Story

ಮರಳುವುದೆಲ್ಲಿಗೆ...

ಲೇಖಕ, ಕತೆಗಾರ ಡಾ. ಸರ್ಜಾಶಂಕರ ಹರಳಿಮಠ ಅವರು ಮೂಲತಃ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕು ಹರಳಿಮಠ ಗ್ರಾಮದವರು. ಸಾಹಿತ್ಯ, ಹೋರಾಟ, ಉದ್ಯಮ ಎಲ್ಲವುಗಳ ಜೊತೆ ಸದಾ ಚಲನಶೀಲರಾಗಿರುವ ಸರ್ಜಾಶಂಕರ ಹರಳಿಮಠ ಅವರ ಮರಳುವುದೆಲ್ಲಿಗೆ...ಕತೆ ನಿಮ್ಮ ಓದಿಗಾಗಿ.

ಹೀಗೆ ಯಾರಿಗೂ ಒಂದು ಸೂಚನೆಯನ್ನೂ ಕೊಡದೆ ದಿಢೀರನೆ ಊರಿಗೆ ಹೊರಟುಬಿಡುವುದು ವೆಂಕಟೇಶನಿಗೆ ವಿಚಿತ್ರ ಖುಷಿ ಕೊಡುತ್ತದೆ. ಆದರೆ ಜಮುನಳಿಗೆ ಮಾತ್ರ ಒಂದು ವಾರವೋ, ನಾಲ್ಕೈದು ದಿನಗಳ ಮುಂಚೆಯೋ ಆತ ತಾನು ಊರಿಗೆ ಹೋಗುವ ಸುಳಿವನ್ನು ನೀಡಿರುತ್ತಾನೆ. ಬ್ಯಾಗು ಹಿಡಿದು ಹೊರಟಾಕ್ಷಣ ‘ನಾನೂ ಬರ್ತೀನಿ ಅಪ್ಪಾ’ ಎಂದು ಹಿಂಬಾಲಿಸುವ ಚೇತನಾಳನ್ನು ಮಾನಸಿಕವಾಗಿ ಸಿದ್ದಪಡಿಸುವುದು ಹೀಗೆ ಹೇಳುವ ವೆಂಕಟೇಶನ ಇನ್ನೊಂದು ಉದ್ದೇಶವಾಗಿರುತ್ತದೆ.

ಬೆಂಗಳೂರಿನಿಂದ ಹೊರಟ ಬಸ್ಸು ಮುಂಜಾನೆ ಐದೂವರೆಗೆಲ್ಲ ತೀರ್ಥಹಳ್ಳಿಗೆ ಬಂದುಬಿಡುತ್ತದೆ. ಅಲ್ಲಿಂದ ಕೈಮರಕ್ಕೆ ಮೊದಲ ಕೃಷ್ಣಸ್ವಾಮಿ ಬಸ್ಸಿರುವುದು ಏಳೂವರೆ ಗಂಟೆಗೆ. ಎಂದಿನಂತೆ ವೆಂಕಟೇಶ ನಡೆದೇ ಹೊರಟ. ದಟ್ಟ ಮಂಜು ಆವರಿಸಿದ್ದರಿಂದ ತೀರ್ಥಹಳ್ಳಿ ಅಮಾಯಕವಾಗಿ ಕಾಣುತ್ತಿತ್ತು. ಕುಳಿರ್ಗಾಳಿ ತರುತ್ತಿದ್ದ ಚಳಿ ಒಡಲನ್ನು ಸಣ್ಣಗೆ ನಡುಗಲಾರಂಭಿಸಿತ್ತು. ಹೆಗಲ ಮೇಲಿದ್ದ ಮಪ್ಲರನ್ನು ಒಮ್ಮೆ ಕೊಡವಿದ ವೆಂಕಟೇಶ ಎರಡೂ ಕಿವಿಗಳು ಮುಚ್ಚುವಂತೆ ತಲೆಗೆ ಬಿಗಿಯಾಗಿ ಕಟ್ಟಿಕೊಂಡ. ಹೆಗಲಿನ ಒಂದೇ ಬದಿಯಲ್ಲಿ ನೇತಾಡುತ್ತಿದ್ದ ಬ್ಯಾಗನ್ನು ಇಳಿಸಿ ಬೆನ್ನಿಗೇರಿಸಿಕೊಂಡು ಹೊರಟ. ಊರಿಗೆ ಹೋಗುವ ಒಳಹಾದಿ ಹಿಡಿಯಲು ಪೇಟೆಯ ಅಜಾದ್ ರಸ್ತೆಯಲ್ಲಿ ಇನ್ನೂ ಸುಮಾರು ಒಂದು ಮೈಲಿ ನಡೆಯಬೇಕಿತ್ತು.

ಅಜಾದ್ ರಸ್ತೆಯ ಇಕ್ಕೆಲವನ್ನು ಕುತೂಹಲದಿಂದ ಗಮನಿಸುತ್ತ ನಡೆಯುತ್ತಿದ್ದ ವೆಂಕಟೇಶನಿಗೆ ಗೋಡೆ ತುಂಬ ಟಾಮ್ ಅಂಡ್ ಜೆರ್ರಿ, ಮಿಕ್ಕೀ ಮೌಸ್ ಚಿತ್ರಗಳಿದ್ದ ಕೆಂಬ್ರಿಡ್ಜ್ ಇಂಗ್ಲೀಷ್ ನರ್ಸರಿ ಸ್ಕೂಲೂ, ಅದರ ಪಕ್ಕದಲ್ಲಿದ್ದ ಸತೀಶನ ಮನೆಯೂ ಕಣ್ಣಿಗೆ ಬಿತ್ತು. ತಾನು ಕಾಲೇಜಿಗೆ ಹೋಗುವಾಗ ಈ ನರ್ಸರಿ ಸ್ಕೂಲಿನ ಕಟ್ಟಡ ತುಂಬಾ ಚಿಕ್ಕದಾಗಿತ್ತು, ಈ ರೀತಿ ಚಿತ್ರಗಳೂ ಇರಲಿಲ್ಲವೆಂದು ವೆಂಕಟೇಶ ನೆನಪಿಸಿಕೊಂಡ.

ಸತೀಶನ ತಂದೆ ಆತ ಎಳೆವೆಯಲ್ಲಿರುವಾಗಲೇ ಅನಾರೋಗ್ಯಕ್ಕೆ ತುತ್ತಾಗಿ ತೀರಿಹೋಗಿದ್ದರು. ಆವರಿಗಿದ್ದ ಏಕೈಕ ಆಸ್ತಿಯೆಂದರೆ ಈ ಮನೆಯಾಗಿತ್ತು. ಒಮ್ಮೆ ಸತೀಶ ಕರೆದನೆಂದು ಆತನ ಮನೆಗೆ ಹೋದ ವೆಂಕಟೇಶನಿಗೆ ಅಲ್ಲಿದ್ದ ಹತ್ತಾರು ಮೂರು-ನಾಲ್ಕು ವರ್ಷದ ಮಕ್ಕಳನ್ನು ನೋಡಿ ಅಚ್ಚರಿಯಾಗಿತ್ತು. ಆ ಮಕ್ಕಳೆಲ್ಲ ತೀರ್ಥಹಳ್ಳಿ ಸುತ್ತಮುತ್ತಲ ದೂರದ ಹಳ್ಳಿಗಳ ಜವಿೂನ್ದಾರರ ಮಕ್ಕಳಾಗಿದ್ದರು. ಆ ಮಕ್ಕಳನ್ನು ಇಂಗ್ಲೀಷ್ ನರ್ಸರಿಗೆ ಸೇರಿಸುವ ಉದ್ದೇಶದಿಂದ ನರ್ಸರಿಯ ಪಕ್ಕವೇ ಇದ್ದ ಸತೀಶನ ಮನೆಯಲ್ಲಿ ಬಿಟ್ಟಿದ್ದರು. ಸತೀಶನ ತಾಯಿಗೆ ಇದೊಂದು ಆದಾಯದ ಮೂಲವಾಗಿತ್ತು. ಆ ಚಿಕ್ಕಮಕ್ಕಳನ್ನು ಅವರ ತಂದೆ-ತಾಯಿ ವಾರಕ್ಕೊ, ಹದಿನೈದು ದಿನಗಳಿಗೋ ಒಮ್ಮೆ ಬಂದು ನೋಡಿಕೊಂಡು ಹೋಗುತ್ತಿದ್ದರು. ಆ ಮಕ್ಕಳ ತಬ್ಬಲಿತನ ತನ್ನೆದೆಗೆ ನಾಟಿದಂತೆ ವೆಂಕಟೇಶ ಮರುಗಿದ್ದ.

ವೆಂಕಟೇಶ ಆ ಮಕ್ಕಳ ಬಗ್ಗೆ ಯೋಚಿಸುತ್ತ ಬೆಟ್ಟಮಕ್ಕಿ ದಾಟಿ ಅಲ್ಲಿಂದ ಗದ್ದೆಯ ಒಳದಾರಿ ಹಿಡಿದ. ಈ ರೀತಿ ಯಾವಾಗ ಊರಿಗೆ ಹೊರಟರೂ ಕಂಪನಿಯ ಬಾಕಿ ಉಳಿದ ತನ್ನ ಕೆಲಸದ ಒತ್ತಡ ವಾಪಸು ಹೊರಡುವವರೆಗೂ ನೆಮ್ಮದಿಯಿಂದಿರಲು ಬಿಡುತ್ತಿರಲಿಲ್ಲ. ಆದರೆ ಈ ಬಾರಿ ವೆಂಕಟೇಶ ನಿರುಮ್ಮಳವಾಗಿದ್ದ. ಅಷ್ಟೇನು ಖಚಿತವಲ್ಲದ ಒಂದು ನಿರ್ಧಾರ ಆತನ ಮನಸ್ಸಿನಲ್ಲಿ ರೂಪ ಪಡೆಯುತ್ತಿತ್ತು. ಅಂತಿಮ ಪದವಿ ತರಗತಿಯ ಪರೀಕ್ಷೆ ಬರೆದ ವೆಂಕಟೇಶ ಫಲಿತಾಂಶಕ್ಕೂ ಕಾಯದೇ ಕೆಲಸ ಅರಸುತ್ತ ಬೆಂಗಳೂರು ಸೇರಿದ್ದ.

ಮೂರು ವರ್ಷಗಳ ಕಾಲ ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡಿದ. ಈ ಅನುಭವದಿಂದಾಗಿ ಪ್ರಿಸಿಷನ್ ಇಂಡಿಯ ಲಿಮಿಟೆಡ್ ಎಂಬ ಬಹುರಾಷ್ಟ್ರೀಯ ಕಂಪನಿಯಲ್ಲಿ ವೆಂಕಟೇಶನಿಗೆ ಎಚ್‍ಆರ್‍ಡಿಯ ಸೀನಿಯರ್ ಆಫೀಸರ್ ಕೆಲಸ ದೊರಕಿತು. ಕಂಪನಿಗೆ ಹೋದ ಮೊದಲ ದಿನವನ್ನು ನೆನೆಸಿಕೊಂಡರೆ ವೆಂಕಟೇಶನಿಗೆ ಈಗಲೂ ಕ್ಷಣಕಾಲ ರೋಮಾಂಚನವಾಗುತ್ತದೆ. ಆ ಕಂಪನಿಯಿದ್ದುದು ಬೆಂಗಳೂರಿನ ಹೂರವಲಯದಲ್ಲಿ. ಬೆಳಿಗ್ಗೆ ಸರಿಯಾಗಿ ಎಂಟು ಗಂಟೆಗೆ ಮನೆ ಬಾಗಿಲಲ್ಲಿ ಬಂದು ನಿಂತ ಐಶಾರಾಮಿ ಹವಾನಿಯಂತ್ರಿತ ಕಂಪನಿಯ ಬಸ್ಸನ್ನು ನೋಡಿಯೇ ವೆಂಕಟೇಶ ಕಂಪಿಸಿದ. ಆ ಬಸ್ಸು ಹೋಗುತ್ತಿರುವುದೇ ಗೊತ್ತಾಗದಷ್ಟು ಮೃದುವಾಗಿ ಸಾಗುತ್ತಿತ್ತು.

