Poem

ಇದ್ಯಾವುದೂ ಬೇಕಿರಲಿಲ್ಲ

ಇದ್ಯಾವುದೂ ಬೇಕಿರಲಿಲ್ಲ
ಆದರೂ ಸಿಕ್ಕ ಸಿಕ್ಕ ವಸ್ತುಗಳನ್ನು
ಬ್ಯಾಗಿಗೆ ತುರುಕಿಕೊಂಡೆ

ಅಮ್ಮನ ಪ್ರೀತಿ
ಅಪ್ಪನ ಸಿಟ್ಟು
ಬಿಚ್ಚಿಟ್ಟ ಬಾಲ್ಯ
ಮುಚ್ಚಿಟ್ಟ ಹರೆಯ
ಮುಟ್ಟಲಾರದಾ ಕನಸು

ಇದ್ಯಾವುದೂ ಬೇಕಿರಲಿಲ್ಲ
ಆದರೂ
ಬ್ಯಾಗಿಗೆ ತುರುಕಿಕೊಂಡೆ

ಬಿಕ್ಕಿ ಬಿಕ್ಕಿ ಬಂದ ದುಃಖ
ಕಣ್ಣೊಡಲ ಬಸಿದ ನೀರು
ಮಿಸುಕಾಡಿದ ಒಡಲ ಸ್ಪರ್ಶ
ಕಣ್ಣಂಚಿನಲಿ ಮೂಡಿದ ಹನಿಯ ಮಿಂಚು
ಉಸಿರ ಬಸಿರಲಿ ಕಂಪಿಸುವ ಜೀವ

ಇದ್ಯಾವುದೂ ಬೇಕಿರಲಿಲ್ಲ

ಇದ್ಯಾವುದೂ ಅದ್ಯಾವುದೂ
ಎಲ್ಲವೂ ಒಂದೇ ಆಗಿ
ಬಿಡಿಸಲಾರದಾ ಕಗ್ಗಂಟಾಗಿ
ಒಂದರೊಳಗೊಂದು ಸೇರಿ
ಹೊರಲಾರದಾ ಭಾರವಾಗಿ
ಬೆನ್ನಿಗಂಟಿದ ಸಂಸಾರದ
ಮೂಟೆ

ಇದ್ಯಾವುದೂ ಬೇಕಿರಲಿಲ್ಲ
ಆದರೂ...

ಚಿತ್ತ ಪಟಲದೊಳಗೆ
ಒತ್ತೊತ್ತಾಗಿ ಪೇರಿಸಿಟ್ಟ ಅಳಿಸಲಾರದಾ ನೆನಪುಗಳು
ಅದೆಂಥಾ ಕಸುವ ಕನಸುಗಳು
ಅವನ್ನೆಲ್ಲಾ ಟೇಬಲ್ ಮೇಲೆ
ಹರಡಿ ನೋಡಿದೆ
ಅವುಗಳಿಗೆ ಅರ್ಥಗಳಿರಲಿಲ್ಲ
ಒಂದೊಂದರ ಮೇಲೂ ಅರ್ಥಗಳ ಬರೆದೆ
ಅಳಿಸಿಹೋದವು ಅವು
ಮತ್ತೆ
ಬ್ಯಾಗಿಗೆ ತುರುಕಿಕೊಂಡೆ

ಇದ್ಯಾವುದೂ ಬೇಕಿರಲಿಲ್ಲ

ಹೊತ್ತು ಒತ್ತಾದ ಚಿತ್ತದ ಮೇಲೆ
ಬಿತ್ತಿದ ಚಿತ್ರಗಳು
ಕಿವಿಯಾದ ಭೂತಕ್ಕೆ
ಪಿಸುನುಡಿಯನುಣಿಸಿ ಆಲಿಸಿ
ಮರಣದುದ್ವೇಗದಲಿ ಸೆಟೆದ ಅಂಗಗಳ
ಒಂದುಗೂಡಿಸಿ ಮತ್ತೆ ಶಯನಕ್ಕೆ
ಕರೆದ ನಿನ್ನ ನಾ ಮುಟ್ಟಲಾರೆ
ಇದು ಮೈಲಿಗೆ ಅಲ್ಲ
ದುಃಸ್ವಪ್ನದ ಬುಟ್ಟಿಯೊಳಗಿಟ್ಟ
ತಾಂಬೂಲದೆಲೆಗಳ
ಅಗೆದಗೆದು ಸಾಕಾಗಿ ಉಗಿಯಬೇಕಿನ್ನು
ಆದರೂ...
ನುಂಗಿಕೊಂಡೆ

ಇದ್ಯಾವುದೂ ಬೇಕಿರಲಿಲ್ಲ
ಆದರೂ
ಸಿಕ್ಕ ಸಿಕ್ಕ ವಸ್ತುಗಳನ್ನು
ಬ್ಯಾಗಿಗೆ ತುರುಕಿಕೊಂಡೆ.

-ಎಂ.ಎಸ್.ಪ್ರಕಾಶ್ ಬಾಬು.

ಎಂ.ಎಸ್. ಪ್ರಕಾಶ್ ಬಾಬು

ಕಥಾಲೇಖಕ, ಚಿತ್ರ ಕಲಾವಿದ ಎಂ. ಎಸ್. ಪ್ರಕಾಶ್ ಬಾಬು ಅವರು ಮೂಲತಃ ಚಿತ್ರದುರ್ಗದವರು. ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿದ್ದು ಹಲವಾರು ಚಲನಚಿತ್ರಗಳಿಗೆ ನಿರ್ದೇಶನ ಮಾಡಿದ್ದಾರೆ. ‘ಅತ್ತಿಹಣ್ಣು ಮತ್ತು ಕಣಜ’ ಅವರ ಪ್ರಶಸ್ತಿ ವಿಜೇತ ಚಿತ್ರ. ಅವರ ಹಲವಾರು ಬರಹಗಳು ಪತ್ರಿಕೆಯಲ್ಲಿ ಪ್ರಕಟವಾಗಿವೆ.

More About Author