
ಲೇಖಕ ಜೀವರಾಜ ಹನುಮಂತಪ್ಪ ಛತ್ರದ ಅವರು ಬರೆದ 'ಹೆಣ್ಣೊಂದು ಹುಡುಕಿ ಕೊಡಿ' ಕವಿತೆಯ ಸಾಲುಗಳು ಹೀಗಿವೆ...
ಗಂಡು ಮಕ್ಕಳಿಗೀಗ ನಲವತ್ತು ತುಂಬಿಹವು
ಹುಡುಕಿದರು ಹೆಣ್ಣೊಂದು ದೊರೆಯುತಿಲ್ಲ
ಅಲ್ಲಲ್ಲ ಹೆಣ್ಣುಗಳು ಒಪ್ಪುತ್ತಿಲ್ಲ ||ಪ||
ಅಚ್ಚುಬಿಳಿ ಮಲ್ಲಿಗೆಯ ಕರಿಕಾಗೆ ವರಿಸಿಹುದು
ಇದಕ್ಕೊಂದೆ ಕಾರಣವು ಸರಕಾರಿ ಕೂಲಿ
ನೂರೆಕರೆ ಎರೆಭೂಮಿ ಅನ್ನವನು ಬೆಳೆವವಗೆ
ವಧುವಿಲ್ಲ ಮಧುವಿಲ್ಲ ಗಂಡಾದ ಪ್ಯಾಲಿ
ಗಡಿಕಾಯೊ ತಳವಾರ ಕುರಿಕಾಯೊ ಕುರುಬನಿಗೆ
ಹೆಂಗೊಡಲು ಹಿಂದೇಟು ಹೆಣ್ಣೆತ್ತ ಜನರು
ಎಣ್ಣೆಯನು ಉಣ್ಣುವರು ಗಾಣಿಗನ ಜರಿಯುವರು
ಹಣ್ಣುಗಳ ಬೆಳೆದಿರುವ ತೋಟಿಗನೆ ಬೆದರು
ರೋಗಿಷ್ಟನಾಗಿರಲಿ ಸಂಪತ್ತು ಇರದಿರಲಿ
ಸರಕಾರಿ ನೌಕರಿಯು ಸಾಕೆಂಬ ಹುಚ್ಚು
ಸರಕಾರಕ್ಕೊಂದರ್ಜಿ ವಧುವೊಂದು ಹುಡುಕಿಕೊಡಿ
ತಲೆಮೇಲೆ ಕೈಹೊತ್ತು ಕುಳಿತೀಗ ಪೆಚ್ಚು
ಬಡಗಿತನ ಕಮ್ಮಾರ ಚಮ್ಮಾರ ಸಮಗಾರ
ಉತ್ಪನ್ನ ಬೇಕೆಮಗೆ ಅವರೆಮಗೆ ಬೇಡ
ಕೃಷಿಕನಿಗೆ ಸುಖವಿಲ್ಲ ಮನೆಯೊಳಗೆ ಹೆಣ್ಣಿಲ್ಲ
ಗಡಸುತನ ಮುಗಿಯುತಿದೆ ಮುದುಕಾದ ನೋಡು
ಬ್ರೂಣದಲಿ ಹೆಣ್ಣುಗಳ ನಗರದಲಿ ಗ್ರಾಮಗಳ
ಪ್ರಕೃತಿಯ ಅಣಕಿಸಿದ ಶಾಪವಿದು ಮೂರ್ಖ
ಚಕ್ರಗಳು ಸಮವಿರದೆ ಚಕ್ಕಡಿಯು ಮುಕ್ಕರಿಸಿ
ಬೀಳುವದು ನಿಶ್ಚಯವು ಸ್ವರ್ಗವಿದು ನರಕ
ಜೀವರಾಜ ಹ ಛತ್ರದ
ಲೇಖಕ ಜೀವರಾಜ ಹನುಮಂತಪ್ಪ ಛತ್ರದ ಮೂಲತಃ ಹಾವೇರಿ ಜಿಲ್ಲೆಯ ಬ್ಯಾಡಗಿಯವರು. ಸರ್ಕಾರಿ ಪ್ರೌಢಶಾಲಾ ಶಿಕ್ಷಕರು. ಹಾವೇರಿ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತು ಅಧ್ಯಕ್ಷರು. ಪ್ರಸ್ತುತ ಬ್ಯಾಡಗಿ ತಾಲೂಕಿನ ಮಾಸನಗಿ ಸರಕಾರಿ ಪ್ರೌಢಶಾಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
ಕೃತಿಗಳು: ಖುಷಿ ತರಲಿ ಕೃಷಿ, ಅಕ್ಕಡಿ ಕಾಳು( ವೈಚಾರಿಕ ಲೇಖನಗಳು), ಯಾಲಕ್ಕಿ ಹಾಲಕ್ಕಿ, ರಮ್ಯಗಾನ, ಅನುವಿನು, ದಾಂಪತ್ಯ ಗೀತೆಗಳು, ಜೀವಣ್ಣನ ಆಧುನಿಕ ತ್ರಿಪದಿಗಳು, ಅಸಲಿ ಮಳೆ, ಹನಿ ಹನಿ ಕಾವ್ಯಧಾರೆ, ಮಂಜೂರ್ಶಿ, ಸೂರು ಗುಡ್ಡ, ಉದಯ ರಶ್ಮಿ (ಕವನ ಸಂಕಲನಗಳು)
More About Author