Poem

ಕಣವಿ

ಮೃದು ಮಧುರ ಭಾವ ಸಂಚಯಗೊಂಡು ನಿಂತಂತೆ
ಅಂಚೆದುಪ್ಪಳ ಮನದ ಭಾವಜೀವಿ
ಕಸ್ತೂರಿ ಕನ್ನಡಕೆ ಚೆಂಬೆಳಕ ಮುಡಿಸಿದಿರಿ
ಒಳಗೆ ಸುಳಿಯುವ ಭಾವದೆಳೆಯ ನೀವಿ

ಮಾತನಾಡಿದರಷ್ಟೆ, ಕಾವ್ಯ ಬರೆದರೂ ಅಷ್ಟೇ
ಸಾವಧಾನದಿ ಸುರಿವ ತುಂಬುವೃಷ್ಟಿ
ಹಾಗಲ್ಲ ಹೀಗಲ್ಲ ಹೀಗೂ ಇರಬಹುದೇನೋ
ತೂಗಿತೂಗಿಯೆ ಬರುವ ಶಬ್ದಸೃಷ್ಟಿ

ಮಧುರ ಚೆನ್ನರಕೂಡ ಜೀವಜೀವದ ನಂಟು
ಕಣ್ಣು ಮುಚ್ಚುವ ಭಾವಲಿಮಗದಚ್ಚು
ಒಳಗೆ ಎಲ್ಲೋ ಕುಳಿತು ನಿತ್ಯ ಕಟ್ಟಾಡಿಸುವ
ಬೇಂದ್ರೆಯೆಂದರೆ ನಿಮಗೆದಷ್ಟು ಹುಚ್ಚು

ಹೂವು ಕಂಡರೆ ನಿಂತು ದುಂಬಿಕಂಡರೆ ನಕ್ಕು
ಕಾವ್ಯ ಬೇಟಕೆ ತೀಡಿ ಗಾಳಿಗಂಧ
ಕಾರಖಾನೆಗೂ ಚಿತ್ತ ಮತ್ತೆ ಗುಡಿಸಲಿನತ್ತ
ನಿತ್ಯ ಜೀವಧ್ವನಿಗೆ ಕಾವ್ಯ ಬಂಧ

ಕಣ್ಣು ಹರಿಯುವ ತನಕ ಬರಿದಾದ ಬೋಳುಮರ
ನಗರದಲಿ ನೆರಳನ್ನು ಕಾಣದವರು
ಅಂದಿನಿಂದಿಂದಿಗೂ ನಮ್ಮ ಹಳ್ಳಿಯೆ ಚೆಂದ
ಎನುತ ನೆನಪಿನ ತೆರನೆಳೆಯುವವರು

ವಿಶ್ವಭಾರತಿಗೆ ಕನ್ನಡದ ಆರತಿಯೆತ್ತಿ
ಮಂಗಳದ ಜಯಭೇರಿ ಬಾನತುಂಬ
ಕಾವ್ಯಾಕ್ಷಿ, ಎರಡುದಡ, ನೆಲಮುಗಿಲು, ಮಧುಚಂದ್ರ
ಒಂದೊಂದು ಕನ್ನಡದ ಅಮೃತ ಕುಂಭ

ಆಕಾಶಬುಟ್ಟಿಯಲಿ ಆರದ್ಹಣತೆಯನಿಟ್ಟು
ಥೇಲಿಬಿಟ್ಟಿಹ ಬೆಳಕು ನಾಡಿನೆಲ್ಲ
ಸಧ್ಯ ಕಂಡದ್ದಿಷ್ಟು ಇನ್ನು ಕಾಣದ್ದೆಷ್ಟೊ
ಕಣಿವೆಯೊಳಗೇನುಂಟು ಯಾವ ಬಲ್ಲ ?

ಕೃತಿ: ಹೊತ್ತು ಮೂಡುವ ಸಮಯ, 2001


ಶ್ರೀರಾಮ ಇಟ್ಟಣ್ಣವರ

ಶ್ರೀಕೃಷ್ಣ ಪಾರಿಜಾತ- ಒಂದು ಅಧ್ಯಯನ ಎಂಬ ವಿಷಯದ ಮೇಲೆ ಪಿಎಚ್‌.ಡಿ . ಪದವಿ ಪಡೆದಿರುವ ಶ್ರೀರಾಮ ಇಟ್ಟಣ್ಣವರ ಅವರು ಬೀಳಗಿಯ ಶ್ರೀಸಿದ್ಧೇಶ್ವರ ಕಾಲೇಜಿನಲ್ಲಿ ಅಧ್ಯಾಪಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ಕರ್ನಾಟಕ ಬಯಲಾಟ ಅಕಾಡೆಮಿಯ ನಿಕಟಪೂರ್ವ ಅಧ್ಯಕ್ಷರಾಗಿರುವ ಇಟ್ಟಣ್ಣವರ ಅವರು ಬಯಲಾಟ-ಕೃಷ್ಣ ಪಾರಿಜಾತ ಹಾಗೂ ಜಾನಪದ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದ್ದಾರೆ.

ಹೊಳಿಸಾಲ ಬಳ್ಳಿ; ಗಾಲಿ ಉಳ್ಳತೈತಿ; ನೂರು ಶಿಶುಗೀತೆಗಳು; ಹಾಡುಣು ಬಾಪ್ರೇಮದ ಪಾಡಾ; ಹೊತ್ತು ಮೂಡುವ ಸಮಯ (ಕಾವ್ಯ), ಪಾರಿಜಾತದವರು (ನಾಟಕ),  ಜನಪದ ಪಶುವೈದ್ಯ ಬೀಳಗಿ ಸಿದ್ಧಪ್ಪ; ಕೊಣ್ಣೂರ ಕರಿಸಿದ್ದೇಶ್ವರ ದೇವಸ್ಥಾನ (ಜಾನಪದೀಯ) ಹಲಗಲಿ-ಗ್ರಾಮ ಚಾನಪದ (ಅಧ್ಯಯನ), ಲಾವಣಿ: ಸಣ್ಣಾಟ (ಸಂಶೋಧನೆ)  ತಟ್ಟಿ ಚಿನ್ನ-ಸಣ್ಣಾಟ; ಕಂದಗಲ್ಲ, ಸ್ಮೃತಿ ವಾತ್ಸಲ್ಯ, ಹಾಲಕೆನೆ  (ಸಂಪಾದಿತ),  ಕೌಜಲಗಿ ನಿಂಗವ್ವ; ಸ್ವಾತಂತ್ರ ಹೋರಾಟಗಾರ್ತಿ ಸೀತಾಬಾಯಿ ತಿಮಸಾನಿ (ಜೀವನ ಚರಿತ್ರೆ) ಪ್ರಕಟಿತ ಕೃತಿಗಳು.  

ಅವರಿಗೆ ರಾಜ್ಯ ನಾಟಕ ಅಕಾಡೆಮಿ ಫೆಲೋಶಿಪ್; ಜಾನಪದ ತಜ್ಞ ಪ್ರಶಸ್ತಿ: ಮೇಘಮಿತ್ರ ಸಾಹಿತ್ಯ ಪುರಸ್ಕಾರಗಳು ಸಂದಿವೆ.  

More About Author