Poem

ಇರುಳಿನ ಜಾರಿಣಿ

ಸೋರುವ ಮುರುಕಲು ಸೂರಿನೊಳಗೆ
ಕಾಲಿನ ಬಲಕಳೆದುಕೊಂಡ ಹೆತ್ತಮ್ಮ
ಮೂರು ಹೊತ್ತು ಕುಡಿದು ತೂರಾಡುವ ಅಪ್ಪ
ಮೈ ಕೈ ತುಂಬಿ ಚಿಗರೆಯಂತೆ ಬೆಳೆಯುತ್ತಿರುವ
ನನ್ನ ಮೇಲೆಯೇ ಊರು ಹೈಕಳ ಕೆಟ್ಟ ಕಣ್ಣು

ಸೋದರಮಾವನಿಗಿತ್ತು ತೀರಾ ಹಣದ ಹುಚ್ಚು
ಸೋತ ಸಂಸಾರದಲ್ಲಿ ನನ್ನ ಕಂಡರೆ ಹೊಟ್ಟೆಕಿಚ್ಚು
ಆತನ ಕಪಟಕ್ಕೆ ಬಲಿಯಾಯ್ತು ನನ್ನ ಶೀಲಸಂಪತ್ತು
ಕತ್ತಲೆ ಕೋಣೆಯಲ್ಲಿ ಬೆಳಕೇ ನನ್ನುಡುಗೆಯಾಯ್ತು
ಬರುವ ಆಗಂತುಕರಿಗೆ ನನ್ನ ದೇಹವೇ ಸಾಂತ್ವಾನಿಸಿತು

ನನ್ನ ಕಣ್ಣೀರಿಗೆ ಬೆತ್ತಲೆ ದೇಹವೇ ಅಸಹ್ಯವೆಂದಿತು
ಮರ್ಯಾದಸ್ಥರ ಕಂಡರೆ ಒಡಲ ಅಗ್ನಿ ಭುಗ್ಗೆಂದಿತು
ಬದುಕ ಬವಣೆಯಲಿ ಪ್ರೀತಿ,ಸ್ನೇಹ ಮರೀಚಿಕೆಯಾಯ್ತು
ಊರಗಲ ಸೆರಗು ಹಾಸಿದ ನಾನು ಕಂಡೊರಿಗೆ ಜಾರಿಣಿ..

ನನ್ನ ದೇಹವೇ ಕಾಮಾಂಧರಿಗೆ ಅಮೃತವರ್ಷಿಣಿ
ನಿತ್ಯ ನೋವಲಿ ನರಳುವ ನನಗೆ ಜೀವವಿಲ್ಲವೆನ್ನುವರು
ಕತ್ತಲಲಿ ತಿಂದುಂಡು ಬೆಳಕಲ್ಲಿ ಮೂಗುಮುರಿಯುವವರಿಗೆ

ಇರುಳಿನಲಷ್ಟೇ ಸೌಂದರ್ಯ ಶೋಭಾಯಾಮಾನ
ಜನ್ಮಕೊಟ್ಟವಳ ನೋವಿಗೆ ನೆರಳಾಗಿ ನಿಟ್ಟುಸಿರಲಿ ಬಾಳುವೆ
ಸರ್ವಾಲಂಕೃತಳಾಗಿ ಮುದ್ದಾಗಿ ಕರೆಯುವೆ ಆಸೆಯಿಂದಲ್ಲ..

- ಶರಣ್ಯ ಕೋಲ್ಚಾರ್

ಶರಣ್ಯ ಕೋಲ್ಚಾರ್

ಕವಿ ಶರಣ್ಯ ಕೋಲ್ಚಾರ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲ್ಲೂಕಿನ ಕೋಲ್ಚಾರಿನವರು. ತನ್ನ ಪ್ರಾಥಮಿಕ ಶಿಕ್ಷಣವನ್ನು ಪಡ್ಪಿನಂಗಡಿಯಲ್ಲಿ ಪೂರೈಸಿ, ಬಾಳಿಲ ವಿದ್ಯಾಭೋಧಿನಿ ಪ್ರೌಢಶಾಲೆಯಲ್ಲಿ ಪ್ರೌಡ ಶಿಕ್ಷಣ ಪೂರೈಸಿದ ಇವರು ಕಲಾವಿಭಾಗದಲ್ಲಿ ಪದವಿ ಪಡೆದು ನಂತರ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ವಿಚಾರ ವಿಮರ್ಶೆ, ಭಾಷಣ, ಬರವಣಿಗೆ, ಪ್ರವಾಸ, ಓದು ಇವರ ನೆಚ್ಚಿನ ಹವ್ಯಾಸಗಳು

ಪ್ರಸ್ತುತ ಹೊಸದಿಗಂತದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.

More About Author