
ಕವಿ ವಿರೇಶ ನಾಯಕ ಅವರು ಬರೆದ 'ಕಾಲಕ್ಕೆ ಗಡಿಗಳ ಹಂಗಿಲ್ಲ' ಕವಿತೆಯ ಸಾಲುಗಳು ಹೀಗಿವೆ...
ದಿನ ಮುಂಜಾನೆ ಎದ್ದು
ಗಡಿಯಾರದ ಮುಳ್ಳನ್ನೇ ನೋಡುತಿರುತ್ತೆನೆ
ನನಗೊಂದೇ ಆಶ್ಚರ್ಯ!
ಮನಸುಗಳ ನಡುವೆ, ದೇಶಗಳ ನಡುವೆ
ಗಡಿ ಕಟ್ಟಿರುವ ನಮಗೆ
ಕಾಲಕ್ಕೂ ಗಡಿಗಳಿರಬಹುದೇ ಎಂದು
ತಕ್ಷಣವೇ ದೂರದ ದೇಶದಲ್ಲಿನ
ಸ್ನೇಹಿತನಿಗೆ ಫೋನಾಯಿಸಿ ಕೇಳುತ್ತೆನೆ
ಅವ, ಸೂರ್ಯ ಉದಯಿಸುವ ಪರಿ
ಹೂ ಅರಳುವ ಸಧ್ದು ಎಲ್ಲವನ್ನೂ
ಚಂದವಾಗಿ ವಿವರಿಸುತ್ತಾನೆ
ಮತ್ತೋರ್ವನಿಗೆ ಮಾತಾಡಿಸಿದೆ
ಅವ, ಅಯ್ಯೋ ದಿನಬೆಳಗಾದರೆ
ಮದ್ದು, ಗುಂಡುಗಳ ಸಧ್ದು
ತುಂಡು ರೊಟ್ಟಿಗಾಗಿ
ಕೊಳೆತ ನಗುವಿಗೆ ಮುಲಾಮು ಹಚ್ಚಿ
ರಾತ್ರಿ ಫಕೀರನಾಗುತ್ತೆನೆ
ಜೋಳಿಗೆ ತುಂಬ ನೇಮ್ಮದಿಯ ನಾಳೆಗಳ ತುಂಬಿಸಲು,
ನಿಮ್ಮಲ್ಲಿನ ಬುದ್ದನ ನಗು ನನಗೂ
ತುಸು ಕೊಡುವೆಯಾ ಎಂದು ಕೇಳುತ್ತಾನೆ
ನಾನು, ಇಲ್ಲಿ ಅಣು ಶಕ್ತಿ ಪರಿಕ್ಷೆಗಿಟ್ಟ
ಹೆಸರು ಸ್ಮೈಲಿಂಗ್ ಬುದ್ದನ ಬಗ್ಗೆ
ಕೇಳುತಿದ್ದಾನೆಂದುಕೊಂಡು ತೆಪ್ಪಗಾಗುತ್ತೆನೆ
ಆವತ್ತೇ ಗೊತ್ತಾಗಿದ್ದು
ಕಾಲಕ್ಕೆ ಗಡಿಗಳ ಹಂಗಿಲ್ಲ
ಪ್ರೀತಿಸುವುದೂ ಗೊತ್ತು
ದ್ವೇಷಿಸುವುದೂ ಗೊತ್ತೆಂದು
ಶಿಲಾಯುಗದಿಂದ ಸಂಚರಿಸಿ
ವಾಸ್ತವಕ್ಕೆ ಬಂದು ನಿಂತಿದ್ದೆನೆ
ನನಗೆ ಕಂಡಿದ್ದು,
ರಕ್ತದಿಂದ ಕಟ್ಟಿದ ಗಡಿಗಳಲ್ಲಿ
ಪ್ರೀತಿಗೆ ಆಸ್ಪದವಿಲ್ಲ
ಎಲ್ಲ ಕಾಲಕ್ಕೂ ಸಾಕ್ಷಿಯಾಗಿ
ಗಹ ಗಹಿಸಿ ನಗುವ ಸೂರ್ಯನ ಕಂಡು
ಲಜ್ಜೆಯಿಂದ ತಲೆ ತಗ್ಗಿಸುತ್ತೆನೆ,
ಮಾನಗೆಟ್ಟ ಚರಿತ್ರೆಯ ಹೊತ್ತು
ಇನ್ನೂ ನಡೆಯಲಾರೆ,
ಬಿಟ್ಟು ಹೋದ ನೆನಪುಗಳಿಗೆ ವೈರಾಗ್ಯ ಮೂಡಿ
ಕಲ್ಲು ಬಂಡೆಯಾದರೆ
