Story

ಮಂದಿರದ ಶಂಖನಾದ : ಮಸೀದಿಯ ಬಾಂಗ್

ಕತೆಗಾರ, ಚಂದನ್ ನಂದರಬೆಟ್ಟು ಅವರು ಮೂಲತಃ ವಿಟ್ಲದವರು. ಪ್ರಸ್ತುತ ಕೊಡಗಿನ ಮಡಿಕೇರಿ ತಾಲ್ಲೂಕಿನ ಗಾಳಿಬೀಡು ಗ್ರಾಮದಲ್ಲಿ ನೆಲೆಸಿದ್ದಾರೆ. ವೃತ್ತಿಯಲ್ಲಿ ಪತ್ರಕರ್ತರಾಗಿರುವ ಅವರು, ಕೂರ್ಗ್ ಎಕ್ಸ್‌ಪ್ರೆಸ್‌ ವಾರಪತ್ರಿಕೆಯಲ್ಲಿ ಉಪಸಂಪಾದಕನಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕತೆ, ಕವನಗಳನ್ನು ಬರೆಯುವ ಹವ್ಯಾಸ ಹೊಂದಿರುವ ಅವರ ‘ಮಂದಿರದ ಶಂಖನಾದ : ಮಸೀದಿಯ ಬಾಂಗ್’ ಕತೆ ನಿಮ್ಮ ಓದಿಗಾಗಿ...

ಅದು ಜನನಿಬಿಡ ಬೀದಿ. ಮೆಲ್ಲನೆ ಕತ್ತಲಾವರಿಸುತ್ತಿತ್ತು. ಕೆಲಸ ಮುಗಿಸಿ ಮನೆಗೆ ತೆರಳುವ ಸಲುವಾಗಿ ಆತುರಾತುರವಾಗಿ ಜನ ಓಡಾಡುತ್ತಿದ್ದರು. ಅಲ್ಲೊಂದಿಲ್ಲೊಂದರಂತೆ ಹುಡುಗರು ಗುಂಪುಗೂಡಲೆಂಬಂತಿರುವ ಟೀ ಅಂಗಡಿಗಳಿಂದ ಹೊಗೆಯಾಡುತ್ತಿರುವ ಟೀ ಲೋಟಗಳು ಆ ತಂಪಿನ ಹವೆಯಲ್ಲಿ ಮನಸ್ಸನ್ನು ಅತ್ತ ಸೆಳೆಯುತ್ತಿತ್ತು. ಪಕ್ಕದ ಬೀದಿಯಲ್ಲಿ ಹೆಂಡದಂಗಡಿ ಇದೆ ಎನ್ನುವುದು ಆ ಬೀದಿಯಂಚಿನಿಂದ ಬರುತ್ತಿದ್ದವರ ವೇಷಭೂಷಣ, ಗತ್ತು ಗಾಂಭೀರ್ಯ ಕಂಡರೇ ತಿಳಿಯುತ್ತಿತ್ತು. ಎದೆಯುಬ್ಬಿಸಿ ಬಂದವನೊಬ್ಬ ಯಾರನ್ನೋ ದಬಾಯಿಸಲೆಂದು ತೆರಳಿ ಪಕ್ಕದ ಮೋರಿಯೊಳಸೇರಿದ್ದ. ಕಂಡ ಜನ ಕಿಸಕ್ಕನೆ ನಕ್ಕರು.

