Story

ಜಮೀಲಾ

ಜಮೀಲಾ ಕರಮ್ ಎಂಬ ಹೆಸರಿನ ಮೊದಲಿಗೆ ಡಿ ಅಕ್ಷರವಿತ್ತು. ಅದನ್ನು ಏಕೆ ಸೇರಿಸುತ್ತಾರೆಯೋ ನನಗೆ ಗೊತ್ತಿಲ್ಲ. ಆದರೆ ಆ ಫೇಸ್ಬುಕ್ಕಿನ ಅರಬ್ಬಿ ಹುಡುಗಿ ನನಗೆ ಹೇಳಿದ್ದು ಜಮೀಲಾ ಎಂದರೆ ಮಹಾ ಸುಂದರಿ ಹಾಗೂ ಸದಾ ಬೆಳಗುತ್ತಿರುವವಳು ಎಂದು. ನನಗೆ ಆ ಜಮೀಲ ಫೇಸ್‌ಬುಕ್ ಫ್ರೆಂಡ್ ಆಗಬೇಕು ಎನಿಸಿದ್ದು ಏಕೆಂದರೆ ಆಕೆಗೆ ನಾನು ಚೆನ್ನಾಗಿ ಬಲ್ಲ ಇಬ್ಬರು ಕನ್ನಡದಲ್ಲಿ ಬರೆಯುವವರು ಮ್ಯೂಚುವಲ್ ಫ್ರೆಂಡ್ಸ್ ಆಗಿದ್ದರು ಎನ್ನುವುದಕ್ಕೆ. ಆ ಇಬ್ಬರಲ್ಲಿ ಒಬ್ಬರು ಮಂಜರಿ ಪ್ರಕಾಶ್ - ಬಹಳ ಹೈ ಫ್ಲೈಯಿಂಗ್. ಆದರೆ ಇನ್ನೊಬ್ಬರು ಡೌನ್ ಟು ಅರ್ಥ್ ಆಗಿದ್ದರು. ಡೌನ್ ಟು ಅರ್ಥ್ ಆಗಿದ್ದವರು ಕತೆಗಾರರಾಗಿ ನನಗೆ ಬಹಳ ಪರಿಚಯವಿದ್ದ ನಾಗರಾಜು ಹಳೇಪಾಳ್ಯ. ನಾನು ಜಮೀಲ ಫೇಸ್ಬುಕ್ ಪ್ರೊಫೈಲ್ ಗಮನಿಸಿದಾಗ ಆಕೆ ಆಧುನಿಕ ಇಂಗ್ಲಿಷ್ ಮತ್ತು ಅಮೆರಿಕನ್ ಲಿಟರೇಚರ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದ, ಅರಬ್ಬಿ ಭಾಷೆಯಲ್ಲಿ ಕಾವ್ಯ ಬರೆಯುವ ಹೆಣ್ಣು ಎಂದು ತಿಳಿದು ಬಂದಿತ್ತು. ಆಕೆಯ ಫೇಸ್‌ಬುಕ್ ಪ್ರೊಫೈಲ್ ಚಿತ್ರ ಆಗಷ್ಟೇ ಕಣ್ಣು ತೆರೆದು ಪ್ರಪಂಚವನ್ನು ಬೆರಗಿನಿಂದ ನೋಡುತ್ತಿರುವ ಹೆಣ್ಣು ಮಗುವನ್ನು ನೆನಪಿಗೆ ತರುತ್ತಿತ್ತು. ಆಕೆಯ ಖಾಸಗಿ ಬದುಕಿನ ಬಗ್ಗೆ ಆಕೆ ತನ್ನ ಪ್ರೊಫೈಲ್ನಲ್ಲಿ ಏನನ್ನೂ ಬರೆದುಕೊಂಡಿರಲಿಲ್ಲ. ತನ್ನದು ಇಸ್ಮಾಯಿಲಿಯಾ ಪಟ್ಟಣ, ತಾನೀಗ ಕೈರೋದಲ್ಲಿ ವಾಸಿಸುತ್ತಿರುವುದು ಹಾಗೂ ತಾನು ಕಲಿತದ್ದು ಈಸ್ಟ್ ಆಂಗ್ಲಿಯಾ ಯೂನಿವರ್ಸಿಟಿಯಲ್ಲಿ ಎಂದಷ್ಟು ಮಾತ್ರ ನಮೂದಿಸಿದ್ದಳು.

 

ಸ್ವಲ್ಪ ಇಂಟಲೆಕ್ಚುವಲ್ ವ್ಯಕ್ತಿತ್ವಗಳನ್ನು ಸ್ನೇಹಿತರನ್ನಾಗಿ ಹೊಂದುವುದು ನನಗೆ ಬಹಳ ಇಷ್ಟದ ಕೆಲಸ. ಬೇರೆ ಬೇರೆ ಪ್ರದೇಶಗಳ ಜನರಾದರೆ ನನಗೆ ಹೆಚ್ಚಿನ ಆಸಕ್ತಿ ಇತ್ತು. ಹಾಗಾಗಿ ನಾನು ಜಮೀಲಗೆ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿದ್ದೆ. ನಾನು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರೊಫೈಲ್ ಲಾಕ್ ಮಾಡುವ ಪೈಕಿಯವನಲ್ಲ, ಬದಲಿಗೆ ವೃತ್ತಿ, ಪ್ರವೃತ್ತಿ ಜೊತೆಗೊಂದಿಷ್ಟು ಖಾಸಗಿ ವಿಷಯಗಳನ್ನು... ಉದಾಹರಣೆಗೆ ಮದುವೆ ಮಕ್ಕಳು ಇತ್ಯಾದಿ ಪ್ರೊಫೈಲ್ನಲ್ಲಿ ಬರೆದುಕೊಳ್ಳುತ್ತಿದ್ದೆ. ನಾನೊಬ್ಬ ಕಥೆಗಾರ, ಕಾದಂಬರಿಕಾರ, ವಿಮರ್ಶಕ, ಅನುವಾದಕ ಇತ್ಯಾದಿಗಳನ್ನೆಲ್ಲ ಸೋದಾಹರಣ ಬಣ್ಣಿಸಿಕೊಂಡಿದ್ದೆ. ಪ್ರಾಯಶಃ ವಿವರಗಳನ್ನು ಜಮೀಲ ಪರಿಶೀಲಿಸಿರಬಹುದು, ಹಾಗಾಗಿ ರಿಕ್ವೆಸ್ಟ್ ಕಳಿಸಿದ ಮರುದಿವಸ ಆಕೆ ಅದನ್ನು ಒಪ್ಪಿಕೊಂಡಿದ್ದಳು. ಬಳಿಕ ನಾನು ನನ್ನ ಕೆಲವು ಗೆಳೆಯರ ಬಳಿ ನನ್ನ ಮತ್ತು ಆಕೆಯ ಫೇಸ್ಬುಕ್ ಗೆಳೆತನದ ಬಗ್ಗೆ ಹೇಳಿ ಒಬ್ಬ ಅರಬ್ ಭಾಷೆಯಲ್ಲಿ ಕಾವ್ಯ ಬರೆಯುವ ಹೆಣ್ಣಿನ ಸ್ನೇಹದಿಂದ ನಾನು ಏನೇನನ್ನು ಅರಿಯಬಹುದು ಎಂಬುದನ್ನು ಕನಸಿಸಿ ವಿವರಿಸಿದೆ. ಆ ಕುರಿತು ನನಗೆ ನಿಜವಾದ ಆಸಕ್ತಿಯೂ ಇತ್ತು ಎನ್ನಿ. ಕನ್ನಡದ ಕವಿ ಸ್ನೇಹಿತೆ ಅರಬ್ಬಿ ಮಹಿಳಾ ಕಾವ್ಯವನ್ನು ಅಭ್ಯಾಸ ಮಾಡಿ ಒಂದಷ್ಟು ಕವಿತೆಗಳನ್ನು ಕನ್ನಡಕ್ಕೆ ಅನುವಾದ ಮಾಡಿ ಪ್ರಕಟಿಸಿದ್ದರು ಎನ್ನುವುದನ್ನು ಬಿಟ್ಟರೆ ಅರಬ್ ಮಹಿಳಾ... ಮಹಿಳಾ ಏನು ಬಂತು, ಒಟ್ಟಾರೆಯಾಗಿ ಅರಬ್ ಜಗತ್ತೇ ನನಗೆ ಸಂಪೂರ್ಣ ಅಪರಿಚಿತವೂ ಪರಕೀಯವೂ ಆಗಿತ್ತು.

ಇಸ್ಮಾಯಿಲಿಯಾಗೂ ಕೈರೋಗೂ ನೂರು ಮೈಲಿಗಳ ದೂರವೆಂದು ಜಮೀಲಾ ಹೇಳಿದ್ದಳು. ನನಗೆ ಒರ‍್ಹಾನ್ ಪಾಮುಕ್‌ನ ಇಸ್ತಾಂಬುಲ್ ನಗರದಷ್ಟು ಮಟ್ಟಿಗಿನ ಚಿತ್ರ ಇತರೆ ಯಾವುದೇ ಅರಬ್ ನಗರದ ಬಗ್ಗೆ ಇರುವುದನ್ನು ಓದಿರಲಿಲ್ಲ. ಅವನು ತನ್ನ ರೆಡ್ ಹೇರ್ಡ್ ವುಮನ್ ಕಾದಂಬರಿಯಲ್ಲಿ ಇಸ್ತಾಂಬುಲ್ ನಗರದಿಂದ ಹೋದ ಅಲ್ಲಿನವರಿಬ್ಬರು ಬಾವಿ ತೆಗೆದ ವಿವರಣೆಯಿದೆ. ಮಿಲಿಟರಿ ಕ್ಯಾಂಪಿನ ಬಳಿಯಲ್ಲಿದ್ದ ಆ ಹೊಲದವರೆಗಿನ ಸ್ಥಳಗಳ ವರ್ಣನೆ ಪಾಮುಕ್ ಕೊಟ್ಟಿದ್ದ. ಅದು ಹೊಲ ಕೊಯ್ದು ದನ ತೊಂಡುಮೇದಿರುವ ನಮ್ಮ ಊರ ಹೊಲಗಳ ನಡುವೆ ಸಾಗುವ ವಾಹನದಲ್ಲಿ ಕೂತ ಹುಡುಗನ ವರ್ಣನೆಯಂತೆಯೂ, ಇಸ್ತಾಂಬುಲ್ ನಗರ ಬೆಳೆಯುವುದು ನಮ್ಮೂರಿನವರೆಗೂ ಬೆಳೆದು ಬಂದ ಬೆಂಗಳೂರಿನ ಲೇಔಟುಗಳಂತೆಯೇ ತೋರಿತ್ತು. ನೂರು ಮೈಲು ದೂರದ ಪ್ರಶ್ನೆ ಬಂದಾಗ ಬೆಂಗಳೂರು ಮೈಸೂರುಗಳ ಪಯಣವೇ ಮನಸ್ಸಿಗೆ ಬರುತ್ತಿತ್ತು. ಶೋಲೆಯಲ್ಲಿ ಶೂಟ್ ಮಾಡಿದ ರಾಮನಗರದ ಗುಡ್ಡಗಳು, ಚನ್ನಪಟ್ಟಣದ ಗೊಂಬೆ ಮಾರುವ ಅಂಗಡಿಗಳು, ಬತ್ತ, ಕಬ್ಬಿನ ಗದ್ದೆಗಳು, ನೀರಕಾಲುವೆಗಳು, ತೆಂಗಿನಮರಗಳು, ಎಳನೀರು ರಾಶಿ, ರಂಗನಾಥನ ಗುಡಿ, ಪಶ್ಚಿಮವಾಹಿನಿಯ ಕಾವೇರಿಯ ತಿರುವು ಹೀಗೆ. ಆ ಕ್ಷಣ ಇಸ್ಮಾಯಿಲಿಯಾ ಇರುವುದು ಅರಬ್ಬೀ ಮರುಭೂಮಿಯಲ್ಲಿ ಎಂದು ಕಲ್ಪಿಸಿಕೊಳ್ಳುವುದು, ಅಲ್ಲಿನ ಟೋಪೋಗ್ರಫಿಯನ್ನು ಊಹಿಸಿಕೊಳ್ಳುವುದು ಸೇರಿದಂತೆ ಯಾವುದೂ ಸಾಧ್ಯವಾಗುತ್ತಿರಲಿಲ್ಲ. ತಾನು ಇಸ್ಮಾಯಿಲಿಯಾ ಮೂಲದವಳೆಂದು ಜಮೀಲಾ ಹೇಳಿದ್ದರಿಂದ ಅದರ ಬಗ್ಗೆ ತಿಳಿದುಕೊಳ್ಳಲು ಯೂಟ್ಯೂಬಿನಲ್ಲಿ ಚಿಕ್ಕಚಿಕ್ಕ ವಿಡಿಯೋಗಳಿದ್ದವು, ನೋಡಿದೆ. ಅದು ಕಾರೊಂದರಲ್ಲಿ ಹೋಗುತ್ತಾ ತೆಗೆದ ಅಪ್ರಬುದ್ಧ ಚಿತ್ರ. ಅದರಲ್ಲಿ ಕಾರು ಎಲ್ಲ ತಿರುವುಗಳಲ್ಲೂ ಎಡಕ್ಕೇ ಹೋಗುತ್ತಿತ್ತು. ಬಹಳ ಸುಂದರ ನಗರ ಎಂದು ಅವನು ದೇವಲೋಕವೇ ಕಂಡಂತೆ ವರ್ಣಿಸಿದರೂ ನನಗೆ ಕಂಡದ್ದು ಕೇವಲ ನೀಟಾಗಿ ಪೇವ್ ಮಾಡಿದ ರಸ್ತೆಗಳು ಮಾತ್ರ. ಸಮಾಧಾನವಾಗದೆ ವಿಕಿಪೀಡಿಯಾ ನೋಡಿದೆ.

