
ಲೇಖಕ ಮನು ಗುರುಸ್ವಾಮಿ ಅವರು ಬರೆದ 'ಕಾಲಿಗೆ ಬುದ್ಧಿ!' ಮಕ್ಕಳ ಕವಿತೆಯ ಸಾಲುಗಳು ಹೀಗಿವೆ...
ನನ್ನ ಮನೆಯು ಬಲು ದೂರ
ಆಡಿ ಹೋದ ಜೊತೆಗಾರ
ಒಬ್ಬನೇ ಈಗ ನಾನಿಲ್ಲಿ
ಸಂಜೆಯ ರಂಗಿನ ಹೊತ್ತಲ್ಲಿ
ನಡೆ ನಡೆ ನಡೆ ನಡೆ ಕಾಲಣ್ಣ
ಜೊತೆಯಲಿ ಯಾರೂ ಇಲ್ಲಣ್ಣ
ನೋಡು ದಾರಿ ಹೇಗಿಹುದು
ಕಲ್ಲು ಮುಳ್ಳು ತುಂಬಿಹುದು
ಕಮ್ಮಿ ನಿನಗೆ ಮತಿ ಇನ್ನೂ
ಗುಮ್ಮ ಬಂದರೆ ಗತಿಯೇನು?
ನಡೆ ನಡೆ ನಡೆ ನಡೆ ಕಾಲಣ್ಣ
ಬೇಗನೆ ಹೆಜ್ಜೆಯ ಹಾಕಣ್ಣ
ಅಮ್ಮ ಇದ್ದರೆ ಮನೆಯಲ್ಲಿ
ಕೋಲು ಇದ್ದಿತು ಕೈಯಲ್ಲಿ
ನಿನಗೆ ಮೊದಲ ಏಟಣ್ಣ
ನಂತರ ನನಗೂ ನೋವಣ್ಣ
ನಡೆ ನಡೆ ನಡೆ ನಡೆ ಕಾಲಣ್ಣ
ಬೇಗ ಸೇರುವ ಮನೆಯನ್ನ
ಅರೆ! ಅಮ್ಮ ಇಹಳು ಬಾಗಿಲಲಿ
ಅಬ್ಬಾ! ಕೋಲು ಇಲ್ಲ ಕೈಯಲ್ಲಿ
ತುತ್ತು ನೀಡಲು ಕಾದಿಹಳು
ಚಂದದ ಕತೆಯ ಹೇಳುವಳು
ಕುಣಿ ಕುಣಿ ಕಾಲಣ್ಣ
ಅಮ್ಮನಲಿ ಕೋಪವೂ ಇಲ್ಲಣ್ಣ!
ಮನು ಗುರುಸ್ವಾಮಿ
ಮನು ಗುರುಸ್ವಾಮಿ ಮೂಲತಃ ಮೈಸೂರು ಜಿಲ್ಲೆಯ ತಲಕಾಡಿನವರು. ಮೈಸೂರು ವಿಶ್ವವಿದ್ಯಾನಿಲಯ, ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಿಂದ ಕನ್ನಡ ಸ್ನಾತಕೋತ್ತರ ಪದವಿಯನ್ನು ಪಡೆದಿರುವ ಅವರು ಬೆಂಗಳೂರಿನ ಕೆ ಎಲ್ ಇ -ಎಸ್ ನಿಜಲಿಂಗಪ್ಪ ಕಾಲೇಜಿನಲ್ಲಿ ಅಧ್ಯಾಪಕ ವೃತ್ತಿಯನ್ನು ಆರಂಭಿಸಿದ ಇವರು ಕನ್ನಡ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ಪ್ರಸ್ತುತ ಬೆಂಗಳೂರಿನ ವಿದ್ಯಾವನ ಪಿಯು ಮತ್ತು ಪದವಿ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವಳೂ ಕತೆಯಾದಳು, ವ್ಯಭಿಚಾರಿ ಹೂವು, ಕಲ್ಲು ದೇವರು ದೇವರಲ್ಲ, ಗಾಂಧಿ ನೀ ನನ್ನ ಕೊಂದೆ ಕೃತಿಗಳು ಪ್ರಕಟಣಾ ಹಂತದಲ್ಲಿವೆ.
ಕೃತಿಗಳು : ನಿಬ್ಬೆರಗು
More About Author