ವಾಹನಗಳ ಓಡಾಟಕ್ಕಂತು ಮಿತಿಯಿಲ್ಲ ಬಿಡಿ, ಮುಂದೆ ಅಪ್ಪನ ಕಾರಿದ್ದರೆ ಹಿಂದೆ ಮಗನ ಬೈಕು. ಅಪ್ಪನನ್ನು ಕಂಡೊಡನೆ ಮಗನ ಬೈಕಿನ ವೇಗ ಕಡಿಮೆಯಾಗಿತ್ತು. ಕರ್ಕಶವಾಗಿ ಹಾರನ್ನು ಮೊರೆಸುತ್ತಾ, ಸುತ್ತಲಿನ ಜನರ ಬಗ್ಗೆ ಕೇರೇ ಮಾಡದೆ ಮುಂದಿನ ವಾಹನಗಳನ್ನು ಹಿಂದಿಕ್ಕುವ ಧಾವಂತದಲ್ಲಿದ್ದವರಿಗೆ ಅಕ್ಕಪಕ್ಕದವರ ಹಿತ ಯಾಕೆ ಬೇಕು ಹೇಳಿ. ತುರ್ತು ಪರಿಸ್ಥಿತಿಯ ಆತುರದಲ್ಲಿದ್ದ ವೈದ್ಯಕೀಯ ವಾಹನವೊಂದರ ಸೈರನ್ ದೂರದಿಂದ ಕಿವಿಗಪ್ಪಳಿಸುತ್ತಿತ್ತು. ದೇವಾಲಯದ ಗಂಟೆ, ಜಾಗಟೆ, ಶಂಖ ನಾದದ ಜೊತೆಗೆ ಎಡಭಾಗದ ಮಸೀದಿಯ ಬಾಂಗಿನ ಸದ್ದು ಮಿಲನವಾಗಿತ್ತು.

ಆ ಪ್ರದೇಶಕ್ಕೆ ರಾಮಣ್ಣನ ಟೀ ಅಂಗಟಿ ಬಹಳಾ ಫೇಮಸ್ಸು. ಕರ್ನಾಟಕದಂಚಿನ ಊರೊಂದರಿಂದ ಉದ್ಯೋಗ ಅರಸಿ ಬಂದು, ಯಾವುದೂ ಕೈ ಹಿಡಿಯದೇ ಇದ್ದಾಗ ಟೀ ಅಂಗಡಿ ಆರಂಭಿಸಿ, ಹೆಚ್ಚು ನೀರು ಬೆರಸದ ಸವಿಯಾದ ಟೀ ನೀಡುವ ಈ ಕೈಯ ಚಹಾಕ್ಕೆ ಇಲ್ಲಿ ಬಹಳಾ ಬೇಡಿಕೆ ಇದೆ. ‘ಕೈಗಳ’ ಎನ್ನಲು ಸಾಧ್ಯವಿಲ್ಲ. ರಾಮಣ್ಣನಿಗಿರುವುದು ‘ಒಂದೇ ಕೈ’. ಕೆಲಸ ಅರಸಿ ಬಂದ ಒಂದೆರಡು ದಶಕಗಳ ಹಿಂದೆ ಎಲ್ಲಿಯೂ ಕೆಲಸ ಸಿಗದೆ ಇದ್ದಾಗ ಊಟಕ್ಕೂ ಕಷ್ಟವಾಗಿ ಬದುಕೇ ಬೇಡ ಎನ್ನುವಷ್ಟು ನೊಂದು ಒಂದು ದಿನ ಸಾಯುವ ನಿರ್ಧಾರಕ್ಕೆ ಬಂದು ರೈಲಿನ ಹಳಿಗೆ ತಲೆಯಿಟ್ಟಿದ್ದರಂತೆ, ರೈಲಿನ ವೇಗಕ್ಕೆ ಗಾಬರಿಯಾಗಿ ಅಲ್ಲಿಂದ ಉರುಳಿ ತಪ್ಪಿಸಿಕೊಳ್ಳುವಷ್ಟರಲ್ಲಿ ಎಡಗೈ ಗಾಲಿಗಳಿಗೆ ಸಿಕ್ಕು ಕತ್ತರಿಸಿ ಹೋಗಿತ್ತು. ಅಂದಿನಿಂದ ಉಳಿದ ಒಂಟಿ ಕೈನಲ್ಲೇ ಬದುಕುವ ನಿರ್ಧಾರಕ್ಕೆ ಬಂದು ಇಂದಿಗೆ ಮೂವತಕ್ಕೂ ಹೆಚ್ಚು ವರ್ಷ ಸಂದಿದೆ. ಬಹಳಾ ಹಸಿದು ಬಂದವರನ್ನು ಕಂಡರೆ ತಾನೇ ಊಟವನ್ನು ಕೊಟ್ಟು ಕಳುಹಿಸುತ್ತಾರೆ. ರಾಮಣ್ಣನಿಗೆ ಈಗ ಹತ್ತರಿಂದ ಹನ್ನೆರಡು ಭಾಷೆಗಳು ಬರುತ್ತದೆ. ಶಾಲೆಗೆ ಹೋಗದ ಇವರು ಇಂಗ್ಲೀಷನ್ನು ಶಾಲೆಗೆ ಹೋಗುವವರಿಗಿಂತ ಚಂದ ಮಾತನಾಡುತ್ತಾರೆ. ಹಾಗಂತ ನಿಮಗೆ ವಯಸ್ಸು ಎಷ್ಟಾಯ್ತು ಅಂತ ಕೇಳಿದರೆ ಕಣ್ಣು ದೊಡ್ಡದಾಗಿಸಿ ‘ನಾನು ಬದುಕಿರುವವರೆಗೆ ನಿಮ್ಗೆ ಟೀ ಕೊಡ್ತೇನೇ ಆಯ್ತಾ’ ಎಂದು ಮೆಲ್ಲನೆ ನಸುನಗುತ್ತಾರೆ. ಇಂತಹ ಸಹೃದಯಿ ರಾಮಣ್ಣನ ಪ್ರಸಿದ್ಧತೆ ಅಕ್ಕಪಕ್ಕದ ಚಾಯ್‌ವಾಲಾಗಳ ವ್ಯಾಪಾರಕ್ಕೆ ತೊಂದರೆಯಾಗಿ ಅಲ್ಲಿಂದ ರಾಮಣ್ಣನನ್ನು ಒಕ್ಕಲೆಬ್ಬಿಸುವ ಪ್ರಯತ್ನವೂ ನಡೆದಿತ್ತು. ಜನ ರಾಮಣ್ಣನ ಕೈಬಿಡಲಿಲ್ಲ. ಅಲ್ಲಾ ಎನುವವರು, ಶಿವನೇ ಎನುವವರು, ಚರ್ಚಿಗೆ ಹೋಗುವವರೆಲ್ಲರಿಗೂ ತಮ್ಮ ಕಷ್ಟನಷ್ಟ, ಸುಖದುಃಖಗಳನ್ನು ಹಂಚಿಕೊಳ್ಳುವುದಕ್ಕೆ ರಾಮಣ್ಣ ಬೇಕು. ಚಹಾ ಬೇಕೇಬೇಕು. ಜೊತೆಗೆ ಚಹಾದಂಗಡಿಯೂ.

