Story

ಖಾಲಿ ಸೈಟಿನ ಬೆಲೆ

ವೇಗವಾಗಿ ಬೆಳೆಯುತ್ತಿರುವ ಮಹಾನಗರಗಳಿಗೆ ಹೋಲಿಸಿದರೆ ಮಂದಗತಿಯಲ್ಲಿ ವಿಸ್ತಾರಗೊಳ್ಳುತ್ತಿರುವ ತಾಲ್ಲೂಕೊಂದರ ಹೊರ ವಲಯದಲ್ಲಿ ಒಂದು ಸೈಟು ಕೊಂಡ ಆತ, ಅದರ ಬೆಲೆಯನ್ನು ವರ್ಷದಿಂದ ವರ್ಷಕ್ಕೆ ಗುಣಾಕಾರ ಮಾಡಿಕೊಳ್ಳುತ್ತಿದ್ದ.

ಐದು ವರ್ಷಗಳ ನಂತರ ಒಮ್ಮೆ ತನ್ನ ಸೈಟಿನ ಬೆಲೆಯನ್ನು ತಿಳಿಯಲೋಸುಗ ಅದನ್ನು ಮಾರಾಟಕ್ಕಿಟ್ಟ ಸುದ್ದಿಯನ್ನು ಹಬ್ಬಿಸಿ ಕೂತ. ಸಾಕಷ್ಟು ಜನ ವಿಚಾರಿಸಲು ಬಂದರು. ತಾನು ಕೊಂಡ ಬೆಲೆಗೆ ದುಪ್ಪಟ್ಟಿಗಿಂತ ಹೆಚ್ಚು ಬೆಲೆಯನ್ನು ಹೇಳ ತೊಡಗಿದ. ವಾಸ್ತವದಲ್ಲಿ ಅವನಿಗೆ ಅದನ್ನು ಮಾರುವ ಇರಾದೆ ಇರಲಿಲ್ಲ. ತನ್ನ ಬಳಿಯಿರುವ ಸೈಟಿನ ಬೆಲೆ ಎಷ್ಟಿದೆ ಎಂದು ತಿಳಿಯುವುದಷ್ಟೆ ಅವನ ಉದ್ದೇಶವಾಗಿತ್ತು. ವಿಚಾರಿಸಲು ಬಂದ ಪ್ರತಿಯೊಬ್ಬನಿಗೂ ಒಂದೊಂದು ಬೆಲೆ ಹೇಳುತ್ತಿದ್ದ. ಕೆಲ ವರ್ಷಗಳ ನಂತರ ಇವನ ಸೈಟಿನ ಪಕ್ಕದಲ್ಲೇ ಒಂದು ಹೊಸ ಲೇ ಔಟ್ ಶುರುವಾಯಿತು. ಅದರ ಡೆವಲೆಪರ್ ಆರಂಭದಲ್ಲಿ ಕೆಲವು ಸೈಟುಗಳನ್ನು ಅತೀ ಕಡಿಮೆ ದರದಲ್ಲಿ ಮಾರಾಟಕ್ಕಿಟ್ಟ. ತಾಲ್ಲೂಕು ಸೆಂಟರ್ ಆಗಿದ್ದರೂ ಕೂಡ ಆ ಪಟ್ಟಣದಿಂದ ಹೋಗಿ ದೊಡ್ಡ ದೊಡ್ಡ ನಗರಗಳಲ್ಲಿ ಐದಂಕಿ ಸಂಬಳ ಪಡೆಯುತ್ತಿದ್ದ ಹೊಸ ತಲೆಮಾರಿನ ಹುಡುಗರು ಲಾಂಗ್ ವೀಕೆಂಡ್ ಗಳಲ್ಲೋ, ಹಬ್ಬಕ್ಕೆಂದೋ , ಸಂಬಂಧಿಕರ ಮದುವೆಗಳಿಗೆಂದೋ ಊರಿಗೆ ಬಂದಾಗ ಕಿವಿಗೆ ಬೀಳುತ್ತಿದ್ದ ' ಆ ಸಿಟಿನಾಗ್ ಎಷ್ಟು ದಿನ ಅಂತ ದುಡ್ಕೊಂಡ್ ಇರ್ತೀಯಾ ? ಇಲ್ಲಿ ಏನಾದ್ರು ಪ್ರಾಪರ್ಟಿ ಮೇಲೆ ಇನ್ವೆಸ್ಟ್ ಮಾಡಿದ್ರೆ ಹತ್ತು ವರ್ಷ ಬಿಟ್ಟು ದುಡ್ಡು ಬ್ಯಾಂಕಲ್ಲಿಟ್ಟು ಕೂತು ತಿನ್ನಬಹುದು' ಎಂಬ ಮಾತನ್ನು ಯಾವುದೋ ಹಂತದಲ್ಲಿ ಸೀರಿಯಸ್ಸಾಗಿ ಪರಿಗಣಿಸಿ ಆ ಎಲ್ಲಾ ಸೈಟುಗಳನ್ನೂ ಕೊಂಡರು.‌ ಆಮೇಲೆ ಮೊದಲ ಹಂತದಲ್ಲಿ ಅವಕಾಶ ವಂಚಿತ ಅದೇ ಗುಂಪಿನ ಸಿಟಿ ಜಾಬ್ ಡುಯರ್ಸ್ ಗಳು ಒಬ್ಬೊಬ್ಬರಾಗಿ ಡೆವಲಪ್ಪರ್ ನ ಬಳಿ ಹೋಗಿ ಆ ಲೇ ಔಟ್ ನ ಸೈಟುಗಳನ್ನು ಕೊಳ್ಳ ತೊಡಗಿದರು. ಹೀಗೆ ತಡವಾಗಿ ಹೋದವರು ಹಾಗೂ ಮೊದಲು ಕೊಂಡವರ ನಡುವಿನ ಸಮಯದ ಅಂತರ ಐದಾರು ತಿಂಗಳಿರಬಹುದಷ್ಟೆ. ಅಷ್ಟರಲ್ಲಾಗಲೇ ಸೈಟುಗಳ ಬೆಲೆಯನ್ನು 25% ರಷ್ಟು ಹೆಚ್ಚಿಸಿಕೊಂಡಿದ್ದು ಸ್ವತಃ ಡೆವಲೆಪರ್ ನೇ ಆಗಿದ್ದರೂ ಎರಡನೇ ಹಂತದ ಕೊಳ್ಳುಗರಿಗೆ ಆತ ಹೇಳಿದ್ದು ಮಾತ್ರ ಬೇರೆಯದ್ದೇ ರೀತಿಯಾದ ಕಾರಣ. ' ನೋಡಿ, ಐದು ತಿಂಗಳಿಗೆ ಇಷ್ಟು ಹೆಚ್ಚಾಗಿದೆ ರೇಟು. ಇನ್ನು ಬರೀ ಐದು ವರ್ಷ ಕಾದು ನೋಡಿ ಸಾಕು. ನೀವು ಇನ್ವೆಸ್ಟ್ ಮಾಡಿದ ದುಡ್ಡಿನ ತ್ರಿಬಲ್ ಅಮೌಂಟ್ ಆಗಿರುತ್ತೆ ಇಲ್ಲೆಲ್ಲ ಇದರ ವ್ಯಾಲ್ಯೂ' ಎಂದು ಹೇಳಿದ ಅವನ ಮಾತನ್ನು ಎಲ್ಲರೂ ನಂಬುತ್ತಲೇ ಹೋದರು.