ಅದರಲ್ಲಿ: ಇಸ್ಮಾಯಿಲಿಯಾ ಈಶಾನ್ಯ ಈಜಿಪ್ಟಿನ ಒಂದು ನಗರ. ಈಜಿಪ್ಟಿನಲ್ಲಿ "ಸೌಂದರ್ಯದಿಂದ ಮೋಡಿ ಮಾಡುವ ನಗರ" ಎಂದು ಕರೆಯಲ್ಪಡುವ ಇಸ್ಮಾಯಿಲಿಯಾ ಸೂಯೆಜ್ ಕಾಲುವೆಯ ಪಶ್ಚಿಮ ದಂಡೆಯಲ್ಲಿದೆ, ಇದು ಇಸ್ಮಾಯಿಲಿಯಾ ಗವರ್ನರೇಟ್‌ನ ರಾಜಧಾನಿಯಾಗಿದೆ. 2012ರ ಹೊತ್ತಿಗೆ ನಗರವು 366,669ಜನಸಂಖ್ಯೆಯನ್ನು ಹೊಂದಿತ್ತು. ಇದು ಉತ್ತರಕ್ಕೆ ಪೋರ್ಟ್ ಸೈಡ್ ಮತ್ತು ದಕ್ಷಿಣಕ್ಕೆ ಸೂಯೆಜ್ ನಡುವೆ ಅರ್ಧದಷ್ಟು ದೂರದಲ್ಲಿದೆ. - ಎಂದಿತ್ತು. ಇದರಿಂದ ನಿರಾಶೆಯು ದ್ವಿಗುಣಗೊಂಡಿತಷ್ಟೇ.

 

 

 

 

 

 

 

 

 

 

 

 

 

 

 

 

 

 

 

ಜಮೀಲಾ ಹೇಗಿರುವಳೆಂದು ತಿಳಿದುಕೊಳ್ಳಲು ನನ್ನಲ್ಲಿ ಲಭ್ಯವಿದ್ದದ್ದು ಅವಳ ಮೆಸೆಂಜರಿನ ಡಿಪಿ ಮಾತ್ರ. ಆ ಚಿತ್ರ ಮೊದಮೊದಲು ಬಂದ ಬಣ್ಣದ ಸಿನಿಮಾದ ಹಳೆಯ ವಾಲ್ ಪೋಸ್ಟರಿನಂತಿದೆ ಎಂಬ ಅನುಮಾನ ಬರುವಂತಿದೆ ಅಥವಾ ಬ್ಲರ್ ಕಾಣುವಂತೆ ಮ್ಯಾನಿಪುಲೇಟ್ ಮಾಡಿದ ಚಿತ್ರವಿರಬೇಕು. ಎದೆಗೆ ಪುಸ್ತಕ ಅವುಚಿಕೊಂಡ ಹದಿಹರೆಯದ ಬಾಲೆಯದದು. ಬಹುಶಃ ಅವಳ ತಾಯಿ (ಆಕೆಯ ಹೆಸರು ನನಗೆ ಗೊತ್ತಿಲ್ಲ; ಅಮ್ಮ ಹೇಗಿದಾರೆ ಎಂದಷ್ಟೇ ನಾನು ಕೇಳುತ್ತಿದ್ದುದು, ಹೀಗೆ ಹೀಗೆ ಎಂದು ಅವಳು ಹೇಳುತ್ತಿದ್ದುದು.) ಆ ಚಿತ್ರವನ್ನು ಬಹಳವೇ ಮೆಚ್ಚಿಕೊಂಡಿರಬೇಕು. ಅಮ್ಮ ಮೆಚ್ಚಿದ ಚಿತ್ರವೆಂದು ತನಗೂ ಆ ಚಿತ್ರ ಚಂದ ಕಂಡು ಡಿಪಿಗೆ ಹಾಕಿಕೊಂಡಿರಬಹುದು. ಹೌದು ಅದು ಹಾಗೆಯೇ. ಒಂದೊಂದು ಕಾಲದ ಒಂದೊಂದು ಚಿತ್ರ ಹೀಗೆ ನಮಗೂ ಕೂಡ ಚಂದವಾಗಿ ಅನಿವಾರ್ಯ ದಾಖಲೆಯ ಹಾಗೆ ತೋರಬಹುದು. ಸೌಮ್ಯ - ನನ್ನ ಮಗಳು ಒಂದನೆಯ ಕ್ಲಾಸಿನಲ್ಲಿರುವಾಗ ಸ್ಕೂಲ್ ಡೇ ದಿನ ರಂಗಮಂದಿರದಲ್ಲಿ ಡ್ಯಾನ್ಸ್ ಮಾಡಿದ ಒಂದು ಫೋಟೋ ನಮ್ಮಲ್ಲಿದೆ. ಫೋಟೋ ಒಂದು ಸಂದರ್ಭದ ಒಂದು ಮನಸ್ಥಿತಿಯನ್ನು ಸುತ್ತಲೂ ಸಂಭವಿಸುತ್ತಿದ್ದ ಘಟನೆಗಳ ಅರ್ಥಗಳನ್ನು ತನ್ನೊಳಗೆ ನಿಕ್ಷೇಪಿಸಿಕೊಂಡಿದೆ ಎಂದೆ ಭಾಸವಾಗುತ್ತದೆ. ಜಮೀಲ ಡಿಪಿ ನೋಡಿದ ಕೂಡಲೇ ನನಗೆ ನೆನಪಾದದ್ದು ಆ ಮಗಳ ಚಿತ್ರ.

ಆಗ ಅವಳು - ಜಮೀಲಾ - ಕಾಲೇಜಿಗೆ ಹೋಗಲು ಶುರು ಹಚ್ಚಿದ್ದಿರಬೇಕು. ಅಂದರೆ ಅವಳಿಗೆ ಎಷ್ಟು ವಯಸ್ಸು ಆಗಿದ್ದಿದ್ದು? ನನಗೆ ಏಕೋ ಅದು ಪ್ರಸ್ತುತವಾದ ಅಥವಾ ಅಗತ್ಯವಾದ ಅಥವಾ ವಿಚಾರಯೋಗ್ಯ ವಸ್ತು ಎಂದು ಅನ್ನಿಸಲಿಲ್ಲ. ವಯಸ್ಸಿನ ಆಚೆಗೆ ಸಂಬಂಧಗಳಲ್ಲಿ ಎಂಥದೋ ಇರುತ್ತದೆ. ಅದು ಯಾವುದಾದರೂ ಘಟನೆಗೆ ಸಂಬಂಧಪಟ್ಟ ವಿಚಾರವಿರಬಹುದು ಎಂದು ನಾನು ಯೋಚನೆ ಮಾಡಿದೆ. ಪ್ರಾಯಶಃ ಯೋಚನೆಯ ಎಳೆಗಳ ಪೈಕಿ ಸುಸಂಗತ ಎನಿಸಿದ್ದು ಒಂದು ಊಹೆ: ಜಮೀಲಾ ತನ್ನ ತಾಯಿಯ ಜೊತೆಗೆ ಕೈರೋ ಪಟ್ಟಣದ ಈಗ ಹಳೆಯದಾದ, ಆದರೆ ಅಪ್ಪ ಮನೆ ಕೊಂಡಾಗ ಹೊಸತಾಗಿದ್ದ ವಸತಿ ಪ್ರದೇಶವೊಂದರಲ್ಲಿ ಇರುವುದಾಗಿ ಹೇಳಿದ್ದಳು. ಅದರಲ್ಲಿನ ಮನೆಯಲ್ಲಿ ತಾವು ಬಳಸದ ಒಂದು ಸುಮಾರಾದ ಭಾಗವಿರುವುದಾಗಿಯೂ ಅದರಲ್ಲಿ ಒಂದಿಷ್ಟು ಬಾಡಿಗೆ ಬರುವುದಾಗಿಯೂ ಹೇಳಿದ್ದಳು. ಗೂಗಲ್ ಅರ್ಥ್ ಪ್ರಕಾರ ಅದು ಯೂನಿವರ್ಸಿಟಿ ಬ್ರಿಡ್ಜಿಗೆ ಪಶ್ಚಿಮಕ್ಕೆ 3-4 ಮೈಲಿ ದೂರದಲ್ಲಿ, ಅಲ್ ದೋಕಿ ಬ್ರಿಡ್ಜಿಗೆ ಹತ್ತಿರವಾಗಿಯೇ ಇರುವಂತಿತ್ತು. ಅಲ್ಲಿನ ಯೂನಿವರ್ಸಿಟಿ ಅಂಡರ್ ಗ್ರಾಜುಯೇಟ್ ತರಗತಿಗಳಿಗೆ ಜಮೀಲಾ ಇಂಗ್ಲಿಷ್ ಪಾಠ ಮಾಡುತ್ತಿದ್ದಳು. ಅವಳನ್ನು ಯಾರಾದರೂ ಅರಬ್ಬೀ ಹೆಣ್ಣಿನಂತೆ ಕಲ್ಪಿಸಿಕೊಳ್ಳಲು ನನಗೆ ಅರಬ್ ಸ್ತ್ರೀ ಮುಖಗಳ ಸ್ಮೃತಿಯೇ ಇರಲಿಲ್ಲ.

ಅದರ ವಿನಾ ಎಂದೂ, ಪ್ರಸ್ತಾಪಕ್ಕಾದರೂ, ಜಮೀಲಾ ತನ್ನ ತಂದೆಯ ಬಗ್ಗೆ ಯಾವ ವಿಚಾರವನ್ನೂ ಹೇಳಿರಲಿಲ್ಲ. ಬಹುಶಃ ಅವಳ ತಂದೆ ಬೇರೊಬ್ಬಳನ್ನು ಮದುವೆಯಾಗಿ ಅವರನ್ನು ತೊರೆದು ಹೋಗಿದ್ದಿರಬೇಕು. ಅಥವಾ ಸಿರಿಯನ್ ಬಂಡುಕೋರರ ಕೈಲಿ ಹತನಾಗಿರಬೇಕು. ಅಥವಾ ಆ ಫೋಟೋ ತೆಗೆದ ದಿನದಿಂದ ನಾಪತ್ತೆಯಾಗಿರಬಹುದು. ಮೂರೂ ಸಂಭಾವ್ಯವೇ. ಫಾದರ್ಸ್ ಡೇಗೆ ಅಂತ ಮೆಸೇಜ್ ಕಳಿಸಿ ಜಮೀಲಾ ನೈಲ್ ನದಿ ಮಾತ್ರ ತನ್ನ ಪಾಡಿಗೆ ತಾನು ನಾಗರಿಕತೆಗಳು ಅಳಿದರೂ, ಬರ್ಬರತೆ ಜನರ ಜೀವ ಕೊಂಡರೂ, ಸಂಕಟಗಳಲ್ಲಿ ಯಾರ ಎದೆಯೆಂತು ಕುಮುಲಿದರೂ, ಹರಿಯುತ್ತಲೇ ಇರುತ್ತದೆ ಎಂಬ ಅರ್ಥದ ಕವಿತೆಯೊಂದನ್ನು ಬರೆದಿರುವುದಾಗಿ ಹೇಳಿದ್ದಳು. ಅದು ಸ್ಪಾನಿಷ್ ಭಾಷೆಗೆ ಅನುವಾದವಾಗಿರುವುದಾಗಿಯೂ ಹೇಳಿದ್ದಳು. ನಾನು ಅವಳನ್ನು ಕವಿತೆಗೆ ಅಭಿನಂದಿಸಿ ಬರೀ ‘ಹೌದು ಡಿಯರ್, ನಿನ್ನ ಮಾತು ನಿಜ’ ಎಂದು ಹೇಳಿದ್ದೆ. ಈ ರೀತಿಯ ಒಪ್ಪಿಕೊಳ್ಳುವ ಮಾತುಗಳಿಂದ ಅವಳಿಗಾಗುವ ಲಾಭ ಏನಿತ್ತೋ ಆಗ ಅರಿವಾಗಿರಲಿಲ್ಲ. ಈಗಲೂ ಆಗಿಲ್ಲವೆನ್ನಿ.

ಅದು ಹೇಗೆ ಹಂಬಲಗಳು ಹುಟ್ಟುತ್ತವೆ, ಗೊತ್ತಿಲ್ಲ. ನನಗೆ ಜಮೀಲಾಳ ಅರಬೀ ಕವನ ಸಂಕಲನದ ಪ್ರತಿಯೊಂದು ನನ್ನ ಬಳಿ ಇರಬೇಕೆಂಬ ವಾಂಛೆ ಬಂದಿದ್ದು ಇಂಥದೊಂದು ಹಂಬಲದಿಂದಲೇ. ಅವಳಿಗೆ ಬರೆದೆ. ಅದಕ್ಕೆ ಉತ್ತರವಾಗಿ ಜಮೀಲಾ ಬರೆದಳು:

ಡಿಯರ್, ನಿನ್ನ ಆಸಕ್ತಿಗೆ ನಾನು ನಿಜಕ್ಕೂ ಋಣಿ. ಆದರೆ ನಾನು ಇಸ್ಮಾಯಿಲಿಯಾದ ಹಳೆಯ ಮನೆಯನ್ನು ರಿಪೇರಿ ಮಾಡಿಸುತ್ತಿದ್ದೇನೆ. ಅಮ್ಮನಿಗೆ ತೀರಾ ಹುಷಾರಿಲ್ಲ. ಅವಳಿಗೆ ಕೊನೆಯ ದಿನಗಳನ್ನು ಇಸ್ಮಾಯಿಲಿಯಾದ ತನ್ನ ಮನೆಯಲ್ಲಿಯೇ ಕಳೆಯುತ್ತ ಸಾಯಬೇಕೆಂಬ ಬಯಕೆ. ನನ್ನ ಸರ್ವಸ್ವವೇ ಆಗಿ ಉಳಿದಿರುವ ಅವಳ ಆಸೆ ಪೂರೈಸುವುದು ನನಗೆ ಕಾವ್ಯ ಬರೆಯುವುದಕ್ಕಿಂತ ಮುಖ್ಯವಾಗಿ ತೋರುತ್ತದೆ. ಯೂನಿವರ್ಸಿಟಿಗೆ ರಜಾ ಹಾಕಿದ್ದೇನೆ. ದಿನಾ ಬೆಳಿಗ್ಗೆ ಹೋದರೆ ರಾತ್ರಿಗೇ ಮನೆಗೆ ಬರುವುದು. ಇಷ್ಟಕ್ಕೂ ಓದಲಾಗದ ಪುಸ್ತಕವನ್ನು ಇಟ್ಟುಕೊಂಡು ಏನು ಮಾಡುತ್ತೀಯ. ನೆನಪಿಗೆಂದರೆ ಅದಕ್ಕಿಂತ ದೊಡ್ಡದಾದ ನೆನಪಾಗಿ ನಾನೇ ಇದ್ದೀನಲ್ಲ ಎಂದು ಬರೆದಳು. ಅದಾಗಿ ಅರ್ಧ ಗಂಟೆಯ ಒಳಗೆ ‘ನಾನು ಕೊರಿಯರ್ ಕಂಪನಿಯಲ್ಲಿ ವಿಚಾರಿಸಿದೆ. ಬಹಳ ದುಬಾರಿಯಾಗುತ್ತದೆ, ಕ್ಷಮಿಸು’ ಎಂದು ಬರೆದಳು. ಆದ್ದರಿಂದ ನಾನು ಅವಳ ಪುಸ್ತಕವನ್ನು ಪಡಕೊಳ್ಳಲು ಆಗಿರಲಿಲ್ಲ. ಆದರೂ ಕೆಲವು ದಿನಗಳು ಬಲದಿಂದ ಎಡಕ್ಕೆ ಬರೆಯುವ ಯಾವ ಲಿಪಿಯನ್ನು ಕಂಡರೂ ನನಗೆ ಅವಳ ಕವಿತೆಯೇ ಅದೆಂದು ತೋರುತ್ತಿತ್ತು. ಅದರಲ್ಲಿ ಅವಳು ತನ್ನ ತಾಯಿ, ತಂದೆಯರ ಬಗ್ಗೆ ಬರೆದಿರಬಹುದಾದ ಸಾಲುಗಳು ಕಾಣಿಸುತ್ತಿದ್ದವು.

