Poem

ಕತ್ತಲ ನುಂಗಿ ಬೆಳಕ ಉಗುಳುವ ಕಾರ್ಖಾನೆ

ಕತ್ತಲ ನುಂಗಿ ಬೆಳಕ ಉಗುಳುವ ಕಾರ್ಖಾನೆಯಂತ ಹಣತೆಗೂ ಬೆನ್ನು ನೋವು ಬರುವ ಹೊತ್ತಲ್ಲಿ,
ಸ್ವರ್ಗದೂರಿನ ಕಲ್ಲಿಗೆ ಎಡವಿ ಸತ್ತವಳ ಆತ್ಮವೊಂದು ನೆಲಕೆ ಬಿದ್ದಿತು!
ಕಣ್ಣು ತುಂಬಾ ಕನಸ ತುಂಬಿಕೊಂಡಿದ್ದ ಆತ್ಮದ ನನಸುಗಳೆಲ್ಲ, ಥೇಟ್ ಶಿಲುಬೆಗೇರಿದ ದಯಾಮಯಿಯ ದಾರುಣ ಕತೆಯಂತೆ
ನೋವು ಕ್ಷಮಿಸಿದರೂ, ಕಣ್ಣೀರು ಶಪಿಸುತ್ತಲೇ ಇತ್ತು!

ಅಂತೂ ಸತ್ತಾಗಿದೆ, ಬದುಕಿನ ಬೇನೆಗಳೀಗ ಬೀದಿ ಜಗಳದ ಹಾಗೆ, ಕೇಳಲಷ್ಟೇ ಮಜಾ!
ಆದರೆ, ಸ್ವರ್ಗದ ಕತೆ ಏನೋ ಗೊತ್ತಿಲ್ಲ
ಇಲ್ಲೂ ನೋವುಗಳಿಗೆ ವಿಶೇಷ ಸ್ಥಾನವಿದೆಯೊ?
ಎದೆಯ ಗಾಯಗಳಿಗೆ ಮೀಸಲಾತಿ ಸಿಕ್ಕಿದೆಯೊ?
ಬಡಿಯಲು ಬಂದವರೆದುರು ಬಾಯಿ ಬೀಗದ ಹರಕೆಯ ಆದೇಶವಾಗಿದೆಯೋ ? ಗೊತ್ತಿಲ್ಲ..
ಬೆವರುವ ಆತ್ಮ ನಡುಗಲಾರಂಭಿಸಿತು!

ಒಂದೆರಡು ಹೆಜ್ಜೆ ಇಡುವಷ್ಟರಲಿ ಹಣ್ಣಾದ ಮುದುಕ ಹಣತೆ ಹಿಡಿದು ಬಂದ,
ಮೈ ತುಂಬಾ ಕಣ್ಣಾಗಿಸಿ ನರಕದ ನಕಾಶೆ ನೋಡುವವನ
ಅಮಲುಗಣ್ಣಲಿ ಮದ್ಯದಂಗಡಿಯ ಮಂದಿರವಿತ್ತು!
ಉಸಿರಿನ ತುಂಬಾ ಧ್ಯಾನದ ವಾಸನೆ
ಮಾತಿನ ಸರಕಿನಲಿ ಮೌನದ ಸ್ವರಮಾಲೆ
ನಾರುವ ಮೈಗೆ ಗಾಳಿಯೇ ಗಂಧ ಬಳಿದರೂ ಕೂಡ
ಜಪ್ತಿಗೆ ಸಿಗದ ನವಿಲಿನಂತೆ ಓಡುತ್ತಲೇ ಇದ್ದಾನೆ,
ನರಕದ ನಗರದೆಡೆಗೆ...

ನರಕದಲ್ಲಿ ನಿಯಮಗಳು ತೀರಾ ಸಲೀಸಾದವು,
'ಧರ್ಮದ ಧೂಳಿಯಿಂದ ದೂರವಿರಬೇಕಷ್ಟೆ!'
ಮತ್ತು ಕರ್ಮವ ತೊಳೆಯಲು ಸದಾ ಕುಡಿಯುತ್ತಿರಬೇಕಿಷ್ಟೆ!
ಹಾದಿಯಲ್ಲೆ ಹಣತೆ ಇಟ್ಟ ಮುದುಕ
ಮದ್ಯದಂಗಡಿಯ ಮೆಟ್ಟಿಲೇರಿ ಕುಡಿಯಲಾರಂಭಿಸಿದ!
ಅಮಲಿನ ಅಂತರಿಕ್ಷವು "ಪ್ರೀತಿಯ ನಲವತ್ತು ನಿಯಮಗಳ" ಸುತ್ತ ಗಿರಕಿ ಹೊಡೆಯುವಾಗ,
ಆತ್ಮಗಳು ನಶೆ ಏರಿಸಿಕೊಂಡು, ನೋವ ಸೋರಿಸಿಕೊಂಡವು!