ಬಸ್ಸು ನಗರವನ್ನು ದಾಟಿ ಮುಂದುವರೆದಿತ್ತು. ಕಟ್ಟಡಗಳು ಮಾಯವಾಗುತ್ತ ಕೆರೆಗಳು, ಗದ್ದೆಗಳು, ಅಲ್ಲಲ್ಲಿ ಒತ್ತೊತ್ತಾಗಿ ಬೆಳೆದ ಮರಗಳ ಗುಂಪುಗಳು ಕಾಣಲಾರಂಭಿಸಿದ್ದವು. ಹತ್ತಾರು ಮೈಲಿ ಕ್ರಮಿಸಿದ ನಂತರ ಕಂಪನಿಯ ಬೋರ್ಡು ನೋಡಿ ವೆಂಕಟೇಶ ಸ್ವಲ್ಪ ಉದ್ವೇಗದಲ್ಲಿ ಸಂಭ್ರಮಗೊಂಡ. ಗೇಟಿನ ಒಳಗೆ ದೊಡ್ಡ ಕಟ್ಟಡಗಳನ್ನು ವೆಂಕಟೇಶ ನಿರೀಕ್ಷಿಸಿದ್ದರೆ ಒಂದು ಫರ್ಲಾಂಗು ದೂರ ರಸ್ತೆಯ ಇಕ್ಕೆಲದಲ್ಲಿ ದಟ್ಟವಾದ ಕಾಡಿತ್ತು. ಕೆಲವು ಮರಗಳಲ್ಲಿನ ಹೂವಿನ ಪರಿಮಳ ಘಮ್ಮೆಂದು ಮೂಗಿಗೆ ಬಡಿಯುತ್ತಿತ್ತು. ಒಂದು ಬ್ರಿಟಿಷ್ ಮಾದರಿಯ, ಹಳೆಯ, ಆದರೆ ನೋಡಲು ತುಂಬಾ ಆಕರ್ಷಕವಾಗಿದ್ದ ಕಟ್ಟಡದ ಎದುರು ಬಸ್ಸು ನಿಂತಿತು.

ಬಸ್ಸು ನಿಂತ ಸ್ವಲ್ಪ ದೂರದಲ್ಲಿ ನೀಲಗಿರಿ ಮರಗಳ ನಡುವೆ ಒಂದು ಪುಟ್ಟ ಸರೋವರ, ಸರೋವರದ ಮಧ್ಯದಲ್ಲಿ ನರ್ತಿಸುತ್ತಿದ್ದ ನೃತ್ಯಕಾರಂಜಿ, ಸರೋವರದಲ್ಲಿ ಈಜಾಡುತ್ತಿದ್ದ ಅಪ್ಪಟ ಬಿಳಿಯ ಬಣ್ಣದ ಬಾತುಕೋಳಿಗಳನ್ನು ನೋಡಿ ವೆಂಕಟೇಶ ಇನ್ನಷ್ಟು ವಿಸ್ಮಯಕ್ಕೊಳಗಾದ. ಮೊದಲೇ ಕಂಪನಿಯಿಂದ ದೂರವಾಣಿಯಲ್ಲಿ ತಿಳಿಸಿದಂತೆ ಬಸ್ಸಿಳಿದ ವೆಂಕಟೇಶ ರಿಸೆಪ್ಷನ್ ಕೌಂಟರಿನಲ್ಲಿ ಮಾಹಿತಿ ಪಡೆದು ಅವರು ನೀಡಿದ ಪಾಸ್ ಕಾರ್ಡನ್ನು ಕುತ್ತಿಗೆಗೆ ನೇತು ಹಾಕಿಕೊಂಡು ಕೆಂಚಪ್ಪನವರ ಛೆಂಬರ್‍ಗೆ ಹೋದ. ಕೆಂಚಪ್ಪನವರು ಸಂದರ್ಶನದ ಸಂದರ್ಭದಲ್ಲಿ ಪರಿಚಯವಾಗಿದ್ದರು. ಕೆಂಚಪ್ಪ ಆತನಿಗೆ ಹಸ್ತಲಾಘವ ನೀಡಿ ಮುಗುಳ್ನಗುತ್ತ ಆತನನ್ನು ಕ್ಯಾಂಟೀನಿಗೆ ಕರೆದೊಯ್ದರು.

ಕ್ಯಾಂಟೀನ್ ನೂರಾರು ಜನ ಒಟ್ಟಿಗೆ ಕುಳಿತು ತಿನ್ನಬಹುದಾದ ಬೃಹತ್ ಹೋಟೆಲ್ ಮಾದರಿಯಿತ್ತು. ದೊಡ್ಡ ದೊಡ್ಡ ಪಾತ್ರೆಗಳಲ್ಲಿ ತಿಂಡಿಗಳನ್ನು, ಪ್ರತ್ಯೇಕ ಸ್ಟೀಲ್ ಫಿಲ್ಟರ್‍ಗಳಲ್ಲಿ ಕಾಫಿ ಮತ್ತು ಚಹವನ್ನು ಇಟ್ಟಿದ್ದರು. ಇದರಲ್ಲಿ ಬೇಕಾದಷ್ಟನ್ನು ತೆಗೆದುಕೊಳ್ಳಬಹುದಿತ್ತು. ಮಧ್ಯಾಹ್ನ ಒಂದು ಗಂಟೆಗೆ ಊಟ, ಐದು ಗಂಟೆಗೆ ಪುನಃ ಇಲ್ಲಿ ತಿಂಡಿ ಸಿಗುತ್ತದೆ ಎಂದು ಕೆಂಚಪ್ಪ ತಿಂಡಿ ತಿಂದು ಮರಳುವಾಗ ತಿಳಿಸಿದರು. ತಾನು ಹಿಂದೆ ಕೆಲಸ ಮಾಡಿದ ಕಂಪನಿಗಳಂತೆ ಇಲ್ಲಿ ಕಂಪನಿ ಪ್ರವೇಶಿಸುತ್ತಲೇ ಕೆಲಸವನ್ನು ನೀಡಲಿಲ್ಲ. ಕಂಪನಿಯ ವಿವಿಧ ವಿಭಾಗಗಳನ್ನು ಪರಿಚಯಸಲು, ಅಧಿಕಾರಿಗಳನ್ನು, ಕಾರ್ಮಿಕ ಮುಖಂಡರನ್ನು ಭೇಟಿಯಾಗಲು ಒಂದು ವಾರ ಮೀಸಲಿಟ್ಟಿದ್ದರು. ಕಂಪನಿಯ ಉಪಾಧ್ಯಕ್ಷ ರಾಮ್‍ಕಪೂರ್, ಕಾರ್ಮಿಕ ಸಂಘದ ಅಧ್ಯಕ್ಷ ಗಂಗಾಧರ, ಕಾರ್ಯದರ್ಶಿ ಬಸವರಾಜುನವರನೆಲ್ಲ್ಲ ಕೆಂಚಪ್ಪನವರೇ ವಿವಿಧ ವಿಭಾಗಗಳಿಗೆ ಹೋಗಿ ಪರಿಚಯ ಮಾಡಿಕೊಟ್ಟರು.

ವೆಂಕಟೇಶ ಕೆಲಸಕ್ಕೆ ಸೇರಿ ಹದಿನೈದು ದಿನಗಳಾಗಿತ್ತು ಎಂದು ಕಾಣುತ್ತದೆ. ಸಹೋದ್ಯೋಗಿ ಸುಮಂತನೊಂದಿಗೆ ಮಧ್ಯಾಹ್ನ ಊಟಕ್ಕೆಂದು ಕ್ಯಾಂಟೀನಿಗೆ ಹೊರಟ ವೆಂಕಟೇಶ ಕಂಪನಿಯ ಮುಖ್ಯ ಕಛೇರಿ ಬಳಿ ಕಾರ್ಮಿಕರ ದೊಡ್ಡ ಗುಂಪು ಸೇರಿದ್ದನ್ನು ಕಂಡ. ಕಂಪನಿಯ ಉಪಾಧ್ಯಕ್ಷ ರಾಮ್‍ಕಪೂರ್ ಗೆ ಆ ಗುಂಪು ಧಿಕ್ಕಾರ ಕೂಗುತ್ತಿತ್ತು. ಸುಮಂತ ತನಗೆ ಪರಿಚಯವಿದ್ದ ಕಾರ್ಮಿಕ ದುಗ್ಗಪ್ಪರನ್ನು ಬಳಿಗೆ ಕರೆದು ಏನು ಗಲಾಟೆ ಕೇಳಿದ. “ಅಸೆಂಬ್ಲಿ ಸೆಕ್ಷನ್‍ನಲ್ಲಿದ್ದ ಗಣಪತಿಯನ್ನು ಮ್ಯಾನೇಜ್‍ಮೆಂಟ್ ಕೆಲಸದಿಂದ ತೆಗೆದಿದೆಯಂತೆ ಸಾರ್, ಆತನನ್ನು ವಾಪಸು ಕೆಲಸಕ್ಕೆ ತಗೋಳ್ಳಬೇಕು ಅಂತ ಸ್ಟೈಕ್ ಮಾಡ್ತಿದಾರೆ” ಎಂದರು ದುಗ್ಗಪ್ಪ.

“ಗಣಪತಿ ಬಗ್ಗೆ ತುಂಬಾ ಕಂಪ್ಲೆಂಟ್ ಇದೆಯಂತೆ ಹೌದಾ” ಸುಮಂತನ ಪ್ರಶ್ನೆಗೆ ದುಗ್ಗಪ್ಪ “ಏನೋ ಗೊತ್ತಿಲ್ಲ ಸಾರ್, ಎಲ್ಲಾ ಲೀಡರ್ಸ್ ದರ್ಬಾರ್” ಎನ್ನುತ್ತಾ ಹೋದರು. ಮುಂದಿನ ಎರಡು ದಿನಗಳ ಕಾಲ ಕಂಪನಿ ಬಂದ್‍ಗೆ ಕಾರ್ಮಿಕ ನಾಯಕರು ಕರೆಕೊಟ್ಟರು. ಕಂಪನಿಯಲ್ಲಿದ್ದ ಒಂದು ಸಾವಿರ ಕಾರ್ಮಿಕರ ಬಂದ್‍ಗೆ ಆಡಳಿತ ಮಂಡಳಿ ಬಗ್ಗಲೇಬೇಕಾಯಿತು. ಗಣಪತಿಯ ಅಮಾನತ್ತು ರದ್ದಾಯಿತು.

ಈ ದಿನಗಳಲ್ಲೇ ಸುಮಂತ ‘ಈ ಕಂಪನಿಗಿಂತ ಕಿಪ್ರ್ಟೋ ಸಾಪ್ಟ್ ವೇರ್ ಕಂಪನಿಯಲ್ಲಿ ಶೇಕಡಾ ನಲವತ್ತರಷ್ಟು ಹೆಚ್ಚು ಸಂಬಳ ಕೊಡ್ತಾರೆಂದು’ ರಾಜೀನಾಮೆ ನೀಡಿದ. “ಇಲ್ಲಿ ನಲವತ್ತು ಸಾವಿರ ಸಂಬಳ ಇದೆ. ಬಸ್ಸು ಸೌಕರ್ಯ, ಕ್ಯಾಂಟೀನ್ ಸೌಲಭ್ಯ, ವಾರಕ್ಕೆರಡು ದಿನ ರಜೆ ಎಲ್ಲವನ್ನೂ ಕಂಪನಿ ಕೊಟ್ಟಿದೆ. ನೀನೀಗ ಈ ಕಂಪನಿಗೆ ದ್ರೋಹ ಮಾಡ್ತೀದಿ ಅನ್ನಿಸಲ್ವಾ” ಎಂದು ವೆಂಕಟೇಶ ಕೇಳಿದ. “ನೀನೊಬ್ಬ ಹಳ್ಳಿಮುಕ್ಕ. ನಮ್ಮ ಕೆರೀರ್ ನಮ್ಗೆ ಮುಖ್ಯ ಅಷ್ಟೆ” ಎಂದು ಸುಮಂತ ಕಂಪನಿಗೆ ಬೆನ್ನು ತಿರುಗಿಸಿ ಹೊರಟ. ವೆಂಕಟೇಶ ಕಂಪನಿ ಸೇರಿದ ಎರಡು ವರ್ಷಗಳ ಆನಂತರದಲ್ಲಿ ನಿರೀಕ್ಷಿಸಲಾಗದ ಬದಲಾವಣೆಗಳಾಗ ತೊಡಗಿದವು.

ಕಾರ್ಮಿಕರನ್ನು ನಿಯಂತ್ರಿಸಲು ಆಡಳಿತ ಮಂಡಳಿ ಹೊಸ ಹೊಸ ಕ್ರಮಕ್ಕೆ ಮುಂದಾಯಿತು. ‘ಕಾರ್ಮಿಕರು ಕ್ಯಾಂಟೀನಿನಲ್ಲಿ ಸ್ವತಃ ಆಹಾರವನ್ನು ಬಡಿಸಿಕೊಳ್ಳಬಾರದು, ಕ್ಯಾಂಟೀನಿನ ಸಿಬ್ಬಂದಿ ಅವರಿಗೆ ಬಡಿಸುತ್ತಾರೆ’ ಎಂಬ ನೋಟಿಸನ್ನು ಜಾರಿಗೊಳಿಸಲು ವೆಂಕಟೇಶನಿಗೆ ತಿಳಿಸಿತು. ಆದರೆ ಸ್ಟಾಫ್‍ನವರು ಹಿಂದಿನಂತೆ ತಾವೇ ಆಹಾರ ಬಡಿಸಿಕೊಳ್ಳುವ ವ್ಯವಸ್ಥೆ ಮುಂದುವರೆಯಿತು. ಕಂಪನಿಯಿಂದ ಬೆಲೆಬಾಳುವ ಡ್ರಿಲ್ ಚಕ್ಕುಗಳು ಕಾಣಿಯಾಗಿವೆಯೆಂದು ಪ್ರತಿಯೊಬ್ಬ ಕಾರ್ಮಿಕನನ್ನು ಬೆಳಿಗ್ಗೆ ಸಂಜೆ ಸೆಕ್ಯುರಿಟಿಯವರು ಪರೀಕ್ಷಿಸುವ ಹೊಸ ಕ್ರಮ ಆರಂಭವಾಯಿತು.

