Poem

ಮರೆತು ಬಿಡು ಬಸವ

ಮರೆತು ಬಿಡು ಬಸವ
ನೀ ಕಂಡಿದ್ದು ಬರೀ ಕನಸೆಂದು

ಕಾಯಕದಲ್ಲಿ ದೇವರ ಕಾಣೆಂದೆ
ಕಾಣದ ದೇವರ ಕಾಯುವದರಲ್ಲಿ ಕಳೆದ್ಹೋದೆವು
ಮರೆತು ಬಿಡು ಬಸವ
ನೀ ಕಂಡಿದ್ದು ಬರೀ ಕನಸೆಂದು

ಸಕಲರಿಗೂ ಒಂದಾಗಿರಲೆಂದು
ಅನುಭವ ಮಂಟಪವ ಕಟ್ಟಿದೆ
ಉಳ್ಳವಗಾಯಿತದು,
ಉಳುಮೆಯವಗಿಲ್ಲವಾಯಿತು
ಮರೆತು ಬಿಡು ಬಸವ
ನೀ ಕಂಡಿದ್ದು ಬರೀ ಕನಸೆಂದು

ಮೂರ್ತಿ ಪೂಜೆ ನಿಲ್ಲಿಸೆಂದೆ
ನಿನ್ನದೇ ಮೂರ್ತಿಯ ಮಾಡಿ
ನಿಲ್ಲಿಸಿ ಮರೆತೆವು ಬೀದಿ ಬೀದಿಯಲ್ಲಿ
ಮರೆತು ಬಿಡು ಬಸವ
ನೀ ಕಂಡಿದ್ದು ಬರೀ ಕನಸೆಂದು

ಧನಿಕರು ದೇವಾಲಯವ ಕಟ್ಟುತಿಹರು
ದ್ವಾರ ಬಾಗಿಲಲಿ
ನಿರ್ಗತಿಕರು ಸಾಲಾಗಿ ಕುಳುತಿಹರು
ಮರೆತು ಬಿಡು ಬಸವ
ನೀ ಕಂಡಿದ್ದು ಬರೀ ಕನಸೆಂದು

ಸಮಾನತೆಯ ಹರಿಕಾರನೆಂದರು ನಿನಗೆ
ಮತ್ತ್ಯಾರನ್ನೂ ಬರಮಾಡಿಕೊಳ್ಳಲಿಲ್ಲ ತಮ್ಮೊಳಗೆ
ಮರೆತು ಬಿಡು ಬಸವ
ನೀ ಕಂಡಿದ್ದು ಬರೀ ಕನಸೆಂದು

ಜಾತಿ-ಜಾತಿಗಳ ಸೇರಿಸಿ ಅಂತರ್ಜಾತಿ ಬೆರಸಿ
ಕಲ್ಯಾಣ ಮಾಡಿದ್ದು ಮರಸಿ
ಮರೆತು ಬಿಡು ಬಸವ
ನೀ ಕಂಡಿದ್ದು ಬರೀ ಕನಸೆಂದು

ನಿನ್ನೊಚನಗಳು ಅನುವಾದಗೊಂಡವು
ಪರದೇಶದ ಪರಭಾಷೆಗಳಿಗೆ
ಕನ್ನಡದಲಿರುವ ನಿನ್ನೀ ನುಡಿಗಳು
ತಲುಪಲಿಲ್ಲ ದೀನ ದಲಿತರ ಮನೆಗಳಿಗೆ

ಮರೆತು ಬಿಡು ಬಸವ
ನೀ ಕಂಡಿದ್ದು ಬರೀ ಕನಸೆಂದು

- ಎಂ. ಟಿ. ಕರಿಗಾರ

ವಿಡಿಯೋ
ವಿಡಿಯೋ

ಎಮ್. ಟಿ. ಕರಿಗಾರ

ಎಮ್. ಟಿ. ಕರಿಗಾರ ಅವರು ಮೂಲತಃ ಗದಗ ಜಿಲ್ಲೆಯ ಅಸುಂಡಿಯವರು. ಪ್ರಸ್ತುತ ಭಾರತೀಯ ಅಂಚೆ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದು, ಸಮಕಾಲೀನ ಸಾಹಿತ್ಯ ಅಧ್ಯಯನದಲ್ಲಿತೊಡಗಿಸಿಕೊಂಡಿದ್ದಾರೆ.

ಕೃತಿಗಳು : ನೆಲತಾಗಿದ ನೇಗಿಲು, ಕರಿಗಾರನ ಕನವರಿಕೆಗಳು

More About Author