Poem

ಕನ್ನಡ

`ಕನ್ನಡ’ ಎನೆ ಕುಣಿದಾಡುವುದೆನ್ನೆದೆ,
`ಕನ್ನಡ’ ಎನೆ ಕಿವಿ ನಿಮಿರುವುದು;

ಕಾಮನ ಬಿಲ್ಲನು ಕಾಣುವ ಕವಿಯೊಲು
ತೆಕ್ಕನೆ ಮನ ಮೈಮರೆಯುವದು.

ಕನ್ನಡ ! ಕನ್ನಡ ! ಹಾ, ಸವಿಗನ್ನಡ !
ಕನ್ನಡದಲಿ ಹರಿ ಬರೆಯುವನು !
ಕನ್ನಡದಲ್ಲಿ ಹರ ತಿರಿಯುವನು !
ಕನ್ನಡದಲ್ಲಿಯೆ ಬಿನ್ನಹ ಗೈದೊಡೆ
ಹರಿ ವರಗಳ ಮಳೆ ಕರೆಯುವನು !
ಹರ ಮುರಿಯದೆ ತಾ ಪೊರೆಯುವನು !

ಬಾಳುವುದೇತಕೆ ? ನುಡಿ ಎಲೆ ಜೀವ
ಸಿರಿಗನ್ನಡದಲ್ಲಿ ಕವಿತೆಯ ಹಾಡೆ,
ಸಿರಿಗನ್ನಡದೇಳಿಗೆಯನು ನೋಡೆ.
ಕನ್ನಡ ತಾಯಿಯ ಸೇವೆಯ ಮಾಡೆ !

-ಕೆ. ವಿ. ಪುಟ್ಟಪ್ಪ

ವಿಡಿಯೋ
ವಿಡಿಯೋ

ಕುವೆಂಪು (ಕೆ.ವಿ. ಪುಟ್ಟಪ್ಪ)

ಕುವೆಂಪು ಎಂಬ ಕಾವ್ಯನಾಮದಿಂದ ಸಾಹಿತ್ಯ ರಚನೆ ಮಾಡಿದ ಕವಿ, ಪ್ರಖರ ವಿಚಾರವಾದಿ-ಚಿಂತಕ ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ ಅವರು ಕನ್ನಡ ಸಾಹಿತ್ಯದ ಮೇರೆಗಳನ್ನು ವಿಸ್ತರಿಸಿದವರು. ತಂದೆ ವೆಂಕಟಪ್ಪಗೌಡ ತಾಯಿ ಸೀತಮ್ಮ. ತೀರ್ಥಹಳ್ಳಿ ತಾಲ್ಲೂಕಿನ ಕುಪ್ಪಳ್ಳಿಯವರಾದ ಪುಟ್ಟಪ್ಪ ಜನಿಸಿದ್ದು ಚಿಕ್ಕಮಗಳೂರು ಜಿಲ್ಲೆಯ ಹಿರೇಕೂಡಿಗೆಯಲ್ಲಿ 1904ರ ಡಿಸೆಂಬರ್ 29ರಂದು. ಮನೆಯಲ್ಲೇ ಖಾಸಗಿ ಮೇಷ್ಟರ ಮೂಲಕ ಪ್ರಾರಂಭಿಕ ವಿದ್ಯಾಭ್ಯಾಸದ ನಂತರ ತೀರ್ಥಹಳ್ಳಿಯಲ್ಲಿ ವಿದ್ಯಾಭ್ಯಾಸ ಮುಗಿಸಿ ಮೈಸೂರಿನಲ್ಲಿ ವೆಸ್ಲಿಯನ್ ಮಿಷನ್ ಹೈಸ್ಕೂಲ್, ಮಹಾರಾಜ ಕಾಲೇಜುಗಳಲ್ಲಿ ಓದಿ ಎಂ.ಎ. ಪದವಿ (1929) ಪಡೆದರು.

ಮೈಸೂರು ಮಹಾರಾಜ ಕಾಲೇಜಿನಲ್ಲಿ ಅಧ್ಯಾಪಕ (1929) ಆಗಿ ಅನಂತರ ಕ್ರಮೇಣ ಉಪಪ್ರಾಧ್ಯಾಪಕ, ಪ್ರಿನ್ಸಿಪಾಲರಾಗಿ ೧೯೫೬ರಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಉಪಕುಲಪತಿ (1965) ಆಗಿ ಕಾರ್ಯನಿರ್ವಹಿಸಿ 1960ರಲ್ಲಿ ನಿವೃತ್ತರಾಗಿದ್ದರು.