ಕಂಪನಿಗೆ ನಷ್ಟವಾಗುತ್ತಿದೆ ಎಂಬ ಕಾರಣವೊಡ್ಡಿ ಅನೇಕ ಘಟಕಗಳನ್ನು ಮುಚ್ಚಿದ್ದರಿಂದ ಸುಮಾರು ಇನ್ನೂರು ಕಾರ್ಮಿಕರಿಗೆ ಕೆಲಸವೇ ಇಲ್ಲದಾಯಿತು. ಆರು ತಿಂಗಳ ಕಾಲ ಇವರಿಗೆ ಅರ್ಧ ಸಂಬಳ ಮಾತ್ರ ನೀಡಲಾಯಿತು. ನಂತರ ಸ್ವಯಂ ನಿವೃತ್ತಿ ಯೋಜನೆ ತಂದು ಅವರನ್ನು ಕೆಲಸದಿಂದ ಬಿಡುಗಡೆಗೊಳಿಸಲಾಯಿತು. ತಾವು ಕೆಲಸ ನಿರ್ವಹಿಸುವ ಘಟಕಗಳು ಮುಚ್ಚುವ ಭೀತಿಯಲ್ಲಿ ನೂರಾರು ಕಾರ್ಮಿಕರು ಸ್ವಯಂ ನಿವೃತ್ತಿ ಪಡೆದರು. ಈಗ ಕಾರ್ಮಿಕರನ್ನು ರಕ್ಷಿಸುವ ಕಾನೂನುಗಳು ದುರ್ಬಲಗೊಡಿದ್ದವು. ಸಾವಿರ ಮಂದಿ ಕಾರ್ಮಿಕರು ಕೆಲಸ ಮಾಡುವ ಕೈಗಾರಿಖೆಯನ್ನು ಆಡಳಿತ ಮಂಡಳಿ ಬಯಸಿದರೆ ಯಾವ ಕ್ಷಣ ಬೇಕಾದರೂ ಮುಚ್ಚಬಹುದಾದ ಕಾನೂನು ಉದ್ಯಮಪತಿಗಳ ಒತ್ತಡದಿಂದ ಸರ್ಕಾರ ತಂದಿತ್ತು. ಹಿಂದೆಲ್ಲ ಚಿಕ್ಕ ಪುಟ್ಟ ಸಂಗತಿಗೂ ಮುಷ್ಕರ ಹೂಡುತ್ತಿದ್ದ ಕಾರ್ಮಿಕ ಸಂಘಟನೆಗಳು ತಮ್ಮ ನ್ಯಾಯಬದ್ದ ಬೇಡಿಕೆಗಳಿಗಾಗಿಯೂ ಆಗ್ರಹಿಸಲಾರದ ಅಸಹಾಯಕತೆಯಲ್ಲಿದ್ದವು.

ಮುಂದಿನ ಒಂದೆರಡು ವರ್ಷಗಳಲ್ಲಿ ಕಾರ್ಮಿಕರಲ್ಲಿ ಎರಡು ವಿಭಾಗವಾಗಿತ್ತು. ಈಗ ಖಾಯಂ ಕಾರ್ಮಿಕರ ಸಂಖ್ಯೆ ಇನ್ನೂರಕ್ಕಿಳಿದಿತ್ತು. ಇದರೊಂದಿಗೆ ನಾಲ್ಕು ನೂರರಷ್ಟು ಗುತ್ತಿಗೆ ಕಾರ್ಮಿಕರು ಕೆಲಸಕ್ಕೆ ಬರುತ್ತಿದ್ದರು. ಈ ಗುತ್ತಿಗೆ ಕಾರ್ಮಿಕರಿಗೆ ಕಂಪನಿ ಯಾವ ರೀತಿಯಲ್ಲೂ ಹೋಣೆಗಾರನಾಗಿದ್ದಿಲ್ಲ. ಕಂಟ್ರಾಕ್ಟುದಾರರಾದ ನಾರಾಯಣ ಕುಟ್ಟಿ, ಸೋಮಶೇಖರ ರೆಡ್ಡಿಯಂತವರು ಉತ್ತರ ಕರ್ನಾಟಕದ ಬರದಿಂದ ಕಂಗೆಟ್ಟು ಬೆಂಗಳೂರಿಗೆ ಬಂದ ಸಂತ್ರಸ್ತರನ್ನು ಗುತ್ತಿಗೆ ಕಾರ್ಮಿಕರಾಗಿ ಕಂಪನಿಗೆ ತೆಗೆದುಕೊಂಡು ಬರುತ್ತಿದ್ದರು. ಕಂಪನಿ ಒಬ್ಬ ಗುತ್ತಿಗೆ ಕಾರ್ಮಿಕನಿಗೆ ತಿಂಗಳೊಂದಕ್ಕೆ ಮೂರು ಸಾವಿರದಂತೆ ಕೂಲಿ ನೀಡಿದರೆ ಕಂಟ್ರಾಕ್ಟುದಾರರು ಅದರಲ್ಲಿ ಸಾವಿರದ ಇನ್ನೂರು ರೂಪಾಯಿಗಳನ್ನು ಮಾತ್ರ ಒಬ್ಬ ಕಾರ್ಮಿಕನಿಗೆ ಕೊಡುತ್ತಿದ್ದರು. ಇವರಿಗೆ ಕಂಪನಿಯ ಬಸ್ ಸೌಕರ್ಯವಿರಲಿಲ್ಲ. ಕ್ಯಾಂಟಿನಿಗೆ ಪ್ರವೇಶವೇ ಇರಲಿಲ್ಲ. ಕಂಪನಿಯ ಆದಾಯ ಏರುತ್ತಿತ್ತು. ಸ್ಟಾಫ್‍ನವರಿಗೆ ಮತ್ತು ಖಾಯಂ ಕಾರ್ಮಿಕರಿಗೆ ಪ್ರತಿವರ್ಷ ಸಂಬಳ ಏರಿಕೆಯಾಗುತ್ತಿತ್ತು.

ಸ್ಟಾಫ್ ನವರು ಕಾರ್ಮಿಕರನ್ನು ಅಸ್ಪೃಶ್ಯರಂತೆ ಕಾಣುತ್ತಿದ್ದರು. ಕೀಳಿರಿಮೆಯಿಂದ ನರಳುತ್ತಿದ್ದರು. ಕಾರ್ಮಿಕರು ಅವಕಾಶ ಸಿಕ್ಕಾಗಲೆಲ್ಲಾ ಗುತ್ತಿಗೆ ಕಾರ್ಮಿಕರ ಮೇಲೆ ತಮ್ಮ ದರ್ಪ ತೋರುತ್ತಿದ್ದರು. ಕ್ಯಾಂಟೀನಿನಲ್ಲಿ ಪ್ರತಿ ಗುರುವಾರ ಮಾಂಸಹಾರ ಮತ್ತು ಸಿಹಿತಿಂಡಿ ಕೊಡುವ ಸೌಲಭ್ಯವಿತ್ತು. ಎಲ್ಲೆಲ್ಲೂ ಹರಡುತ್ತಿದ್ದ ಎಚ್‍ಒನ್‍ಎನ್‍ಒನ್ ಖಾಯಿಲೆಯ ಕಾರಣ ನೀಡಿ ಆಡಳಿತ ಮಂಡಳಿ ಮಾಂಸಹಾರವನ್ನು ನಿಲ್ಲಿಸುವಂತೆ ಹೇಳಿತು. ಕಾರ್ಮಿಕರಲ್ಲಿ ನೂರಕ್ಕೆ ತೊಂಬತ್ತು ಜನ ಮಾಂಸಹಾರಿಗಳಿದ್ದರು. ಈ ರೀತಿ ಮಾಂಸಹಾರ ನಿಲ್ಲಿಸುವುದು ತುಂಬಾ ಅನ್ಯಾಯದ್ದೆಂದು ವೆಂಕಟೇಶನಿಗನಿಸಿತು. ಕೆಂಚಪ್ಪನವರ ಬಳಿ ವೆಂಕಟೇಶ ವಾದಿಸಿದ. ‘ನಾನೂ, ನೀವು ಏನೂ ಮಾಡಲು ಸಾಧ್ಯವಿಲ್ಲ, ಈ ನೋಟಿಸನ್ನು ಟೈಪ್ ಮಾಡಿಸಿ ಬೋರ್ಡಿಗೆ ಹಾಕಿಸಿ’ ಎಂದು ಕೆಂಚಪ್ಪ ಹೇಳಿದರೂ ವೆಂಕಟೇಶ ಮೌನವಾಗುಳಿದ. ಕೊನೆಗೆ ಕೆಂಚಪ್ಪನವರೇ ಟೈಪ್ ಮಾಡಿಸಿ ನೋಟಿಸ್ ಅಂಟಿಸಿದರು.

ವೆಂಕಟೇಶ ಮತ್ತು ಕೆಂಚಪ್ಪ ಈ ಕುರಿತು ಚರ್ಚೆ ನಡೆಸುತ್ತಿರುವಾಗ ಗಂಗಾಧರ ಮತ್ತು ಬಸವರಾಜ ಕಾರ್ಮಿಕರ ಸಂಬಳದ ಪರಿಷ್ಕರಣೆ ಬಗೆಗಿನ ಸಭೆಯ ದಿನಾಂಕ ತಿಳಿಯಲು ಇವರ ಛೇಂಬರ್‍ಗೆ ಬಂದರು. ಆಡಳಿತ ಮಂಡಳಿಯ ನಿರ್ಧಾರಗಳನ್ನು ಕಾರ್ಮಿಕ ನಾಯಕರಲ್ಲಿ ಚರ್ಚಿಸಬಾರದೆನ್ನುವುದು ಎಚ್‍ಆರ್‍ಡಿ ವಿಭಾಗದವರಿಗೆ ಅಲಿಖಿತ ನಿಯಮವಾಗಿತ್ತು. ಆದರೂ ವೆಂಕಟೇಶ ಗಂಗಾಧರ ಮತ್ತು ಬಸವರಾಜು ಬಳಿ ತನ್ನ ಅಭಿಪ್ರಾಯವನ್ನು ತಿಳಿಸಿದ.

ಅವರು ಈ ವಿಚಾರ ಚರ್ಚಿಸುತ್ತೇವೆಂದು ಉಪಾಧ್ಯಕ್ಷ ಕಪೂರ್ಗೆ ಛೆಂಬರ್‍ಗೆ ಹೊರಟರು. ಮಾರನೇ ದಿನ ವೆಂಕಟೇಶನನ್ನು ತಮ್ಮ ಛೆಂಬರಿಗೆ ಕರೆಸಿಕೊಂಡ ಕಪೂರ್ ‘ಏನು ಯೂನಿಯನ್ನಿನವರ ಪರ ವಹಿಸುತ್ತೀರಾ’ ಎಂದು ಕೂಗಾಡಿದರು. ವೆಂಕಟೇಶನಿಗೆ ಮಾತ್ರ ತಾನು ಆತ್ಮಸಾಕ್ಷಿಯಂತೆ ನಡೆದುಕೊಂಡೆ ಎಂದೆನಿಸಿತು. ಸ್ವಲ್ಪ ದಿನಗಳ ನಂತರ ಕೆಂಚಪ್ಪ ವೆಂಕಟೇಶನ ಬಳಿ ಮಾತಾಡುತ್ತ ಕಾರ್ಮಿಕ ನಾಯಕರು ಉಪಾಧ್ಯಕ್ಷರ ಛೆಂಬರಿಗೆ ಮಾಂಸಹಾರ ಕುರಿತ ಮಾತುಕತೆಗೆ ಹೋದಾಗ ಬಸವರಾಜು ಮಾಂಸಹಾರ ನಿಲ್ಲಿಸುವ ಪರವಾಗಿಯೇ ಮಾತನಾಡಿದ್ದನ್ನು ತಿಳಿಸಿ ಅರ್ಥಗರ್ಭಿತವಾಗಿ ನಕ್ಕರು.

