಹಿಟ್ಟು ಉಬ್ಬುಬ್ಬಿ ಹರಿದಿದೆ

ಪಾತ್ರೆಯ ಸುತ್ತೆಲ್ಲ; ಅಡುಗೆಯ ಸೋಡಾ

ಸ್ವಲ್ಪ ಜಾಸ್ತಿಯೇ ಆಯಿತೇನೋ.

 

ಪಾತ್ರೆಯ ಅಂಚನ್ನು ಒರೆಸಿ ಮುಚ್ಚಳ ಮುಚ್ಚಿಟ್ಟೆ.

ಒತ್ತಿದಷ್ಟೂ

ಹಾಗೆ ಒತ್ತಿಟ್ಟರೂ ಸುರಿದೀತು ಕೆಳಗೆ

ನಾಜೂಕಾಗಿ ಸವರಬೇಕು ಹಿಟ್ಟನ್ನು.

 

ಸಾಂಬಾರಿನ ಪಾತ್ರೆಗೆ ಹಿಡಿಸುವಷ್ಟು ಖಾರವನ್ನಷ್ಟೇ ಹಾಕಬೇಕು'

ನಿಮಗೂ ಗೊತ್ತಲ್ಲ

ಇಲ್ಲವಾದರೆ ಸುರಿದೀತು ಹಾಲಿನ ಹಾಗೆ, ಕೆಳಗೆ

ಎಷ್ಟು ಬೇಕೋ ಅಷ್ಟು ಖಾರವನ್ನು ಅರೆದಿದ್ದೇನೆ

ಸಾರು ರುಚಿಯಾದೀತು!

ಸಾರೂ ಉಕ್ಕಬಾರದು ನೋಡಿ.

ಉಬ್ಬಬಾರದು ಕವಿತೆ ಹಾಗೆ!

ಎಂ.ಆರ್. ಭಗವತಿ

ಲೇಖಕಿ ಎಂ.ಆರ್. ಭಗವತಿ ಅವರು ಮೂಲತಃ ಚಿಕ್ಕಮಗಳೂರುದವರು.  ಬೆಂಗಳೂರಿನಲ್ಲಿ ವಾಸವಾಗಿದ್ದಾರೆ. ಬೆಂಗಳೂರು ವಿಶ್ವವಿದ್ಯಾಲಯದಿಂದ ಇಂಗ್ಲಿಷ್ ಸಾಹಿತ್ಯದಲ್ಲಿ ಎಂ.ಎ ಪದವಿ. ಒಂದು ವರ್ಷ ಇಂಗ್ಲಿಷ್ ಉಪನ್ಯಾಸಕಿಯಾಗಿ ಕೆಲಸ. ಈಗ ಕ್ಯಾಮೆರಾ ಹಿಡಿದು ಹಕ್ಕಿಗಳ ಹಿಂದೆ ಬಿದ್ದಿದ್ದು, ದಿನಪತ್ರಿಕೆ ಮತ್ತು ಅಂತರ್ಜಾಲ ಪತ್ರಿಕೆಯಲ್ಲಿ ಹಕ್ಕಿಗಳ ಕುರಿತು ಲೇಖನ ಬರೆಯುತ್ತಿದ್ದಾರೆ.

“ಅತ್ತುಬಿಡೇ ಗೆಳತಿ” (ಸುಧಾಶರ್ಮ ಚವತ್ತಿ, ಮತ್ತು ಸಿ.ಎಸ್. ಸವಿತಾ ಅವರೊಂದಿಗೆ- ಜಂಟಿಯಾಗಿ (1991), ಇವರ ಮೊದಲ (1999)ಸಂಕಲನ “ಏಕಾಂತದ ಮಳೆ”ಗೆ “ಬಿಎಂಶ್ರೀ ಸಾಹಿತ್ಯ ಪ್ರಶಸ್ತಿ” ಮತ್ತು ಎರಡನೆಯ (2005)ಸಂಕಲನ “ಚಂಚಲ ನಕ್ಷತ್ರಗಳು” “ಹರಿಹರ ಶ್ರೀ” ಪ್ರಶಸ್ತಿಗೆ ಪಾತ್ರವಾಗಿದೆ. ಕನ್ನಡದ ಹಲವಾರು ಪತ್ರಿಕೆಗಳಲ್ಲಿ ಇವರ ಅಂಕಣ ಬರೆಹ, ಕವಿತೆ, ಕತೆ, ಪುಸ್ತಕ ಪರಿಚಯ, ವಿಮರ್ಶಾ ಲೇಖನಗಳು ಪ್ರಕಟಗೊಂಡಿವೆ. ಕೆಲವೊಂದು ಕಥಾಸ್ಪರ್ಧೆ ಮತ್ತು ಛಾಯಾಚಿತ್ರ ಸ್ಪರ್ಧೆಗೆ ತೀರ್ಪುಗಾರರಾಗಿಯೂ ಕೆಲಸ ಮಾಡಿದ್ದಾರೆ. “ಅಂತರ್ಜಲ”-ಚಿ.ಶ್ರೀನಿವಾಸರಾಜು ಅಭಿನಂದನಾ ಗ್ರಂಥದ ಸಂಪಾದಕರಲ್ಲಿ ಒಬ್ಬರಾಗಿದ್ದರು. ಚಿಲ್ಡ್ರನ್ಸ್ ಇಂಡಿಯಾದ ಆರನೆಯ ಅಂತಾರಾಷ್ಟ್ರೀಯ ಮಕ್ಕಳ ಸಿನೆಮಾ ಉತ್ಸವ 2010, ಕೆಟಲಾಗಿನ ಸಂಪಾದಕಿಯಾಗಿದ್ದಾರೆ. ಕ್ರೈಸ್ಟ್ ಕಾಲೇಜು ಕನ್ನಡ ಸಂಘದ ಕಾವ್ಯ, ಲೇಖನ ಸ್ಪರ್ದೆ, ಗುಡಿಬಂಡೆ ಪೂರ್ಣಿಮಾ ದತ್ತಿನಿದಿ ಬಹುಮಾನ, ಸಂಚಯ, ಸಂಕ್ರಮಣ ಸಾಹಿತ್ಯ ಸ್ಪರ್ಧೆಗಳಲ್ಲಿ ಬಹುಮಾನಿತರು.  ಆಕಾಶವಾಣಿಯಲ್ಲಿ ಇವರ ಕವಿತೆ, ಲೇಖನ ಪ್ರಸಾರವಾಗಿವೆ. ಬೆಂಗಳೂರು ಮತ್ತು ಮೈಸೂರಿನಲ್ಲಿ  ಇವರ ಹಲವಾರು ಛಾಯಾಚಿತ್ರಗಳು ಪ್ರದರ್ಶಿತಗೊಂಡಿವೆ.

ಕವಿತ್ವದಿಂದ ಛಾಯಾಗ್ರಹಣದತ್ತ ಇಣುಕಿದ ಭಗವತಿ

More About Author