Poem

ದೃಷ್ಟಿ ದಾನ

ಕಣ್ಣು ಜೀವನದ ಬಹು ಮುಖ್ಯ ಅಂಗವಾಗಿದೆ
ಜೀವ ಹೋದ ಮೇಲೆ ಕಣ್ಣು ಮುಚ್ಚುತ್ತದೆ
ನೇತ್ರ ದಾನ ಮಾಡಿದರೆ ಕಣ್ಣು ಮತ್ತೆ ತೆರೆಯುತ್ತದೆ
ಈ ದಾನ ಅಂಧರ ಬಾಳಲ್ಲಿ ಬೆಳಕು ಚಲ್ಲುತ್ತದೆ

ಬೆಂಕಿಯಲ್ಲಿ ಸುಟ್ಟು ಮಣ್ಣಲ್ಲಿ ಹೂತು ನಾಶವಾಗದಿರಲಿ
ಜೀವವಿದ್ದು ಬದುಕು ಕತ್ತಲಾದವರಿಗೆ ದೃಷ್ಟಿ ನೀಡಲಿ
ಆಸರೆಯಾಗಲಿ ದೃಷ್ಟಿ ದಾನ ಕರಾಳ ಬದುಕಿಗೆ ಜೀವ ತುಂಬಲಿ
ದೃಷ್ಟಿ ಜಗದ ಭಾಗ್ಯವಾಗಿದೆ ಕಣ್ಣು ಮತ್ತೊಬ್ಬರಿಗೆ ಕಣ್ಣಾಗಲಿ

ನಡೆದಾಡುವ ಚೇತನವಿದ್ದು ದೃಷ್ಟಿಯಿಲ್ಲದೆ ಕೊರುಗುವರಲ್ಲಿ
ಆಶಾ ಬದುಕು ಕಟ್ಟಿಕೊಡಲಿ ದೃಷ್ಟಿ ದಾನದ ಜಾಗೃತಿಯಾಗಲಿ
ಸಾವಿರಾರು ಜೀವ ಅಂತ್ಯವಾಗುತ್ತವೆ ಹತ್ತಾರು ಜೀವಕ್ಕಾದರು ದೃಷ್ಟಿ ಬರಲಿ
ದೃಷ್ಟಿ ಜಗದ ಸೃಷ್ಟಿ ಪ್ರತಿ ಜೀವಕ್ಕೂ ನಾವು ನೀಡಬೇಕು ದೃಷ್ಟಿ.

ವಸ್ತ್ರ, ವಸ್ತು, ಧನ, ದಾನ್ಯದ ದಾನ ಸವಿದು ಮುಗಿಯುತ್ತವೆ
ದೃಷ್ಟಿ ದಾನ ಉಳಿದು ಬದುಕನ್ನೆ ಉಜ್ವಲಗೊಳಿಸುತ್ತವೆ
ಸತ್ಯ ಜಗತ್ತನ್ನು ನೋಡಲಾಗದೆ ಕತ್ತಲ ಭಾವನೆ ಮೂಡಿಸಿವೆ
ಸತ್ಯ ಚಿತ್ರಣ ನೋಡಲು ಅಂಧರಿಗೆ ಸಹಾಯವಾಗಲಿ ದೃಷ್ಟಿ ದಾನ

ಸಮಾಜದ ನೋವು ನಮ್ಮ ನೋವೆಂದು ಸರ್ವರು ಪರಿಗಣಿಸಿ
ಜೀವಹೋದವರು ಜೀವಂತವಾಗಿರಲು ಬಂಧುಗಳು ಸಹಕರಿಸಿ
ಜಗದ ಅಂಧತ್ವ ತೊಲಗಿಸಲು ನೇತ್ರ ದಾನ ಸ್ವಯಂಕೃತವಾಗಿಸಿ
ಕಣ್ಣಿದ್ದು ಅಂಧರಾಗುವದು ಬೇಡಾ ನೋಡುವ ಹಕ್ಕು ಸರ್ವರಿಗೂ ಕಲ್ಪಿಸಿ

- ಶರೀಫ ಗಂ ಚಿಗಳ್ಳಿ

ವಿಡಿಯೋ
ವಿಡಿಯೋ

ಶರೀಫ ಗಂಗಪ್ಪ ಚಿಗಳ್ಳಿ

ಹುಬ್ಬಳ್ಳಿಯ ಬೆಳಗಲಿ ಮೂಲದವರಾದ ಲೇಖಕ ಶರೀಫ ಗಂಗಪ್ಪ ಚಿಗಳ್ಳಿ, 30-07-1985ರಂದು ಗಂಗಪ್ಪ-ಗದಿಗೇವ್ವ ದಂಪತಿಯ ಮಗನಾಗಿ ಜನಿಸಿದರು. ಧಾರವಾಡ ಜಿಲ್ಲೆಯ ಇಂಗಳಗಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಪಡೆದರು. ಕುಬಿಹಾಳದ ಶ್ರೀ ಜಗ್ಗದಗುರು ಉಜ್ಜಯನಿ ಕಾಲೇಜಿನಲ್ಲಿ ಪಿಯುಸಿ ಹಾಗೂ ಹುಬ್ಬಳ್ಳಿಯ ವಿದ್ಯಾನಗರದ ಕೆ.ಎಸ್.ಎಸ್ ಕಾಲೇಜಿನಲ್ಲಿ ಪದವಿ ಪಡೆದರು. ಮೈಸೂರಿನ ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದಿಂದ ಎಂ.ಎ, ಬಿ.ಇಡಿ ಸ್ನಾತಕೋತ್ತರ ಶಿಕ್ಷಣ ಗಳಿಸಿದರು. ಸದ್ಯ ಬೆಳಗಲಿಯ ಗ್ರಾಮ ಪಂಚಾಯತ್ ಕ್ಲಾರ್ಕ್ ವೃತ್ತಿಯಲ್ಲಿರುವ ಇವರು, ಸಮಾಜ ಸೇವೆ, ಸಾಹಿತ್ಯ, ಸಂಶೋಧನೆ, ಓದಿನ ಹವ್ಯಾಸವನ್ನೂ ಬೆಳೆಸಿಕೊಂಡಿದ್ದಾರೆ. ನಾಡಿನ ವಿವಿಧ ಪತ್ರಿಕೆಗಳಲ್ಲಿ 500 ಹೆಚ್ಚು ಲೇಖನೆ, 100 ಕೂ ಹೆಚ್ಚು ಕವನ, ಕಥೆ, ಇತ್ಯಾದಿ ಬರಹ ಪ್ರಕಟಗೊಂಡಿವೆ. ರಾಜ್ಯ ಮಟ್ಟದ ಕವಿಗೋಷ್ಠಿಯಲ್ಲಿ ತೃತೀಯ ಬಹುಮಾನ, ಕರುನಾಡ ಹಣತೆ ಸಾಹಿತ್ಯ ಸೇವಾ ರತ್ನ ರಾಜ್ಯ ಪ್ರಶಸ್ತಿ,ಅನೇಕ ಜಿಲ್ಲಾ, ತಾಲೂಕು ಮಟ್ಟದ ಮತ್ತು ಹಲವಾರು ಸಂಘ ಸಂಸ್ಥೆಗಳಿಂದ ಪ್ರಶಸ್ತಿ, ಸನ್ಮಾನ ಲಭಿಸಿವೆ. ಸಾಹಿತ್ಯ ಕೃಷಿ:- ವಿಚಾರ ದೀಪ್ತಿ ಪುಸ್ತಕ ( 2021)

More About Author