ವೆಂಕಟೇಶ ಆಡಳಿತವರ್ಗದ ಕೆಂಗಣ್ಣಿ ಗುರಿಯಾಗಬೇಕಾದ ಇನ್ನೊಂದು ಪ್ರಸಂಗ ಜರುಗಿತು. ಮಕ್ಕಳು ಮಾತೃಭಾಷೆಯಲ್ಲಿಯೇ ಕಲಿತರೆ ಸುಲಭವಾಗಿ ಎಲ್ಲಾ ವಿಷಯಗಳನ್ನು ಗ್ರಹಿಸುತ್ತವೆ ಎಂದು ತಿಳಿದಿದ್ದ ವೆಂಕಟೇಶ ಚೇತನಾಳನ್ನು ಸೇರಿಸಲು ತಾನಿದ್ದ ಬಡಾವಣೆಯ ಸುತ್ತಮುತ್ತಲು ಸರ್ಕಾರಿ ಶಾಲೆಗಾಗಿ ಹುಡುಕಿದ್ದ. ಜಮುನ ಚೇತನಾಳನ್ನು ಖಾಸಗಿ ಶಾಲೆಗೆ ಸೇರಿಸಬೇಕೆಂದೂ, ಮಗಳ ಭವಿಷ್ಯದೊಂದಿಗೆ ಚೆಲ್ಲಾಟವಾಡಬೇಡ ಎಂದೂ ವೆಂಕಟೇಶನೊಂದಿಗೆ ಜಗಳವಾಡಿದ್ದಳು. ವೆಂಕಟೇಶ ತನ್ನ ನಿಲುವಿಗೆ ಅಂಟಿಕೊಂಡಾಗ ಅತ್ತೂ ಕರೆದು ಅವನನ್ನು ಬಗ್ಗಿಸಲು ನೋಡಿದ್ದಳು. ಇದಕ್ಕೆ ಸರಿಯಾಗಿ ಇವರು ಭೇಟಿ ಕೊಟ್ಟ ನಗರದ ಸರ್ಕಾರಿ ಶಾಲೆಗಳೆಲ್ಲ ನಿರ್ಲಕ್ಷಕ್ಕೊಳಗಾಗಿ ಕೊಳೆತು ನಾರುತ್ತಿದ್ದವು. ತನ್ನೂರಿನ ಚಂದದ ಸರ್ಕಾರಿ ಶಾಲೆಯ ಗುಂಗಿನಲ್ಲಿದ್ದ ವೆಂಕಟೇಶನಿಗೆ ಭ್ರಮನಿರಶನವಾಗಿತ್ತು. ಒಂದಷ್ಟು ಸ್ಲಮ್ಮಿನ ಮಕ್ಕಳು ಮಾತ್ರ ಸರ್ಕಾರಿ ಶಾಲೆಯಲ್ಲಿ ಅನಿವಾರ್ಯವಾಗಿ ಕುಳಿತ್ತಿದ್ದವು. ಕೊನೆಗೂ ಅಲೆದಲೆದು ಕನ್ನಡ ಮಾಧ್ಯಮವಿದ್ಧ ಖಾಸಗಿ ಶಾಲೆಗೆ ಚೇತನಾಳನ್ನು ಸೇರಿಸಿದ್ದ.

ಬೆಳಿಗ್ಗೆ ಬಸ್ಸಿನಲ್ಲಿ ಕಂಪನಿಗೆ ಹೋಗುವಾಗ ನೌಕರರೆಲ್ಲ ಇಂಗ್ಲೀಷ್ ಪತ್ರಿಕೆಗಳನ್ನು ಹಿಡಿದುಕೊಳ್ಳುವುದನ್ನು ನೋಡಿ ಬೇಕೆಂತಲೇ ವೆಂಕಟೇಶ ಕನ್ನಡ ಪತ್ರಿಕೆಯನ್ನು ಎಲ್ಲರಿಗೂ ಸವಾಲೆಸೆಯುವಂತೆ ಪೂರ್ತಿ ಹರವಿಕೊಂಡು ಓದುತ್ತಿದ್ದ. ವೆಂಕಟೇಶ ಕಾರ್ಮಿಕರನ್ನು ಸ್ಟಾಫ್‍ನವರನ್ನು ಮಾತನಾಡಿಸುವಾಗಲೆಲ್ಲ ಅವರ ಮಕ್ಕಳ ವಿದ್ಯಾಭ್ಯಾಸದ ಬಗ್ಗೆಯೂ ವಿಚಾರಿಸುತ್ತಿದ್ದ. ಯಾರ ಮಕ್ಕಳೂ ಸರ್ಕಾರಿ ಶಾಲೆಗಾಗಲೀ, ಖಾಸಗಿ ಶಾಲೆಗೆ ಸೇರಿದರೂ ಕನ್ನಡ ಮಾಧ್ಯಮಕ್ಕಾಗಲೀ ಹೋಗುತ್ತಿರಲಿಲ್ಲ ಕಂಪನಿಯಲ್ಲಿ ಕನ್ನಡ ರಾಜ್ಯೋತ್ಸವವನ್ನು ಅದ್ದೂರಿಯಾಗಿ ಆಚರಿಸಲಾಗುತ್ತಿತ್ತು. ಇದನ್ನು ವ್ಯವಸ್ಥೆ ಮಾಡಿ ಆಚರಿಸುತ್ತಿದ್ದುದು ಕಾರ್ಮಿಕ ಸಂಘದವರೇ. ರಾಜ್ಯೋತ್ಸವ ಆಚರಿಸಲು ಕಂಪನಿ ಐವತ್ತು ಸಾವಿರ ರೂಪಾಯಿಗಳನ್ನು ಕಾರ್ಮಿಕ ಸಂಘಕ್ಕೆ ಕೊಡುತ್ತಿತ್ತು. ಕಾರ್ಮಿಕ ಸಂಘ ಪ್ರತಿವರ್ಷ ರಾಜ್ಯೋತ್ಸವಕ್ಕೆ ಒಬ್ಬ ಚಿತ್ರನಟನನ್ನು ಮತ್ತು ಒಬ್ಬ ಸಾಹಿತಿಯನ್ನು ಸಮಾರಂಭಕ್ಕೆ ಕರೆಸಿ ಸನ್ಮಾನಿಸುತಿತ್ತು. ಅಂದು ಎಲ್ಲರಿಗೂ ಅರ್ಧ ಕೇಜಿಯಷ್ಟು ಸಿಹಿ ತಿಂಡಿಯನ್ನು ಹಂಚಲಾಗುತ್ತಿತ್ತು.

ಗಂಗಾಧರ ಮತ್ತು ಬಸವರಾಜು ಬಳಿ ವೆಂಕಟೇಶ ರಾಜ್ಯೋತ್ಸವದಲ್ಲಿ ಸ್ವೀಟ್ ಬದಲಿಗೆ ಕುವೆಂಪುದೆಂದೊ, ಕಾರಂತರದ್ದೊ ಪುಸ್ತಕವೊಂದನ್ನು ಎಲ್ಲರಿಗೂ ಕೊಡಬಹುದಲ್ಲ ಎಂಬ ಸಲಹೆಯನ್ನು ಮುಂದಿಟ್ಟ. ಇನ್ನೂ ಹಣ ಉಳಿದರೆ ಒಂದಷ್ಟು ಪುಸ್ತಕಗಳನ್ನು ತಂದು ಕಂಪನಿಯ ಯಾವುದಾದರೂ ಖಾಲಿ ರೂಮಿನಲ್ಲಿ ಲೈಬ್ರರಿ ಆರಂಭ ಮಾಡಬಹುದಲ್ಲ ಎಂಬ ತನ್ನ ಆಲೋಚನೆಯನ್ನು ತಿಳಿಸಿದ. “ಒಳ್ಳೆ ಐಡಿಯಾ ಸಾರ್, ಕಪೂರ್ ಸಾರ್ ಬಳಿ ಮಾತಾಡ್ತಿವಿ” ಎಂದು ಎದ್ದು ಹೋದರು.

ಸಂಜೆ ಕಾಫಿ ಕುಡಿಯಲು ಕ್ಯಾಂಟೀನಿಗೆ ಹೋಗುವಾಗ ಸಿಕ್ಕ ಗಂಗಾಧರ ಸ್ವೀಟ್ ಬದಲಿಗೆ ಪುಸ್ತಕ ಕೊಡುವ ಬಗ್ಗೆ ಅನೇಕ ಕಾರ್ಮಿಕರೇ ತಕರಾರು ತೆಗೆದರೆಂದೂ ಆದರೆ ಕಪೂರ್ ಮಾತ್ರ ನಮ್ಮ ಸಲಹೆಯಿಂದ ಖುಷಿಗೊಂಡರೆಂದೂ ತಿಳಿಸಿದ. ಎರಡು ದಿನಗಳ ನಂತರ ಉಪಾಧ್ಯಕ್ಷರ ಛೇಂಬರಿನಿಂದ ವೆಂಕಟೇಶನಿಗೆ ಕರೆಬಂತು “ಏನ್ರೀ ಯೂನಿಯನ್ ಸ್ಟ್ರಾಂಗ್ ಮಾಡ್ತಿದೀರಾ, ಲೈಬ್ರರಿ ಕಟ್ಟಿಸ್ತಿದೀರಂತೆ” ಎಂದು ವ್ಯಂಗ್ಯವಾಗಿ ಮಾತನಾಡಿ “ನೀವು ಮ್ಯಾನೇಜ್ ಮೆಂಟ್ ಪ್ರತಿನಿಧಿ. ಯೂನಿಯನ್ನಿನವರನ್ನು ಹೆಚ್ಚು ಹಚ್ಚಿಕೊಳ್ಳಬೇಡಿ” ಎಂದು ಎಚ್ಚರಿಸಿ ಕಳಿಸಿದರು.

ಸದಾ ಏನಾದರೊಂದು ಜೋಕ್ ಮಾಡುತ್ತ ನಗುನಗುತ್ತಿದ್ದ ಗಂಡ ಇತ್ತೀಚೆಗೆ ಗಂಭೀರವಾಗುತ್ತಿರುವುದನ್ನು ಜಮುನ ಗಮನಿಸಿದಳು. ಕಂಪನಿ ಸೇರಿದ ಆರಂಭದಲ್ಲಿ ಕ್ಯಾಂಟೀನಿನ ಊಟದ ಬಗ್ಗೆ ವರ್ಣಿಸುತ್ತಿದ್ದ ವೆಂಕಟೇಶ ಈಗ ಮನೆಯಿಂದಲೇ ಬುತ್ತಿ ಕಟ್ಟಿಕೊಂಡು ಹೋಗಲಾರಂಭಿಸಿದ್ದು ಆಕೆಗೆ ಅಚ್ಚರಿ ತಂದಿತ್ತು. ತೀರ್ಥಹಳ್ಳಿಯಿಂದ ನಡೆದು ನಡೆದು ವೆಂಕಟೇಶನ ಮೈ ಬಿಸಿಯಾಗಿತ್ತು. ಬೆವರು ಚಿಗುರೊಡೆಯುತ್ತಿತ್ತು. ತುಂಬ ಸೆಕೆ ಎನಿಸಿ ತಲೆಗೆ ಕಟ್ಟಿದ್ದ ಮಪ್ಲರ್ ಬಿಚ್ಚಿದವನಿಗೆ ತಾನೀಗ ಕೊಪ್ಪಲು ಸುಬ್ರಾಯ ಭಟ್ಟರ ಗದ್ದೆಯ ಬುಡದಲ್ಲಿದ್ದೇನೆ ಎಂದು ಅಚ್ಚರಿಗೊಂಡ. ಸಮಾಜವಾದಿ ಚಳುವಳಿಯಲ್ಲಿ ಸುಬ್ರಾಯ ಭಟ್ಟರು ತಮ್ಮ ನಾಲ್ಕುನೂರು ಎಕರೆ ಜಮೀನನ್ನು ಸ್ವತಃ ಗೇಣಿದಾರರಿಗೆ ಬಿಟ್ಟುಕೊಟ್ಟಿದ್ದರು ಎಂಬುದನ್ನು ತಿಳಿದಾಗ ವೆಂಕಟೇಶನಿಗೆ ನಂಬಲು ಸಾಧ್ಯವಾಗಿರಲಿಲ್ಲ. ಈಗ ಅವರು ತಮಗೆ ಅಗತ್ಯವಾದ ಎರಡು ಎಕರೆ ಜಮೀನನ್ನು ಮಾತ್ರ ಇಟ್ಟುಕೊಂಡಿದ್ದರು.

