Story

ಜಾತಕ

ಕವಿ, ಕತೆಗಾರ ವಿಶ್ವನಾಥ್ ಎನ್. ನೇರಳಕಟ್ಟೆ ಅವರು ‘ಮೊದಲ ತೊದಲು’, ‘ಕಪ್ಪು ಬಿಳುಪು’, ‘ಹರೆಯದ ಕೆರೆತಗಳು’ ಮತ್ತು ‘ಸಾವಿರದ ಮೇಲೆ’ ಕೃತಿಗಳ ಮೂಲಕ ಕನ್ನಡ ಸಾಹಿತ್ಯಲೋಕದಲ್ಲಿ ತಮ್ಮನ್ನು ಗುರುತಿಸಿಕೊಂಡವರು. ಪುಟ್ಟಣ್ಣ ಕುಲಾಲ್ ಯುವ ಕತೆಗಾರ ಪುರಸ್ಕಾರ ಪಡೆದಿರುವ ಅವರ ‘ಜಾತಕ’ ಕತೆ ನಿಮ್ಮ ಓದಿಗಾಗಿ..

ಮಂಗಳೂರು ವಿಮಾನ ನಿಲ್ದಾಣ. ಆಗ ತಾನೇ ನೆಲದಲ್ಲಿ ನೆಲೆನಿಂತ ವಿಮಾನದಿಂದ ಇಳಿದ ಯುವಕನೊಬ್ಬ ಜಾತ್ರೆಯ ತೇರನ್ನು ಕೈಯ್ಯಲ್ಲಿ ಎಳೆದು ತರುವಂತೆ ತನ್ನ ದಪ್ಪನೆಯ ಸೂಟ್‍ಕೇಸನ್ನು ಎಳೆದುಕೊಂಡು ಬರುತ್ತಿದ್ದಾನೆ. ಕಸ್ಟಮ್ಸ್ ಅಧಿಕಾರಿಗಳ ತಪಾಸಣೆಯೆಲ್ಲಾ ಮುಗಿದ ಮೇಲೆ ತನ್ನ ತಮ್ಮನ ಬರುವಿಕೆಗಾಗಿ ಅಲ್ಲೇ ಕಾದು ಕುಳಿತನು.

ಆತ ಪ್ರದೀಪ. ಬೆಂಗಳೂರಿನ ಕಂಪೆನಿಯೊಂದರಲ್ಲಿ ಉದ್ಯೋಗಿ. ಈಗ ಎರಡು ವಾರಗಳ ರಜೆಯ ಮೇಲೆ ಊರಿಗೆ ಬಂದಿದ್ದಾನೆ. ವೆಂಕಟಕೃಷ್ಣ ಭಟ್ಟರ ಇಬ್ಬರು ಗಂಡು ಮಕ್ಕಳಲ್ಲಿ ಹಿರಿಯವನು. ಊರಿನಲ್ಲಿ ವಿದ್ಯಾಭ್ಯಾಸ ಮುಗಿಸಿ ಆರು ವರ್ಷಗಳ ಹಿಂದೆ ಉದ್ಯೋಗದ ಕಾರಣಕ್ಕಾಗಿ ಬೆಂಗಳೂರಿಗೆ ತೆರಳಿದ್ದ. ಉದ್ಯೋಗ ಎನ್ನುವುದು ಬೆಂಗಳೂರಿಗೆ ತೆರಳಲು ನಿಮಿತ್ತ ಮಾತ್ರವಾಗಿತ್ತು. ಅದರೊಳಗಿನ ಕಾರಣ ಬೇರೆಯೇ ಇತ್ತು. ಬೆಂಗಳೂರಿಗೆ ಹೋದ ಬಳಿಕ ಆತ ಊರಿಗೆ ಬಂದಿರುವುದು ಇದೇ ಮೊದಲು.

ಅವನ ಮುಖ ತನ್ನ ಹುಟ್ಟೂರು ತಲುಪಿದ ಸಂತೋಷದ ಬದಲಿಗೆ ಏನೋ ಒಂದು ರೀತಿಯ ಗೊಂದಲದ ಗೂಡಾಗಿ ಪರಿವರ್ತಿತವಾಗಿದೆ. ‘ಆ ಹುಡುಗಿ’ಯ ಸ್ನಿಗ್ಧ ಸೌಂದರ್ಯ, ತನ್ನ ಮೊದಲ ಪ್ರೇಮ ನಿವೇದನೆ, ತಮ್ಮಿಬ್ಬರ ಮಿಲನಕ್ಕೆ ಉಂಟಾದ ಅಡ್ಡಿ, ಹುಟ್ಟೂರು ಬಿಟ್ಟ ತಾನು ಬೆಂಗಳೂರು ಸೇರಿದ್ದು ಇವೆಲ್ಲಾ ಆತನ ಮನಸ್ಸಿನಲ್ಲಿ ಹಾಗೆ ಬಂದು ಹೀಗೆ ಮಾಯವಾಯಿತು. ಅದೇ ವಿಚಾರವನ್ನು ಮತ್ತಷ್ಟು ಮನಸ್ಸಿಗೆ ತಂದುಕೊಳ್ಳುತ್ತಿದ್ದನೋ ಏನೋ, ಅಷ್ಟರಲ್ಲಿ ಆತನ ಭಾವನಾ ಬಂಧಕ್ಕೆ ಭಂಗ ತರುವಂತೆ ಆತನ ತಮ್ಮ ಸುದೀಪ ಓಡೋಡಿ ಬಂದ. ಬಂದವನೇ, “ಹೇಗಿದ್ದೀಯ ಅಣ್ಣ? ಬಂದು ಹೊತ್ತಾಯಿತೇನೋ? ಈಗ ಮಂಗಳೂರು ಕೂಡಾ ಬೆಂಗಳೂರಿನಂತಾಗತೊಡಗಿದೆ. ಟ್ರಾಫಿಕ್‍ ಜಾಮ್‍ನಿಂದಾಗಿ ತಡವಾಯಿತು” ಎಂದವನೇ ತನ್ನ ಸೋದರನ ಬ್ಯಾಗನ್ನು ಆತನ ಕೈಯ್ಯಿಂದ ತೆಗೆದುಕೊಂಡು ಹೋಗಿ ಕಾರಲ್ಲಿಟ್ಟು, ಕಾರಿನ ಮುಂಬಾಗಿಲನ್ನು ತೆರೆದು, ಅಣ್ಣನನ್ನು ಕೂರಿಸಿ, ಕಾರನ್ನು ಸ್ಟಾರ್ಟ್ ಮಾಡಿ ಹೊರಟನು.

