Poem

ಕನಸಿನ ಕೃಷ್ಣ

ತಡೆ ರಾಧೆ....ಈಗ ಬರುವೆನೆಂದ ಕೃಷ್ಣ....
ಹೇಳದೆಲ್ಲಿ ಮಾಯವಾದನೋ ನಾ ಕಾಣೆ...
ಹೊತ್ತು ಮೀರಿ ಹಾದಿಯತ್ತ ಬೆಳಕುಅರೆ ಮಾಸುತ್ತಿದೆ‌ ನಾನು ತೆರಳಲೇ ... ಮೆಲ್ಲನೆ

ಕಲ್ಲು ಬಂಡೆಯ ಮೇಲೆ ಕುಳ್ಳಿರಿಸಿ....ರಾಧೆ
ಎನ್ನುತ ಓಡಿರುವ ನನ್ನಿನಿಯ ಯಶೋದೆ ಕಂದ
ನನ್ನ ಬಳಗ ಗೋಪಿಕೆಯರನಟ್ಟಿ ಮರೆಯಾಗಿ
ನನ್ನ ಕಾಯಿಸುವನು ಚೆಲ್ಲಾಟದ ಚೆನ್ನಿಗ

ಅದೋ ಕೊಳಲು ದನಿ...ಬಂದ ನನ್ನಿನಿಯ
ನನ್ನ ಆಡಿಸುವುದೇ ಅವಗೆ ಹುಚ್ಚು ಪ್ರೀತಿ..
ಆಡುವಾಟವೆಲ್ಲ ಆಡಿ ನನಗದು ತಿಳಿವಲ್ಲವೋ
ಅಯ್ಯೋ ನಂಬಬೇಕು...ಮುಗ್ಧ..ತುಂಟ ಕೃಷ್ಣ..

ಕಾಯುವುದರಲ್ಲೇ ಸುಖವಿದೆ ಪ್ರೇಮಿ ಬರುವ ದಾರಿ
ಅರೆ ಈ ಬೃಂದಾವನದ ಸೊಗಸಾದ ಹೂ ಬಳ್ಳಿ...
ನನ್ನವನೇನು ಕಮ್ಮಿಯೇ ಮುರಳಿ ಮೋಹನ... ಸಮೀಪವೇ ಕೊಳಲಗಾನ ಆಹಾ...ಮರುಳಾದೆ...

ಹಿತವಾಗಿ ಸ್ಪರ್ಶಿಸಿ ಲಘುವಾಗಿ ಆಲಂಗಿಸಿದ ಕೃಷ್ಣ..
ಕಿವಿಯ ಬಳಿ ಮೆಲುವಾಗಿ ಉಸುರಿದ ರಾಧೇ...
ಹೊತ್ತು ಸರಿಯಲು ಪೋಗೆನ್ನುತ್ತಾ ಪ್ರಿಯ ಕೃಷ್ಣ
ಜೊತೆಯಾಗಿ ಇರುವಾಗ ಕಣ್ಮುಚ್ಚಿ ಒಲ್ಲೆನೆಂದೆ...

ರಾಧೆ ರಾಧೇ...ಮಗಳೇ ಜನನಿಯ ಮೃದು ಕರೆ
ಬೆಚ್ಚಿ ಕಣ್ತೆರೆದೆ ಕೃಷ್ಣನೆಲ್ಲಿ....ಕೊಳಲ ಗಾನವೆಲ್ಲಿ....
ಪ್ರೇಮವೆಲ್ಲಿ ಮೋಹಿಸುವ ಮಧುರ ಮಾತೆಲ್ಲಿ....
ನಿದ್ದೆಯಲ್ಲೂ ಹಿತವಾಗಿ ಕಾಡಿಸಿದ ಕೃಷ್ಣ...

ಕೃಷ್ಣ..... ನೆನಪಾಯಿತು ಎನಗೆ ಶುಭಕೋರುವೆ
ನಾ ಸೋತಿರುವೆನು ಕೃಷ್ಣನ ಪ್ರೀತಿಯ ರಾಧೆಯಾಗಿ....
ಜೋಡಿಯಾಗಿ ನಿಂತ ನಮ್ಮ ಚಿತ್ರಕ್ಕೆ ಪುಷ್ಪಾರ್ಚನೆ
ಇಂದು ಕೃಷ್ಣ ಜನ್ಮಾಷ್ಟಮಿಯ ಶುಭದಿನವಾಗಿ....

ಶರಣ್ಯ ಕೋಲ್ಚಾರ್

ಕವಿ ಶರಣ್ಯ ಕೋಲ್ಚಾರ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲ್ಲೂಕಿನ ಕೋಲ್ಚಾರಿನವರು. ತನ್ನ ಪ್ರಾಥಮಿಕ ಶಿಕ್ಷಣವನ್ನು ಪಡ್ಪಿನಂಗಡಿಯಲ್ಲಿ ಪೂರೈಸಿ, ಬಾಳಿಲ ವಿದ್ಯಾಭೋಧಿನಿ ಪ್ರೌಢಶಾಲೆಯಲ್ಲಿ ಪ್ರೌಡ ಶಿಕ್ಷಣ ಪೂರೈಸಿದ ಇವರು ಕಲಾವಿಭಾಗದಲ್ಲಿ ಪದವಿ ಪಡೆದು ನಂತರ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ವಿಚಾರ ವಿಮರ್ಶೆ, ಭಾಷಣ, ಬರವಣಿಗೆ, ಪ್ರವಾಸ, ಓದು ಇವರ ನೆಚ್ಚಿನ ಹವ್ಯಾಸಗಳು

ಪ್ರಸ್ತುತ ಹೊಸದಿಗಂತದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.

More About Author