ನಾಳೆ ಆಗುವ ನೋವುಗಳಿಗೆ
ಮುನ್ನುಡಿ ಕೆತ್ತದಿರಿ
ಶತಮಾನಗಳಿಂದ ನೋವುಂಡ
ಈ ಕಲ್ಲು ಶಾಂತಿಯ ಪ್ರತೀಕವಾಗಿ
ಮರುಹುಟ್ಟು ಪಡೆದಿದೆ
ವಿರೇಶ ನಾಯಕ
ಬರಹಗಾರ ವಿರೇಶ ನಾಯಕ.ಗದಗ್ ಜಿಲ್ಲೆ ಗಜೇಂದ್ರಗಡ ತಾಲೂಕು ಬೆಣಚಮಟ್ಟಿ ಗ್ರಾಮದವರು. ಪ್ರಾಥಮಿಕ ಶಿಕ್ಷಣವನ್ನು ಹುಟ್ಟುರಾದ ಬೆಣಚಮಟ್ಟಿಯಲ್ಲಿ ಪಡೆದು, ನಂತರ ಬಿ.ಎಸ್.ಸಿ ಪದವಿಯನ್ನು ಶ್ರೀ ಅನ್ನದಾನೇಶ್ವರ ಮಹಾವಿದ್ಯಾಲಯ, ನರೇಗಲ್‌ನಲ್ಲಿ ಪೂರೈಸಿದ್ದಾರೆ. ಎಂ.ಎಸ್.ಸಿ ಜೀವರಸಾಯನಶಾಸ್ತ್ರ ವಿಭಾಗದಲ್ಲಿ ಸ್ನಾತಕೋತ್ತರ ಪದವಿಯನ್ನು ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡದಲ್ಲಿ, ಹಾಗೂ ಪಿಜಿ ಡಿಪ್ಲೋಮಾ (ಸೆಲ್ಯೂಲರ್ ಅಂಡ್ ಮಾಲಿಕ್ಯೂಲರ್ ಡಯಾಗ್ನೋಸ್ಟಿಕ್ಸ್) ಧರ್ಮಸ್ಥಳ ಮಂಜುನಾಥೇಶ್ವರ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಪೂರೈಸಿದ್ದಾರೆ.
ಹವ್ಯಾಸಗಳು : ಕವಿತೆ, ವೈಜ್ಞಾನಿಕ ಲೇಖನ ಬರವಣಿಗೆ.
ರಾಜ್ಯದ ಯುವ ಕವಿಗಳ ಸಂಕಲನಗಳಲ್ಲಿ ಹಾಗೂ ಪ್ರಜಾವಾಣಿ ಪತ್ರಿಕೆಯಲ್ಲಿ, ಪಂಜು, ಅವಧಿ, ಕೆಂಡಸಂಪಿಗೆ ಮುಂತಾದ ವೆಬ್ ಮ್ಯಾಗಜಿನ್‌ಗಳಲ್ಲಿ ಇವರ ಕವಿತೆಗಳು ಪ್ರಕಟವಾಗಿವೆ.
ರಾಜ್ಯದೆಲ್ಲೆಡೆ ವಿವಿಧ ಶಾಲಾ-ಕಾಲೇಜುಗಳಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಶಿಕ್ಷಣ, ಸಾಹಿತ್ಯ, ವಿಜ್ಞಾನ ಕುರಿತು ಅರಿವು ಮೂಡಿಸುವ ಜೊತೆಗೆ ಪ್ರೇರಣಾದಾಯಕ ಭಾಷಣಗಳನ್ನು ಮಾಡುತ್ತ ಬರುತ್ತಿದ್ದಾರೆ.
ಪ್ರಶಸ್ತಿಗಳು: ರಾಜ್ಯ ಮಟ್ಟದ ಬೆಸ್ಟ್ ಆ್ಯಂಕರ್ ಅವಾರ್ಡ್, ಗಣರಾಜ್ಯೋತ್ಸವ ಪುರಸ್ಕಾರ.
More About Author