ತಂದೆ- ತಾಯಿಯ ಬಗ್ಗೆ, ಬೆಂಗಳೂರಿನ ಉದ್ಯೋಗ, ವಾಸ್ತವ್ಯ ಇವುಗಳ ಬಗ್ಗೆ ಅಣ್ಣ- ತಮ್ಮಂದಿರ ಮಾತುಕತೆ ಸಾಗುತ್ತಿತ್ತು. ಕಾರು ವೇದವ್ಯಾಸ ಭಟ್ಟರ ಮನೆಯ ಗೇಟಿನ ಎದುರು ಸಾಗುತ್ತಿದ್ದಂತೆ ಯಾಂತ್ರಿಕವಾಗಿ ಪ್ರದೀಪನ ಕಣ್ಣುಗಳು ಭಟ್ಟರ ಮನೆಯ ಕಡೆಗೆ ಹೊರಳಿ ಏನನ್ನೋ ಹುಡುಕಲಾರಂಭಿಸಿದವು. ಆತನ ನಾಲಿಗೆಗೆ ಅರೆಕ್ಷಣದ ಬ್ರೇಕ್ ಬಿದ್ದಿತ್ತು.

ಅಣ್ಣನಲ್ಲಾದ ಬದಲಾವಣೆಯನ್ನು ಅರಿತ ಸುದೀಪ ತನ ಗಮನವನ್ನು ತನ್ನ ಕಡೆಗೆ ಮತ್ತೆ ಹರಿಯುವಂತೆ ಮಾಡುವುದಕ್ಕಾಗಿ “ಅಣ್ಣ, ನಮ್ಮ ಮನೆ ಪಕ್ಕದ ಶ್ಯಾಮ ಶಾಸ್ತ್ರಿಗಳ ಮಗನಿಗೆ ಒಂದು ವಾರದ ಹಿಂದಷ್ಟೇ ಮದುವೆಯಾಯಿತು. ಹುಡುಗಿ ಶಿವಮೊಗ್ಗದವಳು” ಎಂದ. ‘ಹ್ಞಾ’ ಎಂಬ ಪ್ರತಿಕ್ರಿಯೆಯಷ್ಟೇ ಪ್ರದೀಪನಿಂದ ಹೊರಬಂತು.

ಮಣ್ಣರಸ್ತೆಯಲ್ಲಿ ಮೈಕುಲುಕಿಸುತ್ತಾ ಬಂದ ಕಾರು ಹೆಂಚಿನ ಮನೆಯೆದುರು ನಿಂತಿತ್ತು. ವೆಂಕಟಕೃಷ್ಣ ಭಟ್ಟರು ಮತ್ತು ಪತ್ನಿ ಗಿರಿಜಮ್ಮ ಮಗನ ಬರುವಿಕೆಗೆ ಅಂಗಳದಲ್ಲಿಯೇ ಕಾದು ಕುಳಿತಿದ್ದರು. ಮಗನನ್ನು ಕಂಡ ಕೂಡಲೇ ಹದಿಹರೆಯದವರಂತಾದ ಭಟ್ಟರು ಮತ್ತು ಗಿರಿಜಮ್ಮ ಮಗನ ಮೈದಡವಿ, ಆನಂದದ ಕಣ್ಣೀರು ಹರಿಸುತ್ತಾ, ದೃಷ್ಟಿಯಾರತಿಯನ್ನು ಎತ್ತಿ ಮನೆಯೊಳಕ್ಕೆ ಕರೆದೊಯ್ದರು.

ಭಟ್ಟರು ಆರು ವರ್ಷಗಳ ಬಳಿಕ ಮತ್ತೆ ಊರಿಗೆ ಬಂದ ಮಗನೊಂದಿಗೆ ಮಾತನಾಡುತ್ತಾ ವರಾಂಡದಲ್ಲಿ ಕುಳಿತರೆ ಗಿರಿಜಮ್ಮ ಮಗನಿಗೆ ಇಷ್ಟವಾದ ಮೈಸೂರು ಪಾಕ್ ತಯಾರಿಸುವುದರಲ್ಲಿ ನಿರತರಾದರು. ಮಧ್ಯಾಹ್ನ ಊಟದ ಸಮಯ. ಮನೆಯಲ್ಲೆಲ್ಲಾ ನಗುವಿನ ಹೊಳೆಯೇ ಹರಿಯತೊಡಗಿತ್ತು. ಈ ರೀತಿ ಮನೆಯವರೆಲ್ಲಾ ಒಟ್ಟಾಗಿ ಕುಳಿತು ಸಂತೋಷದಿಂದ ಊಟಮಾಡಿ ಆರು ವರ್ಷಗಳಾಯಿತಲ್ಲ. ಆರು ವರ್ಷಗಳಿಂದ ಕೂಡಿಟ್ಟ ಹರ್ಷವೆಲ್ಲಾ ಈ ಒಂದೇ ಹೊತ್ತಿನಲ್ಲಿ ಮನೆಮಂದಿಯ ಮುಖದಲ್ಲಿ ಪ್ರತಿಫಲಿಸುತ್ತಿದೆ. ಮಾತನಾಡುತ್ತಾ ಗಿರಿಜಮ್ಮ ಮಗನ ಮದುವೆಯ ವಿಚಾರವನ್ನು ಪ್ರಸ್ತಾಪಿಸಿದ್ದರು. ಅಲ್ಲಿಯವರೆಗೂ ನಗು ಮನೆಮಾಡಿದ್ದ ಪ್ರದೀಪನ ಮುಖ ಕಳೆಗುಂದಿತು. ಆತನ ಸಪ್ಪಗಾದ ಮುಖವನ್ನು ಕಂಡು ಆತನ ಹೆತ್ತವರ ಮುಖವೂ ನಿಸ್ತೇಜವಾಯಿತು.

ಮಗನ ಅಂತರಾಳವನ್ನು ಅರೆಕ್ಷಣದಲ್ಲಿ ಅರ್ಥ ಮಾಡಿಕೊಂಡ ಗಿರಿಜಮ್ಮ, “ಅಲ್ಲ ಪ್ರದೀಪ, ಅವಳ ನೆನಪಲ್ಲೇ ಅದೆಷ್ಟು ಸಮಯ ಅಂತ ನೀನೂ ಹೀಗೇ ಇರ್ತೀಯಾ? ಅವಳೇನು ನಿನ್ನ ನೆನಪಲ್ಲೇ ಕುಳಿತಿದ್ದಾಳಾ? ಬೇರೆಯವನನ್ನು ಮದುವೆಯಾದಳು. ನಿನ್ನನ್ನು ತಿರಸ್ಕರಿಸಿದ್ದಕ್ಕೆ ಅವಳಿಗೆ ದೇವರು ತಕ್ಕ ಶಾಸ್ತಿಯೇ ಮಾಡಿದ್ದಾನೆ ಬಿಡು. ಮದುವೆಯಾಗಿ ತಿಂಗಳು ಕಳೆಯುವಷ್ಟರಲ್ಲಿ ಅವಳ ಗಂಡ ಸ...”

