Story

ಎರಡು ಪತ್ರಗಳು

‘ಉರಿಯ ಪೇಟೆಯಲಿ ಪತಂಗ ಮಾರಾಟ’ ಕಾವ್ಯ ಸಂಕಲನದ ಮೂಲಕ ಕನ್ನಡ ಕಾವ್ಯಲೋಕದಲ್ಲಿ ಗುರುತಿಸಿಕೊಂಡ ಯುವ ಬರಹಗಾರ ರಾಮಕೃಷ್ಣ ಸುಗತ ಅವರ ‘ಎರಡು ಪತ್ರಗಳು’ ಕತೆ ನಿಮ್ಮ ಓದಿಗಾಗಿ.

ಪತ್ರ 2
“ನನ್ನ ಹೆಸರು ರಾಗಿಣಿ. ಊರು ಬೆಂಗಳೂರು. ವಯಸ್ಸು 23. ನಾನು ಬಿ.ಕಾಮ್ ಓದುವಾಗ ಮುರುಳಿ ಎನ್ನುವವರ ಪರಿಚಯವಾಯಿತು. ಅವರು ನಾನು ಓದುತ್ತಿದ್ದ ಕಾಲೇಜಿನಲ್ಲಿಯೇ ಮನಃಶಾಸ್ತ್ರ ವಿಭಾಗದಲ್ಲಿ ಪಿಎಚ್.ಡಿ ಮಾಡುತ್ತಿದ್ದರು. ಮತ್ತು ನಮ್ಮ ಮನೆಯಲ್ಲಿಯೇ ಬಾಡಿಗೆ ಇದ್ದರು. ಜೊತೆಯಲ್ಲಿ ಹುಟ್ಟಲಿಲ್ಲವಾದರೂ ಅವನು ನನಗೆ ಸ್ವಂತ ಅಣ್ಣನೇ ಆಗಿಹೋಗಿದ್ದ. ಅವನು ಹೇಗಿದ್ದ ಎಂದು ಇಲ್ಲಿ ಹೇಳುವುದಿಲ್ಲವಾದರೂ ಅವನು ನಾನು ಕಂಡ ಎಲ್ಲರಿಗಿಂತ ಒಳ್ಳೆಯವನಾಗಿದ್ದ. ಅವನೀಗ ನನ್ನ ಜೊತೆಯಿಲ್ಲ. ಓದು ಮುಗಿಸಿ ತನ್ನ ಊರಿಗೆ ಹೋಗಿದ್ದಾನೆ. ಈಗ ನನ್ನ ಸಮಸ್ಯೆಯೆಂದರೆ, ಅವನಂತದ್ದೇ ಒಂದು ಮಗು ಬೇಕೆಂದು ಬಯಕೆಯಾಗಿತ್ತಿದೆ. ಮತ್ತು ಅದು ಅವನಿಂದಲೇ. ಅವನು ನನ್ನ ಅಣ್ಣ ಎಂಬ ಭಾವನೆ ಬಿಟ್ಟು ಬೇರೆ ಯಾವುದನ್ನೂ ನಾನು ಯೋಚಿಸಿಲ್ಲ. ಅವನೂ ಸಹ. ಅವನಿಂದ ಮಗು ಬೇಕು ಎಂದಕೂಡಲೇ ಅದು ದೈಹಿಕಸಂಪರ್ಕದಿಂದ ಎನ್ನುವುದು ಅರ್ಥವಲ್ಲ. ವಿಜ್ಞಾನವು ಈಗ ಮುಂದುವರೆದಿದೆ. ಕೃತಕ ಗರ್ಭದಾರಣೇ ನನ್ನ ಉದ್ದೇಶ. ಇದಕ್ಕೆ ಅವನು ಒಪ್ಪುತ್ತಾನೋ ಇಲ್ಲವೋ ತಿಳಿಯದು. ನಾನು ಸಧ್ಯದಲ್ಲಿಯೇ ಭಾರತ ಬಿಟ್ಟು ಹೋಗುವವಳಿದ್ದೇನೆ. ಆದರೆ ಇದೊಂದು ಬಯಕೆ ನನ್ನನ್ನು ಸಮಾಧಾನವಾಗಿರಲು ಬಿಡುತ್ತಿಲ್ಲ. ನಿಮ್ಮ ಸಲಹೆಗಾಗಿ ಈ ಪತ್ರವನ್ನು ಬರೆಯುತ್ತಿದ್ದೇನೆ. ದಯವಿಟ್ಟು ಉತ್ತರಿಸಿ. ಹಾಗೆ ಇನ್ನೊಂದು ವಿಷಯ, ಯಾರನ್ನೂ ಮದುವೆಯಾಗಬಾರದೆಂದು ನನ್ನ ಸದ್ಯದ ನಿರ್ಧಾರವಿದೆ.”
* * *
ಅವನು ಯಾರೆಂಬುದು ಪರಾಗನಿಗೆ ಗೊತ್ತಿರಲಿಲ್ಲ. ಅವನ ಹೆಸರೂ ಗೊತ್ತಿಲ್ಲ. ಅವನನ್ನು ನೋಡಿಯೂ ಇಲ್ಲ. ಆದರೂ ದಿನಾಲು ಗ್ರಂಥಾಲಯಕ್ಕೆ ಬಂದು ತನ್ನ ಮನಃಶಾಸ್ತ್ರೀಯ ಕಣ್ಣುಗಳಿಂದ, ತಾನು ಕಲ್ಪಿಸಿಕೊಂಡಿದ್ದ ಅವನನ್ನು ಹುಡುಕುತ್ತಿದ್ದ. ಅನುಮಾನಾಸ್ಪದವಾಗಿ ಕಂಡ ಒಂದಿಬ್ಬರನ್ನು ವಿಚಾರಿಸಿಯೂ ಇದ್ದ. ಸಂದರ್ಶನದ ಹಾಜರಿ ಪುಸ್ತಕದಲ್ಲಿ ಯಾವ ಹೆಸರೆಂಬುದು ಖಚಿತತೆಯಿಲ್ಲದೆ, ಹಳೆಯದೆಲ್ಲದರ ಸಮೇತ ತಿರುವಿ ಹಾಕುತ್ತಿದ್ದ. ಈ ರೀತಿಯ ಹುಡುಕಾಟವು ಹುಚ್ಚುತನದ ವ್ಯಾಪ್ತಿಯಲ್ಲಿ ಬರುತ್ತದೆಂದು ಅವನಿಗೇ ಯಾರೂ ಹೇಳುವುದರ ಅವಶ್ಯಕತೆ ಇರಲಿಲ್ಲ. ಆದರೆ ಅದು ಅನಿವಾರ್ಯವಾಗಿತ್ತು. ಆ ವ್ಯಕ್ತಿಯನ್ನು ಹುಡುಕಲು ಇದ್ದ ಒಂದೇ ಸುಳಿವೆಂದರೆ ಈ ‘ನಗರ ಕೇಂದ್ರ ಗ್ರಂಥಾಲಯ’. ಆ ಅವನು ಉಪಕಾರ ಕಟ್ಟಿಕೊಂಡ ಮತ್ತೊಂದು ವಿಷಯವೆಂದರೆ ಊರಿನ ಹೆಸರನ್ನು ಹೇಳಿದ್ದು.

