Story

ಕತ್ತೆಯೊಂದಿಗೆ ವಾದ ಮಾಡಬೇಡಿ

ಕತೆಗಾರ ಕೆಂಪಣ್ಣ ಮೈಸೂರು ಅವರು ಬರವಣಿಗೆಯನ್ನು ತನ್ನ ಆಸಕ್ತಿಯನಾಗಿಸಿದ್ದಾರೆ. ಪ್ರಸ್ತುತ ಅವರ ‘ಕತ್ತೆಯೊಂದಿಗೆ ವಾದ ಮಾಡಬೇಡಿ’ ಶೀರ್ಷಿಕೆಯ ಕತೆ ನಿಮ್ಮ ಓದಿಗಾಗಿ.

ಒಂದು ಸಾರಿ ಕತ್ತೆ ಮತ್ತು ಹುಲಿಯ ನಡುವೆ ಒಂದು ಚಿಕ್ಕ ವಿಷಯಕ್ಕೆ ಜಗಳವಾಗುತ್ತದೆ. ಅದು ಏನು ಅಂದ್ರೇ ಕತ್ತೆ ಹುಲಿ ಜೊತೆ ಹೇಳುತ್ತೆ ಹುಲ್ಲು ನೀಲಿ ಬಣ್ಣ ಅಂತ! ಆಗ ಹುಲಿ 'ಇಲ್ಲಾ! ಹುಲ್ಲು ಹಸಿರು ಬಣ್ಣ' ಅನ್ನುತ್ತದೆ. ಕತ್ತೆಯು ಹುಲಿಯ ಮಾತನ್ನು ಒಪ್ಪದೇ ತನ್ನ ಮಾತೇ ಸರಿಯೆಂದು ಗಲಾಟೆಗೆ ಇಳಿಯುತ್ತದೆ. ಇವೆರೆಡರ ಮಾತಿಗೆ ಬೇರೆ ಯಾವ ಪ್ರಾಣಿಗಳು ತಲೆಕೆಡಿಸಿಕೊಳ್ಳಲಿಲ್ಲ.

ಕೊನೆಗೆ ಹುಲಿ ಮತ್ತು ಕತ್ತೆ ಎರಡೂ, ಕಾಡಿನ ರಾಜನಾದ ಸಿಂಹದ ಹತ್ತಿರ ನ್ಯಾಯ ಕೇಳಲು ಹೋಗುತ್ತವೆ. ಭರ್ಜರಿಯಾಗಿ ತಿಂದು ಮಲಗಿದ್ದ ಸಿಂಹ, ಈ ಎರಡು ಪ್ರಾಣಿಗಳ ಸದ್ದಿನಿಂದ ಎಚ್ಚರಗೊಂಡು ಬಂದ ವಿಷಯವನ್ನು ವಿಚಾರಿಸುತ್ತದೆ.

ಮೊದಲಿಗೆ ಕತ್ತೆಯು ಎದ್ದು ನಿಂತು ದೊಡ್ಡ ಧ್ವನಿಯಿಂದ "ಹುಲ್ಲಿನ ಬಣ್ಣ ನೀಲಿ ಎಂದು ನಾನು ಹೇಳಿದರೇ ಈ ಹುಲಿ ಹಸಿರು ಎಂದು ವಾದಿಸುತ್ತಾನೆ. ಕಾಡಿನ ರಾಜರಾದ ತಾವು ಹೇಳಿ. ಹುಲ್ಲಿನ ಬಣ್ಣ ನೀಲಿ ತಾನೆ" ಎಂದಿತು. ಸಿಂಹವು ಹೌದೆಂದು ತಲೆಯಾಡಿಸಿತು. ಆಗ ಕತ್ತೆಯು ಸಂತೋಷಗೊಂಡು ಗತ್ತಿನಿಂದ ಈ ಸೊಕ್ಕಿನ ಹುಲಿಗೆ ನೀವೇ ಶಿಕ್ಷಿಸಬೇಕು, ಹಾಗೂ ದಂಡ ಹಾಕಬೇಕೆಂದು ಪಟ್ಟು ಹಿಡಿಯಿತು.