“ಗಿರಿಜಾ”, ವೆಂಕಟಕೃಷ್ಣ ಭಟ್ಟರ ಏರುಧ್ವನಿ ಗಿರಿಜಮ್ಮನ ಮಾತನ್ನು ತಡೆಯಿತು. “ಹೋಗಿ ಮೊಸರು ತಾ” ಭಟ್ಟರು ಪತ್ನಿಯನ್ನೇ ದುರುಗುಟ್ಟಿ ನೋಡಿ ನುಡಿದರು. ಪ್ರದೀಪನಿಂದ ವಿಚಾರವನ್ನು ಮುಚ್ಚಿಡಲು ಗಂಡ ಪ್ರಯತ್ನಿಸುತ್ತಿದ್ದಾರೆ ಎಂದು ಅರ್ಥ ಮಾಡಿಕೊಂಡ ಗಿರಿಜಮ್ಮ, ತನ್ನ ತಪ್ಪನ್ನು ಅರಿತು ಮೊಸರನ್ನು ತರುವುದಕ್ಕಾಗಿ ಅಡುಗೆ ಕೋಣೆಗೆ ಹೋದರು. ಮತ್ತೇನೂ ಮಾತಿಲ್ಲದೆಯೇ ಊಟ ಮುಗಿದಿತ್ತು. ಸಂಜೆ ಭಟ್ಟರು ಮನೆಯಿಂದ ಹೊರ ಹೋಗಿದ್ದರು. ಅದೇ ಸರಿಯಾದ ಸಮಯವೆಂದು ಅರಿತ ಪ್ರದೀಪ ಅಮ್ಮನ ಬಳಿ ಹೋಗಿ “ಅಮ್ಮ, ಸಂಧ್ಯಾಳ ಬಗ್ಗೆ ಆಗ ಊಟ ಮಾಡುತ್ತಿದ್ದಾಗ ಏನೋ ಹೇಳುತ್ತಿದ್ದೆಯಲ್ಲ, ಏನದು?” ಎಂದ.

“ಅದೆಲ್ಲಾ ಈಗ ಯಾಕೋ?” ಗಂಡನಿಗೆ ಇಷ್ಟವಿರದಿದ್ದ ವಿಷಯವನ್ನು ಮಗನಿಗೆ ತಿಳಿಸುವುದು ಗಿರಿಜಮ್ಮನಿಗ್ಯಾಕೋ ಸರಿ ಕಾಣಲಿಲ್ಲ. “ಅಮ್ಮ, ಪ್ಲೀಸ್ ಹೇಳಮ್ಮ” ಪ್ರದೀಪ ಮತ್ತಷ್ಟು ಒತ್ತಾಯಿಸತೊಡಗಿದ. “ಅದೇನೂ ಇಲ್ಲ ಪ್ರದೀಪ. ಅವಳ ಗಂಡ, ಅದೇ ಉಡುಪಿಯ ಹುಡುಗ, ಮದುವೆ ಆಗಿ ಒಂದು ತಿಂಗಳಾಗುವಷ್ಟರಲ್ಲಿ ಬೈಂದೂರಿನಲ್ಲಿ ನಡೆದ ಆ್ಯಕ್ಸಿಡೆಂಟ್‍ನಲ್ಲಿ ತೀರಿಕೊಂಡ. ನಿನ್ನನ್ನು ಮದುವೆ ಆಗಿದ್ದರೆ ಅವಳಿಗೆ ಈ ಕೆಟ್ಟ ಸ್ಥಿತಿ ಖಂಡಿತಾ ಬರುತ್ತಿರಲಿಲ್ಲ. ಅವಳ ಹೆತ್ತವರ ಅಹಂಕಾರಕ್ಕೆ ತಕ್ಕ ಪ್ರತಿಫಲವೇ ಆಯಿತು” ಒಂದೇ ಉಸಿರಿಗೆ ನುಡಿದಿದ್ದರು ಗಿರಿಜಮ್ಮ. “ಏನು? ಗಂಡ ತೀರಿಕೊಂಡನಾ? ಸೋತಿರುವವರನ್ನು ಮತ್ತಷ್ಟು ತೆಗಳುವುದು ಸರಿ ಅಲ್ಲ. ಈಗ ಎಲ್ಲಿದ್ದಾಳೆ ಅವಳು?” ಪ್ರದೀಪನ ಮಾತುಗಳು ಬೇಸರ ಮತ್ತು ಕುತೂಹಲ ಮಿಶ್ರಿತವಾಗಿತ್ತು.

“ಮದುವೆಯಾಗಿ ಮನೆಗೆ ಬಂದ ಸೊಸೆ ಒಂದು ತಿಂಗಳಲ್ಲಿಯೇ ಮಗನನ್ನು ನುಂಗಿಕೊಂಡಳು ಎಂದು ಅಂದುಕೊಂಡು ಅವಳ ಅತ್ತೆ ಮನೆಯವರು ತವರು ಮನೆಗೆ ಅಟ್ಟಿದ್ದಾರೆ. ಈಗ ಇಲ್ಲೇ ತವರುಮನೆಯಲ್ಲಿದ್ದಾಳೆ. ಅವಳ ಅಣ್ಣನ ಹೆಂಡತಿ ಆಗಾಗ ಅವಳನ್ನು ಬೈಯ್ಯುವುದು, ಹೀಯಾಳಿಸುವುದು ಎಲ್ಲಾ ಮಾಡುತ್ತಿದ್ದಾಳಂತೆ. ಪಕ್ಕದ ಮನೆಯ ಸಾವಿತ್ರಿ ಹೇಳಿದಳು” ಹೀಗೆ ಹೇಳುವಾಗ ಗಿರಿಜಮ್ಮನ ಮುಖದಲ್ಲಿ ಬೇಸರದಂತಹ ಭಾವವೊಂದು ವ್ಯಕ್ತವಾಯಿತು. ಪ್ರದೀಪ ಮೌನವಾಗಿ ತಾಯಿಯನ್ನೇ ನೋಡುತ್ತಿದ್ದ. ನಿಟ್ಟುಸಿರೊಂದು ಆತನಿಂದ ಹೊರಬಂತು.

“ಹ್ಞಾ, ನಿನ್ನಪ್ಪ ಈ ವಿಚಾರವನ್ನು ನಿನಗೆ ತಿಳಿಸಬಾರದು ಅಂದಿದ್ದಾರೆ. ನಾನು ನಿನಗೆ ಈ ವಿಚಾರ ತಿಳಿಸಿದ್ದೇನೆಂದು ಗೊತ್ತಾದರೆ ನನಗಿನ್ನೆಷ್ಟು ಬೈಯ್ಯುತ್ತಾರೋ? ಅಪ್ಪನಲ್ಲಿ ಈ ವಿಚಾರ ತಿಳಿದವನಂತೆ ಮಾತನಾಡಬೇಡ. ಗೊತ್ತಾಯಿತೇನೋ ಪ್ರದೀಪ?” ಗಿರಿಜಮ್ಮನ ಈ ಮಾತು ಪ್ರದೀಪನ ಕಿವಿಯೊಳಗೆ ಹೊಕ್ಕಂತೆ ಕಾಣಿಸಲಿಲ್ಲ. ಆತನ ತಲೆ ಬೇರೇನೋ ಯೋಚನೆಗೆ ಈಗಾಗಲೇ ಮುನ್ನುಡಿ ಬರೆದಿತ್ತು.