ಆಸ್ಪತ್ರೆಯಲ್ಲಿ ತನ್ನ ಬಿಡುವಿಲ್ಲದ ಕೆಲಸಗಳ ಮಧ್ಯೆಯೂ, ಈ ಹೆಚ್ಚಿನ ಹೊರೆಯನ್ನು ಪರಾಗನೇ ಹೊತ್ತುಕೊಂಡಿದ್ದ. ಆ ವ್ಯಕ್ತಿಯನ್ನು ತಾನು ಅಷ್ಟು ವಯಕ್ತಿಕವಾಗಿ ಭಾವಿಸಿರುವುದಾದರೂ ಯಾಕೆಂಬುದು ಸ್ವತಃ ಅವನಿಗೂ ಗೊತ್ತಿರಲಿಲ್ಲ. ಬೇರೆ ಯಾರೋ ತನ್ನನ್ನು ನಿಯಂತ್ರಿಸುತ್ತಿರುವರು ಎಂಬಂತೆ ಅವನನ್ನು ಹುಡುಕಲೇಬೇಕು ಎಂಬುದಾಗಿ ಮಾಡಿಕೊಂಡಿದ್ದ. ಅವನನ್ನು ಭೇಟಿ ಮಾಡಬೇಕಿತ್ತಷ್ಟೆ. ಅವನನ್ನು ವಾಸಿ ಮಾಡಬೇಕಿತ್ತು ಕೂಡ.

* * *
ಪತ್ರ 1
“ನಮಸ್ತೆ,
ಪ್ರತಿವಾರ ನಿಮ್ಮ ಅಂಕಣವನ್ನು ತಪ್ಪದೇ ಓದುತ್ತೇನೆ. ಅವರವರ ಮನಸ್ಸಿನ ಸಮಸ್ಯೆಗಳಿಗೆ ನೀವು ಹೇಳುವ ಸಮಾಧಾನಗಳು ನಿಜಕ್ಕೂ ನನಗೆ ಮೆಚ್ಚುಗೆಯೆನಿಸುತ್ತವೆ. ನಾನೂ ಒಂದು ದಿನ ಹೀಗೆ ನಿಮ್ಮಲ್ಲಿ ಪ್ರಶ್ನೆ ಕೇಳಬೇಕಾಗಿ ಬರುತ್ತದೆಂದು ಎಣಿಸಿರಲಿಲ್ಲ. ಇದು ಶುರುವಾಗಿ ಸುಮಾರು ದಿನಗಳಾಯಿತು. ಕೆಲವು ತಿಂಗಳುಗಳ ಹಿಂದೆ ಸಂಬಂಧಿಕರ ಮದುವೆಗೆಂದು ನನ್ನ ಸ್ವಂತ ಊರಿಗೆ ಹೋಗಿದ್ದೆ. ಅದೊಂದು ಹಳ್ಳಿ. ಮದುವೆಯಲ್ಲಿ ಹುಡುಗಿಯೊಬ್ಬಳು ಚಂದವಾಗಿ ಕಂಡಳು. ಆಕೆಯೂ ನನ್ನ ಗಮನಿಸಿದಂತೆ ಅನಿಸಿತು. ಆ ನಂತರ ಅದು ಅಷ್ಟಕ್ಕೇ ಮುಗಿಯಿತು. ಆಮೇಲೆ ಮತ್ತೆ ಆ ಹುಡುಗಿಯನ್ನು ನಮ್ಮ ಕಾಲೇಜಿನಲ್ಲಿ ನೋಡಿದೆ. ನನ್ನ ಕೋರ್ಸು ಆಗಲೇ ಮುಗಿದಿತ್ತಾದರಿಂದ ಆ ಕಾಲೇಜಿಗೆ ಯಾವಾಗಲೂ ಹೋಗುತ್ತಿರಲಿಲ್ಲ. ನಾನು ದಿನಾಲು ಹೋಗುತ್ತಿದ್ದ ಕೇಂದ್ರಗ್ರಂಥಾಲಯಕ್ಕೇ ಆಕೆಯೂ ಬರತೊಡಗಿದಳು. ಇಬ್ಬರೂ ಪ್ರೀತಿಸಲು ಶುರುವಾದಂತ್ತಿತ್ತು. ಇಷ್ಟೇ ಆದರೆ ಪರವಾಯಿದ್ದಿಲ್ಲ. ಆ ಸಲುಗೆ ನಾವಿಬ್ಬರೂ ಒಮ್ಮೆ ತಬ್ಬಿಕೊಳ್ಳುವ ಮಟ್ಟಕ್ಕೂ ಹೋಗಿತ್ತು. ಇದು ಇಲ್ಲಿಯವರೆಗಿನ ಕತೆಯಾಯಿತು. ನಿಜವಾದ ಸಮಸ್ಯೆಯೆಂದರೆ ದೂರದ ಸಂಬಂಧಿಯಾದ ಆಕೆಯು ನನ್ನ ತಂಗಿಯಾಗುತ್ತಾಳೆಂಬುದು. ಈ ವಿಷಯ ತಿಳಿದಾಗಿನಿಂದ ನಾನು ಬದುಕಲು ಅನರ್ಹನೆಂದೇ ಭಾವಿಸುತ್ತಿದ್ದೇನೆ. ಇದರಿಂದ ಹೊರಬರದ ಹೊರತು ನಾನು ಬದುಕುವುದಿಲ್ಲವೇನೋ. ದಯವಿಟ್ಟು ಪರಿಹಾರ ತಿಳಿಸಿ”.
ಹೆಸರು ಬೇಡ, ಊರು ಬಳ್ಳಾರಿ

