Poem

ಜೀವ ಚಿಗುರೋ ಹೊತ್ನಾಗ

ಹೊಲದಾಗಿಂದ ಕೆಲಸ ಮುಗ್ಸಿ
ಮಾರಿ ತೊಳದ ಬಂದು ಕುಂತಿನ್ರಿ
ನಾಚ್ತಾ ಬಾಜುಕ ಬಂದು ಕೂತು ಹೇಳದ್ಲರಿ ನನ್ನಾಕಿ
ರೀ..ನನಗ ಹೂ ಬಿಟ್ಟು ಈಗಷ್ಟ ಬಸಿರೊಡದ
ಹುಳಿ ಮಾವು ತಿನಬೇಕ ಅನ್ಸಾಕತ್ತೈತ್ರಿ
ಹೊಲದಾಚೆ ಆಕಾಶಕ್ಕ ಬೆಳದ
ಹುಣಸಿ ಮರದಾಗಿಂದ ಕಾಯಿ ತನಬೇಕ ಅನ್ಸ್ಲಿಕತ್ತೈತ್ರಿ
ಏನ ನಿಂಗ್ ಇತ್ತಿತ್ಲಾಗ ಇಂತ ಆಸೆ ಹುಟ್ಕೊಂಡಾವು
ಹಂಗಲ್ರಿ ನನ್ನಾಸಿ ಇನ್ನೂ ಉಳದಾವು

ಗಣಪತಿ ಹಬ್ಬಕ್ಕ ಮೂರ್ತಿ ಮಾಡ್ಲಾಕ ತಂದ ಕೆಮ್ಮಣ್ಣಿನ
ವಾಸನಿಗೆ ತಿನ್ಲಾಕ ಅನಸ್ತೈತ್ರಿ
ಅಟ್ಟದ ಭರಣ್ಯಾಗ ಅತ್ತಿ ಮಾಡಿಟ್ಟ ಮಿಡಿ ಉಪ್ಪಿನಕಾಯಿ
ತಿನ್ಲಾಕ ಅನಸ್ತೈತ್ರಿ
ಏನ ನಿಂಗ ಇತ್ತಿತ್ಲಾಗ ಇಂತ ಆಸಿ ಹುಟ್ಕೊಂಡಾವು
ಹಂಗಲ್ರಿ ನನ್ನಾಸಿ ಜೋಡಿ ಸಂಗ್ಟಾನೂ ಅದಾವು

ಒಲಿ ಮ್ಯಾಲ ಅನ್ನ ಬೇಯುದ ನೋಡಿದ್ರ ವಾಂತಿನ ಬರ್ತಾವು
ಸೊಪ್ಪಿನ ಪಲ್ಯ ತಾಟ್ಯ್ನಾಗ್ ಹಾಕ್ಕೊಂಡ್ರ ಊಟಾನ ಸೇರ್ದಂಗ ಆಗ್ತಾವು
ಏನಾರ ಮಾಡಿ ತಿನ್ನೋನಂದ್ರ ಸುಸ್ತು ಬಡ್ದು ತಲಿ ಸುತ್ತು
ಬಂದಂಗ ಆಗ್ತಾವು
ಏನಾ ನಿಂಗ ಇತ್ತಿತ್ಲಾಗ್ ಈ ನಮ್ನಿ ಆಗ್ಲಿಕತ್ತಾವು
ಹಂಗ್ ಅನಬ್ಯಾಡ್ರಿ ಸಂಗ್ಟದ ಜೊತಿ ಸಿಹಿ ಸುದ್ಧಿನೂ ಅದಾವು

ಮೀಸಿ ತಿರುವಿ ಪಂಚಾಯ್ತಿ ಹೇಳೊ ಪಟಗಾರ ನಿನ್ನ ಮೀಸಿ ಎಳಿಯಾಕ ಒಬ್ಬ ಬರಾಕತ್ತಾನ
ಬರ್ಲಿಕತ್ತಾಳ ದೇವತಿ ದೀಪಾ ಹಚ್ಚಿ ರಂಗೋಲಿ ಹಾಕಿ ಮನಿ ಚಂದನವನ ಮಾಡಾಕಂತಾನ
ಏನ ಇತ್ತಿತ್ಲಾಗ ಭಾರಿ ಒಗಟಂಗ ಮಾತಾಡ್ತಿ ಏನ್ ನಡದಾವು
ಹಂಗ್ಯಾಕಂತಿರಿ ಬಿಡ್ಸಿ ಹೇಳಿದ್ರು ನಿಮಗ್ ತಿಳಿದಂಗ ಆಗ್ಯಾವು

ಬರಡು ಹೊಟ್ಯಾಗ ಬಿತ್ತಿದ ಬೀಜ ಈಗ ಚಿಗುರೊಡೆಯಾಕತ್ತಾವು
ಯಜಮಾನ ನಿನ್ನ ಅಪ್ಪ ಅನ್ನಾಕ ಅವು ಭೂಮಿಗೆ ಬರಾಕತ್ತಾವು
ಹಂಗೊಮ್ಮೆ ಕಿವಿಕೊಡ ಈ ಗರ್ಭಕ್ಕ ನಿನ್ನ ಮುಖಕ್ಕ ಹಂಗಾ ಒದ್ದಾವು
ಏನ ಎಂತ ವಿಚಾರ ಹೇಳಿ ಎದೆ ಹೊಡ್ಕೊಳಾಕತ್ತಾವು
ನಮ್ ಕೂಸು ಹುಟ್ಟಿ ನಮ್ನ ಅಪ್ಪಾ ಅವ್ವಾ ಅಂತಾವು