******
ಸಂಧ್ಯಾ, ವೇದವ್ಯಾಸ ಭಟ್ಟರ ಪ್ರೀತಿಯ ಮಗಳು. ಒಬ್ಬಳೇ ಮಗಳು ಎಂಬ ಕಾರಣಕ್ಕೋ, ಅವಳು ಹುಟ್ಟಿದ ಮೇಲೆಯೇ ತಾವು ಶ್ರೀಮಂತರಾದದ್ದು ಎಂಬ ಕಾರಣಕ್ಕೋ ವೇದವ್ಯಾಸ ಭಟ್ಟರಿಗೆ ಮಗನಿಗಿಂತಲೂ ಮಗಳ ಮೇಲೆ ಪ್ರೀತಿ ಜಾಸ್ತಿ. ವೆಂಕಟಕೃಷ್ಣ ಭಟ್ಟರ ಮನೆಯಿಂದ ವೇದವ್ಯಾಸ ಭಟ್ಟರ ಮನೆಗೆ ಕೇವಲ ಹತ್ತು ನಿಮಿಷಗಳ ಹಾದಿ. ಎರಡೂ ಕುಟುಂಬಗಳ ಮಧ್ಯೆ ಉತ್ತಮ ಸಂಬಂಧವಿತ್ತು. ಪ್ರದೀಪ ಮತ್ತು ಸಂಧ್ಯಾ ಚಿಕ್ಕಂದಿನಿಂದಲೂ ಜೊತೆಯಾಗಿಯೇ ಆಟವಾಡುತ್ತಾ, ತರಲೆ ತುಂಟಾಟ ನಡೆಸುತ್ತಾ ಬೆಳೆದವರು. ಶಾಲೆಗೆ ಹೋಗುತ್ತಿದ್ದದ್ದೂ ಜೊತೆಯಾಗಿಯೇ.

ಪ್ರದೀಪನಿಗೆ ಯಾವಾಗ ಚಿಗುರು ಮೀಸೆ ಮೂಡಲಾರಂಭಿಸಿತ್ತೋ ಅಂದಿನಿಂದ ಸಂಧ್ಯಾಳ ಕುರಿತು ಭಿನ್ನ ಭಾವನೆ ಬೆಳೆಯಲಾರಂಭಿಸಿತ್ತು. ತಿದ್ದಿ ತೀಡಿದಂತಿದ್ದ ಅವಳ ಬೆಳ್ಳನೆಯ ದೇಹ, ಸ್ನಿಗ್ಧ ನಗು, ಪೆದ್ದು ಪೆದ್ದು ಮಾತುಗಳು ಇವೆಲ್ಲದರಲ್ಲೂ ಏನೋ ವಿಶೇಷತೆ ಇದೆ ಎಂದು ಅವನಿಗೆ ಅನಿಸತೊಡಗಿತ್ತು. ತನ್ನ ತರಗತಿಯ ಇತರ ಹುಡುಗಿಯರಿಗಿಂತ ಭಿನ್ನವಾಗಿ ಸಂಧ್ಯಾ ಆತನ ಕಣ್ಣಿಗೆ ಗೋಚರಿಸಲಾರಂಭಿಸಿದ್ದಳು.

ಇಷ್ಟು ಸಾಲದೆಂಬಂತೆ ಪ್ರದೀಪ ಮತ್ತು ಸಂಧ್ಯಾ ಜೊತೆಜೊತೆಯಾಗಿ ನಡೆದುಕೊಂಡು ಬರುತ್ತಿದ್ದುದನ್ನು ದೂರದಿಂದ ನೋಡಿಯೇ ಆತನ ಗೆಳೆಯರು ಗುಟ್ಟಾಗಿ ಏನೋ ಹೇಳುತ್ತಾ ನಗುತ್ತಿದ್ದರು. ಇದು ಪ್ರದೀಪನಲ್ಲಿ ರೋಮಾಂಚನವನ್ನುಂಟು ಮಾಡುತ್ತಿತ್ತು. ಪ್ರದೀಪನ ಮಾತು, ನೋಟ, ವರ್ತನೆ ಇವುಗಳಲ್ಲಾಗುತ್ತಿರುವ ಬದಲಾವಣೆ ಸಂಧ್ಯಾಳಿಗೆ ತಿಳಿಯದ್ದೇನಲ್ಲ. ಸಮಾನ ವಯಸ್ಕಳೂ, ಸಮಾನ ಮನಸ್ಕಳೂ ಅವಳಾಗಿದ್ದರಿಂದ ಪ್ರದೀಪನ ಬದಲಾಗುತ್ತಿದ್ದ ವರ್ತನೆ ಅವಳಿಗೆಂದೂ ವಿಚಿತ್ರವಾಗಿ ತೋರಿರಲಿಲ್ಲ. ಅಲ್ಲದೆ ಅವಳ ಮನಸ್ಸೂ ಸಹ ಪ್ರದೀಪನ ಸಾಂಗತ್ಯವನ್ನೇ ಬಯಸುತ್ತಿತ್ತು.

ಹಾಗೂ ಹೀಗೂ ಒಂದು ದಿನ ಪ್ರದೀಪ ತನ್ನ ಅಂತರಾಳವನ್ನು ಸಂಧ್ಯಾಳೆದುರು ಬಿಚ್ಚಿಟ್ಟಿದ್ದ. “ನನಗೆ ನಿನ್ನಂಥವಳೇ ಬಾಳಸಂಗಾತಿಯಾಗಿ ಬರಬೇಕೆಂದು ಆಸೆ...” ಎಂದು ಪ್ರಾರಂಭಿಸಿದ ಮಾತನ್ನು “ನೀನು ನನ್ನನ್ನು ಮದುವೆಯಾಗುತ್ತೀಯಾ?” ಎಂಬ ಕೋರಿಕೆಯವರೆಗೆ ಕೊಂಡೊಯ್ದಿದ್ದ. ಅವಳು ಒಪ್ಪಿಗೆಯ ನಗುವನ್ನು ಚೆಲ್ಲುವುದರೊಂದಿಗೆ ಜೋಡಿ ಹಕ್ಕಿಗಳ ಪ್ರೇಮಯಾನ ಆರಂಭವಾಗಿತ್ತು.

ಪ್ರದೀಪ ಹಾಗೂ ಸಂಧ್ಯಾಳ ಪ್ರೇಮ ವಿಚಾರ ಕೆಲವೇ ದಿನಗಳಲ್ಲಿ ಊರವರ ಬಾಯಿಗೆ ಆಹಾರವಾಗಿತ್ತು. ಅವರಿಬ್ಬರ ನಡುವಿನ ಅನ್ಯೋನ್ಯತೆ ಹೆಚ್ಚುತ್ತಾ ಹೋದಂತೆ ಜನರ ಗುಸುಗುಸು ಮಾತುಗಳೂ ಸಹ ಹೆಚ್ಚಾಗಿದ್ದವು. ಪ್ರೇಮಕಥೆಗೆ ರೆಕ್ಕೆಪುಕ್ಕಗಳೂ ಸೇರಿಕೊಂಡು ಮನೆಯಿಂದ ಮನೆಗೆ ಹಬ್ಬಲಾರಂಭಿಸಿತ್ತು.