ಸೂರ್ಯ ಬರುತ್ತಿರುವ ಸೂಚನೆಯಂತೆ ಕೊಪ್ಪಲುವಿನ ಪೂರ್ವದ ಆಗಸ ರಂಗೇರಿತ್ತು. ಸುಬ್ರಾಯ ಭಟ್ಟರ ಗದ್ದೆ ಹಕ್ಕಲು ಚಕ್ರ ಡ್ಯಾಮಿನಿಂದಾಗಿ ಮುಳುಗಡೆಯಾದ ತಮ್ಮ ಜಮೀನಿನಂತೆಯೇ ಕಂಡು ವೆಂಕಟೇಶ ಆರ್ದ್ರಗೊಂಡ. ಚಕ್ರ ಡ್ಯಾಮಿನಿಂದಾಗಿ ಮುಳುಗಡೆಯಾದ ತಮ್ಮ ನಾಲ್ಕೆಕೆರೆ ಜಮೀನಿಗೆ ರಂಗಪ್ಪನವರ ಬಳಿ ಯಾವ ದಾಖಲಾತಿಯೂ ಇರಲಿಲ್ಲ. ಆದ್ದರಿಂದ ಸರ್ಕಾರದಿಂದ ಪರಿಹಾರವೂ ದೊರಕಲಿಲ್ಲ. ಆದರೂ ರಂಗಪ್ಪನವರ ಎಡಬಿಡದ ಹೋರಟದಿಂದ ಕೈಮರದಲ್ಲಿದ್ದ ಎರಡೆಕೆರೆ ಸರ್ಕಾರಿ ದರ್ಖಾಸ್ತು ಜಾಗ ಅವರಿಗೆ ಮಂಜೂರಾಯಿತು. ಕೈಮರದ ಗೋಪಾಲಗೌಡರು, ನಾರಾಯಣಭಟ್ಟರ ಜಮೀನುಗಳಲ್ಲಿ ಕೂಲಿ ಕೆಲಸ ಮಾಡುತ್ತಲೇ ರಂಗಪ್ಪ ದರ್ಖಾಸ್ತು ಜಾಗದೊಳಗಿದ್ದ ಗಿಡಗಂಟೆಗಳನ್ನು ಕಿತ್ತು ಅದನ್ನು ವ್ಯವಸಾಯಕ್ಕೆ ಅಣಿಗೊಳಿಸಿದರು. ವೆಂಕಟೇಶ ಆಗಿನ್ನು ಕಾಲೇಜಿಗೆ ಹೋಗುತ್ತಿದ್ದ. ರಜಾ ದಿನಗಳಲ್ಲಿ ಮತ್ತು ಪ್ರತಿದಿನ ಕಾಲೇಜಿನಿಂದ ಬಂದು ಗದ್ದೆ ಕೆಲಸದಲ್ಲಿ ತೊಡಗಿರುತ್ತಿದ್ದ ಅಪ್ಪ ಅಮ್ಮರೊಂದಿಗೆ ಸೇರಿಕೊಳ್ಳುತ್ತಿದ್ದ. ಕ್ರಮೇಣ ಆತನಿಗೆ ಗದ್ದೆಕೆಲಸ ಒಂದು ಗೀಳಿನ ತರಹ ಅಂಟಿಕೊಂಡಿತ್ತು. ಗದ್ದೆಯಲ್ಲಿ ಹೂಟಿ ಮಾಡುವಾಗ ತರಕಾರಿಗಳಿಗೆ ಮಡಿ ಮಾಡಿ ನೀರು ಉಣಿಸುವಾಗ, ಗಿಡಗಳ ಆರೈಕೆ ಮಾಡುವಾಗಿನ ಕ್ಷಣಗಳು ಆತನನ್ನು ಉಲ್ಲಾಸಗೊಳಿಸುತ್ತಿದ್ದವು. ಸೂರ್ಯ ಮುಳುಗಿದ ನಂತರವೂ ಗದ್ದೆ ಕೆಲಸದಲ್ಲಿ ತೊಡಗಿರುತ್ತಿದ್ದ ಆತನನ್ನು ‘ಕತ್ತಲಾದ ಮೇಲೆ ಹಾವು ಪಾವು ಓಡಾಡುತ್ತವೆ’ ಎಂದು ಅಪ್ಪನೇ ಎಚ್ಚರಿಸಿ ಮನೆಗೆ ಕರೆದುಕೊಂಡು ಬರುತ್ತಿದ್ದರು.

ಇಬ್ಬಿಬ್ಬರು ಮಕ್ಕಳನ್ನು ಹತ್ತಿರದಲ್ಲಿಟ್ಟುಕೊಂಡು ಓದಿಸುವುದು ಕಷ್ಟವೆಂದು ಬಗೆದ ರಂಗಪ್ಪನವರು ಕಿರಿಯ ಮಗ ಮಂಜುನಾಥನನ್ನು ಆತ ಮೂರನೇ ತರಗತಿಯಲ್ಲಿದ್ದಾಗಲೇ ಊರ ಶಾಲೆಯನ್ನು ಬಿಡಿಸಿ ತೀರ್ಥಹಳ್ಳಿಯ ಸರ್ಕಾರಿ ವಿದ್ಯಾರ್ಥಿನಿಲಯಕ್ಕೆ ಸೇರಿಸಿದ್ದರು. ಮಂಜುನಾಥ ಎಸ್ಸೆಸ್ಸ್ಸಲ್ಸಿಯಲ್ಲಿ ಅನುತ್ತಿರ್ಣವಾಗಿ ಮನೆಗೆ ಮರಳಿದ್ದ. ಅಪ್ಪನಂತೆಯೇ ಕರೆ ಬಂದಾಗ ಬೇರೆಯವರ ಗದ್ದೆ ತೋಟಗಳಲ್ಲಿ ಕೆಲಸ ಮಾಡುತ್ತಾ ಉಳಿದಂತೆ ಅಪ್ಪನ ಜತೆ ಗದ್ದೆ ಕೆಲಸದಲ್ಲಿ ತೊಡಗುತ್ತಿದ್ದ. ವೆಂಕಟೇಶ ಬಹುರಾಷ್ಟ್ರೀಯ ಕಂಪನಿ ಸೇರಿದ ಮೇಲೆ ಅವರ ಗದ್ದೆಗೆ ಹೊಂದಿಕೊಂಡಿದ್ದ ರಾಮಯ್ಯನವರ ಇನ್ನೂ ನಾಲ್ಕೆಕೆರೆ ಗದ್ದೆಯನ್ನು ಕೊಂಡು ಅದರಲ್ಲಿ ಎರಡೆಕೆರೆಗೆ ಅಡಿಕೆ ಸಸಿ ನೆಟ್ಟರು. ಮಂಜುನಾಥನ ಮದುವೆ ಕೊಪ್ಪದ ಸೋಮನಾಥರ ಮಗಳು ಸುಮಾಳೊಂದಿಗೆ ಆದ ಮೇಲೆ ಸೋಮನಾಥರೂ ತೋಟದ ಅಭಿವೃದ್ದಿಗೆಂದು ಆಗಾಗ ಒಂದಷ್ಟು ಹಣ ಕೊಡುತ್ತಿದ್ದರು. ಇದ್ಯಾಕೋ ತಮ್ಮ ಮಗಳು ಅಳಿಯನಿಗೆ ನಮ್ಮ ಆಸ್ತಿಯ ಮೇಲೆ ಅಧಿಕಾರ ಸ್ಥಾಪಿಸುವ ಸಂಚಾಗಿ ರಂಗಪ್ಪನವರಿಗೆ ಆತಂಕ ತಂದಿತ್ತು.

ವೆಂಕಟೇಶ ಊರಬಾಗಿಲನ್ನು ತುಳಿಯುವಾಗ ಬೆಳ್ಳಂಬೆಳಗಾಗಿತ್ತು. ಊರಬಾಗಿಲಲ್ಲಿ ಮೊದಲಿಗೆ ಸಿಗುವುದೇ ಈಶ್ವರ ದೇವಸ್ಥಾನ. ವೆಂಕಟೇಶ ಹೀಗೆ ಬೆಳಬೆಳಿಗ್ಗೆ ಬಂದಾಗ ಯಾವಾಗಲೂ ಕಾಣುವಂತೆ ಸಾವಿತ್ರಕ್ಕ ಈಶ್ವರ ಗುಡಿಯ ಅಂಗಳಕ್ಕೆ ಬಿಂದಿಗೆಯಿಂದ ನೀರು ಸುರುವಿ ಸ್ವಚ್ಚಗೊಳಿಸುತ್ತಿದ್ದಳು. ಐಸಕ್ಕ ಬಾವಿಯಿಂದ ನೀರು ಸೇದಿ ತಂದು ಸಾವಿತ್ರಕ್ಕನಿಗೆ ಕೊಡುತ್ತಿದ್ದಳು. “ಓ ವೆಂಕ್ಟೇಸ ನಡ್ಕಂಡೇ ಬಂದ್ಯೆನೋ, ಒಂಚೂರು ಕಾದಿದ್ರೆ ಬಸ್ಸೆ ಬರ್ತಿತ್ತು” ಎಂದು ವೆಂಕಟೇಶನನ್ನು ನೋಡಿದ ಸಾವಿತ್ರಕ್ಕ ಎಂದಿನ ಕಕ್ಕುಲಾತಿ ತೋರಿದಳು.‘ಹೌದಲ್ಲ ಅಂತೀನಿ’ ಎಂದೂ ಐಸಕ್ಕನೂ ಸಾವಿತ್ರಕ್ಕನ ಮಾತಿಗೆ ತನ್ನ ಅನುಮೋದನೆಯನ್ನು ಸೇರಿಸಿದಳು. ವೆಂಕಟೇಶ ಐಸಕ್ಕನ ಬಳಿ ನೀರು ಕೇಳಿ ಆಕೆ ಬಿಂದಿಗೆಯಿಂದ ಸುರುವುವಾಗ ಬೊಗಸೆಯೊಡ್ಡಿ ಹೊಟ್ಟೆ ತುಂಬುವಷ್ಟು ನೀರು ಕುಡಿದು ಆ ನೀರಿನ ರುಚಿಯನ್ನು ಮೆಲುಕು ಹಾಕಿದ.

‘ನಮ್ ಮೋಣುದೂ ಈ ಸಾರಿ ಡಿಗ್ರಿ ಮುಗೀತದೆ, ನಿಮ್ಮ ಕಂಪನೀಲೆ ಒಂದು ಕೆಲ್ಸ ಕೊಡ್ಸು ಮಾರಾಯ’ ಎಂದು ಐಸಕ್ಕ ಕೊಂಚ ನಗುತ್ತ, ನಗು ಎಲ್ಲಿ ತಾನು ತಮಾಷೆಗೆ ಹೇಳುತ್ತಿದ್ದೇನೆ ಎನಿಸುತ್ತದೊ ಎಂದು ಕ್ಷಣದಲೇ ತನ್ನ ಭಾವವನ್ನು ಗಂಭೀರತೆಗೆ ಬದಲಿಸಿ ಐಸಕ್ಕ ಹೇಳಿದಳು. “ಆಯ್ತು ಮಾರಾಯ್ರೆ, ಸೇರಿಸ್ತಿನಿ, ಒಬ್ನಾದ್ರೂ ಸಾಬಣ್ಣನ್ನು ಕಂಪನಿಗೆ ಸೇರಿಸಿದ ಕೀರ್ತಿ ನನಗೆ ಬರತ್ತೆ” ಎಂದು ನಗುತ್ತಾ ಹೊರಟ.

ವೆಂಕಟೇಶ ಅಲ್ಲಿಂದ ಸಾವಿತ್ರಕ್ಕ, ಐಸಕ್ಕನ ಮನೆ ದಾಟಿ ಗದ್ದೆಹಾಳಿಗೆ ಬಂದು ಬೇಲಿ ದಾಟಿ ಮುಂದುವರೆದ. ಅಮಾಸೆಯ ಜನತಾ ಹಂಚಿನ ಮನೆಯ ಬೇಲಿಗೆ ವಾಲಿಕೊಂಡು ಗೋಪಾಲಗೌಡರು ನಿಂತಿದ್ದರು. “ಹೊ ವೆಂಕ್ಟೇಸ ನಡ್ಕಂಡೇ ಬಂದ್ಯೇನೋ” ಎಂದು ವಾಡಿಕೆಯೆಂಬಂತೆ ಕೇಳಿದರು.