 

ಅವಳ ತಂದೆ ಏನೇನೋ ಆಗಿ ಅವರಿಂದ ದೂರ ಹೋಗಿರಬೇಕೆಂದು ಯೋಚಿಸುತ್ತಲಿದ್ದ ನನಗೆ ಮೊನ್ನೆ ಮೊನ್ನೆ ಒಂದು ಪರಿಹಾರ ಸಿಕ್ಕಿತು. ಅದು ಡೊನಾಲ್ಡ್ ಟ್ರಂಪ್ ಜನಾಂಗವಾದಿಯಾಗಿರುವ ಕುರಿತು ನಾವು ಚಾಟ್ ಮಾಡುತ್ತಿರುವಾಗ. ಅವಳು ನಾಳೆ ನಿನಗೊಂದು ಮೆಸೇಜ್ ಕಳಿಸುವೆ. ಅದು ದೊಡ್ಡದಾಗಿರುವುದರಿಂದ ರಾತ್ರಿ ಕೂತು ಬರೆಯುತ್ತೇನೆ. ಆದೀತಾ ಎಂದು ಕೇಳಿದ್ದಳು. ಜೊತೆಗೆ ಒಂದು ಸಂಗತಿಯ ಕುರಿತು ನನ್ನ ಗಮನ ಸೆಳೆದಿದ್ದಳು: ಎಲ್ಲ ಮಿಡ್ಲ್ ಈಸ್ಟ್ ಜನರೂ ಅರಬ್ಬರಲ್ಲ ಎಂದು. ಅದರ ಬಗ್ಗೆ ಕೋರಾದಲ್ಲಿ ಓದಿದ್ದೆ ಕೂಡಾ. ನಿಮಗೂ ಅದರ ಪರಿಚಯವಾಗಲಿ ಎಂದು ಇಲ್ಲಿ ಅನುವಾದ ಮಾಡಿದ್ದೇನೆ, ನೋಡಿ:

 

ಮಧ್ಯಪ್ರಾಚ್ಯ ಪ್ರಪಂಚದ ಖಂಡಾಂತರ ಪ್ರದೇಶವೇ ಹೊರತು ಸ್ವತಃ ಒಂದು ಜನಾಂಗವಲ್ಲ. ಸಾಮಾನ್ಯವಾಗಿ ಮಧ್ಯಪ್ರಾಚ್ಯ ಜನರ ಚರ್ಮ ತಿಳಿ ಕಂದು. ಮಧ್ಯಪ್ರಾಚ್ಯ ಕುರಿತ ಪಾಶ್ಚಿಮಾತ್ಯರಲ್ಲಿರುವ ಕಲ್ಪನೆಯೆಂದರೆ ಅವರು ೧. ಅರಬ್, ೨. ಆದ್ದರಿಂದ “ಕಂದು” ಎಂಬುದು. ಆದರೆ ಮಧ್ಯಪ್ರಾಚ್ಯ ೧. ಸಂಪೂರ್ಣವಾಗಿ ಅರಬ್ ಅಲ್ಲ (ಮತ್ತು ಅರಬ್ ಜನರು ಎಲ್ಲರೂ ಕಂದು ಚರ್ಮವನ್ನು ಹೊಂದಿಲ್ಲ, ಅವರು ಜೇಡಿಮಣ್ಣಿನಂಥ ಬಿಳಿ ಬಣ್ಣದಿಂದ ಹಿಡಿದು ಗಾಢ ಕಂದುಬಣ್ಣವನ್ನು ಹೊಂದಿದ್ದಾರೆ) ಮತ್ತು ೨. ಮಧ್ಯಪ್ರಾಚ್ಯ ಮತ್ತು ಅದರ ನಿವಾಸಿಗಳು, ರಾಷ್ಟ್ರೀಯತೆಗಳೇನೇ ಇರಲಿ - ಸಿರಿಯನ್ನರಿಂದ ಇಸ್ರೇಲಿಗರವರೆಗೆ, ಜೇಡಿಮಣ್ಣಿನಂಥ ಬಿಳಿಯಿಂದ ಗಾಢ ಕಪ್ಪಿನವರೆಗೆ ವಿಶಾಲವಾದ, ವ್ಯಾಪಕವಾದ ಚರ್ಮದ ಛಾಯೆಗಳನ್ನು ಒಳಗೊಂಡಿರುವರು. ಮಧ್ಯಪ್ರಾಚ್ಯದಲ್ಲಿ ಒಂದೇ ಸಾಮಾನ್ಯ ಜನಾಂಗವಿಲ್ಲ ಎಂದು ಮರಿಯಾ ಸಪಲ್ಸನ್ ಬರೆದಿದ್ದಾರೆ. ಮೊರಕ್ಕೋನಿಂದ ಪಾಕಿಸ್ತಾನದವರೆಗೆ ಮಧ್ಯಪ್ರಾಚ್ಯ ಹರಡಿದೆ.

 

ಹೇಳಿದ್ದಂತೆಯೇ ಜಮೀಲಾ ನನಗೆ ಮರುದಿನ ಸಂಜೆ ಒಂದು ಉದ್ದದ ಮೆಸೇಜ್ ಕಳಿಸಿದಳು. ಅದರಲ್ಲಿ ಅವಳು ತನ್ನ ಬಾಲ್ಯದ ಭೀಕರ ಅನುಭವವನ್ನು ಸ್ಪಷ್ಟವಾಗಿ ನಿರೂಪಿಸಿದ್ದಳು. ಅದನ್ನು ಕುರಿತು ಬರೆದರೆ ಅದು ಬಹಳವಾದೀತು, ಅದಕ್ಕೆ ಆ ಪತ್ರವನ್ನೇ ನನ್ನ ಭಾಷೆಯಲ್ಲಿ ಬರೆದುಬಿಡುವುದು ಒಳಿತು ಎನ್ನಿಸಿ ಹಾಗೇ ಮಾಡಿದ್ದೇನೆ.

 

“ಗೆಳೆಯಾ ಈ ಪೋಸ್ಟ್ ಕೇವಲ ಹಳೆಯ ವಿಷಯಗಳ, ಅವು ನನಗೆ ಕೊಟ್ಟ ಹಿಂಸೆಗಳ ನಿರೂಪಣೆಯಾಗಿದೆ. ಬ್ರಿಟನ್‌ನಲ್ಲಿ ನನ್ನ ತಂದೆ ಡಾಕ್ಟರೇಟ್ ಮಾಡುತ್ತಿದ್ದಾಗ ನಾನು ಚಿಕ್ಕ ಪೋರಿಯಾಗಿ, ಬಳಿಕ ಹದಿಹರೆಯದ ಬಾಲಕಿಯಾಗಿ ಅಪ್ಪನೊಡನೆ ವಾಸಿಸುತ್ತಿದ್ದೆ. ನನಗೆ ಒಳ್ಳೆಯ ಅಡಿಪಾಯ ದೊರೆಯಲೆಂದು ತನ್ನ ಜೊತೆ ಕರೆದೊಯ್ದಿದ್ದರು. ಅಪ್ಪನ ಓದಿಗೆ ಸಹಾಯವಾಗಲೆಂದು ಅಮ್ಮ ತನ್ನ ಶಾಲೆಯ ಕೆಲಸವನ್ನು ತೊರೆದಿರಲಿಲ್ಲ. ಲಂಡನ್, ಮಿಡ್ಲ್ಯಾಂಡ್ಸ್ ಮತ್ತು ನಂತರ ಸ್ಕಾಟ್ಲೆಂಡ್ನ ಶಾಲೆಗಳಲ್ಲಿ ಕಳೆದ ಯಾತನಾಮಯ ವರ್ಷಗಳಲ್ಲಿ ನಾನು ಮತ್ತು ನನ್ನ ಅಪ್ಪ ಇಬ್ಬರೂ ನಮ್ಮ ಚರ್ಮದ ಬಣ್ಣದಿಂದಾಗಿ ತೀವ್ರ ದ್ವೇಷ, ನಿಂದನೆ ಮತ್ತು ವರ್ಣಭೇದ ಹಿಂಸೆಗೆ ಒಳಗಾಗಿದ್ದೆವು. ಅಪ್ಪ ಅದರಿಂದ ಘಾಸಿಗೊಂಡಿರಲಿಲ್ಲ. ಬಹುಶಃ ಅವರಿಗೆ ಇದರ ಕಲ್ಪನೆಯಿತ್ತೆಂದು ತೋರುತ್ತದೆ.

 

ಭಯಾನಕವೆನ್ನಿಸುವಷ್ಟು ಕ್ರೂರಿಗಳಾಗಿದ್ದ ವಿದ್ಯಾರ್ಥಿಗಳು ಮತ್ತು ಇತರ ಹುಡುಗರು ನಮ್ಮ ವಿರುದ್ಧ ಗುಂಪುಕಟ್ಟಿಕೊಂಡಿದ್ದರು. ನಾನು ಇಂಗ್ಲಿಷ್ ಕಲಿಯುವ ಮೊದಲು ಅವರು ನನ್ನ ಹೊಡೆಯುತ್ತಿದ್ದರು. ನಾನು ಬೆಳೆದು ಇತರ ಶಾಲೆಗಳಿಗೆ ಸ್ಥಳಾಂತರಗೊಳ್ಳುತ್ತಿದ್ದಂತೆ, ನಾನು ಈಜಿಪ್ಟಿನವಳೆಂದು ತಿಳಿದಿದ್ದರೂ ನನ್ನನ್ನು 'ಪಾಕಿ' (ಪಾಕಿಸ್ತಾನಿ) ಎಂದು ಕರೆಯಲಾಗುತ್ತಿತ್ತು. ನಾನು ಅವರಿಗೆ ಉತ್ತರಿಸುತ್ತಿದ್ದೆ: "ನಾನು ಪಾಕಿಸ್ತಾನಿಯಾಗಿದ್ದಿದ್ದರೂ ಸಹ ನಾನು ಅದರ ಬಗ್ಗೆ ತಲೆತಗ್ಗಿಸುವುದಿಲ್ಲ".

 

ಬನ್ನನ್ನು ಹಾಕಿದ್ದ ನನ್ನ ತಲೆಗೂದಲನ್ನು ಎಳೆಯುವಂತೆ ಅವರು ಪರಸ್ಪರಿಗೆ ಕರೆ ಕೊಡುತ್ತಿದ್ದರು. ಅವರ ನಾಯಕ ಫ್ರೆಡ್. ಅವನು ತನ್ನ ವಯಸ್ಸಿಗೂ ಮೀರಿ ಎತ್ತರವಾಗಿದ್ದ ಹುಡುಗ. ನಮ್ಮ ಶಾಲೆಯಲ್ಲಿದ್ದ ಅವನ ಗೆಳತಿ ಸ್ಕಾಟಿಷ್. ಆದರೆ ಅವಳು ಆಶ್ಚರ್ಯಕರವೆನ್ನಿಸುವಷ್ಟು ಕಪ್ಪಗಿದ್ದಳು. ನಂತರ ಅವನು ತನ್ನ ತಾಯಿಯೊಂದಿಗೆ ವೈಟ್ ರೊಡೇಶಿಯಾ ಎಂದು ಕರೆಯಲ್ಪಡುತ್ತಿದ್ದ ದೇಶಕ್ಕೆ ತೆರಳಿದ.

ಅವನು ಹೋದರೂ ಕಿರುಕುಳ ನಿಲ್ಲಲಿಲ್ಲ. ಶಾಲೆ ಮುಗಿಸಿ ಮನೆಗೆ ಹೋಗುವಾಗ ಶಾಲೆಯ ಹೊರಗೆ ನನ್ನನ್ನು ಬೆನ್ನಟ್ಟಿ ನನ್ನ ಮೇಲೆ ಉಗುಳಿದರು. ಒಮ್ಮೆ ‘ಅವರು ನಿನ್ನ ಹೆಸರನ್ನು ಸಹ ಇನ್ನು ನಮ್ಮಿಂದ ಸಹಿಸಲು ಸಾಧ್ಯವಿಲ್ಲ' ಎಂದು ಹೇಳಿದರು. ನನ್ನ ಗೆಳತಿಯರು... ಐದು ವರ್ಷಗಳ ಅಗ್ನಿ ಪರೀಕ್ಷೆಯ ಕೊನೆಯಲ್ಲಿ ಉಳಿದವರು ಇಬ್ಬರು ಮಾತ್ರ...

