Poem

ಐವತ್ತು ವರುಷಗಳ ಬಳಿಕ

ಸಂದವು ಐವತ್ತು ವರುಷಗಳೇ
ಅವಳ ಕಂಡಾ ನಿಮಿಷಗಳಿಗೆ
ತಂದವು ನೆನಪಿನ ಹರುಷಗಳ
ಮಣಿವ ಮುನ್ನ ಮರೆವಿನ ಪೌರುಷಕೆ

ಬಾಳಹರಿವಲ್ಲಿ ಜೀವನದಝರಿಯಲ್ಲಿ
ಅವಳ ಆ ನೆನಪು ತೇಲಿಹೋಗಿತ್ತು
ಬದುಕಿನಾತೊರೆಯಲ್ಲಿ ಬವಣೆಯಹೊರೆಯಲ್ಲಿ
ಸುಳುವಿಲ್ಲದಾ ಸುಳಿಯಲ್ಲಿ ಸಿಲುಕಿಹೊಗಿತ್ತು

ಮನದ ಬಸಿರಲ್ಲಿ ಹಸಿರಾಗಿ ಉಸಿರಾಗಿ
ಗಾಢ ನಿದ್ರೆಯಲಿ ಮಲಗಿತ್ತು
ನನ್ನಸುವಿನ ಅಂತರಾಳದಲಿ ಗುಟ್ಟಾಗಿ
ಕಾಲನಪ್ಪುಗೆಯಲಿ ಕರಗಿ ಹೋಗಿತ್ತು

ಜೀವನದ ರಥಯಾತ್ರೆಯಲಿ
ಜನಜoಗುಳಿಯ ಜಾತ್ರೆಯಲಿ
ಅವಳ ಸ್ಮೃತಿ ಕಳೆದು ಹೋಗಿತ್ತು
ವಿರಹದ ಶ್ರುತಿಯಾಗಿಲಯವಾಗಿತ್ತು

ನೆನಪಿನಾ ನದಿ ಕಾಲಸಾಗರ ಸೇರಿ
ಉಪ್ಪಾಗಿತ್ತು
ಹಿಮದ ಗಡ್ಡೆಯ ತೆರದಿ ಹೆಪ್ಪಾಗಿತ್ತು
ಪಳ ಯುಳಿಕಯಂತೆ ಅಚ್ಚಾಗಿತ್ತು
ಸ್ವಾತಿಯ ಮುತ್ತಂತೆ ಚಿಪ್ಪಾಗಿತ್ತು

ಸನಿಹದಲ್ಲೇ ಅವಳಿರುವ ಸುದ್ದಿ
ಅಪ್ಪಳಿಸಿತು ಹೃದಯವ ಗುದ್ದಿ
ಭಾವನೆಗಳ ಬುಗ್ಗೆಗಳು ಹೊಮ್ಮಿತ್ತು
ಕಲ್ಪನೆಗಳ ಚಿಲುಮೆಗಳು ಚಿಮ್ಮಿತ್ತು

ಸೌಮಿತ್ರಿಯ ಅಂಬು ತೀರ್ಥ ಉದ್ಭವದಂತೆ
ಫಲ್ಗುಣನ ಶರದ ಗಂಗೋದ್ಭವದಂತೆ
ಚಿಮ್ಮಿತ್ತು ಶತ ಶತ ಹಿಂತನೆಗಳ ಬುಗ್ಗೆ
ಅವಳದಾ ನೆನಪು ಮನದಾಳಕೆ ನುಗ್ಗೆ

ಅಂದಿನ ಅವಳು ಇಂದು ಎಂತಿಹಳು
ನನ್ನ ಸ್ಮೃತಿ ಪಟಳದಲ್ಲಿರೂಪುಗೊಳ್ಳುತಿಹಳು
ಕುಂದದ ಅಂದದ. ಚಂದದ. ಚೆಲುವೆ
ಅಂದ ಗಳ್ಳ ಕಾಲನ ಮೇಲಿನ ಗೆಲುವೆ