“ಏನಿಲ್ಲಿ?” ಎಂದು ವೆಂಕಟೇಶ ಪ್ರಶ್ನಿಸಿದ್ದಕ್ಕೆ “ಹಾಳ್ ಮುಡೇಗಂಡ್ರು, ಕೊನೆ ತೆಗಿಯಾಕ್ ಬಾ ಅಂದ್ರೆ ಒಳಗೆ ಕುತ್ಕುಂಡ್ ಗುಸ ಗುಸ ಅಂತಿದಾನೆ. ತೋಟ್ದಲ್ ನೋಡ್ದ್ರೆ ಅಡೆಕೆಯಲ್ಲಾ ಹಣ್ಣಾಗಿ ಉದುರ್ತಿವೆ”. ಗೋಪಾಲಗೌಡರು ಅಮಾಸೆಗೆ ಹಿಡಿಶಾಪ ಹಾಕುತ್ತಲೇ ಇದ್ದರು. ಅಮಾಸೆಯ ಮಗ ನಾಲ್ಕನೇ ಕ್ಲಾಸು ಮುಗಿಸಿ ಬೆಂಗಳೂರಿನ ಬಾರು ಸೇರಿದ್ದ. ಉಳಿದ ಕೂಲಿಯಾಳುಗಳ ಮಕ್ಕಳಲ್ಲಿ ಒಂದಿಬ್ಬರು ಓದಿ ಮೇಸ್ಟ್ರಾಗಿದ್ದರು. ಒಂದಷ್ಟು ಜನ ಪೈಂಟಿಂಗ್, ವೈರಿಂಗ್ ಕೆಲಸಕ್ಕೆ ಪೇಟೆಗೆ ಹೋಗುತ್ತಿದ್ದರು. ಇಂತಹ ಕೆಲಸ ಬಾರದವರು ಗಾರೆ ಮೇಸ್ತ್ರಿಗಳಾಗಿ, ಗಾರೆ ಕೆಲಸದವರಾಗಿ ಪೇಟೆಗೆ ಹೋಗುತ್ತಿದ್ದರು. ಅವರ ಸಂಬಳವೂ ದಿನಕ್ಕೆ 150 ರಿಂದ 200 ರೂಪಾಯಿಗಳವರೆಗೆ ಏರಿತ್ತು. ಶತಮಾನಗಳ ಕಾಲ ದುಡಿದರೂ ಎಂಟು ಹತ್ತು ರೂಪಾಯಿಗಳಿಗಿಂತ ಜಾಸ್ತಿ ಸಂಬಳ ನೀಡದೆ ಜೀತದಾಳುಗಳಂತೆ ದುಡಿಸಿಕೊಂಡ ಜಮೀನ್ದಾರರೆಲ್ಲ ಈಗ ‘ನೂರು ರೂಪಾಯಿ ಸಂಬಳ ಕೊಟ್ಟರೂ ಕೂಲಿಯಾಳುಗಳು ಸಿಗುತ್ತಿಲ್ಲ’ ಎಂದು ಗೊಣಗಲಾರಂಭಿಸಿದ್ದರು. ಇರುವ ನಾಲ್ಕೈದು ಕೂಲಿಯಾಳುಗಳಿಗೆ ಬೇಡಿಕೆ ಅಧಿಕವಾಗಿ ಇವರನ್ನು ಕೆಲಸಕ್ಕೆ ಕರೆದುಕೊಂಡು ಹೋಗಲು ತಮ್ಮ ಪ್ರತಿಷ್ಟೆಗಳನ್ನೆಲ್ಲ ಮನೆಯಲ್ಲೇ ಕಟ್ಟಿಟ್ಟು ಕೂಲಿಯಾಳುಗಳ ಮನೆಗಳ ಬಾಗಿಲು ಕಾಯುವುದು ಜಮೀನ್ದಾರರಿಗೆ ಅನಿವಾರ್ಯವಾಗಿತ್ತು. ಭೂಮಾಲೀಕರ ಮೇಲಿನ ಪುರಾತನ ಸೇಡು ತೀರಿಸಿಕೊಳ್ಳುವಂತೆ ಕೂಲಿಯಾಳುಗಳು ಅವರನ್ನು ಸಾಧ್ಯವಾದಷ್ಟ್ಟೂ ಸತಾಯಿಸುತ್ತಿದ್ದರು. ಭೂಮಾಲಿಕರ ಅಟ್ಟಹಾಸ ಮುರಿದು ಕೂಲಿಕಾರ್ಮಿಕರಿಗೆ ಜೀವ ತೆತ್ತಾದರೂ ನ್ಯಾಯಬದ್ಧ ಕೂಲಿ ಕೊಡಿಸಬೇಕೆಂಬ ದೀರ್ಘಕಾಲೀನ ಕ್ರಾಂತಿಗೆ ತಯಾರಿ ನಡೆಸಿದ್ದ ನಕ್ಸಲೀಯರಿಗೆ ಅವರ ಕ್ರಾಂತಿಯ ಭವಿಷ್ಯದ ಫಲಾನುಭವಿಗಳೆಲ್ಲ ಹರಿದು ಹಂಚಿ ಹೋಗುತ್ತಿರುವುದು ಮತ್ತು ಇಲ್ಲಿರುವ ಕೂಲಿಯಾಳುಗಳಿಗೆಲ್ಲ ಕ್ರಾಂತಿಯ ನಂತರದ್ದಕ್ಕಿಂತಲೂ ಹೆಚ್ಚಿನ ಬೇಡಿಕೆ ಬಂದಿರುವುದು ಅವರನ್ನು ಕಕ್ಕಾಬಿಕ್ಕಿಗೊಳಿಸಿರಬಹುದೆಂದು ವೆಂಕಟೇಶ ಅಂದಾಜಿಸಿದ.

“ನೀನೇ ಬುದ್ದಿವಂತ ಬಿಡು, ದೊಡ್ಡ ಕಂಪನಿ ಸೇರಿ ಲಕ್ಷ್ಷ ಲಕ್ಷ್ಷ ಸಂಪಾದಿಸ್ತಿ” ಎಂದು ಗೋಪಾಲಗೌಡರು ಹೇಳಿದಾಗ ಮೊದಲೆಲ್ಲ ಇಂತಹ ಮಾತಿಗೆ ಒಳಗೊಳಗೆ ಖುಷಿಗೊಳ್ಳುತ್ತಿದ್ದ ವೆಂಕಟೇಶನಿಗೆ ಈಗ ಈ ಮಾತು ಅಪಹಾಸ್ಯದ ಮಾತಾಗಿ ತೋರಿತು. ಹಾದಿಯಲ್ಲಿ ಸಿಕ್ಕ ಊರವರನ್ನೆಲ್ಲ ಮಾತಾಡಿಸುತ್ತ ವೆಂಕಟೇಶ ತನ್ನ ಮನೆಯ ತಡಬೆ ಬಾಗಿಲು ಸರಿಸುವಾಗ ಸೂರ್ಯನ ಕಿರಣಗಳು ಗೊತ್ತಾಗದಷ್ಟು ಸಣ್ಣದಾಗಿ ಮೈಯನ್ನು ಸುಡುತ್ತಿತ್ತು.

ತಡಬೆ ಬಾಗಿಲು ತೆಗೆದ ಸದ್ದಿಗೆ ಮನೆಯ ಮಾಡಿನ ಕೆಳಗೆ ಕಟ್ಟಿಹಾಕಿದ್ದ ದೊಡ್ಡ ನಾಯಿಯೊಂದು ಬೊಗಳಿದ್ದು ವೆಂಕಟೇಶನ ಕುತೂಹಲ ಕೆರಳಿಸಿತು. ಹಂಡ ಎಲ್ಲಿಗೋದ? ಅವನಾದರೆ ಎಷ್ಟು ಸಮಯ ಬಿಟ್ಟು ಬಂದರೂ ಗುರುತು ಹಿಡಿದು ಬಾಲ ಅಲ್ಲಾಡಿಸುತ್ತಾ ಪ್ರೀತಿ ತೋರುತ್ತಿದ್ದ. ಅವನಿಗಾಗಿ ಎಂದಿನಂತೆಯೇ ಬಿಸ್ಕೆಟ್ ತಂದಿದ್ದ ವೆಂಕಟೇಶ ಈಗ ಬ್ಯಾಗಿನಿಂದ ಅದನ್ನು ತೆಗೆದು ದೈತ್ಯಾಕಾರದ ನಾಯಿಗೆ ಎಸೆದ. ನಾಯಿ ಒಮ್ಮೆ ಮೂಸಿ ನೋಡಿ ಮೂಲೆಯಲ್ಲಿ ಹೋಗಿ ಮಲಗಿತು. ಅದರ ಸುತ್ತಲೂ ಅಲಲ್ಲಿ ಬಿದ್ದಿದ್ದ ಅದರ ಮಲ ಗಬ್ಬುವಾಸನೆ ಹರಡುತ್ತಿತ್ತು.

ನಾಯಿ ಸ್ವರ ಕೇಳಿ ಅಪ್ಪ ಹೊರಬಂದ. ಅಪ್ಪನ ಹಿಂದೆ ಅಮ್ಮನೂ ಬಂದಳು “ಏನೋ ಹಿಂಗೆ ದಿಢೀರಂತ” ಎಂದು ಅಪ್ಪ ಆಶ್ಚರ್ಯ ಸೂಚಿಸಿದರೆ, “ಜಮುನಾ, ಪುಟ್ಟಿ ಎಲ್ಲಿ” ಎಂದು ಅಮ್ಮ ಪ್ರಶ್ನಿಸಿದಳು. ಇಲ್ಲಮ್ಮ. ಒಬ್ನೆ ಬಂದೆ, ಸುಮ್ನೆ” ಎಂದ ವೆಂಕಟೇಶ “ಸಹನಾ ಎಲ್ಲಿ” ಎಂದು ತಮ್ಮನ ಮಗಳಿಗಾಗಿ ಕಣ್ಣಲ್ಲೇ ಹುಡುಕಾಡಿದ

“ಇಲ್ಲ ಅವಳು ಅಪ್ಪ ಅಮ್ಮನ ಜೊತೆ ಅಜ್ಜನ ಮನೆಗೆ ಹೋಗಿದಾಳೆ, ಸಂಜೆ ಬರಬಹುದು” ಎಂದ ಅಮ್ಮ “ಇರು, ಕಾಫಿ ಮಾಡಿ ತರ್ತೀನಿ, ಆಮೇಲೆ ಸ್ನಾನ ಮಾಡುವೆಯಂತೆ” ಎಂದು ಅಡಿಗೆ ಮನೆಗೆ ಹೋದಳು. ಅಮ್ಮ ಕೊಟ್ಟ ಬಿಸಿ ಕಾಫಿ ಕುಡಿದು ಬಚ್ಚಲಿಗೆ ಹೋಗಿ ಸ್ನಾನಮಾಡಿ ವರುಷಗಳೇ ಕಳೆದವೇನೊ ಎನ್ನುವಂತೆ ಹಂಡೆ ಪೂರ್ತಿ ಬಿಸಿನೀರು ಹೊಯ್ದುಕೊಂಡ.

ತಿಂಡಿ ತಿಂದು ವೆಂಕಟೇಶ ತೋಟಕ್ಕೆ ಹೊರಟಾಗ ಮತ್ತೆ ಬಾಗಿಲಲ್ಲಿ ಆ ದೈತ್ಯ ನಾಯಿ ನೋಡಿ “ಇದ್ಯಾವಾಗ ಇಲ್ಲಿಗೆ ಬಂತು” ಎಂದು ಅಪ್ಪನನ್ನು ಕೇಳಿದ.

“ಅದು ಲ್ಯಾಬ್ರಾಡಾರ್ ಎನ್ನುವ ವಿದೇಶಿ ತಳಿಯ ನಾಯಿ. ಮಂಜುನಾಥನ ಗೆಳೆಯ ಕೃಷ್ಣಮೂರ್ತಿ ಆ ನಾಯಿ ಸಾಕುತ್ತಿದ್ದಾನೆಂದು ಇವನು ಒಂದು ಮರಿ ತಂದು ಸಾಕುತ್ತಿದ್ದಾನೆ. ಹೊರಗೆ ತಿರುಗಲು ಹೋಗುವಾಗ ಆ ನಾಯಿಯನ್ನು ಕರೆದುಕೊಂಡು ಹೋಗುತ್ತಾನೆ. ಅದಕ್ಕೆ ಇಲ್ಲಿನ ವಾತಾವರಣ ಒಗ್ಗದೆ ವಾರಕ್ಕೊಮ್ಮೆ ಹುಶಾರಿಲ್ಲದೆ ಮಲಗುತ್ತದೆ. ನಮ್ಮಲ್ಲಿದ್ದ ಹಂಡ ನಾಯಿಯಿಂದ ಇದಕ್ಕೆ ರೋಗ ಬರುತ್ತಿರಬಹುದೆಂದು ಮಂಜುನಾಥ ಅದನ್ನು ಬೇರೆ ಊರಲ್ಲಿ ಬಿಟ್ಟು ಬಂದ” ಎಂದ ಅಪ್ಪ “ಈ ನಾಯಿ ಯಾವಾಗ ತೊಲಗುತ್ತೊ ಎಂದು ಕಾಯುತ್ತಿದ್ದೇನೆ” ಎಂದು ನಿಟ್ಟುಸಿರು ಬಿಟ್ಟರು.