ಅಂತಹ ರಾಮಣ್ಣನ ಖಾಯಂ ಗಿರಾಕಿಯಾಗಿದ್ದ ನಾನು ಮಸಾಲೆ ಟೀ ಜೊತೆಗೆ ಖಾರರೊಟ್ಟಿ ತಿನ್ನುತ್ತಾ ನನ್ನ ಬದುಕಿನ ಪುಟಗಳ ತಿರುವಿ ಹಾಕುತ್ತಾ ಟೀಯ ಸ್ವಾದ ಅನುಭವಿಸುತ್ತಿದ್ದೆ. ಬೇಕರಿಯೊಂದರ ಒಳಗೆ ಮಗುವೊಂದು ರಚ್ಚೆ ಹಿಡಿದು ಅಳುತ್ತಿರಲು ಅಮ್ಮ ಮಗುವಿನ ಹಿಂಭಾಗಕ್ಕೆ ಒಂದೆರಡು ಬಿಟ್ಟಳು. ಮಗು ಇನ್ನೂ ಏಟು ಬೀಳುವ ಭಯದಿಂದ ಕಷ್ಟಪಟ್ಟು ಬಾಯೊಳಗೇ ಅಳುತ್ತಿತ್ತು. ತಕ್ಷಣ ನನ್ನ ನೆನಪುಗಳು ಬಾಲ್ಯಕ್ಕೆ ಹೋಗಿದ್ದವು. ಅಂದಿನ ತುಂಟಾಟ ಮತ್ತೆ ನೆನಪಿಗೆ ಬಂತು. ಅದು ಪರೀಕ್ಷೆ ಹತ್ತಿರವಾದ ದಿನಗಳು, ಆಟಕ್ಕೆ ಬ್ರೇಕ್ ಬಿದ್ದು, ಪಾಠ ಬಿರುಸಾಗಿ ನಡೆಯುತ್ತಿತ್ತು. ಆಗೆಲ್ಲ ಓದದಿದ್ದರೆ ಹುಡುಗಿಯರ ಪಕ್ಕದಲ್ಲಿ ಕುಳಿತುಕೊಳ್ಳುವ ಶಿಕ್ಷೆ ಹಾಗಾಗಿ ಕಷ್ಟಪಟ್ಟು ಓದುತ್ತಿದ್ದೆವು. ಹುಡುಗಿಯರ ಪಕ್ಕದಲ್ಲಿ ಕುಳಿತುಕೊಳ್ಳಬೇಕಲ್ಲಾ ಎನ್ನುವ ಭಯದಿಂದ. ಒಂದು ದಿನ ತಡೆಯಲಾರದೆ ಸಿಕ್ಕ ಹತ್ತು ನಿಮಿಷ ಗ್ಯಾಪಿನಲ್ಲಿ ಬ್ಯಾಟು ಹಿಡಿದು ಗ್ರೌಂಡಿಗೆ ಓಡಿದ್ದೆವು. ಬ್ಯಾಟೆಂದರೆ ಅದು ಶಾಲೆಯ ಮೇಲ್ಛಾವಣಿಯ ಕೆಲಸದ ವೇಳೆ ಉಳಿದ ರೀಪರಿನ ಪೀಸು.

