Poem

ಜಾರಿ ಬಿದ್ದ ಮಾಂಸದ ತುಂಡು

‘ಮಣ್ಣಿಗೆ ಬಿದ್ದ ಹೂಗಳು’ ‘ಬದುಕು ಸೂಜಿ ಮತ್ತು ನೂಲು’, ‘ಉರಿವ ಕರುಳದೀಪ’ ಹಾಗೂ 'ದೇವರಿಲ್ಲದ ಸಾಕ್ಷಿಗೆ ರುಜು ಹಾಕಿ' ಎಂಬ ನಾಲ್ಕು ಕವನ ಸಂಕಲನಗಳು ಪ್ರಕಟಿಸಿ ಕನ್ನಡ ಕಾವ್ಯಲೋಕದಲ್ಲಿ ತಮ್ಮದೇ ಛಾಪು ಮೂಡಿಸಿರುವ ಕವಿ ಬಿದಲೋಟಿ ರಂಗನಾಥ್ ಅವರ ‘ಜಾರಿ ಬಿದ್ದ ಮಾಂಸದ ತುಂಡು’ ಕವಿತೆ ನಿಮ್ಮ ಓದಿಗಾಗಿ

ಅಲ್ಲೊಂದು ಮಾಂಸದ ತುಂಡು ಬಿದ್ದಿದೆ
ಕಚ್ಚಿ ತಿನ್ನಲು
ಎರಡು ನಾಯಿಗಳ ಪೈಪೋಟಿ
ಮೂರನೆಯದು ವಂಚಿ ಹಾಕುತ್ತಿದೆ
ಬಾಯಿಂದ ಕಚ್ಚಿ ಪೇರಿಕೀಳಲು

ಮೊದಲೇ ಇರುವೆ ಮುಕುರಿ
ಹೈರಾಣಾಗಿದೆ ಆ ಮಾಂಸದ ತುಂಡು
ಕಲ್ಲು ಮಣ್ಣು ಚುಚ್ಚಿ
ಅಲ್ಲಲ್ಲಿ ತೂತು ಬಿದ್ದು ಮಂಕು ಕವಿದಿದೆ

ಇನ್ನೊಂದು ಕಡೆ
ಹಸಿದ ಮನುಷ್ಯನ ಕೈಗಳು
ಊಸೂರೆನ್ನುತ
ಮುಟ್ಟಲಾಗದೆ ಕಂಪಿಸುತ್ತಿವೆ

ಒಮ್ಮೆಯೂ ಮುಟ್ಟಲು ಬಿಡದ ನಾಯಿ
ಬೊಗಳುತ್ತಲೇ ಇದೆ..
ಸೂರ್ಯನ ಶಾಖದ ಗತ್ತು
ಇಡೀ ಮಾಂಸದ ಮುದ್ದೆಯನ್ನು ಸುಕ್ಕುಗಟ್ಟಿಸಿದೆ

ನಾಯಿ ಆಗಾಗ ಬಿಡುವ ಸೀರ್ ಉಸಿರಿಗೆ
ಇರುವೆಗಳು ಅಂಗಾತ ಬಿದ್ದು ಹೊದ್ದಾಡುತ್ತಿವೆ
ಮತ್ತೆ ಸಾವರಿಸಿಕೊಂಡು ಏಳುವಾಗ
ಮತ್ತೆ ಇನ್ನೊಂದು ನಾಯಿಯ ಸಿರ್ ಎನ್ನುವ ಗಟ್ಟಿ ಉಸಿರು...

ಮಾಂಸಕ್ಕಾಗಿ ಹೊಂಚಿ ಹಾಕುತ
ತಡಿಕೆ ದೇಹ ಹೊತ್ತವನ ಹಸಿವಿನ ಉಸಿರು
ಗಾಳಿಯೊಂದಿಗೆ ಬೆರೆತು ನಿಡುಸುಯ್ದಿದೆ

ಗುಡುಗು ಮಿಂಚಿನೊಂದಿಗೆ
ಮಳೆಯ ಆರ್ಭಟವೂ
ಜೋರಾಗಿ
ಮಾಂಸದ ತುಂಡು ನೀರಿನಲ್ಲಿ ಕೊಚ್ಚಿ ಹೋಗುವಾಗ
ಹಸಿದ ನಾಯಿಗಳ ಕಣ್ಣೀರು
ಮಳೆಯೊಂದಿಗೆ ಬೆರೆತವು

ಮಾಂಸದ ತುಂಡು ಬೀಳಿಸಿಕೊಂಡವನ
ಮಾಂಸದ ತೂಕದಲಿ ಏರುಪೇರು !

ಬಿದಲೋಟಿ ರಂಗನಾಥ್

ಕವಿ ರಂಗನಾಥ ಬಿ.ಎಂ ಅವರು 1980 ಜುಲೈ 15 ರಂದು ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ಬಿದಲೋಟಿಯಲ್ಲಿ ಜನಿಸಿದರು. ವೃತ್ತಿಯಲ್ಲಿ ವಕೀಲರು. ‘ಮಣ್ಣಿಗೆ ಬಿದ್ದ ಹೂಗಳು’ ‘ಬದುಕು ಸೂಜಿ ಮತ್ತು ನೂಲು’, ಉರಿವ ಕರುಳದೀಪ ಹಾಗೂ 'ದೇವರಿಲ್ಲದ ಸಾಕ್ಷಿಗೆ ರುಜು ಹಾಕಿ' ಎಂಬ ನಾಲ್ಕು ಕವನ ಸಂಕಲನಗಳು ಪ್ರಕಟವಾಗಿವೆ. ಅವರ ಕಾವ್ಯಕ್ಕೆ ‘ಸಂಕ್ರಮಣ’ ಬಹುಮಾನ ಹಾಗೂ ತಾಲೂಕು ರಾಜ್ಯೋತ್ಸವ ಪ್ರಶಸ್ತಿ, ದೇವರಿಲ್ಲದ ಸಾಕ್ಷಿಗೆ ರುಜು ಹಾಕಿ ಹಸ್ತಪ್ರತಿಗೆ 2020ನೇ ಸಾಲಿನ ರಾಜ್ಯ ಮಟ್ಟದ 'ಗವಿಸಿದ್ಧ ಎನ್ ಬಳ್ಳಾರಿ ಕಾವ್ಯ ಪ್ರಶಸ್ತಿ' ಹಾಗೂ 'ಶಾಲೀನಿ ಪುರಸ್ಕಾರ' ಲಭಿಸಿವೆ.

 

More About Author