ತೋಟಕ್ಕೆ ಹೊರಟ ತನ್ನನ್ನು ಹಿಂಬಾಲಿಸಿದ ಅಪ್ಪನನ್ನು ನೋಡಿ ಅಪ್ಪ ಏನೋ ಹೇಳಲು ಬಯಸುತ್ತಿದ್ದಾರೆ ಎಂದು ವೆಂಕಟೇಶ ಅಂದುಕೊಂಡ. ಅಪ್ಪನಿಗೆ ಮಗನ ಬಳಿ ಹೇಳುವುದು ತುಂಬಾ ಇತ್ತು. ಮನೆಯ ವ್ಯವಹಾರವನ್ನೆಲ್ಲ ಈಗಲೂ ನಿರ್ವಹಿಸುತ್ತಿದ್ದುದು ರಂಗಪ್ಪನವರೆ. ಇದಕ್ಕೆ ಮಂಜುನಾಥನ ತಕರಾರು ಏನೂ ಇರಲಿಲ್ಲ. ಮನೆಯಲ್ಲಿದ್ದ ಹಳೆಯ ಕಪ್ಪು ಬಿಳುಪು ಟಿ.ವಿ. ಬದಲಿಗೆ ಕಲರ್ ಟಿ.ವಿ. ತರಬೇಕು ಎಂಬ ವಿಚಾರದಲ್ಲಿ ಚಿಕ್ಕ ಮಗ ಸೊಸೆಗೂ ಅಪ್ಪನಿಗೂ ಭಿನ್ನಾಭಿಪ್ರಾಯ ತಲೆದೋರಿತು. ಸಸಿತೊಟದ ಫಸಲು ಈಗಷ್ಟೆ ಬರುತ್ತಿತ್ತು. ಸಾಲವೂ ಸಾಕಷ್ಟಿತ್ತು. ಹಿರಿಮಗನ ಕಷ್ಟಗಳು ಹೇಗೂ ಏನೋ, ಅವನ ಬಳಿ ದುಡ್ಡಿಗಾಗಿ ಮತ್ತೆ ಮತ್ತೆ ಪೀಡಿಸುವುದು ಹೇಗೆಂದು, ಮುಂದಿನ ಬಾರಿ ತರೋಣ ಎಂದು ಸುಮ್ಮನಾದರು. ಆದರೆ ಸೊಸೆ ತನ್ನ ಅಪ್ಪನಿಗೆ ಹೇಳಿ ಕಲರ್ ಟಿ.ವಿ. ತರಿಸಿದಾಗ ರಂಗಪ್ಪ ತನ್ನ ಹೆಂಡತಿಯ ಬಳಿ ಅತ್ತೆ ಬಿಟ್ಟಿದ್ದರು.

ಸಹನಾಳನ್ನು ಅಂಗನವಾಡಿಗೆ ಸೇರಿಸುವ ವಿಚಾರದಲ್ಲಿ ಸಮಸ್ಯೆಯಾಯಿತು. ಈಗ ಕೈಮರದ ಶ್ರೀಮಂತರೇನು, ಸಾಮಾನ್ಯರ ಮಕ್ಕಳೂ ಬಾಡಿಗೆ ಕಾರುಗಳಲ್ಲಿ ತೀರ್ಥಹಳ್ಳಿಯ ಕಾನ್ವೆಂಟುಗಳಿಗೆ ಹೋಗಿಬರುತ್ತಿದ್ದರು. ಮಗ ಸೊಸೆಯರಿಗೆ ಸಹನಾಳನ್ನು ತೀರ್ಥಹಳ್ಳಿಯ ಪ್ರಸಿದ್ದ ಕೆಂಬ್ರಿಡ್ಜ್ ಇಂಗ್ಲೀಷ್ ನರ್ಸರಿ ಸ್ಕೂಲ್‍ಗೆ ಕಳಿಸಬೇಕೆಂಬ ಬಯಕೆ. ಅದಕ್ಕೆ ಡೊನೇಷನ್ ಹದಿನೈದು ಸಾವಿರ. ಶುಲ್ಕ ಇತ್ಯಾದಿಗಳೆಂದು, ಮತ್ತೆ ಹತ್ತು ಸಾವಿರ ತೆಗೆದಿಡಬೇಕು. ರಂಗಪ್ಪ ‘ಬೇಡ’ ಎಂದರು. ಅಂದಿನಿಂದ ಮನೆಯಲ್ಲಿದ್ದ ದೊಡ್ಡವರೆಲ್ಲರ ನಡುವಿನ ಮಾತು ನಿಂತಿತು. ಪುಟ್ಟ ಹುಡುಗಿ ಸಹನಾ ಮಾತ್ರ ಪರಸ್ಪರರು ಮಾತನಾಡದಿರುವುದನ್ನು ನೋಡಿ ಕಕ್ಕಾಬಿಕ್ಕಿಯಾಗಿದ್ದಳು.

ಅಪ್ಪ ಹೇಳಿದ್ದಕ್ಕೆ ಏನು ಹೇಳಬೇಕೆಂದು ವೆಂಕಟೇಶನಿಗೆ ತೋಚಲಿಲ್ಲ. ಸಂಜೆ ವೆಂಕಟೇಶ ಹೊರಡುವಾಗ ಮಂಜುನಾಥ ಒಬ್ಬನೇ ಮನೆಗೆ ಬಂದ. ಹೆಂಡತಿ ಮಗಳು ಯಾಕೆ ಬರಲಿಲ್ಲವೆಂದು ಆತ ಅಮ್ಮನಿಗೆ ಹೇಳದೇ ಇದ್ದದ್ದು ವೆಂಕಟೇಶನಿಗೆ ಪಿಚ್ಚೆನ್ನಿಸಿತು. ‘ಪುಟ್ಟಿ ಯಾಕೆ ಬರಲಿಲ್ಲ’ ಎಂದು ವೆಂಕಟೇಶನೇ ಕೇಳಿದ ‘ಅಜ್ಜ ಅಜ್ಜಿ ತುಂಬಾ ಒತ್ತಾಯ ಮಾಡಿ ಉಳಿಸ್ಕೊಂಡ್ರು. ಇನ್ನೊಂದೆರಡು ದಿನ ಬಿಟ್ಟು ಬರ್ತಾರೆ’ ಎಂದ ಮಂಜುನಾಥ. ‘ಇರು, ಕೃಷ್ಣಮೂರ್ತಿ ಬೈಕ್ ತಗೊಂಡು ಬರ್ತೀನಿ, ತೀರ್ಥಹಳ್ಳಿ ತನಕ ಬಿಡ್ತೀನಿ’ ಎಂದು ಚಪ್ಪಲಿ ಮೆಟ್ಟಿ ಹೊರಗೆ ಹೊರಟ. ಅಪ್ಪ ಅಮ್ಮನ ಕಾಲಿಗೆ ಬಿದ್ದು ವೆಂಕಟೇಶ ಆಶೀರ್ವಾದ ಪಡೆಯುವಾಗ ಬೈಕಿನ ಸದ್ದು ಕೇಳಿಸಿತು. ತಮ್ಮನ ಹಿಂದೆ ಬೈಕಿನಲ್ಲಿ ಕುಳಿತು ವೆಂಕಟೇಶ ಹೊರಟ. ಆಗಷ್ಟೆ ಕತ್ತಲಾವರಿಸುತ್ತಿತ್ತು.

ಕೈಮರವನ್ನು ಸಾಧ್ಯವಾದಷ್ಟು ಬದಿಗೆ ತಳ್ಳಿ ತೀರ್ಥಹಳ್ಳಿಯ ಕಡೆ ಹೋಗಿದ್ದ ರಾಜ್ಯ ಹೆದ್ದಾರಿ ಈಗ ರಾಕ್ಷಸ ಗಾತ್ರದಲ್ಲಿ ಹರಡಿತ್ತು. ಈ ರಕ್ಕಸನ ಹಸಿವಿಗೆ ರಸ್ತೆಯ ಎರಡೂ ಬದಿಯ ನೂರಾರು ವರ್ಷಗಳಿಂದ ಪುಟ್ಟ ಪುಟ್ಟ ಪರ್ವತಗಳಂತೆ ಬೆಳೆದು ನಿಂತಿದ್ದ ಮಾವು, ಹುಣ ಸೆ ಮರಗಳು ಬಲಿಯಾಗಿದ್ದವು. ಮಲೆನಾಡಿನ ಜಮೀನ್ದಾರರ ವಿದೇಶಿ ಕಾರುಗಳು ಮತ್ತೇರಿದಂತೆ ಈ ರಾಕ್ಷಸನ ಮೇಲೆ ಹರಿದಾಡುತ್ತಿದ್ದವು. ತನ್ನ ತಮ್ಮನ ಬೈಕಿಗೂ ಮತ್ತೇರಿರಬೇಕು ಎಂದು ಅದು ಹೋಗುತ್ತಿದ್ದ ಗಾಳಿಯಂತಹ ವೇಗವನ್ನು ಕಂಡು ನಕ್ಕ ವೆಂಕಟೇಶ ಮರುಕ್ಷಣವೇ ಆ ವೇಗಕ್ಕೆ ಭಯವಾಗಿ ‘ಅರ್ಜೆಂಟಿಲ್ಲ, ನಿಧಾನ ಹೋಗು’ ಎಂದು ತಮ್ಮನಿಗೆ ಹೇಳಿದ. ಪೇಟೆ ಆರಂಭವಾಗುತ್ತಿದ್ದಂತೆ ಜನ ರಸ್ತೆ ತುಂಬಾ ಆಚೀಚೆ ಒಡಾಡುತ್ತಿದ್ದುದರಿಂದ ಮಂಜುನಾಥ ಬೈಕನ್ನು ಇನ್ನಷ್ಟು ನಿಧಾನವಾಗಿ ಓಡಿಸುವುದು ಅನಿವಾರ್ಯವಾಯಿತು. ಗಾಂಧೀಚೌಕ, ಕೊಪ್ಪ ಸರ್ಕಲ್ ಮತ್ತು ಅಜಾದ್ ರಸ್ತೆಯ ತುಂಬೆಲ್ಲ ರಸ್ತೆಬದಿ ನಿಂತ ನ್ಯೂಡಲ್ಸ್, ಗೋಬಿಮಂಚೂರಿ, ಪಾನಿಪೂರಿ, ಚಿಕನ್ ಕಬಾಬ್ ತಳ್ಳುಗಾಡಿಗಳ ಮುಂದೆ ಜೀನ್ಸ್ ತೊಟ್ಟ ಹುಡುಗ ಹುಡುಗಿಯರು ಅತ್ಯಂತ ನಾಗರಿಕ ಶೈಲಿಯಲ್ಲಿ ತಿನ್ನುತ್ತಿದ್ದರು. ಈ ತಳ್ಳುಗಾಡಿಗಳಿಗೆ ಕೊಂಚ ದೂರದಲ್ಲಿ ರಸ್ತೆ ಬದಿ ನಿಂತ ಬಣ್ಣ ಬಣ್ಣದ ಕಾರುಗಳ ಒಳಗೆ ಕುಳಿತ ಸಿರಿವಂತರು ಈ ತಳ್ಳುಗಾಡಿಗಳ ಹುಡುಗರ ಬಳಿ ತಮ್ಮಲ್ಲಿಗೆ ಬೇಕಾದ ತಿನಿಸುಗಳನ್ನು ತರಿಸಿಕೊಂಡು ತಮ್ಮ ಶ್ರೀಮಂತಿಕೆಯನ್ನು ಎತ್ತಿ ತೋರಿಸಲು ಪ್ರಯತ್ನ ಮಾಡುತ್ತಿದ್ದರು. ಅಜಾದ್ ರಸ್ತೆಯಂಚಿನಲ್ಲಿದ್ದ ಮಾರಿಗುಡಿ, ಗಾಂಧೀಚೌಕದ ಬಳಿಯ ಬೆರಳೆಣೆಕೆಯ ಒಂದಷ್ಟು ಹಂಚಿನ ಮನೆಗಳು ತಮ್ಮನ್ನು ಸುತ್ತುವರೆದಿದ್ದ ಕಾಂಕ್ರೀಟ್ ಕಟ್ಟಡಗಳ ಠೇಂಕಾರಕ್ಕೆ ಬೆದರಿದಂತೆಯೋ, ಅವುಗಳ ವೈಭವಕ್ಕೆ ಕೀಳರಿಮೆಯಿಂದ ನರಳಿದಂತೆಯೋ, ತಾವು ಕೂಡ ಕಾಂಕ್ರೀಟ್ ಕಟ್ಟ್ಟಡಗಳಾಗುವ ಕನಸು ಕಾಣುತ್ತಿರುವಂತೆಯೋ ಭಾಸವಾಗುತ್ತಿದ್ದವು. ಈ ಚೂರುಪಾರು ಹಂಚಿನ ಅವಶೇಷಗಳನ್ನು ಹೊರತುಪಡಿಸಿ ನೋಡಿದಾಗ ತೀರ್ಥಹಳ್ಳಿ ಬೆಂಗಳೂರಿನ ತುಂಡೊಂದನ್ನು ಯಥಾವತ್ತಾಗಿ ಕತ್ತರಿಸಿ ತಂದಿಟ್ಟಂತೆ ವೆಂಕಟೇಶನಿಗೆ ಅನ್ನಿಸಿತು.