ಹಾಗೆ ನಂಬಲು ಒಬ್ಬೊಬ್ಬರೂ, ಅವರವರ ಕಾರಣಗಳನ್ನು ಅವರವರೆ,ಅವರವರಿಗೇ ಕೊಟ್ಟುಕೊಂಡರು. ಸ್ಟೇಟ್ ಹೈ ವೇ ಇಲ್ಲೇ ಹೋಗುತ್ತಂತೆ, ಎಮ್ ಎಲ್ ಎ ದು ಹೊಸ ಇಂಜಿನಿಯರಿಂಗ್ ಕಾಲೇಜು ಇಲ್ಲೇ ಶುರುವಾಗುತ್ತಂತೆ , ಜಗತ್ಪ್ರಸಿದ್ಧ ಜಲಪಾತಕ್ಕೆ ಇಲ್ಲಿಂದ ನಲವತ್ತೈದು ಕಿಲೋಮೀಟರ್ ಅಷ್ಟೆ ಇರೋದ್ರಿಂದ ಟೂರಿಸಂ ಟೇಕಾಫ್ ಆಗುತ್ತೆ , ರೆಸಾರ್ಟ್ ಗಳು ತಲೆಯೆತ್ತುತ್ತವೆ, ಎಂ.ಪಿ.ಗಳು ಮೊನ್ನೆ ಭಾಷಣದಲ್ಲಿ ನಮ್ಮ ತಾಲ್ಲೂಕಿನ ತನಕ ರೈಲು ಮಾರ್ಗ ಎಕ್ಷ್ಟೆಂಡ್ ಮಾಡೋ ಭರವಸೆ ಕೊಟ್ರು, ನಮ್ ಜಿಲ್ಲೆಗೆ ವಿಮಾನ ನಿಲ್ದಾಣ ಸ್ಯಾಂಕ್ಷನ್ ಆಗಿದೆ ಎಂಬ ನಾನಾ ಕಮರ್ಷಿಯಲ್ ಕಾರಣಗಳನ್ನು ಹುಡುಕಿಕೊಂಡು ತಾವು ಕೊಳ್ಳುತ್ತಿರುವ ಭೂಮ್ತಾಯಿಯ ಭವಿಷ್ಯದ ಬೆಲೆಯನ್ನು ನೆನೆದು ರೋಮಾಂಚನಗೊಂಡರು.