ಬೆಲ್ಲಿನ ಸದ್ದಾಯಿತು. ಮತ್ತೆರಡು ನಿಮಿಷ ಬಿಟ್ಟು ಅಲ್ಲಿಂದ ಕ್ಲಾಸಿನತ್ತ ಓಡಿದ್ದೆವು. ಅಷ್ಟರಲ್ಲಾಗಲೇ ಹುಡುಗಿಯರು ಕ್ಲಾಸಿನ ಬಾಗಿಲು ಹಾಕಿ ಒಳಕುಳಿತಿದ್ದರು. ಹೊರಗಿದ್ದರೆ ಪೆಟ್ಟಿನ ರುಚಿಯ ಅರಿವಿದ್ದ ನಾನು ಗೆಳೆಯ ಕೀರ್ತನ್ ಜೊತೆ ಸೇರಿ ಏಟು ತಪ್ಪಿಸಿಕೊಳ್ಳಲು ತರಗತಿಯ ಕಿಟಕಿಯ ಮೇಲಿನ ಕಿರಿದಾದ ಕಿಂಡಿಯಿಂದ ಒಳನುಗ್ಗಿದ್ದೆವು. ಅದು ಶಾಲೆಯ ಎಲ್ಲಾ ಟೀಚರುಗಳಿಗೆ ವರದಿಯಾಗಿತ್ತು. ಬಂದ ಟೀಚರುಗಳೆಲ್ಲ ನಮ್ಮನ್ನು ನಿಲ್ಲಿಸಿ ಕೈ ಹಿಡಿದು ಕುಂಡೆಮೇಲೆ ಬಾರಿಸಿ ಬೆತ್ತದ ರುಚಿ ತೋರಿಸಿದ್ದರು. ಮೇಲೆ ಹತ್ತುವ ಭರದಲ್ಲಿ ನನ್ನ ಬಳಿ ಇದ್ದ ಒಂದೇ ಒಂದು ಚಡ್ಡಿಯೂ ಹರಿದು ಹೋಗಿತ್ತು. ಅದು ಯಾರಿಗೂ ಗೊತ್ತಾಗಲಿಲ್ಲ. ಮತ್ತೆರಡು ದಿನ ಹರಿದ ಚಡ್ಡಿಯನ್ನೇ ಶಾಲೆಗೆ ಹಾಕಿದ್ದೆ. ಇದೆಲ್ಲ ನೆನಪಾಗಿ ತುಟಿಯಂಚಿನಲ್ಲಿ ಕಿರುನಗು ಮೂಡಿತ್ತು.