* * *
ಯಾರು ಯಾರೋ, ಯಾವು ಯಾವುದೋ ಸಮಸ್ಯೆಗಳನ್ನು ಹೇಳಿಕೊಂಡು ಬರೆದಿದ್ದ ಪತ್ರಗಳ ರಾಶಿಯನ್ನು ಪರಾಗನು ಟೇಬಲ್ ಮೇಲಿಟ್ಟುಕೊಂಡು ಕೂತಿದ್ದ. ಟೇಬಲ್‍ನ ಇನ್ನೊಂದು ಕಡೆ ಇಟ್ಟಿದ್ದ ಇನ್ನೆರೆಡು ಪತ್ರಗಳು, ಈ ದೊಡ್ಡ ರಾಶಿಗಿಂತಲೂ ತೂಕವಾಗಿ ಅವನಿಗೆ ಕಾಣುತ್ತಿದ್ದವು. ಈ ವಾರ ಪತ್ರಿಕೆಗೆ ಕಳಿಸಬೇಕಿದ್ದ ಕೆಲವು ಪತ್ರಗಳನ್ನೂ ಅವುಗಳಿಗೆ ಉತ್ತರಗಳನ್ನೂ ಆಗಲೇ ಪತ್ರಿಕೆಯವರಿಗೆ ಮೇಲ್ ಮಾಡಿದ್ದ. ಆದರೆ ಆ ಎರಡು ಪತ್ರಗಳನ್ನು ಏನು ಮಾಡಬೇಕೆಂಬುದೇ ಅವನ ದೊಡ್ಡ ಸಮಸ್ಯೆಯಾಗಿತ್ತು. ಮೊದಲ ಪತ್ರದವನನ್ನು ಹುಡುಕಿ ಹುಡುಕಿ ಸೋತಿದ್ದ ಪರಾಗನ ಮೇಲೆ ಬೆಂಗಳೂರಿನಿಂದ ಬಂದ ಆ ಎರಡನೇ ಪತ್ರವು ಮತ್ತೊಂದು ದಾಳಿ ಮಾಡಿತ್ತು. ಎರಡೂ ಒಂದೇ ಸಮಸ್ಯೆಯಂತೆ ಕಂಡರೂ ಮೊದಲನೆಯದು ಸಮಸ್ಯೆಯಿಂದ ಹೊರಬರುವಂತೆ, ಸಮಸ್ಯೆಯೊಳಗೆ ಪ್ರವೇಶಿಸುವಂತೆ ಅವನಿಗೆ ಭಾಸವಾಗುತ್ತಿತ್ತು.

ಹೀಗೆ ಯೋಚಿಸುತ್ತಿರುವಾಗಲೇ ವಾಟ್ಸಾಪ್‍ನ ರಿಂಗಣಸದ್ದು ಕೇಳಿಸಿತು. ಯಾವುದೋ ಹೊಸ ನಂಬರಿನಿಂದ ಬಂದ ಮೆಸೇಜ್ ಅದು. ಅದರಲ್ಲಿ “ನನ್ನ ಹೆಸರು ಪಣೀಂದ್ರಸ್ವಾಮಿ. ನನ್ನ ಸಮಸ್ಯೆಯ ಕುರಿತು ನಿಮಗೆ ಹೆಸರಿಲ್ಲದ ಪತ್ರ ಬರೆದಿದ್ದೆ. ನಿಮಗೆ ಆ ಪತ್ರ ಮುಟ್ಟಿಲ್ಲವೇನೋ. ನಿಮ್ಮ ಉತ್ತರಕ್ಕಾಗಿ ಕಾದು ಈಗ ಫೋನ್‍ನಲ್ಲಿಯೇ ಬರೆಯುತ್ತಿದ್ದೇನೆ” ಎಂದಿತ್ತು. ಅವನ ವಾಟ್ಸಾಪ್ ಡಿಪಿಯನ್ನು ಪರಗನು ಸೇವ್ ಮಾಡಿಕೊಂಡ. ಕೆಲಹೊತ್ತು ಮಾತುಕತೆಗಳು ನಡೆದು ಮುಗಿದಾಗ, ನಾಳೆ ಬೆಳಗ್ಗೆ ಇಬ್ಬರೂ ‘ಕಾಗೆ ಪಾರ್ಕ್’ನಲ್ಲಿ ಭೇಟಿಯಾಗುವುದೆಂದು ತೀರ್ಮಾನವಾಯಿತು.

* * *
ರಾಗಿಣಿ ಮತ್ತು ಮುರುಳಿ ಎನ್ನುವ ಹೆಸರುಗಳನ್ನು ಬಿಟ್ಟು, ಉಳಿದೆಲ್ಲ ಕತೆಯೂ ತನ್ನ ಮತ್ತು ಕಂದಿಲೆಯದೇ ಆಗಿತ್ತು. ಪತ್ರದಲ್ಲಿಯ ವಿವರಗಳೆಲ್ಲವೂ ತದ್ವತ್ತಾಗಿಯೇ ಹೋಲಿಕೆಯಲ್ಲಿದ್ದವು. ಆ ಪತ್ರ ಕಂದಿಲೆಯದೇ ಎಂದು ನಿಶ್ಚಯಿಸುವುದು ಮಾತ್ರವೇ ಬಾಕಿ ಉಳಿದಿತ್ತು. ಅವಳ ಹುಡುಗಾಟಕ್ಕೆ ಸಿಟ್ಟೂ ಬಂತು. ತನ್ನನ್ನು ಪರೀಕ್ಷಿಸಲೆಂದೇ ಅವಳು ಹೀಗೆ ಮಾಡಿದ್ದಾಳೆಂದು ಪರಾಗನು ಯೋಚಿಸಿದ. ಆದರೂ ಕೋಟಿಗಳ ಸಂಖ್ಯೆಯ ಜನರು ಬೆಂಗಳೂರಿನಲ್ಲಿ ಇರುವಾಗ, ತಾನೊಬ್ಬನು ಮಾತ್ರವೇ ಒಳ್ಳೆಯವನಿರಬೇಕೆಂಬ ನಿಯಮವಿಲ್ಲವಲ್ಲ ಎಂದ ಯೋಚನೆಯೂ ಅವನಲ್ಲಿತ್ತು. ಮನಃಶಾಸ್ತ್ರದಲ್ಲಿ ಪಿಎಚ್.ಡಿ ಮಾಡಿದವರು ಎಷ್ಟೋ ಮಂದಿ ಇದ್ದಾರೆ. ಅದರಲ್ಲಿ ಕೆಲವರಾದರೂ ಬೇರೆ ಊರಿನಿಂದ ಬಂದು, ಬೆಂಗಳೂರಿನಲ್ಲಿ ಬಾಡಿಗೆ ಮನೆಯಲ್ಲಿ ವಾಸವಿರಬಹುದು. ಒಂದೇ ಮನೆಯಲ್ಲಿದ್ದ ಮೇಲೆ ಆ ಮನೆಯವರೊಂದಿಗೆ ಆ ಹುಡಿಗಿಯೂ ಅವನಿಗೆ ಪರಿಚಯವಾಗಿರಬಹುದು. ಹೀಗೆ ಪರಿಚಯವಾದವರ ಸಂಬಂಧ ಸ್ವಂತ ಅಣ್ಣ-ತಂಗಿಗಿಂತಲೂ ಗಾಢವಾಗಿಯೇ ಬೆಳೆದಿರಬೇಕು. ಎಲ್ಲದಕ್ಕೂ ನಂಬಿಕೆ ತಾನೇ ಮುಖ್ಯ. ಅವರ ಸಂಬಂಧಗಳು ಗಾಡವಿದ್ದ ಮಾತ್ರಕ್ಕೆ ಅವನ ಕೋರ್ಸು ಮುಗಿಯಬಾರದೆಂಬ ಕಟ್ಟಳೆಯೇನೂ ಇಲ್ಲವಷ್ಟೆ. ಅವನಿಗೂ ಸ್ವಂತ ಊರು, ತಂದೆ ತಾಯಿ, ಜವಬ್ದಾರಿ ಇರುತ್ತದೆ. ಆ ಹುಡುಗನ ಊರೊಂದು ತಿಳಿದಿದ್ದರೆ, ಅದು ತಾನಲ್ಲವೆಂದು ನಿಶ್ಚಿಂತೆಯಿಂದ ಇರಬಹುದಿತ್ತೆಂದು ಪರಾಗನು ಯೋಚಿಸಿದ.