ಕುವೆಂಪು ಬಾಲ್ಯದಿಂದಲೂ ಸಾಹಿತ್ಯ ರಚನೆಯಲ್ಲಿ ನಿರತರಾಗಿದ್ದರು. ಮೈಸೂರಿನಲ್ಲಿ ನಡೆದ 38ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸ್ವಾಗತಾಧ್ಯಕ್ಷರಾದರು. ಧಾರವಾಡದಲ್ಲಿ ನಡೆದ 39ನೇ ಕನ್ನಡ ಸಾಹಿತ್ಯ ಸಮ್ಮೇಳನ (1957) ಅಧ್ಯಕ್ಷತೆ ವಹಿಸಿದ್ದರು.  ಪದ್ಮವಿಭೂಷಣ ಪ್ರಶಸ್ತಿ, ಜ್ಞಾನಪೀಠ ಪ್ರಶಸ್ತಿ, ರಾಜ್ಯಸರ್ಕಾರದಿಂದ ರಾಷ್ಟ್ರಕವಿ ಪ್ರಶಸ್ತಿ, ಕರ್ನಾಟಕ ವಿಶ್ವವಿದ್ಯಾನಿಲಯದಿಂದ ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಲಾಗಿತ್ತು. ಬೆಂಗಳೂರು ವಿಶ್ವವಿದ್ಯಾನಿಲಯವು ಗೌರವ ಡಿ.ಲಿಟ್. (1969) ನೀಡಿತ್ತು. ಪಂಪ ಪ್ರಶಸ್ತಿ,  ಕರ್ನಾಟಕ ರತ್ನ ಪ್ರಶಸ್ತಿ ದೊರೆತಿದ್ದವು..ಅ

ಶ್ರೀರಾಮಾಯಣ ದರ್ಶನಂ ಕೃತಿಗೆ ಜ್ಞಾನಪೀಠ (1968) ಪ್ರಶಸ್ತಿ ಲಭಿಸಿತು. ಇದು ಕನ್ನಡದಲ್ಲಿ ಮೊದಲ ಜ್ಞಾನಪೀಠ ಪ್ರಶಸ್ತಿ. ೧೯೯೫ರಲ್ಲಿ ನಾಡೋಜ (1995) ಪ್ರಶಸ್ತಿಯನ್ನು  ಮರಣೋತ್ತರ ನೀಡಲಾಯಿತು. ಮೈಸೂರಿನಲ್ಲಿ ನಡೆದ ಮೊದಲನೇ ವಿಶ್ವಕನ್ನಡ ಸಮ್ಮೇಳನ (1985) ಉದ್ಘಾಟಿಸಿದ್ದರು.

ಕುವೆಂಪು ಅವರು ಕವನ ಸಂಕಲನ, ಖಂಡಕಾವ್ಯ, ಮಹಾಕಾವ್ಯಗಳನ್ನು ರಚಿಸಿದರು. ಅನುವಾದಿತ ಮತ್ತು ಸ್ವತಂತ್ರ ನಾಟಕಗಳನ್ನು ಬರೆದರು. ಕಾದಂಬರಿ, ಕಥೆ, ಗದ್ಯಚಿತ್ರ. ಆತ್ಮಚರಿತ್ರೆ, ಭಾಷಾಂತರ ಗ್ರಂಥಗಳನ್ನು ರಚಿಸಿದರು.  ಕುವೆಂಪು ಅವರು 1994ರ ನವೆಂಬರ್ 11ರಂದು ಮೈಸೂರಿನಲ್ಲಿ ನಿಧನರಾದರು.

ಅವರ ಕೆಲವು ಕೃತಿಗಳು:

ಶ್ರೀರಾಮಯಣ ದರ್ಶನಂ, ಕಬ್ಬಿಗನ ಕೈಬುಟ್ಟಿ, ಮಲೆಗಳಲ್ಲಿ ಮದುಮಗಳು, ಕಾನೂರು ಹೆಗ್ಗಡತಿ, ವಿಚಾರ ಕ್ರಾಂತಿಗೆ ಆಹ್ವಾನ, ಬೆರಳ್ಗೆ ಕೊರಳ್, ಶೂದ್ರತಪಸ್ವಿ, ಸ್ವಾಮಿ ವಿವೇಕಾನಂದ, ಚಿತ್ರಾಂಗದಾ, ಪಾಂಚಜನ್ಯ, ಬೊಮ್ಮನಹಳ್ಳ್ಳಿ ಕಿಂದರಿಜೋಗಿ, ಕೊಳಲು ಇತ್ಯಾದಿ.

 

 

More About Author