“ಅಣ್ಣೆ ಕೊಂಜ ವಳಿ ವಿಡ್‌ಂಗೆ” ಎನ್ನುವ ಸದ್ದಿಗೆ ಮತ್ತೆ ವಾಸ್ತವಕ್ಕೆ ಬಂದಿದ್ದೆ. ಅಷ್ಟರಲ್ಲಾಗಲೇ ಅಕ್ಕಪಕ್ಕ ಕುಳಿತು ಟೀ ಕುಡಿಯುತ್ತಿದ್ದವರೆಲ್ಲ ಎದ್ದು ಹೋಗಿದ್ದರು. ಇದ್ದ ನಾಲ್ಕು ಚೇರಿನಲ್ಲೊಂದನ್ನು ನಾನು ಆಕ್ರಮಿಸಿಕೊಂಡಿದ್ದೆ ಎನ್ನುವುದು ನೆನಪಾಗಿ ಅಲ್ಲಿಂದ ಎದ್ದು ರಾಮಣ್ಣನಿಗೆ ಕಾಸು ಕೊಟ್ಟು ಬೈಕು ಹತ್ತಿದೆ. ಬಲಭಾಗದಲ್ಲಿದ್ದ ಶಿವಾಲಯಕ್ಕೆ ನಮಸ್ಕರಿಸಿ, ಮಸೀದಿಯ ಬಾಂಗಿನ ಸದ್ದನ್ನು ಹೊರಹಾಕುತ್ತಿದ್ದ ಮೈಕಿಗೆ ಕಿವಿಕೊಟ್ಟು ಇನ್ನೇನು ಬೈಕಿನ ಕಿಕ್ಕರ್ ಒದೆಯಬೇಕೆನ್ನುವಷ್ಟರಲ್ಲಿ ‘ಮಮತಾ’ ಬಟ್ಟೆ ಅಂಗಡಿಯ ಮುಂದೆ ಗಲಭೆ ಶುರುವಾಯಿತು. ನಡುವಯಸ್ಕನೊಬ್ಬ ಕಾಲೇಜಿನ ಯುವತಿಯೊಬ್ಬಳ ಜೊತೆ ಅಸಭ್ಯವಾಗಿ ಮಾತನಾಡುತ್ತಾ, ಚುಡಾಯಿಸಲಾರಂಭಿಸಿದ, ಆಕೆ ಬೆದರಿದಳು. ಅವಳ ಹೆದರಿಕೆ ಕಂಡು ಮತ್ತಷ್ಟು ಅಸಹ್ಯವಾಗಿ ಅವಳ ಜೊತೆ ಬರುತ್ತೀಯಾ ? ಎಂದೆಲ್ಲ ಕೇಳುತ್ತಾ ಆಕೆಯ ಮೈಗೆ ಕೈ ಹಾಕಿದ್ದ. ನಾನು ಬೈಕಿನಿಂದಿಳಿದು ಮೊಬೈಲ್ ತೆಗೆದು ವೀಡಿಯೋ ಮಾಡಲಾರಂಭಿಸಿದೆ.

ಹೆಣ್ಣಿನ ಮಾನ ಕಾಪಡಬೇಕಾದ ಆಕೆಯ ಚೂಡಿದಾರದ ಶಾಲು ಕುಡುಕನ ಕೈಸೇರಿದಾಗ ಒಂದಿಬ್ದರು ಅವಳನ್ನು ಬಿಡು ಎಂದು ಕುಡುಕನಿಗೆ ಬೈದರೂ ಆತನ ಕೆಂಗಣ್ಣು ಅವರಲ್ಲಿ ಭೀತಿಯನ್ನು ಹುಟ್ಟಿಸಿತ್ತು. ಕುಡುಕ ಅಲ್ಲಿನ ಪುಡಿರೌಡಿ ಎನ್ನುವ ಸತ್ಯ ಅಲ್ಲಿನವರಿಗೆ ತಿಳಿದಿತ್ತು. ಆಕೆ ಅಸಹಾಯಕತೆಯಲ್ಲಿ ಭೀತಿಯಿಂದ ಎರಡೂ ಕೈಗಳಿಂದ ಎದೆಯನ್ನು ಮುಚ್ಚಿಕೊಂಡು ಜನರತ್ತ ರಕ್ಷಿಸಿ ಎನ್ನುವಂತೆ ದೈನ್ಯತೆಯಿಂದ ನೋಡುತ್ತಿದ್ದಳು. ಇಷ್ಟಾದರೂ ಯಾರೂ ಅವಳನ್ನು ರಕ್ಷಿಸಲು ಬರದೇ ಇರುವುದನ್ನು ಕಂಡ ಕುಡುಕನ ಧೈರ್ಯ ಹೆಚ್ಚಿತು, ಮತ್ತಷ್ಟು ಕಾಮುಕತೆಯಿಂದ ಅವಳ ದೇಹವನ್ನು ಮೇಲಿನಿಂದ ಕೆಳಗಿನವರೆಗೆ ಅಳತೆ ಮಾಡಲು ತೊಡಗಿದ. ಆಕೆ ಮತ್ತಷ್ಟು ಹಿಡಿಯಾಗಿ ಹಿಂದೆ ಹಿಂದೆ ಹೆಜ್ಜೆಯಿಡುತ್ತಿದ್ದಳು. ಆತ ವಿಕೃತವಾಗಿ ನಗುತ್ತಲೇ ಇದ್ದ.