ಹೌದನ ನನ್ ರಾಣಿ ನಿನ್ನ ಪಲಂಗದಾಗ ಕೂರ್ಸಿ ರೇಷ್ಮೆ ಸೀರಿ ಉಡ್ಸಿ
ಹೂವಿನ್ಯಾಗ ಅಲಂಕರ್ಸಿ ಪೂಜೇನ ಮಾಡ್ಲಾಕ ಅನ್ಸಾಕತ್ತಾವು
ಸಾಕ ನನಗಿಷ್ಟ ಮತ್ತೇನೂ ಬ್ಯಾಡಾ ಅನ್ಸ್ಲಿಕತ್ತಾವು
ಹಂಗ್ಯಾಕಂತಿರಿ ಅನುಭವಿಸೋದಿನ್ನೂ ಭಾಳ ಅದಾವು

ಅಂಗಳದಾಗ ಕೂಸು ಅಂಬೆಗಾಲಿಡುದು ನೋಡುದೈತಿ
ಕೂಸಿನ ಅಳುಗ ನಿದ್ದಿ ಬಿಡು ರಾತ್ರಿ ಭಾಳ ಐತಿ
ಆಕಿ ಗೆಜ್ಜಿ ಶಬ್ಧಕ್ಕ ನಿಮ್ಮ ದಣಿವು ಆರುದೈತಿ
ಶಾಲ್ಯಾಗ ಕಳ್ಸಿ ಅಕ್ಷರ ಕಲ್ಸೊದೈತಿ
ನಮ್ಮ ಕೂಸಾ ದೇಶದ ಕೀರ್ತಿ ಮೇರ್ಸುವಾಗ ನಾವ ಹೆಮ್ಮೆ ಪಡೋದೈತಿ
ಏನಾ ಎಂತ ಮಾತಾಡಿ ನೂರಕ್ಕ ನೂರ ಖರೆ ಐತಿ
ಅಯ್ಯ ಮರ್ತ ಬಿಟ್ಟಿನ್ರಿ ನಿಮ್ಮವಗ ಇದ್ನ ಹೇಳೊದೈತಿ

ಮಡಿಲನ್ಯಾಗ ಕೂಸಾ ಇಟ್ಕೊಂಡು ಕೆಂಡ ಊದಿ ಸಾಕ್ಯಾಳ
ಗಂಡ ಇಲ್ಲದ ಗಟ್ಟಿಗಿತ್ತಿ ರಾಜನಂಗ ನನ್ನ ಬೆಳಸ್ಯಾಳ
ಈಗ ನನಗ ಕೂಸು ಹುಟ್ಯಾವು ಅಂದ್ರ ಬಿಸಿ ಹೊಳಿಗೇನ ಮಾಡ್ತಾಳ
ಊರೆಲ್ಲಾ ಕರದು ಹಬ್ಬದ ಊಟಾನ ಹಾಕ್ತಾಳ
ನಾನೂ ಅಜ್ಜಿ ಆದ್ನಿ ಅಂತ ಹಿರಿ ಹಿರಿ ಹಿಗ್ತಾಳ
ಇದಕ್ಕಿಂತ ಮಿಗಿಲಾದ ಖುಷಿ ನಮಗೇನ್ರಿ ಅದಾವು
ನಿಮ್ಮೀ ಹಿರಿ ಹಿಗ್ಗಿನ ಖುಷಿಗ ನಾಚ್ಕಿ ಆಗ್ಲಿಕತ್ತಾವು

ವಿಡಿಯೋ
ವಿಡಿಯೋ

ಎಂ.ಎನ್. ನೇಹಾ ಹೊನ್ನಾವರ

ಎಂ.ಎನ್. ನೇಹಾ ಅವರು ಮೂಲತಃ ಹೊನ್ನಾವರದವರು. ಸಾಹಿತ್ಯ ಅವರ ಆಸಕ್ತಿ ಕ್ಷೇತ್ರವಾಗಿದ್ದು, ತಮ್ಮನ್ನು ಬರವಣಿಗೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಕಾವ್ಯ, ಲೇಖನಗಳ ಬರವಣಿಗೆಯಲ್ಲಿ ಕ್ರಿಯಾಶೀಲರಾಗಿದ್ದಾರೆ. ಈ ದಿನ, ಬುಕ್ ಬ್ರಹ್ಮ ಸೇರಿದಂತೆ ಸಾಹಿತ್ಯ ಜಾಲತಾಣಗಳಲ್ಲಿ ಅವರ ಲೇಖನ ಹಾಗೂ ಕವಿತೆಗಳು ಪ್ರಕಟವಾಗಿರುತ್ತವೆ.

More About Author