 

ನನ್ನ ಪ್ರತಿಯೊಂದು ದಿನವೂ ನೋವು ಅಥವಾ ಆಘಾತದ ನಿರೀಕ್ಷೆಯಲ್ಲಿ ಇರುತ್ತಿತ್ತು. ನನ್ನನ್ನು ಅಪಮಾನಿಸಲಾಯಿತು. 'ನಿಗ್ ನಾಗ್' ("ನಿಗರ್"ಗಾಗಿ ಒಂದು ಅನ್ಯೋಕ್ತಿ) ಅಥವಾ ‘ಬ್ಲ್ಯಾಕ್ ಬಾಬ್' (ನಾನು ಬನ್‌ನಲ್ಲಿ ನನ್ನ ಕೂದಲನ್ನು ಕಟ್ಟಿದ್ದ ಸಮಯ) ಎಂದು ಶಾಲೆಯ ಒಳಗೆ ಶಿಕ್ಷಕಿಯರ ಮುಂದೆ ಅಣಕಿಸಿ ಅಪಮಾನಿಸಿದರೂ ಶಿಕ್ಷಕಿಯರು ಏನೂ ಮಾಡುತ್ತಿರಲಿಲ್ಲ! ಹೌದು. ಅವರಲ್ಲೊಬ್ಬಳು ಅದನ್ನು ಸ್ಕಾಟಿಶ್ ಲವ್ ಎಂದು ಕರೆದಳು. ಮುಖ್ಯೋಪಾಧ್ಯಾಯಿನಿಯ ಬಳಿಗೆ ಹೋಗಿ ದೂರು ನೀಡಿದಾಗ ಆಕೆಯ ಪ್ರತಿಕ್ರಿಯೆ ತಮಾಷೆಯಾಗಿತ್ತು. ಅವಳು ಒಂದು ಸ್ಕಾಟಿಷ್ ಗಾದೆ ಹೇಳಿದಳು: "ಕೋಲುಗಳು ಮತ್ತು ಕಲ್ಲುಗಳು ನನ್ನ ಎಲುಬುಗಳನ್ನು ಮುರಿಯುತ್ತವೆ ... ಆದರೆ ಹೆಸರುಗಳು ಎಂದಿಗೂ ನನಗೆ ಹಾನಿ ಮಾಡುವುದಿಲ್ಲ".

 

ಆದರೆ ನಿಜಕ್ಕೂ ಹೆಸರುಗಳು ಹಾನಿಮಾಡಿದವು.. ದ್ವೇಷ ಮತ್ತು ಕ್ರೌರ್ಯ ವಯಸ್ಕರನ್ನು ಸಹ ಕೆಲವೊಮ್ಮೆ ಆತ್ಮಹತ್ಯೆಗೆ ತಳ್ಳಬಹುದು.ಅದು ಎಪ್ಪತ್ತರ ದಶಕದ ಆರಂಭವಾಗಿತ್ತು.. ನೆಲ್ಸನ್ ಮಂಡೇಲಾ ಇನ್ನೂ ಜೈಲಿನಲ್ಲಿದ್ದರು. ಇಂದು ನವ ನಾಜಿಸಮ್ ಮತ್ತು ವೈಟ್ ಪವರ್ ಎಂದು ಕರೆಯಲ್ಪಡುವ ಪದರಗಳು ಸುಪ್ತವಾಗಿದ್ದವು.

 

ನಂತರ ನಾನು ಹಳೆಯ ದಕ್ಷಿಣ ಆಫ್ರಿಕಾದ ಬಂಟುಸ್ಟಾನ್ಸ್ ಬಗ್ಗೆ ಓದಿದೆ. ಪಶ್ಚಿಮವನ್ನು ಹೇಗೆ ಗೆದ್ದರು ಎಂಬುದನ್ನು ತೋರಿಸುವ ಜಾನ್ ವೇನ್‌ರ ಚಲನಚಿತ್ರಗಳು ಯಾವಾಗಲೂ ಈವಿಲ್ ಅನ್ನು ‘ರೆಡ್ ಇಂಡಿಯನ್ಸ್' ಎಂದು ತೋರಿಸುತ್ತವೆ. ಬ್ರಿಟಿಷ್ ಚಾನೆಲ್‌ಗಳಲ್ಲಿ ಪ್ರಸಾರವಾಗುತ್ತಿದ್ದ ವಾಲ್ಟ್ ಡಿಸ್ನಿಯವರ ಕಾರ್ಟೂನ್ ಚಿತ್ರಗಳು ಅರಬ್ಬರನ್ನು ಯಾವಾಗಲೂ ಕೆಟ್ಟ ವ್ಯಕ್ತಿಗಳಂತೆ ಚಿತ್ರಿಸುತ್ತವೆ.

 

ಅರಬ್ಬರು ತಮ್ಮ ರಾಷ್ಟ್ರೀಯ ಉಡುಪಿನಲ್ಲಿ ಕಠಾರಿ ಹಿಡಿದು (ದಿ ಎಮಿರೇಟ್ಸ್ ಮತ್ತು ಸೌದಿ ಅರೇಬಿಯಾದಲ್ಲಿ ಇಂದು ರಾಷ್ಟ್ರೀಯ ಉಡುಗೆ) ಅಸಹಾಯಕ ಬಗ್ಸ್ ಬನ್ನಿಗಳನ್ನು ಬೆನ್ನಟ್ಟಿ ಹೋಗುವುದನ್ನು ಪಿರಮಿಡ್‌ಗಳ ಹಿನ್ನೆಲೆಯಲ್ಲಿ ತೋರಿಸಲಾಗುತ್ತಿತ್ತು ... ದ್ವೇಷದ ಸಾಂಸ್ಕೃತಿಕ ಗೊಂದಲ ಮೂಡಿಸುತ್ತಿತ್ತದು. ಟಾಮ್ ಅಂಡ್ ಜೆರಿಯಲ್ಲಿ ಹೆಚ್ಚು ಬುದ್ಧಿವಂತ ಮೌಸ್ ‘ಜೆರಿ' ಕಿಡಿಗೇಡಿತನ ಮಾಡಿದ ನಂತರ ‘ಟಾಮ್' ಬೆಕ್ಕನ್ನು ಬೆನ್ನಟ್ಟುವ ಹೆಣ್ಣು ಕಪ್ಪು ಅಥವಾ ಗಾಢವರ್ಣದ ದೇಶೀ ಸೇವಕಿ - ಮನೆಕೆಲಸದಾಕೆ- ಅವಳ ಅರ್ಧ ದೇಹ ಮತ್ತು ಉಚ್ಚಾರಣೆ ಎಲ್ಲಿನದು ಗಮನಿಸಿದ್ದೀರಾ? ವಾಲ್ಟ್ ಡಿಸ್ನಿ ಇಂದು ಅದನ್ನು ಮಾಡಲು ಧೈರ್ಯ ಮಾಡುವುದಿಲ್ಲ, ಆದರೆ ನಾನು ಆಶ್ಚರ್ಯಪಡುತ್ತೇನೆ ... ಅವರು ಎಂದಾದರೂ ಅರಬ್ಬರು, ಈಜಿಪ್ಟಿನವರು ಅಥವಾ ಕಪ್ಪು ಚರ್ಮದ ಅಥವಾ ಆಫ್ರೋ ಅಮೆರಿಕನ್ ಜನರಿಗೆ ತಾವು ಎಸಗಿದ್ದ ತಪ್ಪನ್ನು ಕುರಿತು ಕ್ಷಮೆಯಾಚಿಸುವುದನ್ನು ಪರಿಗಣಿಸಿದ್ದಾರೆಯೇ?

 

ನಾವು ಈಜಿಪ್ಟಿಗೆ ಹಿಂದಿರುಗಿದಾಗ ನನ್ನ ದೇಶವಾಸಿಗಳು ಕಪ್ಪು ಬಟ್ಟೆ ಅಥವಾ ಕಪ್ಪು ವಸ್ತುಗಳನ್ನು ಕಪ್ಪೆಂದು ಉಲ್ಲೇಖಿಸುವುದಿಲ್ಲ ಎಂದು ನಾನು ಕಂಡುಕೊಂಡೆ. ಆದರೆ ಅರೇಬಿಕ್‌ನಲ್ಲಿ ಕಪ್ಪು ಎಂಬ ಪದವಿದೆ. ಅವರು ಬ್ಲಾಕ್ ಪದವನ್ನು ಡಾರ್ಕ್ ಪದಕ್ಕೆ ಬದಲಾಯಿಸುತ್ತಾರೆ.. ಏಕೆಂದರೆ ಈಜಿಪ್ಟಿನಲ್ಲಿ ಹೊಂಬಣ್ಣ ಮತ್ತು ಕಪ್ಪು ಮತ್ತು ಗಾಢವರ್ಣದ ಮನುಷ್ಯರಿದ್ದಾರೆ. ಈಜಿಪ್ಟಿನವರು ಸಾಮಾನ್ಯವಾಗಿ ಪರಸ್ಪರರನ್ನು ‘ಗೋಧಿ ಬಣ್ಣದ' ಮೈಬಣ್ಣ ಎಂದು ಕರೆಯುತ್ತಾರೆ.

ಆಗ ನಾನು 11 ವರ್ಷದವಳಿದ್ದೆ. ಒಮ್ಮೆ ಬ್ರಿಟನ್‌ನ ಶಾಲೆಯಲ್ಲಿ, ಪಿ.ಇ ತರಗತಿಯ ಬಳಿಕ ನನ್ನ ಶಾಲೆಯ ಟೈ ಕಟ್ಟಲು ನನಗೆ ಸಾಧ್ಯವಾಗಲಿಲ್ಲ. ಹಾಗಾಗಿ ನನಗೆ ಸಹಾಯ ಮಾಡಲು ಸ್ನೇಹಿತೆ ಎಂದು ನಾನು ಭಾವಿಸಿದ ಲಿಂಡಾಳನ್ನು ಕೇಳಿದೆ. ಅವಳು ಟೈ ಕಟ್ಟುತ್ತಾ ಹೇಳಿದಳು: "ಹೌದು, ಇದು ನಿಮ್ಮ ದೇಶದಲ್ಲಿ ಟೈಗಳಿಲ್ಲದ ಕಾರಣ ನಾನು ಭಾವಿಸುತ್ತೇನೆ". ನಾನು ಮೌನವಾಗಿಬಿಟ್ಟೆ. ನನ್ನ ತಂದೆ ಯಾವಾಗಲೂ ಟೈ ಧರಿಸುತ್ತಾರೆ ಎಂದು ಹೇಳಿ ನನ್ನನ್ನು ನಾನು 'ರಕ್ಷಿಸಿಕೊಳ್ಳಲಿಲ್ಲ’.

 

ಇದು ಕೇವಲ ಶಾಲೆಗಳಿಗೆ ಸೀಮಿತವಾಗಿಲ್ಲ. ಒಮ್ಮೆ ಲಂಡನ್‌ನ ನಮ್ಮ ಬೆಡ್ & ಬ್ರೇಕ್‌ಫಾಸ್ಟ್ ಹೋಟೆಲ್‌ನ ಹೊರಗೆ ಒಬ್ಬ ಇಂಗ್ಲಿಷ್ ಹುಡುಗ ಅರಬ್ ಪ್ರಜೆಯ ಬಿಳಿ ರಾಷ್ಟ್ರೀಯ ಉಡುಪನ್ನು ಎಳೆಯುವುದನ್ನು ನಾನು ನೋಡಿದೆ. ಹುಡುಗನಿಗೆ ಬಹುಶಃ ಹತ್ತು ಅಥವಾ ಹನ್ನೆರಡು ವರ್ಷ. ಅವನು ಆ ವ್ಯಕ್ತಿಯ ಉಡುಪನ್ನು ಎಳೆಯುತ್ತ ಕೇಳಿದ: "ನಿಮಗೆ ಎಷ್ಟು ಹೆಂಡತಿಯರಿದ್ದಾರೆ?"!!!!. ಆದರೆ ಆ ದೃಶ್ಯದಲ್ಲಿ ನನಗೆ ನೋವುಂಟು ಮಾಡಿದ್ದು ಕಿರುಕುಳಕ್ಕೊಳಗಾದ ವ್ಯಕ್ತಿಯ ಕಿರುನಗೆ ಮತ್ತು ಅವನು ಆ ಹುಡುಗನ ತಲೆಯನ್ನು ನೇವರಿಸಿದ್ದು!

 

ಸ್ಕಾಟಿಷ್ ಶಾಲೆಯೊಂದರಲ್ಲಿ, ನಮ್ಮ ವಿಜ್ಞಾನ ತರಗತಿಯ ಹದಿನಾಲ್ಕು ವರ್ಷದ ಜನೈನ್ ಒಮ್ಮೆ ನನ್ನನ್ನು ಕೇಳಿದಳು: ನಿಮ್ಮ ದೇಶ ಹೇಗಿದೆ .. ಎಲ್ಲಾ ಮರುಭೂಮಿಯೇ? ನನ್ನ ಭೂಮಿಯ ಮುಕ್ಕಾಲು ಭಾಗ ಮರುಭೂಮಿಯಾಗಿದೆ ನಿಜ. ಆದರೆ ನನ್ನ ದೇಶ ಹೇಗಿದೆಯೆಂದು ವಿವರಿಸಲು ನಿನಗೆ ಅದರ ಪೋಸ್ಟ್ ಕಾರ್ಡ್ಗಳನ್ನು ತೋರಿಸಬೇಕಾಗುತ್ತದೆ ಎಂದು ನಾನು ಉತ್ತರಿಸಿದೆ. ಅಂದು ಅಲ್ಲಿ ನನ್ನ ಬಳಿ ಅವು ಇರಲಿಲ್ಲ. ‘ಅದು ನಿಜವಾಗಿದ್ದರೆ ನಾವು ಅದನ್ನು (ಈಜಿಪ್ಟನ್ನ) ಏಕೆ ನೀಡಬಾರದು ಅಥವಾ ಅದನ್ನು ಅವರಿಗೆ (ಇಸ್ರೇಲ್‌ಗೆ) ಬಿಡಬಾರದು?’ ಎಂದು ಅವಳು ವಾದಿಸಿದಳು.