ಆ ಪತ್ರಗಳಿಗೆ ಪರಿಹಾರ ಹುಡುಕುವುದು ಒಂದು ಕಡೆಗಿನ ಸಮಸ್ಯೆಯಾದರೆ, ಅವುಗಳನ್ನು ಪತ್ರಿಕಾ ಪ್ರಕಟಣೆಗೆ ಕಳುಹಿಸಬೇಕೋ ಬೇಡವೋ ಎಂಬುದು ಮತ್ತೊಂದು ಮಗ್ಗುಲಿನಲ್ಲಿ ಕೂತಿತ್ತು. ಎರಡೂ ಸಮಸ್ಯೆಗಳ ಮೂಲವು ಒಂದರಲ್ಲಿಯೇ ಇದ್ದರೂ, ಪರಿಹಾರವನ್ನು ಮಾತ್ರ ಬೇರೆ ಬೇರೆಯಾಗಿಯೇ ಹೇಳಬೇಕಿತ್ತು. ಪಣೀಂದ್ರಸ್ವಾಮಿಗೆ ನೆಮ್ಮದಿಯನ್ನು ಕೊಡುವುದರ ಜೊತೆಗೆ, ಆ ಇನ್ನೊಂದು ಪತ್ರದಲ್ಲಿಯ ಹುಡುಗಿಯ ಅಣ್ಣ ತಾನಾಗಿರದಿದ್ದರೆ ಸಾಕು ಎಂಬ ನೆಮ್ಮದಿಯನ್ನೂ ಸಹ ಅವನು ಕೊಳ್ಳಬೇಕಿತ್ತು.

* * *
ಪರಾಗ - ನಿನಗೆ ತಮಾಷೆ ಮಾಡೋಕೆ ಬೇರೆ ವಿಷಯ ನಾನೇ ಕೊಡುತ್ತಿದ್ದೆನಲ್ಲಾ ಕೇಳಿದ್ದರೆ
ಕಂದಿಲೆ - ಯಾಕೇ, ಏನಾಯ್ತು

- ಅದು ನೀನೆ ಬರ್ದಿದಿಯಾ ಅಂತ ಗೊತ್ತು
- ಅದರಲ್ಲಿ ತಮಾಷೆ ಏನಿದೆ, ಅದು ನಿಜಾನೆ. ನಾನು ಮುಂದಿನವಾರ ಭಾರತ ಬಿಟ್ಟು ಹೋಗ್ತಿದಿನಿ
- ಅದಲ್ಲ
- ಒಬ್ಳೆ ಹೇಗ್ ಹೋಗ್ಲಿ, ನಾನ್ ಮತ್ತೆ ವಾಪಾಸ್ ಬರಲ್ಲ
- ಒಬ್ಳೆ ಹೋಗು ಅಂತ ಯಾರ್ ಅಂದ್ರು. ಮನೇಲ್ ಯಾರ್ನಾದ್ರೂ ಕರ್ಕೊಂಡ್ ಹೋಗು
- ನಿನ್ನ ಮುಂದೆ ಆ ವಿಷಯಾನ ಹೇಗ್ ಮಾತಾಡ್ಬೇಕು ಅಂತ ಗೊತ್ತಾಗ್ಲಿಲ್ಲ. ಅದಕ್ಕೆ ನೀನು ಏನು ಉತ್ತರ ಕೋಡ್ತಿಯೋ ಅದನ್ನ ನೋಡ್ಕೊಂಡು ಆಮೇಲೆ ಮುಂದಿನದು ಯೋಚ್ನೇ ಮಾಡೋಣ ಅಂತ ಅನ್ಕೊಂಡಿದ್ದೆ.
- ಅದಕ್ಕೆ ಉತ್ತರ ಇಲ್ಲ. ಅದಕ್ಕೆ ಉತ್ತರ ಕೊಡುವಂತ ಅವಶ್ಯಕತೆ ಏನಿದೆ ಇವಾಗ. ನೀನು ದೇಶ ಬಿಟ್ಟು ಹೋಗ್ತಿರೋದಾದ್ರೂ ಯಾಕೆ, ಎಲ್ಲಿಗ್ ಹೋಗ್ತಿದಿಯಾ
- ನೀನು ಬೆಂಗಳೂರಿನಿಂದ ಹೋದಮೇಲೆ ಇಲ್ಲಿ ಏನೇನೋ ನಡೀತು. ನಂಗೆ ನಮ್ ಮನೆಯವ್ರು ಯಾರೂ ಬೇಡ. ನೀನೂ ಬೇಡ. ಅದೊಂದು ಕೊನೆ ಆಸೆ ಇದೆ. ನಡೆಸ್ಕೊಡು. ಏನ್ ನಡೀತು, ಎಲ್ಲಿಗ್ ಹೋಗ್ತಿದಿನಿ ಎಲ್ಲಾ ಹೇಳ್ತೀನಿ
- ಅಷ್ಟು ಸುಲಭ ಇದ್ದಿದ್ರೆ ಅದಕ್ಕೆ ಉತ್ತರ ಅವತ್ತೇ ಹೇಳ್ತಿದ್ದೆ. ಸಮಾಜ ನಂಬಿಕೊಂಡು ಬಂದಿರೋ ನೈತಿಕತೇಗೆ ಸವಾಲು ಹಾಕೋ ಪ್ರಶ್ನೆ ಅದು. ಅದಕ್ ಉತ್ತರ ನನ್ ಹತ್ರ ಇಲ್ಲ. ನಂಗೆ ಗೊತ್ತಿಲ್ಲ. ನಾನ್ ಇಷ್ಟರಲ್ಲೇ ಬೆಂಗ್ಳೂರಿಗೆ ಬರ್ತಿದಿನಿ. ಅಲ್ಲಿವರ್ಗೂ ಅದನ್ನ ಅಲ್ಲೇ ಬಿಡು. ನೋಡೋಣ
- ನಾನೇನು ಅದನ್ನ ಊರುತುಂಬಾ ಪ್ರಚಾರ ಮಾಡ್ತೀನಾ, ಸಮಾಜಾನ ಹಾಳು ಮಾಡೋಕೆ. ನಾನು ಜಾಸ್ತಿ ಮಾತಾಡೋ ಪರೀಸ್ತಿತೀಲಿ ಇಲ್ಲ. ನಿನ್ನಿಂದ ಆಗತ್ತಾ ಇಲ್ವಾ ಹೇಳು. ಬೆಂಗ್ಳೂರಿಗೆ ಬರ್ಬೇಡ. ನಾನ್ ಸಿಗಲ್ಲ. ಮುಂದಿನ ಭಾನುವಾರ ಹೋಗ್ತಾ ಇದೀನಿ. ಅಷ್ಟರಲ್ಲಿ ನೀನ್ ಅದನ್ನ ಬಗೆ ಹರ್ಸು
- ನಮ್ಮಿಬ್ಬರದು ಅಣ್ಣ ತಂಗಿ ಸಂಬಂಧ ಅನ್ನೋದು ನಿನಗೆ ಮರ್ತೋಗಿದೆಯಾ
ನೀನೇನು ನನ್ನ ಒಡಹುಟ್ಟಿದ ಅಣ್ಣ ಅಲ್ವಲ್ಲಾ ಎನ್ನುವ ಮಾತು ಇನ್ನೇನು ಹೊರಬರುತ್ತಿದ್ದಾದರೂ, ಅದನ್ನು ತಡೆದು, ಮುಂದೇನೂ ಮಾತನಾಡಲು ಆಗದೆ ಅವಳು ಫೋನ್ ಕಟ್ ಮಾಡಿದಳು.