ಊರೆಲ್ಲಾ ಹರಡುತ್ತಿದ್ದ ಪ್ರದೀಪ ಮತ್ತು ಸಂಧ್ಯಾಳ ಪ್ರಣಯ ಪ್ರಸಂಗ ವೇದವ್ಯಾಸ ಭಟ್ಟರಿಗೆ ತಿಳಿಯುವುದಕ್ಕೆ ಹೆಚ್ಚು ದಿನವೇನೂ ಹಿಡಿಯಲಿಲ್ಲ. ಈ ಕುರಿತಾಗಿ ಮಗಳನ್ನು ಪ್ರಶ್ನಿಸಿದ್ದರು. ಸಂಧ್ಯಾ ತನ್ನ ಮತ್ತು ಪ್ರದೀಪನ ನಡುವಿನ ಪ್ರೀತಿಯನ್ನು ಮುಚ್ಚಿಡುವ ಕೆಲಸ ಮಾಡಲಿಲ್ಲ. ತನ್ನ ನಿಷ್ಕಲ್ಮಶ ಪ್ರೀತಿಗೆ ಅಪ್ಪ ಅಡ್ಡಿಯಾಗಲಿಕ್ಕಿಲ್ಲ ಎಂಬ ವಿಶ್ವಾಸ ಅವಳಿಗಿತ್ತು. ವೇದವ್ಯಾಸ ಭಟ್ಟರು ಕೂಡಾ ಮಗಳು ತನ್ನ ಮೇಲಿಟ್ಟಿದ್ದ ನಂಬಿಕೆಯನ್ನು ಹುಸಿಗೊಳಿಸಲಿಲ್ಲ. ಅವರಿಬ್ಬರ ಪ್ರೀತಿಯನ್ನು ಒಪ್ಪಿಕೊಂಡು, ಶೀಘ್ರವೇ ವಿವಾಹವನ್ನು ನಡೆಸುವ ನಿರ್ಧಾರ ಕೈಗೊಂಡರು.

ತಮ್ಮಿಬ್ಬರ ಮದುವೆಗೆ ಸಂಧ್ಯಾಳ ತಂದೆ ಒಪ್ಪಿದ್ದಾರೆಂದು ತಿಳಿದ ಪ್ರದೀಪ ತನ್ನ ಮನೆಯವರಿಗೂ ಈ ವಿಷಯ ತಿಳಿಸಿದ್ದ. ಸಂಧ್ಯಾ ಒಳ್ಳೆಯ ಗುಣದವಳು ಎನ್ನುವ ಅನಿಸಿಕೆ ಇದ್ದುದರಿಂದ ಹಾಗೂ ತಮ್ಮ ಮನೆಗೆ ಹೊಂದಿಕೊಂಡಾಳು ಎಂಬ ನಂಬಿಕೆ ಬಲವಾಗಿದ್ದುದರಿಂದ ವೆಂಕಟಕೃಷ್ಣ ಭಟ್ಟರು ಮತ್ತು ಗಿರಿಜಮ್ಮ ಮದುವೆಗೆ ತಮ್ಮ ಸಮ್ಮತಿಯನ್ನು ಸೂಚಿಸಿದ್ದರು. ನಿಶ್ಚಿತಾರ್ಥಕ್ಕೂ ಮುಂಚಿತವಾಗಿ ವೇದವ್ಯಾಸ ಭಟ್ಟರು ಪ್ರದೀಪ ಮತ್ತು ಸಂಧ್ಯಾಳ ಜಾತಕಫಲವನ್ನು ತಮ್ಮದೇ ಕುಟುಂಬದ ಜೋಯಿಸರಲ್ಲಿ ಕೇಳಿದ್ದರು. ವಿಘ್ನ ಎದುರಾದದ್ದು ಇಲ್ಲಿಯೇ. ಜಾತಕ ಒಂದಿಷ್ಟೂ ಕೂಡಿ ಬರುವುದಿಲ್ಲವೆಂದೂ, ಒಂದು ವೇಳೆ ಮದುವೆ ನಡೆದರೆ ಸಂಸಾರಕ್ಕೆ ಕಂಟಕ ತಪ್ಪಿದ್ದಲ್ಲವೆಂದು ಜೋಯಿಸರು ಖಡಾಖಂಡಿತವಾಗಿ ನುಡಿದಿದ್ದರು. ವೇದವ್ಯಾಸ ಭಟ್ಟರಿಗೆ ಇಂತಹದ್ದರಲ್ಲಿ ನಂಬಿಕೆ ಜಾಸ್ತಿಯೇ. ಜೋಯಿಸರ ಮಾತನ್ನು ಬಲವಾಗಿ ಹಚ್ಚಿಕೊಂಡ ಭಟ್ಟರು ತನ್ನ ಮಗಳನ್ನು ಯಾವುದೇ ಕಾರಣಕ್ಕೂ ಪ್ರದೀಪನಿಗೆ ಮದುವೆ ಮಾಡಿಕೊಡುವುದಿಲ್ಲವೆಂಬ ನಿರ್ಧಾರಕ್ಕೆ ಬಂದರು. ಇದನ್ನು ವೆಂಕಟಕೃಷ್ಣ ಭಟ್ಟರಲ್ಲಿ ತಿಳಿಸಿಯೂಬಿಟ್ಟರು. ತನ್ನ ಮಗಳಿಗೂ ಈ ವಿಚಾರವನ್ನು ತಿಳಿಸಿ, ಪ್ರದೀಪನನ್ನು ಮರೆತುಬಿಡುವಂತೆ ಹೇಳಿದರು. ಮಗಳು ಹಠ ಹಿಡಿದಾಗ ಸಾಯುವ ನಾಟಕವಾಡಿ, ಬಲವಂತವಾಗಿ ಅವಳನ್ನು ಪ್ರದೀಪನಿಂದ ದೂರವಾಗುವಂತೆ ಮಾಡಿದರು.