 

ಇಸ್ರೇಲ್ ಜೊತೆ ಅಕ್ಟೋಬರ್ ಯುದ್ಧದ ಎರಡು ವರ್ಷಗಳ ನಂತರ ಇದು. ನಿಮ್ಮ ದೇಶವು ಹಚ್ಚ ಹಸಿರು ಅಥವಾ ಪರ್ವತಮಯವಾಗಿದ್ದರೆ ಮಾತ್ರವೇ ನೀವು ಅದನ್ನು ಉಳಿಸಿಕೊಳ್ಳುವುದಿಲ್ಲ, ಪ್ರೀತಿಸುವುದಿಲ್ಲ ಅಥವಾ ಅದಕ್ಕಾಗಿ ಹೋರಾಡುವುದಿಲ್ಲ ಎಂದು ವಿವರಿಸಲು ನಾನು ನನ್ನ ಕುಂಟು ಇಂಗ್ಲಿಷ್‌ನೊಂದಿಗೆ ಪ್ರಯತ್ನಿಸಿದೆ. ಜನೈನಳನ್ನು ಕೇಳಲು ನನಗೆ ಸಾಕಷ್ಟು ಇಂಗ್ಲಿಷ್ ಬರುತ್ತಿರಲಿಲ್ಲ ಅಥವಾ ನನ್ನಲ್ಲಿ ಇತಿಹಾಸದ ಮಾಹಿತಿಯಿರಲಿಲ್ಲ. ಇದ್ದಿದ್ದರೆ ಬಹುಶಃ ನಾನೂ ಕೇಳಿರುತ್ತಿದ್ದೆ: “ನೀವು ಸಹ ಏಕೆ ಅಂಥದೊಂದನ್ನು ಮಾಡಲಿಲ್ಲ: ಚರ್ಚಿಲ್ ಬ್ರಿಟನ್ನನ್ನು ಹಿಟ್ಲರ್‌ಗೆ ಕೊಡಬಹುದಿತ್ತಲ್ಲ?!”

 

ಐದು ವರ್ಷಗಳ ನಂತರ ಅಪ್ಪನ ಡಾಕ್ಟೊರಲ್ ಸ್ಟಡೀಸ್ ಮುಗಿದು ನಾವು ಈಜಿಪ್ಟಿಗೆ ಹಿಂತಿರುಗಿದಾಗ, ೨ ವರ್ಷಗಳ ಕಾಲ ನಮ್ಮಿಂದ ಏನನ್ನು ಮರೆಮಾಚಲಾಗಿತ್ತು ಎಂಬುದನ್ನು ನಮಗೆ ತಿಳಿಸಲಾಯಿತು... ನನ್ನ ಕಿರಿಯ ಚಿಕ್ಕಪ್ಪ ಅಕ್ಟೋಬರ್ ಯುದ್ಧದ ಕಾರ್ಯಾಚರಣೆಯಲ್ಲಿ ಈಜಿಪ್ಟ್ ನ ನೆಲದಲ್ಲಿ, ನನ್ನ ಜನ್ಮಸ್ಥಳ ಇಸ್ಮಾಯಿಲಿಯಾ ಬಳಿ ತೀರಿಕೊಂಡಿದ್ದರು.

 

***

 

ನನ್ನಪ್ಪ ಡಾಕ್ಟೊರಲ್ ಸ್ಟಡೀಸ್ ಮುಗಿಸಿದ ಬಳಿಕ ಕೈರೋ ಯೂನಿವರ್ಸಿಟಿಯಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ ಸೇರಿಕೊಂಡರು. ಯೂನಿವರ್ಸಿಟಿಯ ಡಾರ್ಮೆಟರಿಯಲ್ಲಿ ಉಳಿದುಕೊಳ್ಳುತ್ತಿದ್ದ ಅಪ್ಪ ಗುರುವಾರ ರಾತ್ರಿ ಬಸ್ಸಿನಲ್ಲಿ ಇಸ್ಮಾಯಿಲಿಯಾಗೆ ಬರುತ್ತಿದ್ದರು. ಶನಿವಾರ ಸಂಜೆ ಕೈರೋಗೆ ಮರಳುತ್ತಿದ್ದರು. ಅಪ್ಪ ನಮ್ಮ ಜೊತೆ ಉಳಿಯುವ ಎರಡು ದಿನಗಳು ಬಹಳ ಬೇಗನೆ ಆಗಿಹೋಗುತ್ತಿದ್ದವು. ಇದು ಕಷ್ಟವೆನಿಸಿ ಅಪ್ಪ ಕೈರೋನಲ್ಲಿ ನಾವಿರುವ ಮನೆ ಖರೀದಿಸಿದ್ದರು. ಆ ವೇಳೆಗೆ ನಾನು ಅಂಡರ್ ಗ್ರಾಜುಯೇಷನ್ನಿಗೆ ಯೂನಿವರ್ಸಿಟಿ ಕಾಲೇಜು ಸೇರಿದ್ದೆ. ಅಪ್ಪನ ಜೊತೆಗೇ ನಾನು ಕಾಲೇಜಿಗೆ ಹೋಗುವುದು ಬರುವುದು. ಈ ನಡುವೆ ಅಪ್ಪ ಜೋರ್ಡಾನಿನ ಯೂನಿವರ್ಸಿಟಿಯೊಂದಕ್ಕೆ ವಿಸಿಟಿಂಗ್ ಪ್ರೊಫೆಸರ್ ಆಗಿ ತಿಂಗಳಿಗೆ ಒಂದೆರಡು ಸಲ ಹೋಗಿಬರುತ್ತಿದ್ದರು. ಅದರಿಂದ ಮನೆಗೆ ಫರ್ನಿಶಿಂಗ್, ಕಾರು ಖರೀದಿ ಎಲ್ಲವೂ ಸಾಧ್ಯವಾಗಿತ್ತು. ಅಪ್ಪನಿಗೂ ನನಗೂ ಇದ್ದುದು ಅಮ್ಮನ ಆರ್ಥರೈಟಿಸ್ ಚಿಂತೆ ಮಾತ್ರ.

 

ಎಲ್ಲ ಚೆನ್ನಾಗಿದೆ ಎನಿಸುತ್ತಿರುವಾಗಲೇ ಅದೊಂದು ದಿನ. ಕೈರೋ ಅಸ್ಪತ್ರೆಯಲ್ಲಿರುವ ಗೆಳೆಯನನ್ನು ನೋಡಿ ಬರಬೇಕೆಂದು ನನ್ನನ್ನು ಟ್ಯಾಕ್ಸಿ ಹತ್ತಿಸಿದ ಅಪ್ಪ ನಾನು ಮನೆ ಸೇರುವ ಮೊದಲೇ ಸತ್ತುಹೋಗಿದ್ದರು. ನಾನು ಮನೆ ಸೇರುವ ವೇಳೆಗೆ ಟಿವಿಗಳು ಬಡಿದುಕೊಳ್ಳುತ್ತಿದ್ದವು. CAIRO—A powerful car-bomb explosion outside a hospital in Egypt’s capital killed at least 20 people and injured dozens more, Egyptian authorities said Monday, in the deadliest terrorist attack in Cairo in more than two years. ನನ್ನ ಟ್ಯಾಕ್ಸಿ ಹತ್ತಿಸಿದ ಅಪ್ಪ ಸೀದಾ ಆಸ್ಪತ್ರೆಗೆ ಹೋದ ವಿಚಾರ ತಿಳಿದ ಅಮ್ಮ ಕುಸಿದುಹೋದಳು. ಆ ಆಘಾತದಿಂದ ಸುಧಾರಿಸಿಕೊಳ್ಳಲು ನಾನು ಅದೆಷ್ಟು ಭಗವಂತನಲ್ಲಿ ಬೇಡಿಕೊಂಡೆನೋ? ಸಾರಿ ಫ್ರೆಂಡ್. ನಿನಗೆ ಬೇಜಾರು ಮಾಡಿದ್ದಕ್ಕೆ.

 

ಬಹಳ ಆಘಾತಕಾರಿಯಾಗಿತ್ತು ಮಾಹಿತಿ. ಅಳುತ್ತಿರುವ ಇಮೋಜಿಯೊಂದನ್ನು ಕಳಿಸಿದೆ. ನಿಜಕ್ಕೂ ಕಳಿಸಬೇಕಿದ್ದ ಮೆಸೇಜ್ ಅಂದರೆ I am in tears.

 

***

ಬಹಳ ದಿನಗಳು ನಮ್ಮ ನಡುವೆ ಮೌನವಿತ್ತು. ನಿಜಕ್ಕೂ ಅದು ಮೌನವೇ ಎಂದು ಅನಿಸಿದ್ದಿದೆ. ಅದು ಮೌನವಲ್ಲ, ಏಕಮುಖ ಸದ್ದು. ನಾನು ಜಮೀಲಾನ ಕೇಳಿದ್ದೆ do you resemble your DP now? CAvÀ. Oh, I am not that young ಅಂದವಳು ಯಾವಾಗಲೂ ಡಿಪಿ ತರಹೆ ಇರೋಕೆ ಸಾಧ್ಯವೇ ಎಂದು ಕೇಳಿದ್ದಳು. ‘ಈಚೆಗೆ ನಾನು ಕೆಲಸ ಮಾಡುತ್ತಲೇ ನಿದ್ರೆಗೆ ಜಾರುತ್ತಿದ್ದೇನೆ ಗೆಳೆಯಾ, ಬೆಳಿಗ್ಗೆ ೬.೩೦ ರವರೆಗೆ... ನಿನಗೆ ತಿಳಿದಿರಬೇಕು ಅಂದುಕೊಳ್ಳುವೆ, ನಾನು ಖಂಡಿತ ಚಿಕ್ಕವಯಸಿನವಳಲ್ಲ. ಇನ್ನು ಈಚೆಗೆ ಉತ್ತರ ಬರೆಯದ್ದರ ಕುರಿತು: ನಾನು ಈಗಷ್ಟೇ ನಿನ್ನ ಮೆಸೇಜು ನೋಡಿದ್ದೇನೆ, ಬೇಕಿದ್ದರೆ ಆಣೆ ಮಾಡುತ್ತೇನೆ. ನಾನು ಮೆಸೇಜಿಗೆ ಉತ್ತರಿಸದಿರುವಷ್ಟು ಒರಟಳಲ್ಲ. ಆದರೆ ಪ್ರಾಮಾಣಿಕವಾಗಿ ಹೇಳುವೆ: ಈ ಬಳಲಿಕೆಯಿಂದಾಗಿ ನನ್ನ ಕೈಲಿ ಏನನ್ನೂ ಮಾಡಲು ಸಾಧ್ಯವಿಲ್ಲ. ಕೆನಡಾದಲ್ಲಿ ನನ್ನ ಸೋದರಸಂಬಂಧಿ ಗೆಳತಿಯ ಮೆಸೇಜು ಕೂಡಾ ಎಷ್ಟೋ ದಿನ ಓದಿರಲಿಲ್ಲ. ಅವಳು ಸಿಟ್ಟಾಗಿದ್ದಳು. ಸತ್ಯ ಹೇಳಿದರೂ ಒಪ್ಪಿಸುವುದು ದುಸ್ತರವಾಯಿತು. ನೀನು ನನ್ನನ್ನು ಹಚ್ಚಿಕೊಂಡಂತಿದೆ ಎಂದು ನಾನು ಹೆದರುತ್ತೇನೆ. ನಿನಗೆ ಕಷ್ಟವಾಗಿದೆ ಎಂದು ನನಗೆ ಖಂಡಿತವಾಗಿ ತಿಳಿದಿದೆ. ನಾನು ನಿನ್ನ ಬಗ್ಗೆ ಯೋಚಿಸಿದಾಗ ಮೆಸೇಜು ಕಳುಹಿಸಬಹುದು. ಪ್ರತ್ಯುತ್ತರ ನೀಡಲು ನಿನ್ನ ಮೇಲೆ ಯಾವುದೇ ಬಲವಂತವಿಲ್ಲ. ನಿನಗೆ ಸಮಯ ಸಿಕ್ಕಾಗ ಮಾತ್ರ ಒಂದೆರಡು ಮಾತನ್ನಾದರೂ ಬರೆಯಬಹುದು.’

***

 

 

 

 

 

 

 

 

 

 

 

 

 

ನಾನೀಗ ಬೇರೆಯೇ ಆದ ಜಮೀಲಾ ಕರಮ್ ಳನ್ನು ಮನೋಭಿತ್ತಿಯಲ್ಲಿ ಚಿತ್ರಿಸಿಕೊಳ್ಳಲು ಶುರು ಮಾಡಿದ್ದಿರಬೇಕು. ಆ ಡಿಪಿ ನನಗೆ ಮೂಲಮಾತೃಕೆಯಾಗಿ ಸಿಕ್ಕಿತ್ತು. ಜೊತೆಗೆ ಆಕೆ ನಿರೂಪಿಸಿದ ಇಂಗ್ಲಂಡ್ ಕಥನ. ಅಂದರೆ ಜಮೀಲಾಗೆ ಈಗ 60 ವರ್ಷ ದಾಟಿತ್ತು. ಅದೇನಾಯಿತೋ ನನ್ನಲ್ಲಿ, ಅವಳ ಡಿಪಿ ಮನಸಿನಲ್ಲೇ ಬದಲಾಗಿಹೋಗಿತ್ತು. ಆದರೆ ಒಂದು ವಿಚಿತ್ರವೆಂದರೆ ಅವಳಿಗೀಗ ನನ್ನ ಮನಸ್ಸಿನಲ್ಲಿ ಎರಡು ಡಿಪಿಗಳಿದ್ದವು. ಒಂದು ಕಂಡಿದ್ದು, ಒಂದು ಕಾಣದ್ದು.

ಮುಂದಿನ ಮೆಸೇಜಿನಲ್ಲಿ ನಾನು ಕೇಳಿದ್ದು ಅವಳ ಅಮ್ಮನ ಬಗ್ಗೆ. ಅವಳ ತಾಯಿಯ ಆರೋಗ್ಯ ದಿನೇದಿನೇ ಹದಗೆಡುತ್ತಿರುವುದಾಗಿಯೂ ತನ್ನ ಕೆಲಸದ ನಡುವೆ ಆಕೆಯನ್ನು ನೋಡಿಕೊಳ್ಳುವುದು ಕಷ್ಟವಾಗುತ್ತಿರುವುದಾಗಿಯೂ, ಎಲ್ಲಕ್ಕಿಂತ ಹೆಚ್ಚಿಗೆ ತನ್ನನ್ನು ಕಾಡುತ್ತಿರುವುದು ಅವಳ ನೋವು ಮತ್ತು ಅಸಹಾಯಕತೆಗಳೇ ಎಂದೂ ಬರೆದಿದ್ದಳು. ನಾನು ಮಾಡುವುದಾದರೂ ಏನಿದೆ, ಅಲ್ಲಾಹುವಿನಲ್ಲಿ ಪ್ರಾರ್ಥನೆ ಸಲ್ಲಿಸುವೆ ಎಂದು ಬರೆದಿದ್ದೆ. ಅವಳು ಎಂದಿನಂತೆ ಧನ್ಯವಾದ ಹೇಳಿದ್ದಳು.