* * *
ಪರಾಗನು ಇನ್ನೂ ಬಾಕಿಯಿರುವ ಪಟ್ಟಿಯ ಮೇಲೊಮ್ಮೆ ಕಣ್ಣಾಡಿಸಿದ. ತುಂಬಾ ದೊಡ್ಡದಿರುವಂತೆ ಕಂಡಿತು. ಇವರನ್ನೆಲ್ಲಾ ಮುಗಿಸುವುದರಲ್ಲಿ ಸಾಯಾಂಕಾಲದ ಮೇಲೆಯೇ ಆಗುತ್ತದೆಂದು ಅವನಿಗೆ ಗೊತ್ತಾಯಿತು. ಪಣೀಂದ್ರ ಇಷ್ಟೊತ್ತಿಗಾಗಲೇ ಬಂದು ಕಾಯುತ್ತಿರಬಹುದು ಎಂದು ಅನ್ನಿಸಿತು. ಅವನಿಗೆ ಹೇಳಬೇಕಾಗಿದ್ದ ಪರಿಹಾರದ ಮಾತುಗಳು ಇನ್ನೂ ತನ್ನಲ್ಲಿ ಸಿದ್ಧವಿಲ್ಲದಿದ್ದರೂ, ಅವನನ್ನು ಭೇಟಿಯಾಗುವ ಕೆಲಸವನ್ನಾದರೂ ಮುಗಿಸಬೇಕಿತ್ತು. ಇವತ್ತು ಕೇವಲ ಪರಿಚಯದ ಮಾತುಗಳನ್ನಾಡಿದರೆ ಸಾಕು, ಮುಂದಿನ ಭೇಟಿಗಳಲ್ಲಿ ಯಾವುದಾದರೂ ದಾರಿಗಳು ತಮ್ಮನ್ನು ಭೇಟಿಯಾಗಬಹುದು ಎನ್ನುವ ನಂಬಿಕೆ ಅವನದು. ಸುಮ್ಮನೆ ಅವನಿಗೆ ಆಸ್ಪತ್ರೆಗೆ ಬಂದುಬಿಡೆಂದು ಹೇಳಿದ್ದರೆ ಚೆನ್ನಾಗಿತ್ತೆಂದು ಅನ್ನಿಸಿತು. ಹೇಗೂ ನಾನು ಮಾಡುವುದು ಅದೇ ಕೆಲಸ ತಾನೇ. ಹೆಚ್ಚೆಂದರೆ ಈಗಿರುವ ಪಟ್ಟಿಯಲ್ಲಿ ಇನ್ನೊಂದು ಹೆಸರು ಸೇರುತ್ತಿತ್ತು ಎಂದುಕೊಂಡ. ಆದರೆ ವಾಸ್ತವವಾಗಿ ಪಣೀಂದ್ರನದು ಪಟ್ಟಿಯಲ್ಲಿನ ಇನ್ನೊಂದು ಹೆಸರು ಆಗಿರಲಿಲ್ಲ. ಕಂದಿಲೆಯೊಡ್ಡಿದ್ದ ತನ್ನದೇ ಸಮಸ್ಯೆಯ ಇನ್ನೊಂದು ಮುಖ ಪಣೀಂದ್ರನಾಗಿದ್ದ. ಒಂದಕ್ಕೆ ಉತ್ತರಿಸಿ ಮತ್ತೊಂದನ್ನು ಬಿಡುವಂತಿರಲಿಲ್ಲ. ಯಾರಿಗೆ ಗೊತ್ತು ಎರಡಕ್ಕೂ ಒಂದೇ ಉತ್ತರ ಇದ್ದರೂ ಇರಬಹುದು.

