Poem

ಮನುಷ್ಯನ ಸದ್ಬುದ್ದಿಗೆ ಪ್ರಾರ್ಥಿಸುತ್ತಿದ್ದವು !

ಒಂದು ಸುಂದರ ಬೆಳಗು
ಆಗಷ್ಟೇ ಒಂದು ಗುಲಾಬಿ ಹೂವು
ಅರಳಿ ಗೆಳತಿಯರೊಂದಿಗೆ ನಗುತಿತ್ತು
ಅದೆಲ್ಲಿಂದಲೋ ಬಂದ ಬಾಂಬವೊಂದು
ಸಿಡಿದು ಎಲ್ಲವೂ ಬೂದಿಯಾಯಿತು

ಆ ಮಟಮಟ ಮಧ್ಯಾಹ್ನ
ಸಮುದ್ರವೊಂದರಲ್ಲಿ ಹಡುಗು
ವಿಸರ್ಜಿಸಿದ ವಿಷಾನೀಲದಿಂದ
ಸಕಲ ಜಲಚರಗಳು ಚಡಪಡಿಸಿ
ಚಡಪಡಿಸಿ ಅಸುನೀಗಿದವು

ಆ ಸುಂದರ ಸಂಜೆ
ಹಕ್ಕಿ ಪಕ್ಷಿಗಳೆಲ್ಲ ಸ್ವಚ್ಛಂದವಾಗಿ
ಆಗಸದಿ ಸಂಚರಿಸುತ್ತಿದ್ದವು
ಎಲ್ಲಿಂದಲೋ ಬಂದ
ವಿಮಾನವೊಂದು ಬೆಂಕಿಯುಗುಳಿತು
ಹಕ್ಕಿ ಪಕ್ಷಿಗಳೆಲ್ಲ ಕರಕಲಾಗಿ ಗಾಳಿಗೆ ಸೇರಿದವು

ಆ ರಾತ್ರಿ ದನಕರಗಳು
ತನ್ನ ಗೂಡಿಗೆ ಮರಳುತ್ತಿದ್ದವು
ಎಲ್ಲಿಂದಲೋ ಬಂದ ಮಿಸೈಲ್ ಸದ್ದು
ಜನ ಜಾನುವಾರಗಳನ್ನು ಛಿದ್ರ ಛಿದ್ರವಾಗಿಸಿತ್ತು

ಮರಗಿಡಗಳು
ತರುಲತೆಗಳು
ಹಕ್ಕಿಪಕ್ಷಿ, ಜೀವ ಜಂತುಗಳು
ಅಷ್ಟೇಯೇಕೆ ಗಗನಚುಂಬಿ ಇಮಾರತ್ ಗಳೆಲ್ಲ
ನೆಲಕ್ಕುರಳಿದರೆ ಮನುಷ್ಯ ಗೀಚಿದ ಗಡಿರೇಖೆಗಳು
ರಕ್ತ ಹೀರಿ ಗಹಗಹಸಿ ರಕ್ಕಸ ನಗೆ ಬೀರುತ್ತಿದ್ದವು

ತಾನೇ ಸೃಷ್ಟಿಸಿದ ವಿನಾಶದಿಂದಲೂ
ಪಾಠ ಕಲಿಯದ ಮನುಷ್ಯ
ಜಿದ್ದಿಗೆ ಬಿದ್ದು ಹೋರಾಡುತ್ತಲೇ ಇದ್ದ
ಅವರಿವರ ಕಿಚ್ಚಿಗೆ ಆಹುತಿಯಾದ
ಸಕಲ ಜೀವರಾಶಿಗಳ ಆತ್ಮಗಳು
ಮನುಷ್ಯನ ಸದ್ಬುದ್ದಿಗೆ ಪ್ರಾರ್ಥಿಸುತ್ತಿದ್ದವು !

- ಅಶ್ಫಾಕ್ ಪೀರಜಾದೆ

ಅಶ್ಫಾಕ್ ಪೀರಜಾದೆ

ಕವಿ ಅಶ್ಫಾಕ್ ಪೀರಜಾದೆ ಅವರು ಮೂಲತಃ ಬೆಳಗಾವಿ ಜಿಲ್ಲೆಯವರು. ಸದ್ಯ, ಧಾರವಾಡದಲ್ಲಿ ನೆಲೆಸಿದ್ದು, ವೃತ್ತಿಯಿಂದ, ಪಶು ಸಂಗೋಪನಾ ಇಲಾಖೆಯಲ್ಲಿ ಹಿರಿಯ ಪಶು ವೈದ್ಯಕೀಯ ಪರೀಕ್ಷಕರು. 

ಕೃತಿಗಳು: ಪ್ರೇಮವೆಂದರೆ, ಜನ್ನತ್ ಮತ್ತು ಇತರ ಕಥೆಗಳು (ಕಥಾಸಂಕಲನಗಳು), ಮನೋಲೋಕ, ಒಂದು ಜೋಡಿ ಕಣ್ಣು, ನನ್ನೊಳಗಿನ ಕವಿತೆ (ಕವನ ಸಂಕಲನಗಳು)  

More About Author