 

ಇದು ಆಗಿದ್ದು ಎರಡು ವರ್ಷಗಳ ಹಿಂದೆ ಇರಬೇಕು. ನನ್ನ ನೆನಪು ಅಂಥ ಒಳ್ಳೆಯದಿಲ್ಲ. ಆದರೂ ವಿಚಾರದ ಹೂರಣ ನೆನಪಿನಲ್ಲಿರುತ್ತದೆ. ಈ ನಡುವೆ ಏನು ಬರೆದಿರಿ ಎಂಬ ಎರಡು ಲೇಖಕರ ನಡುವಿನ ಸಾಮಾನ್ಯ ವಿಚಾರಣೆಯಾಗುವಾಗ ಜಮೀಲಾ ಕುಗ್ಗಿದಂತೆ ಹೇಳಿದ್ದಳು: ಏನೂ ಬರೆಯಲಿಲ್ಲ ಫ್ರೆಂಡ್, ಕೈ ಬೆರಳುಗಳು ಬಹಳ ತೊಂದರೆ ಕೊಡುತ್ತಿವೆ. ಕೆಲವು ದಿನಗಳಿಂದ ಬರೆಯುವಾಗ ನನ್ನ ಬಲ ಬೆರಳೊಂದರಲ್ಲಿ ವಿಪರೀತ ನೋವು ಕಾಣಿಸಿಕೊಳ್ಳುತ್ತಿದೆ. ಇದರ ಜೊತೆ ನನ್ನ ಎಡಗಣ್ಣು ಕಿರಿಕಿರಿ. ನನ್ನ ಎಡಗಣ್ಣಿನಲ್ಲಿನಲ್ಲಿ ಡ್ರೈನೆಸ್‌ನ ತೊಂದರೆ ಇದೆ. ಅದರಿಂದಲೇ ಲೇಖಕಿಯಾಗಿ ನನ್ನ ಜವಾಬ್ದಾರಿಯನ್ನು ತಪ್ಪಿಸಿಕೊಳ್ಳಬೇಕಿದೆ. ಇದಕ್ಕಾಗಿ ಈಜಿಪ್ಟಿನ ಎಲ್ಲ ಸಾಂಸ್ಕೃತಿಕ ಕೇಂದ್ರಗಳ, ಈಜಿಪ್ಟ್ನ ಮತ್ತು ಈಜಿಪ್ಟ್ ಅಲ್ಲದ ಸಹಮಾನವರ ಕ್ಷಮೆಯಾಚಿಸಲು ನಾನು ಬಯಸುತ್ತೇನೆ, ಯಾರನ್ನಾದರೂ ನಾನು ಯಾವುದೋ ಒಂದು ಕ್ಷಣದಲ್ಲಿ ನೋಯಿಸಿರಬಹುದು. ಕೇವಲ ತಪ್ಪು ನುಸುಳಿ ಅಥವಾ ನಾನು ಅವನ ಬಗ್ಗೆ ಹೇಳಬೇಕಾದ ಏನೂ ಹೇಳದೆ ಅಥವಾ ಏನಾದರೂ ಅನುಚಿತವಾದುದನ್ನು ಹೇಳಿ. ನಾವೆಲ್ಲರೂ ನೋಯುತ್ತಿದ್ದೇವೆ. ಜನರ ಸ್ವಾತಂತ್ರ‍್ಯ, ಪ್ರಾಣ, ಮಾನ, ಸಂಪತ್ತಿನ ಹಾನಿಗೆ ನಾನು ಕೊಡುವ ಸಂಕಟದ ಪ್ರತಿಕ್ರಿಯೆಯನ್ನು ಯಾರಾದರೂ ನಂಬುತ್ತಾರೋ ಇಲ್ಲವೋ. ನಾನು ಮಾನವಳು ಮತ್ತು ಧಾರ್ಮಿಕ ಶ್ರದ್ಧೆಯ ವ್ಯಕ್ತಿ. ನಾನು ನೋವನ್ನು ಅನುಭವಿಸುತ್ತಲೇ ಇದ್ದೇನೆ. ಯಾರಿಗಾದರೂ, ಅದೇಕೆ ಪ್ರತಿಯೊಬ್ಬರಿಗೂ ಒದಗಿದ ಯಾವುದೇ ಕೆಟ್ಟ ದಿನಕ್ಕಾಗಿ ನಾನು ಕ್ಷಮೆಯಾಚಿಸುತ್ತೇನೆ.

 

ನಾನು ಸಂತೈಸಿದ್ದೆ. ನಿನ್ನ ಮನಶ್ಶಾಂತಿಗಾಗಿ, ಅಮ್ಮನ ಆರೋಗ್ಯಕ್ಕಾಗಿ ನಾನು ಪ್ರಾರ್ಥಿಸುತ್ತೇನೆ. ಬಹುಶಃ ಅವಳು ಗದ್ಗದಿತಳಾಗಿದ್ದಾಳು. ಉತ್ತರಿಸಿದ್ದಳು ಕೂಡಲೇ.

 

“Your problem, my love, ನೀನು ಈ ದುರುದ್ದೇಶಪೂರಿತ ದುಷ್ಟ ಜಗತ್ತಿನಲ್ಲಿ ಮುಗ್ಧ ಪರಿಶುದ್ಧ, ಅಲ್ಲಾಹನು ನಿನ್ನನ್ನು ಮಾನವ ರಾಕ್ಷಸರಿಂದ ಹಾನಿಯಾಗದಂತೆ ರಕ್ಷಿಸಲಿ, ಇತರರು ನಿನಗೆ ಮಾಡಿದ ಯಾವುದೇ ಮಾನಸಿಕ ಗಾಯಕ್ಕೆ ಕ್ಷಮೆಯಾಚಿಸುವಂತಾಗಲಿ.” ನನಗೆ ಬಹಳವೇ ಇರಿಸುಮುರಿಸಾಯಿತು. ನಾನು ಅಷ್ಟೊಂದು ವಿಶ್ವಾಸಕ್ಕೆ ಅರ್ಹನೆಂದಾಗಲೀ, ಅಷ್ಟು ಒಳ್ಳೆಯವನೆಂದಾಗಲೀ ನನಗೇನೆ ನಂಬಿಕೆ ಇರಲಿಲ್ಲ.

 

ಇದಾದ ಮೇಲೆ ಜಮೀಲಾ ನನ್ನ ಯಾವುದೇ ಮೆಸೇಜಿಗೆ ಉತ್ತರಿಸಲಿಲ್ಲ. ಆ ವೇಳೆಗೆ ಕೊರೋನಾ ಅರಬ್ ವಿಶ್ವಕ್ಕೂ ಲಗ್ಗೆಯಿಟ್ಟಿತ್ತು. ನನ್ನ ಗೆಳೆಯ ನಾಗರಾಜ ಹಳೇಪಾಳ್ಯನೂ ಯಾವುದೋ ಅರಬ್ ದೇಶದಲ್ಲಿಯೇ ಇದ್ದವನು, ಮೊದಲ ಅಲೆಯು ಶುರುವಾಗುವ ಕೊಂಚ ಮೊದಲು ಇಲ್ಲಿಗೆ ಬಂದವನು ಮರಳಲು ಸಾಧ್ಯವಾಗಿರಲಿಲ್ಲ. ಹಾಗಾಗಿ ವಿಮಾನ ಇಳಿದು ಬೆಂಗಳೂರು ಡ್ಯೂಟಿ ಫ್ರೀ ಶಾಪಿನಲ್ಲಿ ಖರೀದಿಸಿದ್ದ ಕಾಲುಭಾಗ ಮುಗಿದ ಸ್ಕಾಚ್ ಬಾಟಲಿ ಹಿಡಿದು ಬಂದಿದ್ದ. ನಾವಿಬ್ಬರೂ ಹೈವೇ ಮಗ್ಗುಲ ದಾಬಾ ಒಂದರಲ್ಲಿ ಕುಳಿತು ಲೋಕಾಭಿರಾಮ ಮಾತಾಡುತ್ತಿರುವಾಗ ಜಮೀಲಾಳ ವಿಚಾರ ಬಂದಿತ್ತು. ನಾಗರಾಜನೂ ಜಮೀಲಾಳೂ ಒಂದು ಕವಿಸಮ್ಮೇಳನದಲ್ಲಿ ದುಬಾಯಿಯಲ್ಲಿ ಭೇಟಿಯಾಗಬೇಕಿತ್ತಂತೆ. ಅನಿರೀಕ್ಷಿತ ವಿದ್ಯಮಾನದಿಂದ ಅದು ರದ್ದಾಗಿತ್ತು. ‘ಅವಳ ಕವಿತೆಗಳ ಕುರಿತು ಕೇಳಿದೆ. ‘ಒಂದೋ ಎರಡೋ ಓದಿದೀನಿ, ಇಂಗ್ಲಿಷ್ ಅನುವಾದದಲ್ಲಿ. ಬಹಳ ಎಸೋಟರಿಕ್ ಅನುಭವ ಕೊಡುತ್ತವೆ. ಅವಳು ಒಂದು ಮಿಸ್ಟಿಕಲ್ ವುಮನ್’ ಎಂದ. ಅವಳ ಡಿಪಿ ನೆನಪಾಯಿತು. ಆಕೆ ನೋಡೋಕೆ ಹೇಗಿದ್ದಾರೆ ಅಂತ ಕೇಳಿದೆ. ಟಿಪಿಕಲ್ ಅರಬ್ ವುಮನ್, ಬಹಳ passionate, ಆಕೆಯ ಕಣ್ಣು ಮಾತ್ರ ಬಹಳ ಅಂದರೆ ಬಹಳ... ಏನದು? ಬ್ಲೇಕ್ ತರಹ, burning bright ಅಂದ. ನಾವು ಊಟ ಮಾಡಿ ಮನೆಗೆ ಮರಳಿದಾಗಲೂ ಅವಳ ಕಣ್ಣು ಕುರಿತು ಹೇಳುವಾಗ ಅವನ ಮುಖದಲ್ಲಿದ್ದ ಎಕ್ಸ್ಪ್ರೆಶನ್ನೇ ನೆನಪಾಗುತ್ತಿತ್ತು.

 

‘ಸಾರಿ ಟು ಸೇ, ಅಮ್ಮ ತೀರಿಕೊಂಡಳು. ಸಾಯುವ ಮೊದಲು ನನ್ನ ‘ಮಗಳೇ ನಿನ್ನ ಪಾಡೇನು’ ಅಂತ ಕೇಳಿದಳು. ನನ್ನ ಪಾಡು ನೋಡಿಕೊಳ್ಳೋಕೆ ಅಲ್ಲಾಹನಿದ್ದಾನೆ. ನೀನು ಶಾಂತಿಯಿಂದ ಹೋಗು ಅಂದೆ. ಆದರೆ ಡಿಯರ್ ನನಗೆ ಭಯವಾಗುತ್ತೆ, ನಾನೂ ಅವಳ ಹಾಗೆಯೇ ನೋವುಂಡು ಸಾಯಬೇಕೇನೋ ಅಂತ. ಆದರೆ ನೀನು ಯೋಚನೆ ಮಾಡಬಾರದು. ಸ್ವಲ್ಪ ದಿನ ನಾನು ನಿನಗೆ ಮೆಸೇಜ್ ಮಾಡುವುದಿಲ್ಲ. ನೀನೂ ಅಷ್ಟೆ’ ಅಂತ ಹೇಳಿದ್ದಳು.

 

ಈ ನಡುವೆ ನನಗೆ ಕೊರೋನ ಕುರಿತ ಆತಂಕ ಶುರುವಾಗಿ ನೆಮ್ಮದಿಯನ್ನೇ ಕಸಿದುಕೊಂಡಿತ್ತು. ಈಜಿಪ್ಟಿನೊಳಗಿನ ವರ್ತಮಾನ ಅಷ್ಟಾಗಿ ದೊರೆಯುತ್ತಿರಲಿಲ್ಲ. ಕವರ್ ಅಪ್ ಆಗ್ತಿದೆ ಅಂತ ಅಂತಾರಾಷ್ಟ್ರೀಯ ಸಮುದಾಯಗಳು ಆತಂಕಿತವಾಗಿದ್ದವು. ಫೆಬ್ರುವರಿ 28ರಂದು ಈಜಿಪ್ಟಿನ ಸಂಸತ್ತು ಕೋವಿಡ್ ಹಬ್ಬಿರುವುದನ್ನು ನಿರಾಕರಿಸಿತ್ತು. ಆದರೆ ಫೆಬ್ರುವರಿ ೧೪ರಂದೇ ಕೋವಿಡ್ ಶಂಕಿತ ಚೀನೀ ನಾಗರಿಕನೊಬ್ಬನನ್ನು ಕೈರೋ ಹೊಸ ವಿಮಾನ ನಿಲ್ದಾಣದಲ್ಲಿ ಪತ್ತೆ ಹಚ್ಚಿ ಕ್ವಾರಂಟೈನ್ ಮಾಡಲಾಗಿತ್ತು. ಬಳಿಕ ಒಂದೊಂದಾಗಿ ಎಲ್ಲ ಮಧ್ಯಪ್ರಾಚ್ಯ ರಾಷ್ಟ್ರಗಳೂ ಪ್ರಯಾಣ ನಿರ್ಬಂಧಗಳನ್ನು ಹೇರಿಬಿಟ್ಟವು. ನಾನು ಜಮೀಲಾಗೆ ಎಂಟು-ಹತ್ತು ಸಲವಾದರೂ ಮೆಸೆಂಜರ್ ಕಾಲ್ ಮಾಡಿದೆ. ಉತ್ತರವಿರಲಿಲ್ಲ. ಕ್ಷಮಿಸು ಜಮೀಲಾ, ನನಗೆ ಆತಂಕವಾಗಿದೆ. ಹೇಗಿದ್ದೀ ಅಂತಾದರೂ ಹೇಳು ಎಂದು ಮೆಸೇಜ್ ಮಾಡಿದೆ.