ವಿಷಯ ತಿಳಿದ ಪ್ರದೀಪ ದಂಗಾಗಿ ಹೋಗಿದ್ದ. ವೇದವ್ಯಾಸ ಭಟ್ಟರ ಮನೆಗೆ ಹೋಗಿ ಅವರನ್ನು ಬಗೆ ಬಗೆಯಾಗಿ ಒಪ್ಪಿಸಲು ಪ್ರಯತ್ನಿಸಿದ. ಆದರೆ ವೇದವ್ಯಾಸ ಭಟ್ಟರ ನಿರ್ಧಾರ ಬದಲಾಗದಷ್ಟು ದೃಢವಾಗಿತ್ತು. “ನನ್ನನ್ನು ಮರೆತುಬಿಡು” ವೇದವ್ಯಾಸ ಭಟ್ಟರ ಒತ್ತಾಯಕ್ಕೆ ಸಂಧ್ಯಾ ಈ ಮಾತನ್ನು ಪ್ರದೀಪನೆದುರು ಆಡುವುದರೊಂದಿಗೆ ಅವರ ಪ್ರೀತಿಗೆ ಅಂತಿಮ ಮುದ್ರೆ ಬಿದ್ದಿತ್ತು. ಇದಾಗಿ ಕೆಲವೇ ದಿನಗಳಲ್ಲಿ ಭಟ್ಟರು ತಮ್ಮ ಮಗಳಿಗೆ ಉಡುಪಿಯ ಸಂಬಂಧವೊಂದನ್ನು ಗೊತ್ತುಮಾಡಿದ್ದರು. ನಿಶ್ಚಿತಾರ್ಥವನ್ನೂ ತರಾತುರಿಯಲ್ಲಿ ಮಾಡಿ ಮುಗಿಸಿದ್ದರು. ಈ ವಿಷಯ ತಿಳಿದ ಪ್ರದೀಪ ಹುಚ್ಚನಂತಾಗಿಹೋಗಿದ್ದ. ವೇದವ್ಯಾಸ ಭಟ್ಟರ ಮನೆಗೆ ಹೋಗಿ ಅವರನ್ನು ಯದ್ವಾತದ್ವಾ ಬೈದು ಬಂದಿದ್ದ.

ಮಗನ ಪರಿಸ್ಥಿತಿ ಕಂಡು ವೆಂಕಟಕೃಷ್ಣ ಭಟ್ಟರು ಮತ್ತು ಗಿರಿಜಮ್ಮ ಆತಂಕಿತರಾಗಿ ಹೋಗಿದ್ದರು. ಇನ್ನು ತಾವು ಸುಮ್ಮನಿದ್ದರೆ ಮಗ ತಮ್ಮ ಕೈತಪ್ಪಿ ಹೋಗುತ್ತಾನೆ ಎಂದು ಅರಿತ ವೆಂಕಟಕೃಷ್ಣ ಭಟ್ಟರು ಬೆಂಗಳೂರಿನಲ್ಲಿದ್ದ ತನ್ನ ತಮ್ಮನನ್ನು ಕರೆಸಿ ಅವನ ಜೊತೆಗೆ ಪ್ರದೀಪನನ್ನು ಬೆಂಗಳೂರಿಗೆ ಕಳುಹಿಸಿಕೊಟ್ಟಿದ್ದರು. ಬದಲಾದ ವಾತಾವರಣ ಪ್ರದೀಪನ ಮನಃಸ್ಥಿತಿಯನ್ನು ಬದಲಾಯಿಸುವಲ್ಲಿಯೂ ನೆರವಾಗಿತ್ತು. ತನ್ನ ವಿದ್ಯಾಭ್ಯಾಸಕ್ಕೆ ಅರ್ಹವಾದ ಉದ್ಯೋಗವನ್ನು ಗಳಿಸಿಕೊಂಡವನು ಆರು ವರ್ಷ ಊರಿನ ಕಡೆಗೆ ಮುಖವನ್ನೇ ಮಾಡಿರಲಿಲ್ಲ.

*******
......ಯೋಚನಾ ಪ್ರಪಂಚದಿಂದ ನಿಧಾನವಾಗಿ ಪ್ರದೀಪನ ಮನಸ್ಸು ನೈಜ ಜಗತ್ತಿಗೆ ಕಾಲಿಟ್ಟಿತು. ತನ್ನ ಮತ್ತು ಸಂಧ್ಯಾಳ ನಡುವಿನ ಪ್ರೇಮ ಹೊಸರೂಪಕ್ಕೆ ತಿರುಗುವಷ್ಟರಲ್ಲಿ ನೈಜರೂಪವನ್ನೂ ಕಳೆದುಕೊಂಡು ವಿರೂಪಗೊಂಡದ್ದನ್ನು ನೆನೆದು ಆತನ ಕಣ್ಣಂಚು ತೇವಗೊಂಡಿತ್ತು.

ಬೆಂಗಳೂರಿನಲ್ಲಿ ಬಾಳು ಕಟ್ಟಿಕೊಂಡ ಬಳಿಕ ಊರಲ್ಲಾದ ಬದಲಾವಣೆಗಳು ಪ್ರದೀಪನ ಅರಿವಿಗೇ ಬಂದಿರಲಿಲ್ಲ. ವಿಚಾರಿಸುವ ಆಸಕ್ತಿಯನ್ನೇ ಆತ ಕಳೆದುಕೊಂಡಿದ್ದ. ಆತನ ತಂದೆ- ತಾಯಿ ಉದ್ದೇಶಪೂರ್ವಕವಾಗಿಯೇ ಈ ವಿಚಾರಗಳನ್ನು ಮುಚ್ಚಿಟ್ಟಿದ್ದರು. ಈ ಕಾರಣದಿಂದಾಗಿಯೇ ಸಂಧ್ಯಾಳ ಗಂಡ ತೀರಿಕೊಂಡ ವಿಚಾರ ಪ್ರದೀಪನಿಗೆ ಇಷ್ಟು ವರ್ಷವಾದರೂ ತಿಳಿಯದೇ ಹೋದದ್ದು.

ಮರುದಿನ ಬೆಳಗ್ಗೆ. ಗಿರಿಜಮ್ಮ ಅಡುಗೆ ಕೋಣೆಯಲ್ಲಿದ್ದರು. ವೆಂಕಟಕೃಷ್ಣ ಭಟ್ಟರು ದಿನಪತ್ರಿಕೆಯನ್ನು ಓದುತ್ತಾ ಕುಳಿತಿದ್ದರು. ಅವರ ಬಳಿಗೆ ಬಂದ ಪ್ರದೀಪ “ಅಪ್ಪ, ನಿಮ್ಮಲ್ಲಿ ಮಾತನಾಡುವುದಕ್ಕಿದೆ” ಎಂದ. ತಲೆಯೆತ್ತಿ ಮಗನನ್ನು ನೋಡಿದ ವೆಂಕಟಕೃಷ್ಣ ಭಟ್ಟರ ಕಣ್ಣುಗಳು ಮಾತಿಗೆ ಒಪ್ಪಿಗೆಯನ್ನು ರವಾನಿಸಿದ್ದವು. ಅಪ್ಪನ ಒಪ್ಪಿಗೆಯನ್ನು ಅರಿತ ಪ್ರದೀಪ ಮಾತು ಶುರುಮಾಡಿದ. “ಸಂಧ್ಯಾಳ ಗಂಡ ತೀರಿಹೋಗಿದ್ದಾನೆಂಬ ವಿಷಯ ನನಗೆ ನಿನ್ನೆ ತಿಳಿಯಿತು” “ಯಾರು ನಿನಗೆ ಈ ವಿಚಾರ ತಿಳಿಸಿದ್ದು?” ಭಟ್ಟರ ಕಣ್ಣುಗಳು ಪತ್ನಿ ಗಿರಿಜಮ್ಮನನ್ನೇ ದುರುಗುಟ್ಟಿ ನೋಡತೊಡಗಿದ್ದವು. “ಯಾರು ಹೇಳಿದ್ದು ಅನ್ನುವುದು ಮುಖ್ಯವಲ್ಲ ಅಪ್ಪ. ಈ ವಿಚಾರ ನಿಜ ತಾನೇ?” ಪ್ರದೀಪನ ಮಾತುಗಳಲ್ಲಿ ಕುತೂಹಲವಿತ್ತು.

