Poem

ಹೆಜ್ಜೆ ಅಳಿಸುವ ದಾರಿ

ಒಂದು ಗಾಢವಾದ ಮೌನ ಗಲಾಟೆ ಮಾಡುತ್ತಿದೆ,

ನಮ್ಮಿಬ್ಬರ ಎದೆಯ ಗೂಡಲಿ.

ನೆನ್ನೆ ಹುಟ್ಟಿದ ಸೂರ್ಯ

ಇಂದು ಇದ್ದಿಲಾಗಿರಲು, ದೀಪದೆಣ್ಣೆಗೂ ಸಾವಿನ ತವಕ.

ಮಾತು ಹುಟ್ಟುವ ತನಕ ಬಿಗಿದಿಡು ಬಸಿರನು, ಲೋಕ ಹುಟ್ಟದ ಹಾಗೆ !


ತೊಟ್ಟು ಕಳಚುವ ಆಟದಲಿ ಬೆರಳುಗಳೇ ಸವೆಯಲಿ,

ಬೀದಿಗೊಂದು ಗೋಪುರ ನಗ್ನವಾಗಲಿ.

ಸಂತೈಸಲು ಸಾವಿರ ಕಾರಣಗಳಿವೆ 

ಸುಡುಗಣ್ಣಿನ ಹಬೆಗೆ ನೋಟಗಳು ನೋಯದಿರಲಿ

ನೂರು ಹೆಜ್ಜೆಗಳ ಗುಡ್ಡೆಯಲ್ಲಿ ಕರಗಿದ ಗುರುತಿಗೆ ಹೊಸ ವಿಳಾಸ ಬರೆದು ಬಿಡು

ಅಕ್ಷರಗಳು ಸಾಯದ ಹಾಗೆ!


ಉಪ್ಪಿನ ಹೊದಿಕೆಯ ಕಡಲು ಮೌನವಾಗಿ ಮಲಗಲಿ,

ಜಗಲಿಯ ದೀಪ ನಂದದ ಹಾಗೆ ನೀರುಣಿಸು

ನಮ್ಮಿಬ್ಬರ ತಬ್ಬಿದ ಕತ್ತಲೆಯ ಸುತ್ತ ಸುಕ್ಕು ಬಂದಿರಬಹುದು,

ವಿದಾಯಕ್ಕೆ ಮೊರೆ ಹೋಗದಿರು.

ಹೊಸ ಪರಿಚಯದ ಉಸಿರು ಬೇಗನೇ ಸಾಯಬಹುದು

ಹಳೆತನು ಕಾಪಾಡು ಹಳಸದ ಹಾಗೆ!

 

ಪ್ರತಿ ನೆನಪಿಗೊಂದು ಪದ್ಯವ ಬರೆದು, ಅಳಿಸಿದ್ದನ್ನೆ ಬರೆಯುವ ಹಮಾಲಿ ಕವಿತ್ವಕೆ

ಖಾಯಂ ನಗುವಿನ ಓದುಗಿ ನೀನು!

ಬಿದ್ದ ಮಳೆಗೆ ಬಿಸಿಲ ಮೈ ಒಣಗಲಿ, 

ನಮ್ಮ ನೆರಳಲ್ಲೂ ನೇತಾಡುವ ನೋವಿಗೆ ಮುಲಾಮು ಬಳಿಯುತ್ತಲೇ ಇರು,

ಇಂದಲ್ಲ ನಾಳೆ ಮಾಯಾ ಬಹುದು

ಹೆಜ್ಜೆ ಅಳಿಸುವ ದಾರಿಯ ಹಾಗೆ !

ಆಡಿಯೋ
ವಿಡಿಯೋ

ಚಾಂದ್ ಪಾಷ

ಸೂಕ್ಷ್ಮಪ್ರಜ್ಞೆಯುಳ್ಳ ಸಮಕಾಲೀನ ಯುವಕವಿ ಚಾಂದ್ ಪಾಷ ಅವರು ಮೂಲತಃ ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಮಂದೇವಾಲ ಗ್ರಾಮದವರು. 1994 ಮೇ 05ರಂದು ಜನಿಸಿದರು. ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದಲ್ಲಿ ಕನ್ನಡ ಎಂ.ಎ. ಪದವಿ ಪಡೆದಿದ್ದು, ಈಗ ಸಂಶೋಧನಾ ವಿದ್ಯಾರ್ಥಿಯಾಗಿದ್ದಾರೆ. ‘ಮೌನದ ಮಳೆ’ ಕವನ ಸಂಕಲನ(2015), ಧೂಳಿಡಿದ ನಕ್ಷತ್ರ ಎಂಬ ನಾಟಕ ಪ್ರಕಟವಾಗಿವೆ. ಇಟಲಿಯ ಪಿಯಾಸೆಂಜಾದಲ್ಲಿರುವ ಪಿಕ್ಕೋಲೋ ಮ್ಯುೂಸಿಯೊ ಡೆಲ್ಲಾ ಪೊಸಿಯಾ ದಲ್ಲಿ ಇವರ ಕವಿತೆಯೊಂದು ಪ್ರದರ್ಶನವಾಗಿದೆ. 

ಸಂಗಾತ ಪುಸ್ತಕ ಪ್ರಕಾಶನದ 2020ರ ಸಾಲಿನ ಚಿ.ಶ್ರೀನಿವಾಸರಾಜು ಕಾವ್ಯ ಪುರಸ್ಕಾರ, ಕುವೆಂಪು ಯುವ ಕವಿ ಪ್ರಶಸ್ತಿ, ಕಾವ್ಯ ಮನೆ ಕಾವ್ಯ ಪುರಸ್ಕಾರ, ಎನ್ಕೆ ಕಾವ್ಯ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ, 2021ನೇ ಸಾಲಿನ ಅವ್ವ ಪ್ರಶಸ್ತಿ ಲಭಿಸಿದೆ. 

More About Author