ಈ ನಡುವೆ ಹೊಸ ಲೇಔಟ್ ನ ಡೆವಲೆಪರ್ ಕಮ್ ಓನರ್, ಪಕ್ಕದಲ್ಲಿದ್ದ ಒಂದು ಸೈಟನ್ನೂ ಕೊಂಡರೆ ಇಡೀ ಏರಿಯಾ ತನ್ನದೇ ಆಗುತ್ತದೆಂಬ ಆಸೆಯಿಂದ ಬಂದು ಆತನನ್ನು ಕೇಳಿದ. ಆದರೆ ಆತ ಐದು ತಿಂಗಳಲ್ಲಿ ಲೇ ಔಟ್ ನಲ್ಲಿರುವ ಸೈಟುಗಳ ಬೆಲೆಯೇ ಇಷ್ಟು ಹೆಚ್ಚಾಗಿರುವಾಗ, ವಿಶಾಲವಾಗಿರುವ ತನ್ನ ಕಾರ್ನರ್ ಸೈಟಿನ ಬೆಲೆ ಎಷ್ಟಿರಬಹುದು. ಅದನ್ನು ಈಗಲೇ ಮಾರಬಾರದು ಎಂದು ಲೆಕ್ಕ ಹಾಕಿದ. ಆ ಡೆವಲೆಪರ್ ಕೂಡ ಅಷ್ಟಾಗಿ ತಲೆ ಕೆಡಿಸಿಕೊಳ್ಳದೆ ಸುಮ್ಮನಾದ. ಲೇ ಔಟಿನಲ್ಲಿದ್ದ ಎಲ್ಲಾ ಸೈಟುಗಳ ಮಾರಾಟವಾಗಿಯೇಬಿಟ್ಟವು. ಆಗಲೂ ಆತನ ಲೆಕ್ಕಾಚಾರ ತನ್ನ ಸೈಟಿನ ಬೆಲೆ ದಿನೇ ದಿನೇ ಏರಿಕೆಯಾಗುತ್ತಲಿದೆ ಎಂಬುದೇ ಆಗಿತ್ತು. ಒಂದೆರೆಡು ವರ್ಷಗಳಲ್ಲಿ ಲೇ ಔಟಿನ ಖಾಲಿ ಸೈಟುಗಳಲ್ಲಿ ಮನೆಗಳು ಎದ್ದು ನಿಲ್ಲ ತೊಡಗಿದವು. ಆಗ ಆತನಿಗೆ ಇನ್ನೂ ಖುಷಿಯಾಯಿತು. ಇಲ್ಲಿ ಹೆಚ್ಚೆಚ್ಚು ಮನೆಗಳಾದಷ್ಟು ಇದು ವಸತಿ ಪ್ರದೇಶವಾದಂತಾಗುತ್ತದೆ. ಇದರಿಂದ ತನ್ನ ಸೈಟಿನ ಬೆಲೆ ಇನ್ನೂ ಹೆಚ್ಚಾಗುತ್ತದೆಂದು ಸ್ಪೆಕ್ಯುಲೇಟ್ ಮಾಡಿದ.