“ಹೌದು ನಿಜ. ಅದನ್ನೆಲ್ಲಾ ಈಗ ಯಾಕೆ ಕೇಳುತ್ತಿದ್ದೀಯಾ?” ಭಟ್ಟರು ಪ್ರಶ್ನಿಸಿದ್ದರು. “ನಾನು ಸಂಧ್ಯಾಳನ್ನು ಮದುವೆಯಾಗಬೇಕೆಂದಿದ್ದೇನೆ” ಬಿಲ್ಲಿನಿಂದ ಹೊರಟ ಬಾಣದಂತಹ ಪರಿಣಾಮವನ್ನು ಪ್ರದೀಪನ ಈ ಒಂದು ಮಾತು ಉಂಟುಮಾಡಿತು. “ಏನೋ ಹೇಳ್ತಿದ್ದೀಯಾ? ಗಂಡನನ್ನು ಕಳೆದುಕೊಂಡವಳನ್ನು ಮದುವೆಯಾಗಲು ಹೊರಟಿದ್ದೀಯಲ್ಲಾ, ನಿನಗೆ ಬುದ್ಧಿ ಇದೆಯಾ?” ಭಟ್ಟರ ಮಾತಿನಲ್ಲಿ ಕೋಪಮಿಶ್ರಿತ ಆತಂಕವಿತ್ತು.

“ಇಲ್ಲಪ್ಪ. ನಾನು ನಿರ್ಧರಿಸಿದ್ದಾಗಿದೆ. ನನ್ನ ಮುಂದಿರುವ ಆಯ್ಕೆ ಎರಡೇ. ಒಂದು ಅವಳನ್ನು ಮದುವೆಯಾಗುವುದು. ಇಲ್ಲವಾದಲ್ಲಿ ಬ್ರಹ್ಮಚಾರಿಯಾಗಿ ಉಳಿದುಕೊಳ್ಳುವುದು. ನಾನ್ಯಾವುದನ್ನು ಆರಿಸಿಕೊಳ್ಳಬೇಕೋ ನೀವೇ ಹೇಳಿ” ಪ್ರದೀಪನ ನಿರ್ಧಾರ ಕಿತ್ತೊಗೆಯಲಾರದಷ್ಟು ಗಟ್ಟಿಯಾಗಿತ್ತು. ಭಟ್ಟರು ಮತ್ತು ಗಿರಿಜಮ್ಮ ಆತನನ್ನು ಎಷ್ಟೇ ಒತ್ತಾಯಿಸಿದರೂ ಆತ ತನ್ನ ನಿರ್ಧಾರದಿಂದ ಹಿಂದೆ ಸರಿಯಲೇ ಇಲ್ಲ. “ಅವಳು ನಿನ್ನನ್ನು ಒಪ್ಪಿಕೊಳ್ಳುತ್ತಾಳೋ ಇಲ್ಲವೋ ಯಾರಿಗೆ ಗೊತ್ತು” ಭಟ್ಟರು ತಮ್ಮ ಬತ್ತಳಿಕೆಯ ಕೊನೆಯ ಬಾಣವನ್ನು ಪ್ರಯೋಗಿಸಿದ್ದರು. “ಖಂಡಿತಾ ಒಪ್ಪಿಕೊಳ್ಳುತ್ತಾಳೆ” ದಿಟ್ಟವಾಗಿ ನುಡಿದ ಪ್ರದೀಪನ ದೃಷ್ಟಿ ಗೆದ್ದಲು ಹಿಡಿದಿದ್ದ ಮನೆಯ ಹೊಸ್ತಿಲಿನ ಕಡೆಗೆ ನೆಟ್ಟಿತ್ತು.

ಅದೇ ದಿನ ಸಂಜೆ ವೆಂಕಟಕೃಷ್ಣ ಭಟ್ಟರು ಮತ್ತು ಪ್ರದೀಪನ ಕಾಲುಗಳು ವೇದವ್ಯಾಸ ಭಟ್ಟರ ಮನೆಯ ಹಾದಿಯನ್ನು ತುಳಿದಿದ್ದವು. ನಾಯಿ ಒಂದೇ ಸಮನೆ ಬೊಗಳುತ್ತಿದ್ದುದನ್ನು ಕೇಳಿ ಹೊರಬಂದ ವೇದವ್ಯಾಸ ಭಟ್ಟರು ಅಂಗಳದಲ್ಲಿ ನಿಂತಿದ್ದ ವೆಂಕಟಕೃಷ್ಣ ಭಟ್ಟರು ಮತ್ತು ಪ್ರದೀಪನನ್ನು ಕಂಡು ಪೆಚ್ಚಾಗಿದ್ದರು. ಆದರೂ ಕಷ್ಟಪಟ್ಟು ನಗುವನ್ನು ಮುಖದ ಮೇಲೆ ತಂದುಕೊಂಡು ಅವರನ್ನು ಮನೆಯೊಳಕ್ಕೆ ಆಹ್ವಾನಿಸಿದ್ದರು. ಉಭಯ ಕುಶಲೋಪರಿ ನಡೆದ ಮೇಲೆ ಬಂದ ಕಾರಣವೇನೆಂದು ಕೇಳಿದ್ದರು ವೇದವ್ಯಾಸ ಭಟ್ಟರು. “ನನ್ನ ಮಗ ನಿಮ್ಮ ಮಗಳನ್ನು ಪ್ರೀತಿಸುತ್ತಿದ್ದ ವಿಷಯ ನಿಮಗೆ ತಿಳಿಯದ್ದೇನಲ್ಲ...” ವೆಂಕಟಕೃಷ್ಣ ಭಟ್ಟರು ಸಂಕೋಚದಿಂದಲೇ ಮಾತನ್ನಾರಂಭಿಸಿದ್ದರು. ವೇದವ್ಯಾಸ ಭಟ್ಟರ ಮುಖ ಸಪ್ಪಗಾಗಿತ್ತು. “ನಿಮ್ಮ ಮಗಳ ಗಂಡ ತೀರಿಹೋದ ವಿಷಯ ಅವನಿಗೆ ನಿನ್ನೆಯಷ್ಟೇ ತಿಳಿಯಿತು. ನಿಮ್ಮ ಮಗಳನ್ನು ಮದುವೆಯಾಗಿ ಅವಳಿಗೆ ಬಾಳು ನೀಡಬೇಕೆಂಬ ನಿರ್ಧಾರ ಮಾಡಿದ್ದಾನೆ. ಇದಕ್ಕೆ ನೀವು ಒಪ್ಪಿಗೆ ನೀಡಿದರೆ...” ಮಾತನ್ನು ಅರ್ಧಕ್ಕೇ ನಿಲ್ಲಿಸಿದ ವೆಂಕಟಕೃಷ್ಣ ಭಟ್ಟರು ವೇದವ್ಯಾಸ ಭಟ್ಟರ ಒಪ್ಪಿಗೆಗಾಗಿ ಕಾದುಕುಳಿತರು.