ಅಷ್ಟೇ... ಆಮೇಲಿನದ್ದೆಲ್ಲ ಬಹಳ ಕುತೂಹಲಕ್ಕೆ ಕಾರಣವಾಗಿತ್ತು. ಅಷ್ಟೂ ಹೊತ್ತು ಅಮಾನವೀಯವಾಗಿ ಕಂಡ ಪ್ರದೇಶ ಒಮ್ಮಿಂದೊಮ್ಮೆಲೆ ಬದಲಾಯಿತು. ಬಿಳಿ ಟೊಪ್ಪಿ ಧರಿಸಿದ್ದ ನಾಲ್ಕೈದು ತರುಣರು ಹಾಗು ನಾಮ ಧರಿಸಿದ್ದ ಒಂದಷ್ಟು ತರುಣರು ವಿರುದ್ಧ ದಿಕ್ಕಿನಿಂದ ಓಡಿ ಬಂದರು, ಬಂದದ್ದು ಮಾತ್ರವಲ್ಲ ಕುಡುಕನ ಕುಡಿದ ಅಮಲನ್ನು ಸಂಪೂರ್ಣ ಇಳಿಸಿ ಮೂಲೆಯಲ್ಲಿ ಕುಕ್ಕಿದರು. ಮುಸಲ್ಮಾನ ಸಹೋದರನೊಬ್ಬ ಕೆಳಗೆ ಬಿದ್ದಿದ್ದ ಶಾಲನ್ನು ಹೆಕ್ಕಿ ಯುವತಿಗೆ ನೀಡಿ ನಮಸ್ಕರಿಸಿ ಅಲ್ಲಿಂದ ಹೊರಟುಹೋದ. ಆಕೆ ಕೈ ಮುಗಿದು ನಿಂತಿದ್ದಳು. ಕಣ್ಣಲ್ಲಿ ಧನ್ಯತಾ ಭಾವ. ಪಕ್ಕದಲ್ಲೇ ಇದ್ದ ಅಂಗಡಿಯಿಂದ ಬಂದ ಹೆಂಗಸೊಬ್ಬಳು ಯುವತಿಯನ್ನು ಕರೆದೊಯ್ದು ಕುಳ್ಳಿರಿಸಿ ನೀರು ಕುಡಿಸಿ ಸಂತೈಸಿದಳು. ಮೊಳೆಗಳಿಂದ ದೇಹ ಬಂಧನವಾಗಿದ್ದರೂ ಸೌಮ್ಯತೆಯಿಂದ ಇದ್ದ ಏಸುವಿನ ಶಿಲುಬೆ ಗಾಳಿಗೆ ಮೆಲ್ಲನೆ ಅಲುಗಾಡುತ್ತಿತ್ತು.