'ಯಾಕ್ರೀ ಇನ್ನೂ ಮನೆ ಕಟ್ಟಿಲ್ಲ ನೀವು ? ಸೈಟು ಇದ್ದೂ ಸುಮ್ನಿದ್ದೀರಲ್ಲ? ಇನ್ನು ಐದು ವರ್ಷ ಹೋದ್ರೆ ಎಲ್ಲಾ ಬೆಲೆ‌ ಜಾಸ್ತಿ ಆಗುತ್ತೆ ' ಅಂತ ಲೇ ಔಟಿನಲ್ಲಿ ಖಾಲಿ ಇದ್ದ ಕೊನೆಯ ಸೈಟಿನಲ್ಲಿ ಮನೆ ಕಟ್ಟಿಸುತ್ತಿದ್ದವ ಒಂದು ದಿನ ಆತನಿಗೆ ಕೇಳಿದ. ಅದಕ್ಕಾತ, 'ನೋಡ್ರಿ, ಸೈಟು ಖಾಲಿ ಇದ್ದಷ್ಟು ದಿನಾ ದಿನಾ ರೇಟು ಹೆಚ್ಚಾಗುತ್ತಲೇ ಇರುತ್ತೆ.‌ ಮನೆ ಕಟ್ಟಿಸಿಟ್ರೆ ಮುಗಿತ್ರಿ. ಭೂಮಿಗಿರೋ ಬೆಲೆ ಬಿಲ್ಡಿಂಗ್ ಗೆ ಇರಲ್ಲ' ಎಂದು ಬಢಾಯಿಸಿದ.

ಈ ನಡುವೆ ಸೈಟು ಕೊಳ್ಳಲು ಆತ ಮಾಡಿದ್ದ ಸಾಲವೆಲ್ಲ ತೀರಿತ್ತು. ಹಾಗಾಗಿ ಅದೊಂದು ದೀರ್ಘಕಾಲದ ಪ್ರಾಪರ್ಟಿ ಆಗಿ ಉಳಿಯಲಿದೆ ಎಂದು ಭಾವಿಸಿದ. ಹೀಗಿರುವಾಗಲೇ ಒಂದು ದಿನ ಬೆಳಗ್ಗೆ ಪತ್ರಿಕೆಯಲ್ಲಿ ಪ್ರಕಟವಾದ ಒಂದು ಸುದ್ದಿ ಓದಿದ. 'ಸಾಲ ಮಾಡಿ ಸೈಟು ಕೊಂಡವನ ಆಸೆ ಈಡೇರಿಸಿದ ಮಗ ' ಎಂಬ ಶೀರ್ಷಿಕೆಯಡಿಯಲ್ಲಿ ಪ್ರಕಟವಾದ ವರದಿಯ ಸಾರಾಂಶ ಹೀಗಿತ್ತು ; ಸಣ್ಣದೊಂದು ಕೆಲಸ ಮಾಡಿಕೊಂಡು ಜೀವನ ಮಾಡುತ್ತಿದ್ದ ವ್ಯಕ್ತಿಯೊಬ್ಬ, ತಾನೂ ಒಂದು ಸೂರು ಕಟ್ಟಿಕೊಳ್ಳಬೇಕೆಂದು ಹರಸಾಹಸ ಪಟ್ಟು, ಸಿಕ್ಕಸಿಕ್ಕಲ್ಲೆಲ್ಲ ಸಾಲ ಮಾಡಿ ಸೈಟು ಕೊಂಡ. ಸತತ ಹತ್ತು ವರ್ಷ ಶ್ರಮ ವಹಿಸಿ ಅದಕ್ಕಾಗಿ ಮಾಡಿದ ಸಾಲ ತೀರಿಸಿದ. ಅಷ್ಟರಲ್ಲಿ ಅವನ ಮಗನೂ ಮೆಜಾರಿಟಿಗೆ ಬಂದಿದ್ದ. ಇನ್ನೇನು ಮಗನೂ ಸಹಾಯ ಮಾಡುತ್ತಾನೆ. ಆ ಸೈಟಿನಲ್ಲಿ ಮನೆ ನಿರ್ಮಾಣ ಮಾಡುವುದು ಎಂದು ಎಲ್ಲಾ ತಯಾರಿ ನಡೆಸಿಯಾಗಿತ್ತು. ಅಪ್ಪ, ಕೆಲಸಕ್ಕೆ ಹೋಗುತ್ತಿದ್ದ ಬಸ್ಸು ಸೇತುವೆ ಮುರಿದು ನದಿಗೆ ಬಿತ್ತು. ಅಲ್ಲಿಗೆ ಮನೆ ಕಟ್ಟಬೇಕೆಂಬ ಆ ಅಪ್ಪನ ಕನಸೂ ಅಲ್ಲೇ ಮುರಿದು ಬಿತ್ತು. ತನ್ನ ಜೀವಮಾನದ ಸಾಧನೆಯೆಂಬಂತೆ ಆ ಸೈಟು, ಅಲ್ಲಿ ನಿರ್ಮಾಣ ಮಾಡಬೇಕೆಂದಿದ್ದ ಮನೆಯ ಕನಸು ಹೊತ್ತಿದ್ದ ಅಪ್ಪನನ್ನು ಅದೇ ಸೈಟಿನಲ್ಲಿ ಮಣ್ಣು ಮಾಡಲು ಮಗ ತೀರ್ಮಾನಿಸಿದ. ಆದರೆ, ಅವನ ಹೆಂಡತಿ ಈಗ ಅಲ್ಲಿ ಮಣ್ಣು ಮಾಡಿದರೆ ಮತ್ತೆ ಮುಂದೆ ಮನೆ ಕಟ್ಟುವುದು ಹೇಗೆ ಎಂಬ ತಕರಾರು ತೆಗೆದಳಾದರೂ, ಮಗ ಅಪ್ಪನ ಬಗ್ಗೆ ಭಾವನಾತ್ಮಕವಾಗಿ, ಆ ಸಂದರ್ಭದಲ್ಲಿ ಹಿಂಜರಿಯದೆ ಆ ಸೈಟಿನಲ್ಲೇ ಮಣ್ಣು ಮಾಡಿದ. ಮನೆ ಕಟ್ಟಬೇಕಿಂದಿದ್ದ ಜಾಗದಲ್ಲಿ ಆ ವ್ಯಕ್ತಿ ಮಣ್ಣಾಗಿ ಮಲಗಿಬಿಟ್ಟ.