ಪ್ರದೀಪನನ್ನೊಮ್ಮೆ ನೋಡಿದ ವೇದವ್ಯಾಸ ಭಟ್ಟರು ತುಸು ಮೆಲುದನಿಯಲ್ಲಿ ನುಡಿದರು- “ಅವರ ಮದುವೆಗೆ ನಾನು ಅಂದೇ ಒಪ್ಪಿಗೆ ನೀಡಿದ್ದೆ. ಆದರೆ ಜಾತಕ ಕೂಡಿಬರದೇ ಆ ಮದುವೆ ನಿಂತುಹೋಯಿತು. ಜಾತಕ ಕೂಡಿಬಂದ ಹುಡುಗ ಮದುವೆಯಾಗಿ ಒಂದು ತಿಂಗಳಲ್ಲೇ ತೀರಿಹೋದ. ಈಗ ನನಗೆ ಜಾತಕದ ಮೇಲೆ ನಂಬಿಕೆಯಿಲ್ಲ. ನನ್ನ ಮಗಳು ಒಪ್ಪಿದರೆ ನನ್ನದೇನೂ ಅಭ್ಯಂತರವಿಲ್ಲ” ಎಂದು ಹೇಳಿದ ವೇದವ್ಯಾಸ ಭಟ್ಟರು ಮಗಳನ್ನು ಕರೆದರು. ಚಾವಡಿಗೆ ಬಂದುನಿಂತ ಸಂಧ್ಯಾಳ ಬೋಳುಮುಖವನ್ನು ನೋಡುವುದು ಪ್ರದೀಪನಿಗೆ ಕಷ್ಟವಾಯಿತು. “ಸಂಧ್ಯಾ, ನೀನು ನನ್ನನ್ನು ಮದುವೆಯಾದರೆ ನಾನು ನಿನ್ನನ್ನು ಚೆನ್ನಾಗಿ ನೋಡಿಕೊಳ್ಳುತ್ತೇನೆ” ಪ್ರದೀಪನ ಮಾತನ್ನು ಕೇಳಿದ ಸಂಧ್ಯಾ ನಿಧಾನಕ್ಕೆ ತಲೆಯನ್ನು ಮೇಲಕ್ಕೆತ್ತಿದಳು. ಪ್ರದೀಪ ಹಾಗೂ ಸಂಧ್ಯಾಳ ಕಣ್ಣುಗಳು ಮೌನ ಸಂವಾದವನ್ನು ನಡೆಸಿದ್ದವು. “ನನಗೆ ಒಪ್ಪಿಗೆ ಇದೆ” ಬಹಳ ವರ್ಷಗಳಿಂದ ಮಾತೇ ಮರೆತಿದ್ದ ಸಂಧ್ಯಾಳ ಮಾತುಗಳು ಹೊರಬಂದವು. ಅಲ್ಲಿದ್ದ ಎಲ್ಲರ ಮುಖದಲ್ಲಿಯೂ ನಸುನಗು ಮೂಡಿತು. ಪಶ್ಚಿಮದಲ್ಲಿ ಮುಳುಗುತ್ತಿದ್ದ ಸೂರ್ಯನ ಬೆಳಕು ಕಿಟಕಿಯ ಮೂಲಕವಾಗಿ ಒಳಬಂದು ಸಂಧ್ಯಾಳ ಮುಖವನ್ನು ಬೆಳಗಿತು. ಅದು ಆಕೆಗೆದುರಾಗಿ ಕುಳಿತಿದ್ದ ಪ್ರದೀಪನ ಮುಖದಲ್ಲಿಯೂ ಪ್ರತಿಫಲಿಸಿತು.

*****

 

ವಿಶ್ವನಾಥ್ ಎನ್. ನೇರಳಕಟ್ಟೆ

ಲೇಖಕ ವಿ.ಎನ್. ನೇರಳಕಟ್ಟೆ ಕಾವ್ಯನಾಮದ ಮೂಲಕ ಕತೆ-ಕಾವ್ಯ ರಚನೆಯಲ್ಲಿ ತೊಡಗಿಸಿಕೊಂಡಿದ್ದು, ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ತಾಲ್ಲೂಕಿನ ಪಂತಡ್ಕದ ವಿಶ್ವನಾಥ್ ಎನ್. ನೇರಳಕಟ್ಟೆ ಅವರು, ‘ಡಾ.ನಾ. ಮೊಗಸಾಲೆಯವರ ಸಾಹಿತ್ಯದಲ್ಲಿ ಪ್ರಾದೇಶಿಕತೆ’ ವಿಷಯದಲ್ಲಿ ಪಿಎಚ್‌ಡಿ ಸಂಶೋಧನೆ ನಡೆಸಿದ್ದಾರೆ. ಪ್ರಸ್ತುತ ಸಿದ್ಧಕಟ್ಟೆಯ ಸರ್ಕಾರಿ ಪದವಿ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿದ್ದಾರೆ. ‘ತುಸು ತಿಳಿದವನ ಪಿಸುಮಾತು’ ಅಂಕಣ ಬರಹ ಬರೆಯುತ್ತಿದ್ದಾರೆ.

ಕೃತಿಗಳು:   ಮೊದಲ ತೊದಲು, ಕಪ್ಪು ಬಿಳುಪು (ಕವನ ಸಂಕಲನ), ಹರೆಯದ ಕೆರೆತಗಳು (ಚುಟುಕು ಸಂಕಲನ) ಮತ್ತು ಸಾವಿರದ ಮೇಲೆ (ನಾಟಕ). ಇವರಿಗೆ ಪುಟ್ಟಣ್ಣ ಕುಲಾಲ್‌ ಯುವ ಕತೆಗಾರ ಪುರಸ್ಕಾರ’, ‘ಯೆನಪೋಯ ಎಕ್ಸಲೆನ್ಸಿ ಪ್ರಶಸ್ತಿ ಹಾಗೂ ಚಂದನ ಸಾಹಿತ್ಯ ವೇದಿಕೆ ನೀಡುವ ಸಾಹಿತ್ಯ ರತ್ನ ಪ್ರಶಸ್ತಿ ಸಂದಿವೆ.

More About Author