ಯಾರೋ ಪೋಲೀಸರಿಗೆ ವಿಚಾರ ಅರುಹಿದ್ದರೆನಿಸುತ್ತದೆ, ಸೈರನ್ ಮೊಳಗಿಸುತ್ತ ಬಂದ ವಾಹನಕ್ಕೆ ಜನ ಗಾಬರಿಯಿಂದ ದಾರಿ ಮಾಡಿ ಕೊಟ್ಟಿದ್ದರು. ಕೆಲವೇ ಕ್ಷಣಗಳ ಹಿಂದೆ ಆಂಬುಲನ್ಸ್ ಸೈರನ್ ಗೆ ಕೇರೇ ಮಾಡದ ಜನ ಪೋಲೀಸ್ ವಾಹನಕ್ಕೆ
ದಾರಿ ಮಾಡಿಕೊಟ್ಟದ್ದು
ನನಗೆ ಅಚ್ಚರಿಯೆನಿಸಿತ್ತು.
ನಿನ್ನ ಮಗಳಿಗೆ ಹೀಗೆ ಆಗಿದ್ದರೆ ಇದೇ ರೀತಿ ವೀಡಿಯೋ ಮಾಡಿಕೊಂಡು ನಿಂತಿರುತ್ತಿದ್ದೆಯಾ ಎನ್ನುವ ಯುವಕನೊಬ್ಬನ ಮಾತಿಗೆ ಬೆಚ್ಚಿ ಮೊಬೈಲನ್ನು ಬೇಬಿನೊಳಕ್ಕೆ ತಳ್ಳಿದ್ದೆ. ನನ್ನನ್ನು ಕೆಕ್ಕರಿಸಿ ನೋಡಿ ಆತ ಯುವತಿಯತ್ತ ತೆರಳಿದ. ಪೊಲೀಸರು ವಿಚಾರಣೆ ನಡೆಸಿ ಹಳೆಯ ಪುಡಿರೌಡಿಯನ್ನು ಜೀಪಿಗೆ ಹಾಕಿದ್ದರು. ಕುತೂಹಲದಿಂದ ಸುತ್ತಲೂ ನಿಂತು ನೋಡುತ್ತಿದ್ದ ಜನಸಮೂಹ ಕರಗಿತು. ಮಾಧ್ಯಮದವರ ಕ್ಯಾಮೆರಾಗಳು ಕ್ಲಿಕ್ಕೆಂದವು. ರಾಮಣ್ಣನ ಟೀ ಅಂಗಡಿಯಲ್ಲಿ ಎರಡೂ ಧರ್ಮದ ಯುವಕರೂ ಒಟ್ಟಿಗೆ ಕುಳಿತು ನಡೆದ ಘಟನೆಯ ಕುರಿತು ವಿಚಾರಗಳನ್ನು ಮೆಲುಕು ಹಾಕುತ್ತಿದ್ದರು.
ನಗುತ್ತಲೇ ಇರುವ ರಾಮಣ್ಣ, ಹೊಗೆಯಾಡುವ ಮಸಾಲೆ ಟೀ, ಮತ್ತದೇ ಟ್ರಾಫಿಕ್ಕಿನ ನಡುವೆ ಮಂದಿರದ ಶಂಖನಾದದ ಜೊತೆಗೆ ಮಸೀದಿಯ ಬಾಂಗ್ ಅದರದ್ದೇ ಆದ ಧಾಟಿಯಲ್ಲಿ ಸಮ್ಮಿಲನವಾಗಿತ್ತು.

*✒️ಚಂದನ್ ನಂದರಬೆಟ್ಟು.*

ಚಂದನ್ ನಂದರಬೆಟ್ಟು

ಚಂದನ್ ನಂದರಬೆಟ್ಟು ಅವರು ಮೂಲತಃ ವಿಟ್ಲದವರು. ಪ್ರಸ್ತುತ ಕೊಡಗಿನ ಮಡಿಕೇರಿ ತಾಲ್ಲೂಕಿನ ಗಾಳಿಬೀಡು ಗ್ರಾಮದಲ್ಲಿ ನೆಲೆಸಿದ್ದಾರೆ. ಸಾಹಿತ್ಯದಲ್ಲಿ ಅಪಾರ ಆಸಕ್ತಿ ಹೊಂದಿರುವ ಅವರು ಕತೆ, ಕವನಗಳನ್ನು ಬರೆಯುತ್ತಾರೆ. ವೃತ್ತಿಯಲ್ಲಿ ಪತ್ರಕರ್ತರಾಗಿರುವ ಅವರು, ಕೂರ್ಗ್ ಎಕ್ಸ್‌ಪ್ರೆಸ್‌ ವಾರಪತ್ರಿಕೆಯಲ್ಲಿ ಉಪಸಂಪಾದಕನಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರಿಗೆ 20121-22 ನೇ ಸಾಲಿನ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ವಾರ್ಷಿಕ ಪ್ರಶಸ್ತಿ(ಅತ್ಯುತ್ತಮ ಮಾನವೀಯ ವರದಿಗೆ) ದೊರೆತಿದೆ.

More About Author