ಈ ವರದಿ ಓದಿ ಭಯವಿಹ್ವಲಗೊಂಡ ಆತ, ಖಾಲಿ ಬಿಟ್ಟುಕೊಂಡರೆ ತನ್ನ ಸೈಟಿನ ಬೆಲೆ ಹೆಚ್ಚುತ್ತಲೇ ಇರುತ್ತದೆ ಎಂಬ ಯೋಚನೆಯಿಂದ ಹೊರಬಂದು ಆ ಜಾಗದಲ್ಲಿ ಮನೆ ಕಟ್ಟಬೇಕೆಂಬ ತೀರ್ಮಾನಕ್ಕೆ ಬಂದ. ಖಾಲಿ ಸೈಟಿನ ಬೆಲೆ ಏರಲೆಂದು ಬಿಟ್ಟುಕೊಂಡರೆ ಅದು ತನ್ನದಾಂತೆಯಾಗಲಿ, ಅನುಭೋಗಿಸಿದಂತಾಗಲಿ‌ ಆಗುವುದಿಲ್ಲ ಎಂದೆನ್ನಿಸಿ ಅಲ್ಲೊಂದು ಭವ್ಯ ಬಂಗಲೆ ನಿರ್ಮಿಸಲು ಸಜ್ಜಾದ. ಮನೆಯ ನಿರ್ಮಾಣ ಕಾರ್ಯ ಪ್ರಾರಂಭವಾಗಿಯೇಬಿಟ್ಟಿತು‌. ಮಗನಿಗಿಂತ ಮುತುವರ್ಜಿವಹಿಸಿ ತಾನೇ ನಿಂತು ಮನೆ ಕಟ್ಟಿಸಿದ. ತನ್ನ ಕನಸಿನ ಮನೆ ಸಿದ್ದವಾಗಿ ನಿಂತಿತು. ಜೀವಮಾನದ ಈ ಸಾಧನೆಯನ್ನು ಜಗಜ್ಜಾಹೀರು ಮಾಡಲು ಅದ್ಧೂರಿ 'ಗೃಹ ಪ್ರವೇಶ' ಮಾಡಿದ. ಬಂದವರೆಲ್ಲ ಮನೆಯ ಭವ್ಯತೆಯ ಬಗ್ಗೆ ಮಾತಾಡಿದಾಗ ಆತನಲ್ಲಿ ಧನ್ಯತೆ ಮೂಡಿತು. ಮನೆ ಕಟ್ಟಿದ ಕಾರ್ಮಿಕರನ್ನು ಕರೆದು ಊಟ-ಉಡುಗೊರೆ ಕೊಟ್ಟು ಗೌರವಿಸಿದ. ಮಗನ ಮದುವೆ ಮಾಡಲು ಹೊಸ ಮನೆಯ ಶ್ರೀಮಂತಿಕೆಯೂ ಸಹಕರಿಸಿತು. ಮನೆಯ ವಾಸವನ್ನು ಅಕ್ಷರಶಃ ಅನುಭವಿಸಿದ ಆತ ಒಂದು ರಾತ್ರಿ‌ ತನ್ನ ಹೆಂಡತಿಯನ್ನು ಬಳಿ, ಹಿಂದೊಮ್ಮೆ ಪತ್ರಿಕೆಯಲ್ಲಿ ಬಂದಿದ್ದ ಆ ವರದಿಯನ್ನು ತೋರಿಸುತ್ತ, 'ನೋಡು , ಈ ಮನುಷ್ಯ ಪಾಪ ತಾನು ಖರೀದಿಸಿದ ಸೈಟನ್ನು ಅನುಭವಿಸದೇ ಸತ್ತು ಹೋಗಿದ್ದ. ಈ ಸುದ್ದಿಯಿಂದಾಗಿಯೇ ನಾನು ಮನೆ ಕಟ್ಟುವ ತೀರ್ಮಾನಕ್ಕೆ ಬಂದದ್ದು. ಇವನಂತೆ ನತದೃಷ್ಟ ನಾನಾಗಬಾರದು ಎಂದು ನಿರ್ಧರಿಸಿದ್ದೆ. ಎಲ್ಲರಿಗೂ ತಾವು ಗಳಿಸಿದ್ದನ್ನು ಅನುಭವಿಸುವ ಯೋಗ್ಯತೆ ಅಥವಾ ಶಕ್ತಿ ಇರುವುದಿಲ್ಲ' ಎಂದು ಹೇಳಿದ.