ಪರಾಗನು ಬೆಂಗಳೂರಿನಿಂದ ಓದು ಮುಗಿಸಿಕೊಂಡು ಬಂದಾಗ, ಅವನು ಅಂದುಕೊಂಡಿದ್ದ ತನ್ನೂರಿನಲ್ಲಿಯ ವಿಶ್ರಾಂತಿ ದಿನಗಳನ್ನು ಮುಗಿಸುವ ಮುನ್ನವೇ ಬಳ್ಳಾರಿ ನಗರದಲ್ಲಿ ಅವನಿಗೆ ಕೆಲಸ ಸಿಕ್ಕಿತ್ತು. ಸಣ್ಣ ಆಸ್ಪತ್ರೆ ಮತ್ತು ಸಣ್ಣ ಸಂಬಳವಾದರೂ ಮೊದಲು ಬಂದ ಕೆಲಸ ಬಿಡಬಾರದೆಂದು ಸೇರಿಕೊಂಡ. ರೋಗಿಗಳನ್ನು ಅವರ ಮಾನಸಿಕ ಸಂದರ್ಶನದ ಮೂಲಕ, ಅವರ ರೋಗದ ಒಳಗನ್ನು ಬಿಡಿಸುವ ಕೆಲಸ ಅವನದು. ಆರಂಭದಲ್ಲಿ ಇಷ್ಟು ಮಟ್ಟದ ಜನ ಬರುತ್ತಲೇ ಇರಲಿಲ್ಲ. ಅವನ ಕಾರ್ಯದಕ್ಷತೆ ಮತ್ತು ಶ್ರಮದೊಂದಿಗೆ ಪುಣ್ಯವೂ ಸೇರಿ ತುಂಬಾ ಬೇಗವಾಗಿ ಬಳ್ಳಾರಿ ನಗರದಲ್ಲೇ ಅವನು ಪ್ರಸಿದ್ಧಿಯಾದ. ಪ್ರಖ್ಯಾತ ಪತ್ರಿಕೆಯೊಂದರ ವಾರದ ಅಂಕಣದಲ್ಲಿಯೂ ಅವನಿಗೆ ಜಾಗ ಸಿಕ್ಕಿತು. ಎಷ್ಟೋ ದೊಡ್ಡ ದೊಡ್ಡ ಆಸ್ಪತ್ರೆಗಳು, ದೊಡ್ಡ ದೊಡ್ಡಮೊತ್ತದೊಂದಿಗೆ ಅವನನ್ನು ತಮ್ಮಲ್ಲಿಗೆ ಕರೆದವಾದರೂ, ಯಾಕೋ ಈ ಆಸ್ಪತ್ರೆಯನ್ನು ಬಿಟ್ಟು ಹೋಗಲು ಅವನಿಗೆ ಮನಸ್ಸಾಗಿರಲಿಲ್ಲ. ಇದಕ್ಕೆ ಪ್ರತ್ಯುಪಕಾರ ಎನ್ನುವಂತೆ, ಆ ಸಣ್ಣ ಆಸ್ಪತ್ರೆಯೇ ಅವನಿಗೆ ಕಾಲಕಾಲಕ್ಕೆ ಸಂಬಳ ಏರಿಸುತ್ತಾ ಬಂದಿತ್ತು.

* * *
ಜನಸಂದಣಿಯನ್ನು ದಾಟಿ, ಪಣೀಂದ್ರನೆಡೆಗೆ ಸಾಗುವುದು ಇನ್ನು ಅಸಾಧ್ಯವೆಂದು ಅವನಿಗೆ ಗೊತ್ತಾಯಿತು. ಈಗ ಅವನು ಬಳಸಿಕೊಳ್ಳಬೇಕಾದ ಅವಕಾಶವೆಂದರೆ, ತನ್ನ ಊಟದ ಸಮಯವನ್ನು ‘ಕಾಗೆ ಪಾರ್ಕ್’ಗೆ ಮೀಸಲಿಡುವುದು. ಬೆಳಗಿನ ತಿಂಡಿಯನ್ನೂ ಸರಿಯಾಗಿ ಕಾಣದ ಅವನ ಹೊಟ್ಟೆ, ಈಗ ಮತ್ತೊಂದು ತ್ಯಾಗಕ್ಕೆ ಸಿದ್ಧವಾಗಬೇಕಿತ್ತು. ಇತ್ತ ರೋಗಿಗಳ ಸಂದರ್ಶನವೂ ಎಂದಿನಂತೆ ಮನಸ್ಸಿಗೊಪ್ಪುವಂತೆ ನಡೆಯುತ್ತಿಲ್ಲ ಎನ್ನುವುದು ಅವನ ಗಮನಕ್ಕೆ ಬಂದಿತ್ತು. ಹೆಚ್ಚಿರುವ ಜನಸಂಖ್ಯೆಯೂ ಇದಕ್ಕೆ ಸ್ವಲ್ಪಮಟ್ಟಿನ ಕಾರಣವಾಗಿತ್ತು.
ಪರಾಗನ ಮನಸ್ಸು ಅಡಿಗೆ ಮಾಡಿಕೊಳ್ಳುವಷ್ಟು ಸಮಾಧಾನವಿಲ್ಲವಾಗಿ, ಹೊರಗಡೆಯೇ ಊಟ ಮಾಡಿ ಬಂದಿದ್ದ. ಇವತ್ತು ಪಣೀಂದ್ರನನ್ನು ಭೇಟಿ ಮಾಡಲಿಕ್ಕೆ ಸಾಧ್ಯವಾಗದಿದ್ದುದೇ ಅವನ ಅಸಮಧಾನಕ್ಕೆ ಕಾರಣವಾಗಿತ್ತು. ಮಧ್ಯಾಹ್ನ ಊಟದ ಸಮಯದಲ್ಲಿ ಪರಾಗನು ಪಾರ್ಕ್‍ಗೆ ಹೋಗಿದ್ದನಾದರೂ, ಅಲ್ಲಿ ಪಣೀಂದ್ರ ಇರಲಿಲ್ಲ. ಅವನು ತನಗಾಗಿ ಕಾದು, ನಿರಾಶೆಯಿಂದ ಹಿಂದಿರುಗಿರಬಹುದಾದ ಫಲಿತಾಂಶವನ್ನೇ ಮನಸ್ಸು ಕಲ್ಪಿಸುತ್ತಿತ್ತು. ಅವನು ಬಂದು ತನಗಾಗಿ ಕಾದಿದ್ದರೆ ಒಂದು ಫೋನ್ ಮಾಡಬಹುದಿತ್ತಲ್ಲ ಎಂಬ ಯೋಚನೆ ಬಂತು.

ಹೀಗೆ ಯೋಚಿಸುತ್ತಿರುವಾಗಲೇ ಪಣೀಂದ್ರನಿಂದ ಮೇಸೇಜ್ ಬಂತು. “ನನಗೆ ಇಂದು ಬರಲಾಗಲಿಲ್ಲ. ಕ್ಷಮಿಸಿ. ತಾವು ನನಗಾಗಿ ಕಾದು ಹಿಂದಿರುಗಿರಬಹುದೆಂದು ನಾನು ಭಾವಿಸುತ್ತೇನೆ. ನಿಮ್ಮೊಡನೆ ಹೇಗೆ ಮಾತನಾಡಬೇಕೆಂಬ ಭಯದಿಂದ ಬರಲಾಗಲಿಲ್ಲ” ಎಂದು ಕಳಿಸಿದ್ದ. ಅವನು ಮಾತುಗಳಿಂದ ಪರಾಗನಿಗೆ ಸ್ವಲ್ಪ ಸಮಾಧಾನವಾಯಿತಾದರೂ, ನಿರಾಶೆಯನ್ನು ಬಿಡಲಾಗಲಿಲ್ಲ. “ರಜಾ ದಿನವಾದರೆ ಮಾತಾಡಲಿಕ್ಕೆ ಹೆಚ್ಚು ಸಮಯ ಸಿಗುತ್ತದೆ. ಮುಂದಿನ ಭಾನುವಾರ ಭೇಟಿಯಾಗೋಣ” ಎಂದು ಇವನು ಕಳಿಸಿದ. ಆ ಕಡೆಯಿಂದ ಓಕೆ ಎನ್ನುವ ಸ್ಮೈಲಿಯೊಂದು ಬಂತು. ಮರುಕ್ಷಣವೇ ಕಂದಿಲೆಯ ನೆನಪಾಗಿ, ಭಾನುವಾರ ಬೇಡವೆಂದು ಇವನು ಮತ್ತೆ ಸಂದೇಶ ಕಳಿಸಿದ. ಅದಾಗಲೇ ಅವನು ಫೋನ್ ಆಫ್ ಮಾಡಿಯಾಗಿತ್ತು. ಮರುದಿನವೂ ಅವನ ಫೋನ್ ಆನ್ ಆಗದಿರುವುದನ್ನು ಕಂಡು, ಮತ್ತೆ ಅದು ಚಾಲೂವಾಗುವುದು ಭಾನುವಾರವೇ ಎಂದು ಇವನಿಗೆ ಅನ್ನಿಸಿತು.