ಅಣ್ಣ ತಮ್ಮ ಇಬ್ಬರೂ ಮಯೂರ ಹೋಟೆಲ್ಲಿಗೆ ಹೋಗಿ ಕಾಫಿ ಕುಡಿದರು. ‘ಇಲ್ಲಿಂದ ಬೆಂಗಳೂರಿಗೆ ಕೆಲವೊಮ್ಮೆ ಸೀಟು ಸಿಗಲ್ಲ, ನಾನು ಶಿವಮೊಗ್ಗಕ್ಕೆ ಹೋಗ್ತಿನಿ, ಅಲ್ಲಿಂದ ತುಂಬಾ ಬಸ್ಸಿದೆ’ ಎಂದ ವೆಂಕಟೇಶ ಏನೋ ಜ್ಞಾಪಿಸಿಕೊಂಡವನಂತೆ ‘ಅಲ್ಲೊ ಮಂಜ, ಅಪ್ಪ ತುಂಬಾ ತಲೆಕೆಡಿಸ್ಕಂಡಿದಾರೆ, ಪುಟ್ಟೀನ ಊರಿನ ಅಂಗನವಾಡಿಗೇ ಸೇರಿಸ್ಬೋದಲ್ಲ. ಕುಸುಮ ಚೆನ್ನಾಗಿ ಪಾಠ ಮಾಡ್ತಾಳಂತೆ’ ಎಂದ.

‘ಏನಣ್ಣಾ ಇದು, ಮಗಳ್ನ ಅಂಗನವಾಡಿಗೆ ಕಳ್ಸಿ ನಾವೆಲ್ಲಾ ಅದೇ ಕೊಂಪೇಲಿ ಬದ್ಕಬೇಕು ಅಂತಾನಾ? ಈಗ ಗಾರೆ ಕೆಲ್ಸ ಮಾಡೋರೆಲ್ಲಾ ತಮ್ಮ ಮಕ್ಕಳನ್ನು ಪೇಟೆ ಕಾನ್ವೆಂಟಿಗೆ ಕಳಿಸ್ತಿದಾರೆ. ಬೇರೆಯವ್ರ ವಿಚಾರ ಅತ್ಲಾಗಿರ್ಲಿ, ನಾಳೆ ನಿನ್ನ ಮಗಳ ಏದ್ರುನಾದ್ರು ಇಂಗ್ಲೀಷ್ ಬರಲ್ಲ ಅಂತಾ ನನ್ಮಗಳು ತಲೆ ತಗ್ಸಿ ನಿಂತ್ಕೊಬಾರದಲ್ವಾ?’ ಕೊಂಚ ಅಸಹನೆ, ಕೋಪದಲ್ಲೇ ಮಂಜು ಬಡಬಡಿಸಿದ.

ತಮ್ಮನ ಮಾತು ವೆಂಕಟೇಶನಿಗೆ ದಿಗ್ಬ್ರಮೆ ಮೂಡಿಸಿತು. ಆತನ ಭಾವಕೋಶದಲ್ಲಿ ಎಂದೂ ತಾನೂ ತನ್ನ ಸಂಸಾರ, ತಮ್ಮನ ಸಂಸಾರ ಬೇರೆ ಬೇರೆಯೆಂಬ ಕಲ್ಪನೆಯೂ ಮೂಡಿರಲಿಲ್ಲ. ಈಗ ತಮ್ಮನಲ್ಲಿ ತನ್ನ ಬಗ್ಗೆ ಪ್ರತಿಸ್ಪರ್ಧಿಯ ಭಾವನೆಗಳು ಮೂಡಿದ ಸೂಚನೆಗಳನ್ನು ಕಂಡು ದುಗುಡಗೊಂಡ. ಬೆಂಗಳೂರಿಗೆ ವಾಪಸಾದ ವೆಂಕಟೇಶ ಯಾವುದೇ ನಿರ್ಧಾರಕ್ಕೆ ಬರಲಾಗದ ಹೊಯ್ದಾಟದಲ್ಲಿದ್ದ. ಸುಮಂತ ವೆಂಕಟೇಶನಿಗೆ ಫೋನ್ ಮಾಡಿ ತನ್ನ ಕಂಪನಿಯಲ್ಲಿ ಎಚ್‍ಆರ್‍ಡಿ ಮ್ಯಾನೇಜರ್ ಹುದ್ದೆ ಖಾಲಿಯಾಗಿರುವುದಾಗಿ ತಿಳಿಸಿ ಕೂಡಲೆ ಒಂದು ಅರ್ಜಿ ಕಳಿಸಲು ಸೂಚಿಸಿದ. ಸುಮಂತನನ್ನು ಬೇಸರಗೊಳಿಸಬಾರದೆಂದು ವೆಂಕಟೇಶ ‘ಆಯ್ತು’ ಎಂದಷ್ಟೇ ಹೇಳಿದ.

ಕನ್ನಡ ರಾಜ್ಯೋತ್ಸವ ಅದ್ದೂರಿಯಾಗಿ ನಡೆದು ಕಾರ್ಮಿಕರೆಲ್ಲ ಹೊಟ್ಟೆ ತುಂಬ ಸಿಹಿ ತಿಂದರು. ಕ್ಯಾಂಟೀನಿನಲ್ಲಿ ವಾರಕ್ಕೊಮ್ಮೆ ಮಾಂಸಹಾರ ನೀಡುವ ವ್ಯವಸ್ಥೆ ಸದ್ದಿಲ್ಲದೆ ನಿಂತುಹೋಯಿತು. ವೆಂಕಟೇಶನಿಗೆ ಮುಂದೇನು ಮಾಡುವುದೆಂದು ತಿಳಿಯದಿದ್ದರೂ ಕಂಪನಿಗೆ ರಾಜೀನಾಮೆ ನೀಡಿದ.

ಒಂದು ಬೆಳಿಗ್ಗೆ ದಿಢೀರನೆ ಅಪ್ಪ, ಅಮ್ಮ ಬಂದಾಗ ಜಮುನಳಿಗೆ ಅಚ್ಚರಿಯಾದಷ್ಟು ವೆಂಕಟೇಶನಿಗಾಗಲಿಲ್ಲ. ಮಂಜುನಾಥ ತನ್ನ ಮಗಳನ್ನು ತೀರ್ಥಹಳ್ಳಿಯ ಕೆಂಬ್ರಿಡ್ಜ್ ಇಂಗ್ಲೀಷ್ ನರ್ಸರಿಗೆ ಸೇರಿಸಿ ಅದರ ಪಕ್ಕದಲ್ಲಿನ ಸತೀಶನ ಮನೆಯಲ್ಲಿ ಇತರ ಮಕ್ಕಳೊಂದಿಗೆ ಉಳಿಯಲು ವ್ಯವಸ್ಥೆ ಮಾಡಿದ್ದ. ಮೊಮ್ಮಗಳನ್ನು ದೂರಕಳಿಸಿದರೆ ನಾವು ಮನೆ ಬಿಟ್ಟು ಹೋಗುತ್ತೇವೆಂದೇ ಆಕೆಯನ್ನು ತೀರ್ಥಹಳ್ಳಿ ನರ್ಸರಿಗೆ ಸೇರಿಸಿದ್ದಾರೆ ಎಂದು ಬಗೆದ ಅಪ್ಪ ಅಮ್ಮ ಅಂದೇ ರಾತ್ರಿ ಕೈಗೆ ಸಿಕ್ಕ ಬಟ್ಟೆಬರೆಗಳನ್ನು ಬ್ಯಾಗಿಗೆ ಹಾಕಿಕೊಂಡು ದೊಡ್ಡ ಮಗನ ಮನೆಯ ಹಾದಿ ಹಿಡಿದರು.

ಏನು ಮಾಡುವುದು, ಏಲ್ಲಿಗೆ ಹೋಗುವುದು ಎಂದು ತಿಳಿಯದೆ ವೆಂಕಟೇಶ ಅಸ್ಪಸ್ಥಗೊಂಡ.

ಸರ್ಜಾಶಂಕರ ಹರಳಿಮಠ

ಲೇಖಕ, ಚಿಂತಕ, ಡಾ. ಸರ್ಜಾಶಂಕರ್ ಹರಳಿಮಠ ಅವರು ಮೂಲತಃ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕು ಹರಳಿಮಠ ಗ್ರಾಮದವರು. ತೀರ್ಥಹಳ್ಳಿಯ ತುಂಗಾ ಮಹಾವಿದ್ಯಾಲಯದಲ್ಲಿ ಪದವಿ ಮುಗಿಸಿ ಉದ್ಯೋಗವರಸಿ ಬೆಂಗಳೂರಿಗೆ ತೆರಳಿದರು. ಅಲ್ಲಿ ಬಹುರಾಷ್ಟ್ರೀಯ ಕಂಪನಿ ಸೇರಿದಂತೆ ಕೆಲವು ಕಂಪನಿಗಳಲ್ಲಿ ಒಂದು ದಶಕದ ಕಾಲ ಸೇವೆ ಸಲ್ಲಿಸಿದ ನಂತರ ಹುದ್ದೆಗೆ ರಾಜೀನಾಮೆ ನೀಡಿ ಊರಿಗೆ ಮರಳಿ ಶಿವಮೊಗ್ಗದಲ್ಲಿ  ಗ್ರಾಮೀಣ ಮಹಿಳೆಯರು ಉತ್ಪಾದಿಸುವ ಕೈಮಗ್ಗದ ಉಡುಪುಗಳೂ ಸೇರಿದಂತೆ ಗೃಹ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸುವ ‘ದೇಸಿ ಸಂಸ್ಖೃತಿ’ ಎಂಬ ಮಾರುಕಟ್ಟೆ ಕೇಂದ್ರವನ್ನು ಆರಂಭಿಸಿದರು. ಜತೆ ಜತೆಗೆ ಜನಪರ ಹೋರಾಟಗಳಲ್ಲಿ ಸಕ್ರೀಯವಾಗಿ ತೊಡಗಿಸಿಕೊಳ್ಳುತ್ತಲೇ ಕುವೆಂಪು ವಿಶ್ವವಿದ್ಯಾಲಯದಲ್ಲಿ ಕನ್ನಡ ಎಂ.ಎ ಪದವಿಗಳಿಸಿದರು.  ಮೈಸೂರು ವಿಶ್ವವಿದ್ಯಾಲಯದಲ್ಲಿ ಪತ್ರಿಕೋದ್ಯಮದಲ್ಲಿ ಡಿಪ್ಲೋಮಾ ಪೂರ್ಣಗೊಳಿಸಿದರು. 

ಆನಂತರ ಡಾ. ರಹಮತ್ ತರೀಕೆರೆ ಅವರ ಮಾರ್ಗದರ್ಶನದಲ್ಲಿ ‘ಕನ್ನಡ ವಿಚಾರ ಸಾಹಿತ್ಯದಲ್ಲಿ ಕನ್ನಡ ಅಸ್ಮಿತೆಯ ಹುಡುಕಾಟದ ನೆಲೆಗಳು’ ಎಂಬ ಮಹಾಪ್ರಬಂಧಕ್ಕೆ ಕನ್ನಡ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿ ಪಡೆದರು.  ಕನ್ನಡ ಪ್ರಾಧ್ಯಾಪಕರಾಗಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಹಲವು ವರ್ಷ ಸೇವೆ ಸಲ್ಲಿಸಿದರು. ಸಧ್ಯ ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರದಲ್ಲಿ ಸಹ ಸಂಶೋಧಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.  ಅಂತರಾಳ (ಸಾಹಿತ್ಯ ಸಂಕಲನ), ಬೆಚ್ಚಿ ಬೀಳಿಸಿದ ಬೆಂಗಳೂರು (ಅಂಕಣಬರಹಗಳು), ಜೀವದನಿ (ಅಂಕಣ ಬರಹಗಳು), ಬಾರಯ್ಯ ಬೆಳದಿಂಗಳೇ (ಕಥಾ ಸಂಕಲನ), ಸುಡುಹಗಲ ಸೊಲ್ಲು (ಲೇಖನಗಳ ಸಂಕಲನ), ಕೃತಿಗಳನ್ನ ಪ್ರಕಟಿಸಿದ್ದಾರೆ. ಮತ್ತು  ಜನಸಂಸ್ಕೃತಿಯ ಬಾಬಾಬುಡನ್ ಗಿರಿ, ನವಿಲು ಕಲ್ಲು, ನವಿಲ ಹೆಜ್ಜೆ ಸೇರಿದಂತೆ ಹಲವು ಕೃತಿಗಳ ಸಂಪಾದಕರಾಗಿ ದುಡಿದಿದ್ದಾರೆ.

More About Author