 

ನನಗೊಂದು ರೂಡ್ ಶಾಕ್ ಕಾದಿತ್ತು. ‘ನೀನು ಸಿಂಪತಿಯಿಂದ ನನ್ನ ಕೊಲ್ಲುತ್ತಿದ್ದೀಯ. ನನಗೆ ಇಂಥ ಸಿಂಪತಿ ನಿಜಕ್ಕೂ ಬೇಡ. ನನಗೆ ದೇವರ ಕರುಣೆ ಮಾತ್ರ ಬೇಕಿದೆ. ಆಮೇಲೆ ಮೆಸೆಂಜರ್ ಕಾಲ್‌ಗಳನ್ನು, ಹತ್ತಿರವಲ್ಲದವರ ಫೋನ್ ಕಾಲ್‌ಗಳನ್ನು ನಾನು ಉತ್ತರಿಸಲ್ಲ. ನನಗೆ ಯಾರೊಡನೆಯ ಮಾತೂ ಬೇಕಿಲ್ಲ. ಎಲ್ಲರೂ ಸುಳ್ಳು. ರಾಷ್ಟ್ರಗಳೂ ಸುಳ್ಳು ಹೇಳ್ತವೆ. ಜನರೂ ಸುಳ್ಳು ಬೊಗಳುತ್ತಾನೇ ಇರುತ್ತಾರೆ. ನಿನಗೆ ಕುತೂಹಲ ತಣಿಸೋಕೆ ಹೇಳ್ತೀನಿ: ಈಜಿಪ್ಟಿನ ಕೊರೋನ ಪರಿಸ್ಥಿತಿ ಬೇರೆಡೆ ಇದ್ದಂತೆಯೇ ಇದೆ. ನನಗೆ ಅದು ಬಂದಿಲ್ಲ. ಬರಬಾರದೆಂದೇನೂ ಇಲ್ಲ. ಇನ್ನು ಮೆಸೇಜ್ ಮಾಡಬೇಡ.’

 

ಹತ್ತಿರವಲ್ಲದವರ ಫೋನ್ ಕಾಲ್‌ಗಳನ್ನು ನಾನು ಉತ್ತರಿಸಲ್ಲ ಅಂದಳಲ್ಲ, ಅದರಿಂದ ನಾನು ಬಹಳವೇ ನೊಂದುಬಿಟ್ಟೆ. ನಾನು ಅವಳಿಗೆ ಹತ್ತಿರವಾಗಿರುವೆನೆಂದು ಭ್ರಮಿಸಿದೆನೇ? ಜೊತೆಗೆ ನಾನು ಎಲ್ಲಿ ಯಾವ ತಪ್ಪು ಮಾಡಿದೆನೆಂದು ತಿಳಿಯಲಿಲ್ಲ. ಅವಳ ತಾಯಿ ತೀರಿಕೊಂಡಾಗ ನಾನು ನಿಜಕ್ಕೂ ದುಃಖಿತನಾಗಿದ್ದೆ. ನಿದ್ರೆ ಕಳಕೊಂಡಿದ್ದೆ. ಬಹಳ ಯೋಚನೆ ಮಾಡಿ - ಬಂದುಬಿಡು. ನಮ್ಮಲ್ಲಿ ಕೊಂಚ ಸಮಯ ಇದ್ದು ಹೋಗುವೆಯಂತೆ ಅಂದಿದ್ದೆ. ಶುಕ್ರಿಯಾ ಗೆಳೆಯಾ. ಇಸ್ಮಾಯಿಲಿಯಾಗೆ ಹೋಗಲು ಟ್ಯಾಕ್ಸಿ ಹೊಂದಿಸಲೂ ನನಗೆ ಕಷ್ಟವಾಗಿದೆ. ನಾನು ಯೂನಿವರ್ಸಿಟಿ ಕಾಲೇಜಿನ ಫುಲ್ ಟೈಂ ಕೆಲಸ ಮಾಡಲಾಗದೆ ವಾರಕ್ಕೆ ನಾಲ್ಕು ಅವರ್ ಹೋಗ್ತಿದೀನಿ. ಎನಿವೇ, ಧನ್ಯವಾದ ಎಂದಿದ್ದಳು. ಅವಳಿಗಾಗ ಅದು ಸಿಂಪಥಿ ಅನಿಸಿರಲಿಲ್ಲ. ಈ ನಡುವೆ ಅವಳು ಇಂಡಿಯಾಗೆ ಕೊಲ್ಕೊತ್ತಾ ಪೊಯೆಟ್ಸ್ ಮೀಟ್‌ಗೆ, ಜೈಪುರ್ ಲಿಟ್ಫೆಸ್ಟ್ ಗೆ ಬಂದಿದ್ದಳು. ಅದಕ್ಕೆ ನೇರ ಪ್ರಾಯೋಜಕತ್ವವಿತ್ತು. ಸುತ್ತಮುತ್ತ ಕೆಲಕಾಲದ ಸೈಟ್ ಸೀಯಿಂಗ್ ಬಿಟ್ಟರೆ ಬೇರೆ ಖರ್ಚಿಗೆ ಅವಕಾಶವಿಲ್ಲದ್ದರಿಂದ ಅವಳು ತಾನು ಬಂದ ವಿಚಾರವನ್ನೇ ಹೇಳಿರಲಿಲ್ಲ. ಅವಳಿಗೆ ನನ್ನ ಹಣಕಾಸಿನ ವಿಚಾರ ಗೊತ್ತಿತ್ತು ಅನಿಸುತ್ತದೆ. ಬಹುಶಃ ಅವಳ ಈಜಿಪ್ಟಿನಲ್ಲೂ ನನ್ನಂತಹ ಗರೀಬಿ ಕವಿಗಳಿದ್ದಾರು!

***

ಇದೆಲ್ಲಾ ಬಹಳ ದಿನಗಳನ್ನೇ ತಿಂದಿದ್ದಾವು. ನಾನು ಸುಮ್ಮನಿದ್ದುಬಿಟ್ಟೆ. ಸಂಕಟ ಕೊರಳನ್ನು ಕೊಲ್ಲುತ್ತಿತ್ತು. ಆಗಲೇ ಅವಳ ಮೆಸೇಜು ಬಂದಿದ್ದು:

 

ಈಚಿನ ದಿನಗಳಲ್ಲಿ ತುಂಬಾ ಮೌನವಾಗಿರುವುದಕ್ಕೆ ಕ್ಷಮಿಸು ಗೆಳೆಯಾ. ನನ್ನ ಹಳೆಯ ಒರಟು ಮೆಸೇಜಿನ ಕುರಿತೂ. ಏನು ಮಾಡಲಿ ಹೇಳು ಮನಸ್ಸು ಕೆಟ್ಟಿತ್ತು. ನನ್ನನ್ನು ನಿಜವಾಗಿಯೂ ಮುಜುಗರಕ್ಕೆ ತಳ್ಳುವುದಿದು. ಆದರೆ ನನ್ನ ಅಜ್ಜನದಾದ ಆ ಬಳಿಕ ನನ್ನ ತಂದೆಯದಾದ, ಈಗ ರುಗ್ಣಾವಸ್ಥೆಯ ಮನೆಗೆ ಮರಳಲು ಮಾಡಿ ಮುಗಿಸಬೇಕಾದ ಕೆಲಸಗಳಲ್ಲಿ ಎಷ್ಟು ತೊಡಗಿಕೊಂಡರೂ ಮುಗಿಯುತ್ತಲೇ ಇಲ್ಲ. ಈ ಗಾರೆಯವರ, ಬಡಗಿಯವರ ಸಹವಾಸ ಸಾಕಾಗಿದೆ. ಜೊತೆಗೆ ಹಣ ಹೊಂದಿಸುವುದೊಂದು. ಈ ಕಷ್ಟ ದೇವರಿಗೆ ತಿಳಿದಿದೆ ಎಂದು ಹೇಳಬಹುದಷ್ಟೇ. ನನ್ನ ಮೈನ ಬೇರೆಬೇರೆ ಭಾಗಗಳಲ್ಲಿ, ಅದರಲ್ಲೂ ನನ್ನ ಬೆನ್ನಲ್ಲಿ ಎಂತಹ ನೋವು ಎಂದರೆ ಕೊಂಚ ಕೆಲಸ ಮಾಡಿದರೂ ಆಯಾಸಗೊಳ್ಳುತ್ತಿದ್ದೇನೆ. ಇನ್ನೂ ಜೀವಹಿಂಡುವ ಕೆಲಸಗಾರರೊಂದಿಗೆ.... ಏಗುವುದು. ಈ ಜಂಜಾಟಗಳ ಜೊತೆಗೆ ದೇಶ ತೊರೆಯದಿರಲು, ದೇಶಕ್ಕೆ ಮರಳದಿರಲು ಈಜಿಪ್ಟ್..ನಿಷೇಧ ವಿಧಿಸಿರುವ ಸ್ನೇಹಿತರೊಂದಿಗೆ ಐಕಮತ್ಯವನ್ನು ತೋರಿಸುವುದರಲ್ಲಿ ತೊಡಗಿರುತ್ತೇನೆ. ನಾನು ಹಿಂದೆ ಯಾವುದೋ ಬಲವಾದ ಸಂಶಯದ ಮೇಲೆ ಇತರರಿಗೆ ಹೇಳಿದಂತೆಯೇ ಆಗಿದೆ. ಬೇರೆ ದೇಶದ ಅಧಿಕಾರಿಗಳು ನನ್ನ ಸ್ನೇಹಿತರ ಅಂತರ್ಜಾಲದ ಸಂಪರ್ಕವನ್ನು ನಿರ್ಬಂಧಿಸಿದ್ದಾರೆ ಇಲ್ಲವೇ ಅವರ ಮೊಬೈಲ್ ಮುಟ್ಟುಗೋಲು ಹಾಕಿಕೊಂಡಿದ್ದಾರೆ. ಅವರ ಕುಟುಂಬದವರು ಯಾರೂ ಇದರ ಬಗ್ಗೆ ಮಾತನಾಡಲು ಅಥವಾ ದೇಶವನ್ನು ತೊರೆಯಲು ಸಾಧ್ಯವಿಲ್ಲ.

 

ನೀನು ಎಲ್ಲ ವಿಷಯಗಳಲ್ಲೂ ಹೇಗೆ ಇದ್ದೀ ಹೇಳು. ನಾನು ಎಂದಿಗೂ ಭೇಟಿಯಾಗದ ತಾಯಂದಿರ ಕಳಕೊಂಡ ಇತರ ದೇಶಗಳಲ್ಲಿನ ಬರಹಗಾರರಲ್ಲದ ಜನರನ್ನು ಸಾಂತ್ವನಗೊಳಿಸಲು ಪ್ರಯತ್ನಿಸುತ್ತೇನೆ.. ಅವರನ್ನು ಮಾನಸಿಕ ಆಸ್ಪತ್ರೆಗಳಿಗೆ ಸೇರಿಸಬೇಕಾಗಿ ಬಂದಿದೆ. ಹೊರಬಂದವರೂ ಮತ್ತೂ ಆಸ್ಪತ್ರೆಗೆ ಹೋಗಿ ಖಿನ್ನತೆಗೆ ಕೊಡುವ ಶಮನಕಾರಿ ಔಷಧಗಳೊಂದಿಗೆ ಬದುಕಬೇಕು. ಒಂದು ಕ್ಷಣ ಎಚ್ಚರಿಕೆ ತಪ್ಪಿದರೂ ಆತ್ಮಹತ್ಯೆ ಮಾಡಿಕೊಂಡಾರೆಂಬ ಭಯ ಕಾಡುತ್ತದೆ! ಇದರ ಜೊತೆ ನನ್ನ ಎಲ್ಲಾ ಶಕ್ತಿ ಕ್ಷೀಣಿಸಿದೆ ಎಂದು ನಾನು ಭಾವಿಸುತ್ತೇನೆ. ಯಾವುದಕ್ಕೂ ಸಮಯ ದೊರೆಯುತ್ತಿಲ್ಲ. ಅವರಿಗಾಗಿ ಪ್ರಾರ್ಥಿಸಲು, ಅಥವಾ ಸಾಂತ್ವನದ ಭರವಸೆ ನೀಡಲು ಬಯಕೆ ಮೂಡುವುದಿಲ್ಲ. ನಾನು ಮನೆಗೆಲಸ ಮತ್ತು ಮನೆಯ ಜವಾಬ್ದಾರಿಗಳ ಸಂಕಟವನ್ನು ದಿನದಿಂದ ದಿನಕ್ಕೆ ಮುಂದುವರಿಸುತ್ತಿದ್ದೇನೆ. ಇದು ನಿಜವಾಗಿಯೂ ದೂರುವುದರಂತಹ ಮಾತು. ಕ್ಷಮಿಸು. ಕವಿಯು ಆಡುವ ಮಾತಲ್ಲ ಇದು.

 

ನೀನು ಚೆನ್ನಾಗಿದ್ದೀಯ ನಿನ್ನ ಕುಟುಂಬ ಸದಸ್ಯರು ನಿನ್ನನ್ನು, ನಿನ್ನ ಆರೋಗ್ಯವನ್ನು ಎಚ್ಚರದಿಂದ ನೋಡಿಕೊಳ್ಳುತ್ತಾರೆ ಎಂದು ನಾನು ಭಾವಿಸುತ್ತೇನೆ .. ಅದು ನಮ್ಮೆಲ್ಲರಿಗೂ ತುಂಬಾ ಮುಖ್ಯ, ಹಾಗೆಯೇ ಹೆಚ್ಚು ಕಷ್ಟಕರವಾಗಿದೆ ಕೂಡ.

 

ನಾನು ಯೋಚಿಸಿದೆ. ಕವಿಯಾದವನು ಆ ಮಾತು ಹೇಳಬಾರದೆಂದರೆ ಬೇರೆ ಏನು ಮಾಡಬೇಕು? ಸೋತೆ.