ಆಗ ಸಿಂಹವು ಹುಲಿಯು ಐದು ವರುಷಗಳ ತನಕ ಯಾರೊಂದಿಗೂ ಮಾತನಾಡಬಾರದೆಂದು ದಂಡ ವಿಧಿಸಿತು! ಸಂತೋಷಗೊಂಡ ಕತ್ತೆಯು ಕುಣಿಯುತ್ತಾ ಕಾಡಿನಲ್ಲಿ ಮರೆಯಾಯಿತು. ಆಗ ಹುಲಿಯು, "ರಾಜ! ನೀವು ಎಲ್ಲವನ್ನೂ ತಿಳಿದವರು ಈ ರೀತಿ ಮಾಡಬಾರದು. ನಿಮ್ಮ ಆಜ್ಞೆಯನ್ನು ಪಾಲಿಸುತ್ತೇನೆ. ಆದರೆ ನನಗೆ ನೀವು ಸತ್ಯ ಹೇಳಿ, ಹುಲ್ಲಿನ ಬಣ್ಣ ಹಸಿರು ತಾನೆ" ಎಂದು ಕೇಳಿತು. ಸಿಂಹವು ಹುಲ್ಲಿನ ಬಣ್ಣ ಹಸಿರು ನಿಜ ಎಂದಿತು. ಆಗ ಹುಲಿಯು ಮತ್ತೇಕೆ ನನ್ನನ್ನು ಶಿಕ್ಷಿಸಿದ್ದೀರಿ ಎಂದು ಮರುಪ್ರಶ್ನೆ ಮಾಡಿತು.

ಆಗ ಸಿಂಹವು "ನಾನು ನಿನ್ನನ್ನು ಶಿಕ್ಷಿಸಿರುವುದು ಹುಲ್ಲಿನ ಬಣ್ಣ ಹಸಿರೊ ಅಥವಾ ನೀಲಿಯೋ ಎಂಬ ವಿಚಾರಕ್ಕಲ್ಲ! ಬದಲಿಗೆ ನೀನು ಮೂರ್ಖ ಕತ್ತೆಯೊಡನೆ ವಾದ ಮಾಡಿ ನಿನ್ನ ಸಮಯವನ್ನು ಹಾಳು ಮಾಡಿಕೊಂಡು, ನನ್ನ ನಿದ್ದೆಯನ್ನು ಹಾಳು ಮಾಡಿದ್ದಕ್ಕೆ" ಎಂದು ಹೇಳಿ ಮತ್ತೆ ನಿದ್ದೆಗೆ ಜಾರುತ್ತದೆ.

ನೀತಿ : ಮೂರ್ಖರೊಡನೆ ವಾದ ಮಾಡುವುದರೀಂದ ನಮ್ಮ ಮನಶಾಂತಿಯೂ ಹಾಳಾಗುತ್ತದೆ. ಆದಷ್ಟು ಅಜ್ಞಾನಿಗಳಿಂದ ದೂರವಿರುವುದೇ ಮೇಲು.

-ಕೆಂಪಣ್ಣ ಮೈಸೂರು

ಕೆಂಪಣ್ಣ ಮೈಸೂರು

ಕೆಂಪಣ್ಣ ಮೈಸೂರು ಅವರು ಬರವಣಿಗೆಯನ್ನು ತನ್ನ ಆಸಕ್ತಿಯನಾಗಿಸಿದ್ದಾರೆ. ಅವರು ತಮ್ಮ ಲೇಖನ, ಕಥೆಗಳಿಗೆ ಸಾಮಾಜಿಕ ಜಾಲತಾಣವನ್ನು ವೇದಿಕೆಯಾಗಿಸಿದ್ದಾರೆ. ಬರವಣಿಗೆ, ಓದು ಅವರ ನೆಚ್ಚಿನ ಹವ್ಯಾಸವಾಗಿದೆ.

More About Author