ಒಂದು ರಾತ್ರಿ ಮಗನ ಕರೆದು , ' ನೀನು ಒಂದು ಸೈಟು ಕೊಂಡಿಡು. ಬರೀ ಐದು ಲಕ್ಷ ಕೊಟ್ಟ ಜಾಗದ ಬೆಲೆ ಇವತ್ತು ಹತ್ತರಷ್ಟಾಗಿದೆ. ಖಾಲಿ ಸೈಟಿನ ಬೆಲೆಯ ಅಂದಾಜು ಯಾರಿಗೂ ಇರುವುದಿಲ್ಲ. ಅದು ಬೆಳೆಯುತ್ತಲೇ ಇರುತ್ತದೆ' ಎಂದ. ಅದೇ ಕೊನೆಯ ರಾತ್ರಿ. ಮರುದಿನ ಆತ ಸೂರ್ಯನನ್ನು ನೋಡಲಿಲ್ಲ. ತಾನು ಇಷ್ಟಪಟ್ಟು ಕಟ್ಟಿದ ಮನೆಯಲ್ಲಿ ಕೆಲ ದಿನಗಳಾದರೂ ಬದುಕಿದ ಆತನಿಗೆ ಮಗ ಹಿಂದಿನ ರಾತ್ರಿ ' ಅಪ್ಪ, ನೀನು ಕೊಟ್ಟ ದುಡ್ಡು‌ ಅದರ ನಿಜವಾದ ವಾರಸುದಾರನಿಗೆ ಸೇರಿರಲಿಲ್ಲ. ಒಬ್ಬರಿಂದ ಒಬ್ಬರು ಕೊಂಡ ಈ ಭೂಮಿಯ ಮೂಲ ಮಾಲಿಕ ಯಾರಿಗೂ ಹಣ ಕೊಡದೆ ಕೇವಲ ಖಾಲಿ ಜಾಗಕ್ಕೆ ಬೇಲಿ ಹಾಕಿಕೊಂಡಿರುತ್ತಾನಷ್ಟೆ. ನಂತರ ಕೊಳ್ಳುವ ಎಲ್ಲರೂ ಬೆಲೆ ಏರಿಸುತ್ತಾ ಹೋಗುತ್ತೇವಷ್ಟೆ' ಎಂದು ಹೇಳಬೇಕೆಂದುಕೊಂಡವನು ಅದೇಕೋ ಹೇಳದೆ ಉಳಿದಿದ್ದ. ಈಗ ಅಪ್ಪನಿಗೆ ಅದನ್ನು ಹೇಳೋಣವೆಂದರೆ ಅಪ್ಪನೇ ಇಲ್ಲವಾಗಿದ್ದ. ಕೊನೆಯುಸಿರೆಳೆದ ಅಪ್ಪನನ್ನು ಸ್ಮಶಾನಕ್ಕೆ ಕೊಂಡೊಯ್ಯಲಾಯಿತು.