 

ಉತ್ತರಿಸಿದೆ:

 

ಇಂತಹ ಸಂದರ್ಭಗಳಲ್ಲಿ ಸಿಕ್ಕಿರುವ ನಿನ್ನ ಸ್ಥಿತಿಯನ್ನು ಊಹಿಸಿಕೊಳ್ಳುವುದು ಸಹ ನನಗೆ ನಿಜವಾಗಿಯೂ ನೋವುಂಟು ಮಾಡುತ್ತದೆ. ಆದರೂ ನೀನು ಧೈರ್ಯಶಾಲಿ, ಹೃದಯವಂತೆ. ಇತರರ ಕುರಿತು ಪ್ರೀತಿಯ, ಕಾಳಜಿಯ ಮನಸ್ಥಿತಿಯನ್ನು ಹೊಂದಿದ್ದೀಯ ಜಮೀಲಾ. ಇತರರ ಬಗ್ಗೆ ನೀನು ಏನು ಯೋಚಿಸುತ್ತೀಯ ಎಂಬುದು ಮತ್ತು ಆ ಕುರಿತು ನೀನು ತೆಗೆದುಕೊಳ್ಳುವ ಸಾಂತ್ವನಕಾರಿ ನಿಲುವು ಅದ್ಭುತವಾಗಿದೆ. ಇನ್ನು ಕೊರೋನಾ ವ್ಯಾಪಕವಾಗಿದ್ದರೂ ನಾವು ಇಲ್ಲಿ ಸೇಫಾಗಿದ್ದೇವೆ. ಅದೃಷ್ಟದ ಅಂಶವೆಂದರೆ, ನಾನು ನನ್ನೊಂದಿಗೆ ಬೇಕೆಂದಾಗ ಮಾತನಾಡಬಲ್ಲ ಕೆಲವು ಸ್ನೇಹಿತರನ್ನು ಹೊಂದಿದ್ದೇನೆ. ಜೊತೆಗೆ ಕೆಲವು ಸಾಹಿತ್ಯ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದೇನೆ.

 

ನೀನು ಬಲ್ಲಂತೆ ನಾವು ಮತ್ತು ನನ್ನ ಮಗಳ ಕುಟುಂಬ ಒಂದೇ ಕಟ್ಟಡದಲ್ಲಿ ವಾಸಿಸುತ್ತಿದ್ದೇವೆ. ಒಬ್ಬಗೆಯ ಸಮಾಧಾನದ ಜೊತೆಗೆ ಆಗೀಗ ಕೆಲವು ಸಣ್ಣ ತಪ್ಪುಗ್ರಹಿಕೆಗಳು. ಸರಿ. ನಾನು ದೈಹಿಕವಾಗಿ ಸ್ವಲ್ಪ ದುರ್ಬಲ. ಖಿನ್ನತೆಯ ಶಮನಕಾರಿಗಳು, ಬಿಪಿ ಮತ್ತು ಮಧುಮೇಹಗಳ ಅನಂತ ತೊಂದರೆಗಳ ಜೊತೆ ದಿನದಿನದ ಬದುಕು. ಆದರೂ ಚಿಂತೆ ಮಾಡಲು ಏನೂ ಇಲ್ಲ. ನನ್ನ ಅನೇಕ ಸಹೋದ್ಯೋಗಿಗಳು ನಮ್ಮನ್ನು ಶಾಶ್ವತವಾಗಿ ತೊರೆದು ಹೋಗಿದ್ದಾರೆ.

 

ಪ್ರಿಯ ಜಮೀಲಾ, ಇಷ್ಟು ದಿನದಿಂದ ಸಂಪರ್ಕದಲ್ಲಿದ್ದರೂ ನಿನ್ನ ಖಾಸಗಿ ಬದುಕಿನ ಬಗ್ಗೆ ನನಗೆ ಏನೂ ತಿಳಿದಿಲ್ಲ. ಕೆಲವೊಮ್ಮೆ ಕೇಳಬೇಕೆಂದು ಅನಿಸುತ್ತದೆ. ಇನ್ನೊಂದು ಬಾರಿ ನಾನು ನಿನ್ನ ಭಾವನೆಗಳನ್ನು ನೋಯಿಸಬಹುದೆಂದು ಭಾವಿಸುತ್ತೇನೆ ಅಥವಾ ಭಯಪಡುತ್ತೇನೆ. ಇರಲಿ, ಎಲ್ಲಕ್ಕೂ ಕಾಲ ಬಂದೀತು. ಸರಿ. ನೀನು ಆರೋಗ್ಯ ಹೊಂದುವಂತಾಗಲಿ, ಹಾಗೆಯೇ ಅನುದಿನದ ಆನಂದವನ್ನು. ಇದು ನನ್ನ ಹಾರೈಕೆ.

 

ಅವಳು ಏನಾದರೂ ಹೇಳಿಯಾಳೆಂದು ಭಾವಿಸಿದ್ದೆ. ಶುಕ್ರಿಯಾ ಹೇಳಿದಳು, ನಾನೊಂದು ಸ್ಮೈಲಿ ಕಳಿಸಿದೆ.

***

 

ಮೊನ್ನೆ ಡಿಸೆಂಬರಿನ ಕೊನೆಯ ವಾರದಲ್ಲಿ ನನಗೆ ಅವಳ ಮೆಸೇಜು ಬಂತು. ಮೈ ಲವ್ ಎಂದು ಶುರುಮಾಡಿ ಬರೆದಿದ್ದಳು: ನನ್ನ ಎಡಗಣ್ಣಿಗೆ ದೃಷ್ಟಿ ಮರುಕಳಿಸದ ಹಾಗಾಗಿದೆ. ಆಪ್ಟಿಕಲ್ ನರ್ವ್ ಸತ್ತಿದೆಯಂತೆ. ನನ್ನ ಹೃದಯಕ್ಕೆ, ಸಂಧಿಗಳಿಗೆ ರುಮಟಾಯ್ಡ್ ಆರ್ಥ್ರೈಟಿಸ್ ವಕ್ಕರಿಸಿಕೊಂಡಿದೆ. ಅಂದಂತೆ ಇಸ್ಮಾಯಿಲಿಯಾದ ಮನೆ ಕೈರೋದ ಮನೆ ಎರಡನ್ನೂ ಮಾರಿಬಿಟ್ಟೆ. ನನಗೆ ಪ್ರೊಫೆಸರ್ ಆಗಿದ್ದವರು ಈಗ ಕೆನಡಾದಲ್ಲಿದ್ದಾರೆ. ಅವರು ನಾನು ಮದುವೆಯಾಗುತ್ತಿದ್ದೇವೆ. ಟೊರಾಂಟೋಗೆ ಶಿಫ್ಟ್ ಆಗುತ್ತೇನೆ. ಬಹುಶಃ ಅಲ್ಲಾಹು ಕರೆಯುವವರೆಗೂ ಅಲ್ಲಿಯೇ ಇರುತ್ತೇನೆ. ನನಗೆ ಇನ್ನು ಯಾವ ಬಂಧನವೂ ಬೇಕಿಲ್ಲ. ಇಷ್ಟು ವರ್ಷಗಳ ಕಾಲ ನಿನ್ನ ಪತ್ರ ನನಗೆ ಪ್ರೀತಿಯ ಅಮೃತವನ್ನೇ ಕೊಟ್ಟಿತ್ತು. ನಾನು ಅದರ ಸಂತೋಷವನ್ನು ಕೊನೆಯವರೆಗೂ ಕಾಪಿಟ್ಟುಕೊಳ್ಳುತ್ತೇನೆ. ದೇಹದ ವೇದನೆ ಮುಖ್ಯವಲ್ಲ. ಆದರೆ ಬಹುಶಃ ನಾನಿನ್ನು ಬರೆಯಲಾರೆ. ನನಗೆ ಶಾಂತಿ ಬೇಕು. ನಾನು ಈ ಫೇಸ್ ಬುಕ್, ಮೆಸೆಂಜರ್ ಖಾತೆಗಳನ್ನೂ ಡಿಲೀಟ್ ಮಾಡಿಬಿಡುತ್ತೇನೆ. ನಿನಗೆ ಅನಂತ ಧನ್ಯವಾದ ಗೆಳೆಯಾ, ಅಲ್ಲಾಹು ನಿನ್ನ ಹೃದಯವನ್ನು ಶ್ರೀಮಂತವಾಗಿಟ್ಟಿರಲಿ.

 

ಇನ್ನು ಜಮೀಲಾ ನನ್ನ ಪಾಲಿಗೆ ಇಲ್ಲ ಎಂಬುದು ಖಚಿತವಾಯಿತು. ಕೂತಲ್ಲೇ ಅಲ್ಲಾಹುವಿನಲ್ಲಿ ಅವಳು ಶಾಂತಿಯಿಂದ ಬದುಕುವಂತೆ ಮಾಡೆಂದು ಬೇಡಿಕೊಂಡೆ.

 

ಎರಡು ದಿನದ ನಂತರ ಅವಳ ಖಾತೆಗಳು ಡಿಲೀಟ್ ಆದವು.

***

ಕಲೆ : ಕಂದನ್ ಜಿ. ಮಂಗಳೂರು

 

 

 

 

 

ಆರ್.ವಿಜಯರಾಘವನ್

ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಮಲಿಯಪ್ಪನ ಹಳ್ಳಿಯವರಾದ ಆರ್. ವಿಜಯರಾಘವನ್ (1956) ಅವರು ಕವಿ. 5 ಕವನ ಸಂಕಲನ, 2 ಕತಾ ಸಂಕಲನ, 3 ಕಾದಂಬರಿ ಮತ್ತು ಹಲವು ಬಿಡಿ ಪ್ರಬಂಧಗಳಿಂದ ಚಿರಪರಿಚಿತರಾಗಿರುವಷ್ಟೇ, ಗುನ್ನಾರ್ ಏಕಲೋ, ರಿಲ್ಕ್, ಖಲೀಲ್ ಗಿಬ್ರಾನ್, ನಜೀಂ ಹಿಕ್ಮತ್, ವಾಸ್ಕೊ ಪೋಪ, ಲೋರ್ಕ, ದಾವ್ ದಿ ಜಿಂಗ್, ಮಹಾಪರಿನಿಬ್ಬಾನ ಸುತ್ತ, ಸಾಂಗ್ ಆಫ್ ಸಾಲೋಮನ್ ಮೊದಲಾದವರ ಸಾಹಿತ್ಯವನ್ನು ಇಂಗ್ಲಿಷಿನಿಂದ ಕನ್ನಡಕ್ಕೆ ತಂದು ಪ್ರಸಿದ್ದರು.

ಅವರು ಈಗಾಗಲೇ 23 ಕೃತಿಗಳನ್ನು ಅವರು ಪ್ರಕಟಿಸಿದ್ದು, ಮ್ಯೂಸ್ ಇಂಡಿಯಾ, ಅವಧಿ, ಕೆಂಡ ಸಂಪಿಗೆ, ಸಂಪದ, ಸಂವಾದ ಮುಂತಾದ ಇ-ಮ್ಯಾಗಝಿನ್‌ಗಳಲ್ಲಿ ಮತ್ತು ಬೆಂಗಳೂರು ಆಕಾಶವಾಣಿಯಲ್ಲಿ ಆಗಾಗ ಕಾಣಿಸಿಕೊಳ್ಳುತ್ತಿರುವವರು. ಪೂಚಂತೇ ಅವರ ಅಳಿಯ ನಿರ್ಮಿಸಿಕೊಟ್ಟಿರುವ ಕುವೆಂಪು ಡಾಟ್ ಕಾಂನ ಸಾಹಿತ್ಯವನ್ನು ಪೂರ್ಣವಾಗಿ ಇಂಗ್ಲಿಷ್‌ಗೆ ಅನುವಾದಿಸಿಕೊಡುತ್ತಿರುವ ಅವರು ಖ್ಯಾತ ವಿದ್ವಾಂಸ ಪ್ರೊ. ಎಲ್. ಬಸವರಾಜು ಅವರಿಗಾಗಿ ಅಲ್ಲಮನ ಬೆಡಗಿನ 100 ವಚನಗಳನ್ನು ‘ಪೊಸೆಸ್‌ಡ್ ಬೈ ಅಲ್ಲಮ’ ಎನ್ನುವ ಹೆಸರಿನಲ್ಲಿ ಪ್ರಕಟಿಸಿದ್ದಾರೆ. ಅವರ ಈಚೆಗಿನ ‘ನೋಟ ಮತ್ತು ಲಲ್ಲಾದೇವಿ’ ಎಂಬ ಕವನ ಸಂಕಲನ ವಿಮರ್ಶಕರ ವಿಶೇಷ ಗಮನ ಸೆಳೆದಿದ್ದು, ಮುದ್ದಣ ಕಾವ್ಯ ಪ್ರಶಸ್ತಿಗೆ ಆಯ್ಕೆಯಾದ ಕವನ ಸಂಗ್ರಹ ‘ಅನುಸಂಧಾನ’ ಅವರ ಪ್ರತಿಭೆಯ ಬಯಲನ್ನು ಬಯಲಾಗಿಸುವಲ್ಲಿ ಯಶಸ್ವಿಯಾಗಿದೆ ಎಂದು ತೀರ್ಪುಗಾರರು ಅಭಿಪ್ರಾಯಪಟ್ಟಿದ್ದಾರೆ. 

‘ಅಪರಿಮಿತದ ಕತ್ತಲೊಳಗೆ’ ” ಸಮಗ್ರ ಕವಿತೆಗಳ ಸಂಕಲನ. ಕಥೆಗಾರ, ಕಾದಂಬರಿಗಾರ ಮತ್ತು ಅನುವಾದಕರೂ ಆಗಿರುವ ವಿಜಯರಾಘವನ್ ಅವರ ‘ಪ್ರೀತಿ ಬೇಡುವ ಮಾತು’ (ಕಾದಂಬರಿ) ಸೇರಿದಂತೆ ಹಲವು ಪ್ರಕಟಿತ ಕೃತಿಗಳಿವೆ.

ಪ್ರಶಸ್ತಿಗಳು: ಮುದ್ದಣ ಕಾವ್ಯ ಪ್ರಶಸ್ತಿ (2012), ಮಾಸ್ತಿ ಪ್ರಶಸ್ತಿ (2021)

More About Author