Poem

ಹಸಿವು ಮತ್ತು ಕವಿತೆ

ಹಸಿವುಗಳು ಇರುವವರು ಮಾತ್ರ
ದುಃಖ ದುಮ್ಮಾನಗಳನ್ನರಿಯಬಲ್ಲರು
ಬದುಕು ತೇಯ್ದು ನಿದ್ದೆಗೆಟ್ಟು
ಕವಿತೆಗಳನ್ನು ಬರೆಯಬಲ್ಲರು
ಇಂಥ ಹಸಿವುಗಳಿಂದ ನರಳುತ್ತಿದ್ದ
ಬುದ್ಧನು ಕೂಡ ಆ ಸರಿರಾತ್ರಿ
ನಿದ್ದೆ ಬಿಟ್ಟು ಎದ್ದು ಹೋದ
ಭಿಕ್ಷೆ ಯಾಚಿಸಿ ತಿಂದುಂಡು ತಿರುಗಲಲ್ಲ;
ಇಡೀ ಬದುಕನ್ನು ಕವಿತೆಯನ್ನಾಗಿ ಮಾಡಲು
ಹೊಟ್ಟೆ ತುಂಬಿದ
ಹಸಿವುಗಳಿಲ್ಲದ ಪುಣ್ಯಾತ್ಮರು ಮಾತ್ರ
ಹಸಿದ ಪಾಪದವರನ್ನು ಅಣಕಿಸುತ್ತ
ಕುಳಿತಲ್ಲಿಯೇ ತೂಕಡಿಸಬಲ್ಲರು;
ಮೆತ್ತೆ ಮೇಲೆ ಗೊರಕೆ ಹೊಡೆಯಬಲ್ಲರು

- ತೇರಳಿಎನ್ ಶೇಖರ್

ತೇರಳಿ ಎನ್. ಶೇಖರ್

ಕವಿ, ಬರಹಗಾರ ತೇರಳಿ ಎನ್. ಶೇಖರ್ ಅವರು ಮೂಲತಃ ದಕ್ಷಿಣ ಕನ್ನಡ ಗುರುವಾಯೂರುನವರು. ಮಲಯಾಳದಿಂದ ಕನ್ನಡಕ್ಕೆ ಹಾಗೂ ಕನ್ನಡದಿಂದ ಮಲಯಾಳಕ್ಕೆ ಕೃತಿಗಳ ಅನುವಾದಕರು. ಅವರು, ಮಲಯಾಳದ ಆಧುನಿಕ ಪ್ರಮುಖ ಕವಿಗಳಲ್ಲಿ ಒಬ್ಬರಾದ ಕೆ. ಜೆ. ಶಂಕರಪಿಳ್ಳೆ ಯವರ ಆಯ್ದ ‘ಕೆ. ಜಿ ಶಂಕರ ಪಿಳ್ಳೆಯವರ ಕವಿತೆಗಳು’ ಸಂಕಲನವನ್ನು ಸಾಹಿತ್ಯ ಅಕಾಡೆಮಿಗಾಗಿ ಅನುವಾದಿಸಿದ್ದಾರೆ.

ಕೃತಿಗಳು : ಮರೆತಿಟ್ಟ ವಸ್ತುಗಳು (ಅನುವಾದ), ಕೆ. ಜಿ ಶಂಕರ ಪಿಳ್ಳೈಯವರ ಕವಿತೆಗಳು (ಅನುವಾದ)

More About Author