ಅವಳ ಮಾಸದ ಮುದುಡದ ಮಂದಹಾಸ
ಸುಕ್ಕುಗಳ ಸರಿಗೆಗಳ ಅಚ್ಚು ಒತ್ತುವ
ಕಾಯದ ಪ್ರಾಯವ ಕದ್ದೋಯ್ಯುವ
ಕಾಲನ ಕ್ರೂರ ಶೌರ್ಯದ ಪರಿಹಾಸ

ಕಾಣುಗರ ಕಂಗಳಿಗೆ ಕಾಡಿಗೆಯ ಅಂಜನ
ಭಾವುಕರ ಭಾವನೆಗೆ ಅಮೃತದ ಸಿಂಚನ
ರಸಿಕರ ರಸಧಾರೆಗೆ ರಂಗಿನ ಲೇಪನ
ಕವಿ ಕಲಾವಿದರ ಸ್ಫೂರ್ತಿಗೆ ತಂಪಿನ ಸಿಂಪನ

ನೆರಿಗೆಯ ಚಿಮ್ಮುತ ಚೆಲುವನ್ನು ಚೆಲ್ಲುತ
ಮನಗಳ ಗೆಲ್ಲುತ, ಹೃದಯ ಗಳ ತುಂಬುತ
ವಿಜಯವ ಮೆಲ್ಲುತ, ಸಂತಸವ ಸೂಸುತ
ನಡೆದಿಹಳು ಹಸಿರಾಗಿ, ಹೂವಿನ ಹಾಸಾಗಿ

ಆ ಬಾಲೆ ಸುತೆಯಾಗಿ ತೌರಿಗೆ ತಂಪಾಗಿ
ಸತಿಯಾಗಿ ಸಂಸಾರ ಬೆಳೆಸಿ. ಸೊಂಪಾಗಿ
ಮಕ್ಕಳ ಮೊಮ್ಮಕ್ಕಳ ಕಲರವಕೆ ಇಂಪಾಗಿ
ಸಾರ್ಥಕ ಜೀವನದ ಕೀರುತಿಯ ಕಂಪಾಗಿ.

ಸೊಸೆಯಾಗಿ ಸತಿಯಾಗಿ ಅತ್ತಿಗೆನಾದಿನಿಯಾಗಿ
ಚಿಕಮ್ಮ ದೊಡಮ್ಮ ಹೆತ್ತಮ್ಮಳಾಗಿ
ಪ್ರೀತಿ ಕರುಣೆ ವಾತ್ಸಲ್ಯ ಜೀವಾಳವಾಗಿ
ಪಸರಿಸಿ.

- ಸಚ್ಚಿದಾನಂದ ಕೆ.ಎಸ್‌

ಸಚ್ಚಿದಾನಂದ ಕೆ.ಎಸ್‌

ಸಚ್ಚಿದಾನಂದ ಕೆ.ಎಸ್‌ ಅವರು ಪ್ರತಿಷ್ಠಿತ ಸಾರ್ವಜನಿಕ ಸಂಸ್ಥೆಯಾದ ಬಿ.ಇ.ಎಂ.ಎಲ್ ನಲ್ಲಿ ಮೂವತ್ತು ವರ್ಷಗಳ ದೀರ್ಘ ಸೇವೆಮಾಡಿ ಡೆಪ್ಯುಟಿಜನರಲ್ ಮ್ಯಾನೇಜರ್ ಆಗಿ ನಿವೃತ್ತಿ ಹೊಂದಿದ್ದಾರೆ. ನಿವೃತ್ತಿಯ ಬಳಿಕ ರಚಿಸಿದ ಅವರ ಚೊಚ್ಚಲ ಕೃತಿ.

ಕೃತಿ: ಅವಳ ಹೆಸರು

More About Author