Poem

ಮತ್ತೊಂದು ಹುಟ್ಟು

ಆಗಿನ್ನೂ ಮುಗಿಲು
ಕೂಡಿರುವುದೇ ಇಲ್ಲ
ಥಣಾರನೇ ಕೋಲ್ಮಿಂಚು ಮಿಂಚಿ
ನೇರ ಹೃದಯಕ್ಕೆ
ಬಡಿಯುತ್ತದೆ ಸಿಡಿಲು
ಸಾವರಿಸಿಕೊಳ್ಳಲೂ
ಸಮಯ ಕೊಡದೆ
ಬವಳಿ ಬಂದು
ಇನ್ನೇನು ಬಿದ್ದೇ ಹೋದಂತೆ
ಭಾಸವಾಗುವಾಗ
ನನ್ನ ಬೆಳ್ಳನೆಯ ಮೊಗ
ಇನ್ನೂ
ಕೆಂಪಗಾಗುತ್ತದೆ
ಕಣ್ಣು ಒಮ್ಮೆಗೆ
ಹೊಳೆದು ತುಂಬಿಕೊಳ್ಳುತ್ತವೆ
ತುಟಿ ಸಣ್ಣಗೆ ಕಂಪಿಸಿ
ಹುಬ್ಬು ಇಷ್ಟಿಷ್ಟೇ ಸಂಕುಚಿಸಿ
ಎಂದೋ ಮುತ್ತು
ಪಡೆದಿದ್ದ ಪುಟ್ಟ ಹಣೆಯ
ಮೇಲೆ ಬೆವರ ಹೂಬಳ್ಳಿ
ಹಬ್ಬುತ್ತದೆ
ಕೆನ್ನೆ ನೂರು ವೋಲ್ಟಿನ
ಬಲ್ಬಾಗಿ
ಜೀವದ ಕೋಶಕೋಶವೂ
ಖಿಲ್ಲನೆ ಝಲ್ಲೆಂದು
ಹೆರಳಿನೊಂದೆಳೆಯನ್ನು
ಬೆರಳು ಹೆಣೆದೂಹೆಣೆದೂ
ಸುರುಳಿ ಬಿಡುತ್ತದೆ
ದಬ್ಬಿಕೊಂಡು ಬಂದ
ಉಸಿರು ಬೆಚ್ಚಗಿರುತ್ತದೆ
ಎಷ್ಟು ಚಂದದ ಸಾವು
ಮಾರಾಯ್ತಿ
ಇದು!!
ಹೀಗೆ
ಪ್ರೀತಿಯಲ್ಲಿ ಬೀಳುವುದು!!

ನೀ

ನಂದಿನಿ ವಿಶ್ವನಾಥ ಹೆದ್ದುರ್ಗ

ಸಕಲೇಶಪುರದ ಹೆದ್ದುರ್ಗದ ಕಾಫೀ ಬೆಳೆಗಾರ್ತಿ ನಂದಿನಿ ಹೆದ್ದುರ್ಗ ಅವರು ಕೃಷಿಕ ಮಹಿಳೆ. ತಮ್ಮ 16 ನೇ ವಯಸ್ಸಿನಲ್ಲಿಯೇ ಮದುವೆಯಾಗಿ ಬದುಕಿನ ಸುಖ ದುಃಖಗಳನ್ನು ಕಂಡುಂಡವರು. ಕಳೆದ ಕೆಲವು ವರ್ಷಗಳಿಂದ ಕಾವ್ಯ ರಚನೆಯ ಮೂಲಕ ಕಾವ್ಯ ಲೋಕ ಪ್ರವೇಶಿಸಿದ್ದಾರೆ. ಅವರ ಎರಡು ಸಂಕಲನಗಳು ಪ್ರಕಟವಾಗಿವೆ.

ಪ್ರೀತಿ ಪ್ರೇಮಗಳೇ ಇವರ ಕಾವ್ಯದ ಪ್ರಮುಖ ವಸ್ತು. ನಿರ್ಭಿಡೆಯಿಂದ ಹೆಣ್ಣಿನ ಅಂತರಂಗದ ಭಾವನೆಗಳನ್ನು ತಮ್ಮ ಕವಿತೆಗಳಲ್ಲಿ ಹೊರ ಹಾಕುವ ನಂದಿನಿ ಅವರು ಯಾವುದೇ ಮುಲಾಜಿಲ್ಲದೇ ಅಭಿವ್ಯಕ್ತಿಸುವುದು ವಿಶೇಷ.

 

More About Author