Poem

ಗಾಯದ ನೆತ್ತಿಗೆ ಮೊಳೆ ಬಡಿಯುವ ಸದ್ದು!


ಗಾಯದ ಗೋಪುರದ ಮೇಲೆ
ಹದ್ದೊಂದು ಸತ್ತು ಬಿದ್ದಿದೆ
ಕಾಗೆ ಕುಕ್ಕುವ ಪರಿಗೆ
ರಕ್ತ ಒಸರಿ ನೆಲ ಮುಟ್ಟಿದೆ

ನೋಡುವ ಕಣ್ಣುಗಳಲ್ಲಿ
ಎಷ್ಟೊಂದು ಸೂರ್ಯರರು
ನೇಣುಗೇರಿದ್ದಾರೆ
ವಜ್ರ ವೈಢೂರ್ಯ ಮುತ್ತು ರತ್ನ
ಮಣಗಟ್ಟಲೇ ಅಳೆದ ನೆಲದ ಮೇಲೆ
ತುಣುಕು ಬೆಳಕ ಹುಡುಕುತ್ತಿರುವೆ
ಎತ್ತ ನೋಡಿದರು ತರಚಿದೆ ಗೋಡೆ

ಧರ್ಮ ಬ್ರಾತೃತ್ವದ ಗೊಡೆ ಬಿರುಕು ಬಿಟ್ಟು
ಗುಲಾಬಿಯೊಂದು ಮುಗುಚಿ ಬಿದ್ದಿದೆ
ತಾಳಲಾರದ ಬಂಡೆಯ ಕಾವು
ಭಾವ ರೆಕ್ಕೆಗಳ ಸುಟ್ಟು
ಮನಸು ಮನಸುಗಳ ನಡುವೆ
ಮಸಿ ಬಳಿದು ಕೂತಿವೆ

ಜಾತಿ ಸೋಂಕಿನ ಜಾಢ್ಯ
ವಿರೂಪಾಕ್ಷನ ಕೊರಳ
ಹೂವಿನ ಮೇಲೆ ಕೂತು
ವಿಜೃಂಭಿಸುವ ಪರಿಗೆ
ತತ್ತರಿಸಿ ಹೋಗಿದೆ ಈ ನೆಲದ ಬದುಕು

ಹಸಿವೆನ್ನುವ ತುಟಿಗಳ ಒಲೆವ ಆಡಳಿತ
ಒಂಟಿ ನಡಿಗೆಯು ರೆಕ್ಕೆ ಬಿಚ್ಚಿ
ಗಾಯವಾದ ನೆತ್ತಿಗೆ ಮೊಳೆ ಬಡಿಯುತ್ತಿದೆ
ದೇಹಲಿ ಕೆಂಪುಕೋಟೆಯ ಮೇಲೆ ಉಡ್ಡರಿಸುವ
ಬಸವನ ಮರಿ ಹುಳು
ನಡುಗಿಸಿದೆ ನೆಲಮೂಲದ ಬೇರುಗಳ

ತಿರುಚಿ ಬರೆಯುವ ಇಂಕಿನ ಪೆನ್ನು
ಸಂವಿಧಾನದ ಹಾಳೆಯ ತಿರುವಿದೆ
ಕನಸುಗಳನ್ನು ಸುಡುವ ಹಕ್ಕಿಯೊಂದು
ಬೆಂಕಿ ಉಂಡೆಗಳ ತತ್ತಿ ಹಾಕುತ ಕೂತಿದೆ

ಧ್ವನಿ ಮಾಡದ ಹೊರತು
ಭಾರತದ ಭೂಪಟ
ಸುಡುಗಾಡಿನಲಿ ಸುತ್ತಿದ ಚಾಪೆಯಾದೀತು !


ಚಿತ್ರ : ಮಲ್ಲಿಕಾರ್ಜುನ ತೂಲಹಳ್ಳಿ

ಬಿದಲೋಟಿ ರಂಗನಾಥ್

ಕವಿ ರಂಗನಾಥ ಬಿ.ಎಂ ಅವರು 1980 ಜುಲೈ 15 ರಂದು ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ಬಿದಲೋಟಿಯಲ್ಲಿ ಜನಿಸಿದರು. ವೃತ್ತಿಯಲ್ಲಿ ವಕೀಲರು. ‘ಮಣ್ಣಿಗೆ ಬಿದ್ದ ಹೂಗಳು’ ‘ಬದುಕು ಸೂಜಿ ಮತ್ತು ನೂಲು’, ಉರಿವ ಕರುಳದೀಪ ಹಾಗೂ 'ದೇವರಿಲ್ಲದ ಸಾಕ್ಷಿಗೆ ರುಜು ಹಾಕಿ' ಎಂಬ ನಾಲ್ಕು ಕವನ ಸಂಕಲನಗಳು ಪ್ರಕಟವಾಗಿವೆ. ಅವರ ಕಾವ್ಯಕ್ಕೆ ‘ಸಂಕ್ರಮಣ’ ಬಹುಮಾನ ಹಾಗೂ ತಾಲೂಕು ರಾಜ್ಯೋತ್ಸವ ಪ್ರಶಸ್ತಿ, ದೇವರಿಲ್ಲದ ಸಾಕ್ಷಿಗೆ ರುಜು ಹಾಕಿ ಹಸ್ತಪ್ರತಿಗೆ 2020ನೇ ಸಾಲಿನ ರಾಜ್ಯ ಮಟ್ಟದ 'ಗವಿಸಿದ್ಧ ಎನ್ ಬಳ್ಳಾರಿ ಕಾವ್ಯ ಪ್ರಶಸ್ತಿ' ಹಾಗೂ 'ಶಾಲೀನಿ ಪುರಸ್ಕಾರ' ಲಭಿಸಿವೆ.

 

More About Author