- ಚಾಂದ್ ಪಾಷ ಎನ್.ಎಸ್

ಚಾಂದ್ ಪಾಷ ಎನ್‌. ಎಸ್‌.

ಚಾಂದ್ ಪಾಷ ಎನ್.ಎಸ್. (ಕವಿಚಂದ್ರ) ಕಲ್ಬುರ್ಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಮಂದೇವಾಲ ಗ್ರಾಮದಲ್ಲಿ ಮೇ ತಿಂಗಳ 1994ರಲ್ಲಿ ಜನಿಸಿದರು. ಬೆಂಗಳೂರು ವಿಶ್ವ ವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದಲ್ಲಿ ಸಂಶೋಧನಾ ವಿದ್ಯಾರ್ಥಿಯಾಗಿದ್ದಾರೆ. 

'ಒದ್ದೆಗಣ್ಣಿನ ದೀಪ' ಕವನ ಸಂಕಲನ 2023ರಲ್ಲಿ ಪ್ರಕಟವಾಗಿದೆ. 'ಧೂಳಿಡಿದ ನಕ್ಷತ್ರ' (ನಾಟಕ) 'ಚಿತ್ರ ಚಿಗುರುವ ಹೊತ್ತು' (ಕವನ ಸಂಕಲನ) 2020ರಲ್ಲಿ ಪ್ರಕಟವಾಗಿದೆ.

ಇಟಲಿಯ ಪಿಯಾಸೆಂಜಾದಲ್ಲಿರುವ "ಪಿಕ್ಕೋಲೊ ಮ್ಯೂಸಿಯೊ ಡೆಲ್ಲಾ ಪೊಸಿಯ" ದಲ್ಲಿ ಕವಿತೆಯೊಂದು ಪ್ರದರ್ಶನವಾಗಿದೆ. ಶ್ರೀಲಂಕಾದಲ್ಲಿ ನಡೆದ ತೀರ್ಥ ಫರ್ಫಾಮೆನ್ಸ್ ಫ್ಲಾಟ್ ಫಾಮ್ 2019,  ಬೆಂಗಳೂರು ಲಿಟರೇಚರ್ ಫೆಸ್ಟಿವಲ್ 2017, ಲಾಂಗ್ವೇಜ್ ಫೆಸ್ಟಿವಲ್, SIWE ಪೊಯೆಟ್ರಿ ಫೆಸ್ಟಿವಲ್ ಕೇರಳ 2018,  2019, ಲಿಟರೇಚರ್ ಫೆಸ್ಟಿವಲ್ ಹೈದರಾಬಾದ್ 2020, ಇತರ ಪ್ರಮುಖ ಕಾವ್ಯ ಗೋಷ್ಠಿಯಲ್ಲಿ ಕವಿತಾ ವಾಚನ ಮಾಡಿದ್ದಾರೆ.

"2024ನೇ ಸಾಲಿನ ಕರ್ನಾಟಕ ಸಂಘ ಶಿವಮೊಗ್ಗ ನೀಡುವ "ಜಿ ಎಸ್ ಶಿವರುದ್ರಪ್ಪ ಕಾವ್ಯ ಪ್ರಶಸ್ತಿ", "2024 ನೇ ಸಾಲಿನ ಸಿ.ಪಿ.ಕೆ. ಕಾವ್ಯ ಪ್ರಶಸ್ತಿ" , 2023ನೇ ಸಾಲಿನ 'ಈ ಹೊತ್ತಿಗೆ ಕಾವ್ಯ ಪ್ರಶಸ್ತಿ', "ಬಸವ ಪುರಸ್ಕಾರ" 2020ರ ಸಾಲಿನ "ಚಿ‌. ಶ್ರೀನಿವಾಸರಾಜು ಕಾವ್ಯ ಪ್ರಶಸ್ತಿ",  "ಅವ್ವ ಪ್ರಶಸ್ತಿ", “ಕುವೆಂಪು ಯುವ ಕವಿ ಪ್ರಶಸ್ತಿ” ." ಕಾವ್ಯ ಮನೆ ಕಾವ್ಯಪುರಸ್ಕಾರ" , ಎನ್ಕೆ ಕಾವ್ಯ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಲಭಿಸಿದೆ. 

2022 ನೇ ಸಾಲಿನ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಬಿ.ಎ. ಎರಡನೇ ಸೆಮಿಸ್ಟರ್ ಗೆ ಒಂದು ಕವಿತೆ ಪಠ್ಯವಾಗಿದೆ.  ಇವರ ಕವಿತೆಗಳು ಸ್ಪ್ಯಾನಿಷ್, ಇಂಗ್ಲಿಷ್, ಹಿಂದಿ, ತಮಿಳು ಭಾಷೆಗಳಿಗೆ ಅನುವಾದವಾಗಿವೆ.

More About Author