ಖಾಲಿ ಸೈಟಿನ ಬೆಲೆಯ ಬಗ್ಗೆ ಅತ್ಯುತ್ಸಾಹ ಹೊಂದಿದ್ದ ಆತ ಈಗ ಖಾಲಿ ಸೈಟಿನ ಕಡೆಗೇ ಹೊರಟು ನಿಂತಿದ್ದ. ಸೈಟು ಕೊಂಡವರಿಗೂ ,ಕೊಳ್ಳದಿದ್ದವರಿಗೂ ಒಂದು ಖಾಲಿ ಸೈಟು ಖಾಯಂ ಇದ್ದೇ ಇರುತ್ತದೆ.

( ಈ ಕಥೆಯ ಹಿಂದೆ ವರ್ಷಗಳ ಹಿಂದೆ ಓದಿದ್ದ ಜಿ.ಎಸ್.ಎಸ್. ಅವರ ಖಾಲಿ ಸೈಟಿನ ಕಡೆಗೆ' ಎಂಬ ಪದ್ಯದ ಸ್ಪೂರ್ತಿಯಿದೆ )

 

ಶಿವಕುಮಾರ್ ಮಾವಲಿ

ಶಿವಕುಮಾರ್ ಮಾವಲಿ ಮೂಲತಃ ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಮಾವಲಿಯವರು. ಶಿವಮೊಗ್ಗದ ಡಿ.ವಿ.ಎಸ್. ಹಾಗೂ ಸಹ್ಯಾದ್ರಿ ಕಾಲೇಜಿನಲ್ಲಿ ಪದವಿ ಶಿಕ್ಷಣ ಮುಗಿಸಿದ ಅವರು ಮೈಸೂರು ವಿಶ್ವವಿದ್ಯಾಲಯದಲ್ಲಿ ಇಂಗ್ಲೀಷ್ ಸಾಹಿತ್ಯದಲ್ಲಿ ಎಂ.ಎ.ಪದವಿ ಪಡೆದಿದ್ದಾರೆ. 

ಸದ್ಯ ಇಂಗ್ಲೀಷ್ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿರುವ ಶಿವಕುಮಾರ್  ಪ್ರತಿಭಾವಂತ ಬರಹಗಾರ. ಕಥೆ, ಕವಿತೆ, ನಾಟಕ ಹೀಗೆ ಸಾಹಿತ್ಯದ ಹಲವು ವಿಭಾಗಗಳಲ್ಲಿ ತಮ್ಮದೇ ಛಾಪು ಮೂಡಿಸಿರುವ ಶಿವಕುಮಾರ್ ಅವರ ಮೊದಲ ಕಥಾಸಂಕಲನ ‘ದೇವರು ಅರೆಸ್ಟ್ ಆದ’ ಅವರ ‘ಸುಪಾರಿ ಕೊಲೆ’ ನಾಟಕ ಸಿನಿಮವಾಗುತ್ತಿದೆ. ಅವರ ಇತ್ತೀಚಿನ ಪುಸ್ತಕ ಟೈಪಿಸ್ಟ್ ತಿರಸ್ಕರಿಸಿದ ಕಥೆ. ಈ ಕೃತಿಯನ್ನು ಬಹುರೂಪಿ ಪ್ರಕಾಶನ ಪ್ರಕಟಿಸಿದೆ.

More About Author