
ಬದುಕಿನ ಬಿಸ್ತಾರದಲ್ಲಿ ಕಾಮನಬಿಲ್ಲಿಗಿಂತ ಕರಿಮೋಡವೆ ಹೆಚ್ಚಿದೆ ನೋಡು
ನಾಳೆಯ ಕನಸಿನಲ್ಲಿ ಶಾಲ್ಮಲದ ಒನಪಿಗಿಂತ ಅಲೆಯಬ್ಬರವೆ ಹೆಚ್ಚಿದೆ ನೋಡು.
ಜೀವನ ಹಾವು ಏಣಿ ಆಟ ಕನವರಿಕೆಗಳು ಕಪನ್ ಸುತ್ತಿಕೊಂಡು ಬಿಕ್ಕುತ್ತಿವೆ
ನೆನಪುಗಳ ಯಾತ್ರೆಯಲ್ಲಿ ನಲಿವಿಗಿಂತ ನೋವಿನ ಅಲೆದಾಟವೆ ಹೆಚ್ಚಿದೆ ನೋಡು.
ಮುಖವಾಡದ ಜಗದಲಿ ಯಾರು ನಿನ್ನವರೆಂದು ಹುಡುಕಬೇಡ
ಸೆವೆಸಿದ ದಾರಿಯಲ್ಲಿ ಹೊಳಪಿಗಿಂತ ಕಂಬನಿ ನರಳಾಟವೆ ಹೆಚ್ಚಿದೆ ನೋಡು.
ಅವರವರ ಬುತ್ತಿ ಗಂಟಿನಲ್ಲಿ ನಾಟಕದ ತಾಲೀಮು ನಡೆದೆ ಇದೆ ಯೋಚಿಸದಿರು
ಬಿಕ್ಕಿದ ದನಿಯಲ್ಲಿ ಆಸೆಗಿಂತ ಬಾಳ ಹೋರಾಟವೆ ಹೆಚ್ಚಿದೆ ನೋಡು.
ಯಾರಿಗಾಗಿ ನಿನ್ನ ಪರಿತಾಪ ನದಿಯಂತೆ ಹರಿ ಮೌನದ ಸಾಗರವಾಗು
ವಾಣಿ ನೆರಳಿನಲಿ ನೊಂದವರಿಗಿಂತ ಮಿಂದವರ ಅಬ್ಬರವೇ ಹೆಚ್ಚಿದೆ ನೋಡು.
ವಾಣಿ ಭಂಡಾರಿ
ವಾಣಿ ಭಂಡಾರಿ ಅವರು ಮೂಲತಃ ಮಲೆನಾಡಿನ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ರಿಪ್ಪನ್ ಪೇಟೆಯ ಭೈರಾಪುರದವರು. ಕುವೆಂಪು ವಿಶ್ವವಿದ್ಯಾಲಯದಿಂದ ಎಂ.ಎ (ಕನ್ನಡ) ಪದವೀಧರರು. ವೃತ್ತಿಯಿಂದ ಉಪನ್ಯಾಸಕರು. ಆಯುರ್ವೇದಿಕ್ ಉತ್ಪನ್ನಗಳ ಡೀಲರ್ ಆಗಿಯೂ, ಭಾವಗೀತೆ, ಕವನ,ಕಥೆ, ನ್ಯಾನೋಕಥೆ, ಕಾದಂಬರಿ,ಚುಟುಕು,ಹನಿಗವನ,ಲೇಖನ, ಅಂಕಣ, ಶಾಯರಿ, ಗಜಲ್ ಆಧುನಿಕ ವಚನಗಳು, ತುಣುಕುಗಳು ಬರೆಯುವ ಹವ್ಯಾಸ. ನಾಡಿನ ಹಲವಾರು ಪತ್ರಿಕೆಯಲ್ಲಿ ವಿಮರ್ಶಾ ಅಂಕಣ, ಸತ್ಯವಾಣಿ ಕಟೋಕ್ತಿ, ವ್ಯಕ್ತಿತ್ವ ವಿಕಸನ ಅಂಕಣಗಳು ಪ್ರಕಟಗೊಂಡಿವೆ.
ಕೃತಿಗಳು : ಅಂತರ್ ದೃಷ್ಟಿ- ವಿಮರ್ಶಾ ಸಂಕಲನ, ತುಂಗೆ ತಪ್ಪಲಿನ ತಂಬೆಲರು ಭಾಗ:1+2 (ಸಂಶೋಧಾನ್ಮತಕ ಕೃತಿ), ಸಂತನೊಳಗಿನ ಧ್ಯಾನ
More About Author