* * *
ಕಂದಿಲೆಯೇ ಮತ್ತೆ ಕರೆ ಮಾಡಬಹುದೆಂದು ಪರಾಗನು ಕಾಯ್ದನಾದರೂ, ಅವಳಿಂದ ಯಾವ ಪ್ರತಿಕ್ರಿಯೆಯೂ ಬರಲಿಲ್ಲ. ತಾನೇ ಕರೆಮಾಡಬೇಕೆಂದು ಅನ್ನಿಸಿತಾದರೂ, ಅವಳ ಪ್ರಶ್ನೆಗೆ ಉತ್ತರಿಸಬೇಕಾದ ಸಂಕಷ್ಟ ನೆನೆದು ಸುಮ್ಮನಾದ. ಅವಳ ಮುಂದಿನ ಹೆಜ್ಜೆಯ ಬಗ್ಗೆಯೇ ಇವನಿಗೆಯೋಚನೆಯಾಗಿತ್ತು. ಅವರ ಮನೆಗಾದರೂ ಫೋನ್ ಮಾಡಿ ಎಲ್ಲವನ್ನೂ ವಿಚಾರಿಸಬೇಕು ಅನ್ನಿಸಿದರೂ ಯಾಕೋ ಬೇಡವೆನಿಸಿತು.

ಅಷ್ಟು ಮೃದುವಾದ ಹುಡುಗಿ ಇಷ್ಟು ಕಠಿಣವಾದ ನಿರ್ಧಾರಕ್ಕೆ ಬರಲು ಕಾರಣವಾಗಿರಬಹುದಾದ ಘಟನೆಯೇ ಅವನ ಕಲ್ಪನೆಗೆ ಸಿಗಲಿಲ್ಲ. ಅಷ್ಟು ದೊಡ್ಡ ನಗರದಲ್ಲಿ ಅಷ್ಟು ತನಗೆ ಹತ್ತಿರವಾದವಳು ಅವಳೊಬ್ಬಳೇ ಅಲ್ಲವೇ ಎಂಬುದು ನೆನಪಾಯಿತು. ಸ್ವಂತ ತಂಗಿಯಿದ್ದರೂ ಅಷ್ಟೊಂದು ಹಚ್ಚಿಕೊಳ್ಳುತ್ತಿದ್ದಳೋ ಇಲ್ಲವೋ. ನಾನು ಬೆಂಗಳೂರು ಬಿಟ್ಟು ಬರುವಾಗ ಅವಳು ನನಗಾಗಿ ಅತ್ತಳು. ಬಿಕ್ಕಿಸಿ ಬಿಕ್ಕಿಸಿ ಅತ್ತಳು. ನನಗಾಗಿ ಅತ್ತ ಮೊದಲ ಜೀವ ಅದು. ಅಷ್ಟು ಪ್ರೀತಿಯನ್ನು ನನ್ನಲ್ಲಿ ಯಾಕೆ ಬಯಸಿದಳೋ ಎಂದು ಇನ್ನೂ ಮುಂತಾಗಿ ಪರಾಗನು ಆಲೋಚನೆಯಲ್ಲಿ ತೊಡಗಿದ.

* * *
ಎಷ್ಟು ಯೋಚಿಸಿದರೂ ಪರಾಗನಿಗೆ ಪರಿಹಾರವೇ ಹೊಳೆಯಲಿಲ್ಲ. ಸಮಯ ಸರಿಯಾಗಿ ಹತ್ತುಗಂಟೆಯಾಗಿತ್ತು. ಫಣೀಂದ್ರನ ಫೋನು ಬರಬಹುದೆಂದುಕೊಂಡ. ಮೊದಲು ಕಂದಿಲೆಗೆ ಫೋನು ಮಾಡಬೇಕೆಂದು ಪದೇ ಪದೇ ಅನ್ನಿಸತೊಡಗಿತು. ಎಷ್ಟೋ ಸಾವಿರ ವರ್ಷಗಳಿಂದ ಮನುಷ್ಯ ನಾಗರೀಕತೆ ಕಟ್ಟಿಕೊಂಡು ಬಂದಿದ್ದ ಕವಚಧಾರಿ ಸಂಬಂಧಗಳನ್ನು ಎದುರಿಸುವ ಪ್ರಯತ್ನದಲ್ಲಿ ತಾನು ನಿಶ್ಯಸ್ತ್ರ ಮತ್ತು ನಿಶ್ಯಕ್ತನೆಂದು ಅವನಿಗೆ ಅನ್ನಿಸಿತು. ಸಮಯ ಹತ್ತೂವರೆಯತ್ತ ಮುಂದುವರೆಯುತ್ತಿತ್ತು.

ಫೋನಿಗೆ ಒಮ್ಮೆಲೆ ಎರಡು ಸಂದೇಶ ಬಂದ ಸದ್ದಾಯಿತು. ಮೊದಲನೆಯದು ಪಣೀಂದ್ರನದು. “ನಾನಾಗಲೇ ಪಾರ್ಕಿನಲ್ಲಿ ಕಾಯುತ್ತಿದ್ದೇನೆ” ಎಂದು ಬರೆದಿದ್ದ. ಯಾರು ಈ ಪಣೀಂದ್ರ. ಇವನನ್ನು ನಾನು ಇಷ್ಟು ವಯಕ್ತಿಕವಾಗಿ ಸ್ವೀಕರಿಸಿರುವುದಾದರೂ ಯಾಕೆಂದು ಯೋಚಿಸಿದ. ಇತರೆ ರೋಗಿಗಳಂತೆಯೇ ಆಸ್ಪತ್ರೆಯಲ್ಲಿ ಬಂದು ತೋರಿಸಿಕೊಂಡು ಹೋಗು ಎಂದು ಹೇಳಬೇಕೆನಿಸಿತು. ನಿಜಕ್ಕೂ ಫಣೀಂದ್ರನಿಗೆ ಪರಾಗನಿಂದ ದೊರೆಯಬೇಕಿದ್ದ ಪ್ರಮಾಣದಷ್ಟೇ ಪರಿಹಾರದ ಅನಿವಾರ್ಯತೆಯು ಪರಾಗನಿಗೆ ಫಣೀಂದ್ರನಿಂದಲೂ ಸಿಗಬೇಕಿತ್ತು. ಯೋಚಿಸಿದಂತೆಲ್ಲಾ ಅಸಮಾಧಾನವು ಹೆಚ್ಚಾಗಿ ಫೋನನ್ನು ಬೀಸಿ ಗೋಡೆಗೆ ಎಸೆಯಬೇಕೆಂದುಕೊಂಡ. ಕಂದಿಲೆಯು ಕಳಿಸಿದ್ದ ಸಂದೇಶದ ನೆನಪಾಗಿ ಫೋನನ್ನು ಕೈಗಳಲ್ಲಿಯೇ ಬಿಗಿಯಿಡಿದ.

ಬಂದ ಎರಡನೆಯ ಸಂದೇಶ ಕಂದಿಲೆಯದಾಗಿತ್ತು. “ನಾನು ಇಂದೇ ಹೊರಡುತ್ತಿರುವುದೆಂದು ನಿನಗೆ ನೆನಪಿದೆ ತಾನೇ. ನಾನೀಗಲೂ ನಿನ್ನನ್ನು ಅಣ್ಣನೆಂದೇ ಭಾವಿಸಿದ್ದೇನೆ. ನೆನಪಿರಲಿ, ಇಂದು ನೀನು ಉತ್ತರಿಸಿಲ್ಲವಾದರೆ ಮತ್ತೆ ನಾವಿಬ್ಬರೂ ಸೇರುವ ಸಮಯ ಬರದೇ ಇರಬಹುದು. ಮತ್ತು ನಿನ್ನಿಂದ ಕೊನೆಯ ಬಯಕೆಯನ್ನು ಈಡೇರಿಸಿಕೊಳ್ಳದ ನಾನು, ಜೀವನದಲ್ಲಿ ನೊಂದು ಎಲ್ಲರನ್ನೂ ತೊರೆದು ಹೊರಟಿರುವ ಒಂಟಿ ಹೆಣ್ಣು ಕಂದಿಲೆಯಾದ ನಾನು ಜೀವನಪೂರ್ತಿ ಅರ್ಧವಾಗಿಯೇ ಬದುಕಬೇಕಾಗಬಹುದು ಎಂಬುದು ನಿನಗೆ ಮತ್ತೂ ನೆನಪಿರಲಿ.

ತನ್ನೊಂದಿಗೆ ಖುಷಿಯಾಗಿದ್ದ ಹಳೆಯ ದಿನಗಳ ಕೋಮಲೆ ಕಂದಿಲೆಯೂ ತನಗೆ ತಿಳಿಯದ ರಹಸ್ಯವೊಂದಕ್ಕೆ ಬಲಿಯಾಗಿ ನತದೃಷ್ಟಳಾಗಿ ನಿಂತಿರುವ ಕಂದಿಲೆಯೂ ಒಟ್ಟಿಗೆ ಪರಾಗನ ಕಲ್ಪನೆಯಲ್ಲಿ ಸೇರಿ ಅವನ ಕಣ್ಣಿನಲ್ಲಿ ನೀರು ಹರಿಯತೊಡಗಿತು. ಜೋರಾಗಿ ಅಳಬೇಕೆನಿಸಿತು. ಅವಳು ನನ್ನ ಕಂದಿಲೆ. ನನ್ನ ಹಿತವನ್ನೇ ಯಾವಾಗಲೂ ಬಯಸಿದವಳು. ನನ್ನ ಖುಷಿಯನ್ನೇ ಯಾವಾಗಲೂ ಬಯಸಿದವಳು. ದುರಾದೃಷ್ಟವೊಂದಕ್ಕೆ ಬಲಿಯಾಗಿ ಈಗ ಎಲ್ಲವನ್ನೂ ತೊರೆದು ನಡೆದಿದ್ದಾಳೆ. ನನಗೇನೂ ನಷ್ಟವಿಲ್ಲದ ಒಂದನ್ನು, ತನ್ನ ಸರ್ವಸ್ವವನ್ನೂ ಬಿಟ್ಟು ಹೊರಟಿರುವಾಗ ನನ್ನಿಂದ ಬಯಸುತ್ತಿದ್ದಾಳೆ. ಅವಳಿಗೆ ಈ ಸಮಯದಲ್ಲಿ ನಾನೇ ಜೊತೆಯಾಗದಿದ್ದರೆ, ನಿನ್ನೆಯ ಅವಳೊಂದಿಗಿನ ಕ್ಷಣಗಳು ನನ್ನನ್ನು ಬದುಕಿರುವಂತೇಯೆ ನಿರರ್ಥಕನನ್ನಾಗಿಸುತ್ತವೆಂದು ಅವನಿಗೆ ಅನ್ನಿಸಿತು. ಸಮಯ ನೋಡಿದ. ಗಡಿಯಾರದ ಮುಳ್ಳುಗಳು ಸಂಖ್ಯೆಗಳ ಬೇಟೆಯಾಡುತ್ತಾ ಮುನ್ನುಗ್ಗುತ್ತಿದ್ದವು.
* * * *

ರಾಮಕೃಷ್ಣ ಸುಗತ

ಯುವ ಬರಹಗಾರ ರಾಮಕೃಷ್ಣ ಸುಗತ ಅವರು ಜನಿಸಿದ್ದು 1991 ನವೆಂಬರ್‌ 4ರಂದು. ಸ್ನಾತಕೋತ್ತರ ಪದವಿ, ಪಿಎಚ್‌ಡಿ ಪದವಿ ಪಡೆದಿರುವ ಇವರಿಗೆ ಪ್ರವಾಸ , ಕತೆ ಕವನ ಬರೆಯುವುದು, ಹಾಡುಗಳ ರಾಗ ಸಂಯೋಜನೆ, ಕಿರುಚಿತ್ರ ನಿರ್ಮಾಣ ಹವ್ಯಾಸಿ ಕ್ಷೇತ್ರ. ಉರಿಯ ಪೇಟೆಯಲಿ ಪತಂಗ ಮಾರಾಟ ಇವರ ಚೊಚ್ಚಲ ಕವನ ಸಂಕಲನವಾಗಿದೆ. 

More About Author