Poem

ಮೈಗ್ರೇನೂ ಸುಳ್ಳುಸುಖವೂ..

ಋತುವಿಗೊಮ್ಮೆ ಬರುತ್ತಿದ್ದ ಗೆಳೆಯ
ತಿಂಗಳಿಗೊಮ್ಮೆ ಪಕ್ಷಕ್ಕೊಮ್ಮೆ ವಾರಕ್ಕೊಮ್ಮೆ ಕರೆಯದೆ ಬಂದರೆ ಒಂಥರಾ ಸಿಡಿಮಿಡಿ
ನಲ್ಲನಾದರೂ ರೋಷವುಕ್ಕೇರುವುದು ನೋಡಿ!

ಮಿದುಳನ್ನೇ ಕೊರೆದು ನರನರಗಳು ಸಿಡಿದು
ಹೆಪ್ಪುಗಟ್ಟಿಸಿ ಭಾವ ತಿಂದುಬಿಡುತ್ತದೆ ಜೀವ
ತಲೆಯಿದ್ದವರಿಗಷ್ಟೇ ಬರುತ್ತದೆ ಎಂದು
ಖುಷಿಸಲು ಇದೇನು ಸೀದಾಸಾದಾ ನೋವಾ?

ವ್ಯಾಯಾಮವಂತೆ ಪ್ರಾಣಾಯಾಮವಂತೆ
ಸೂಜಿಚಿಕಿತ್ಸೆಯಂತೆ ಪಥ್ಯವಂತೆ
ವಾಯುಪ್ರಕೋಪ ನಡಿಗೆಯಂತೆ ಓಟವಂತೆ ಮುದ್ರೆ ಮಂತ್ರ ತಂತ್ರ ನಿದ್ರೆಯಂತೆ..

ಈ ಕ್ಷಣ ಚಳಿಯಲ್ಲಿ ನಡುಗಿಸಿ
ಮರುಕ್ಷಣ ಬೆವರಲ್ಲಿ ತೋಯಿಸಿ
ಕಣ್ಣೀರಿಳಿಸಿ ಮರುಳಾಗಿಸಿ ಮಡಿಲನರಸಿ
ಕಿರುಚಿ ಪರಚುವ ಬೇಡದ ಅತಿಥಿ!

ತಲೆಯ ಸುತ್ತಿದ ಪೇಟ ಕಿರೀಟ
ಕತ್ತಿನಪಟ್ಟಿ, ಕಾಲುಚೀಲ
ಮುಲಾಮು ಮಸಾಜು ಕರ್ಪೂರತೈಲ
ಚಿತ್ರವಿಚಿತ್ರ ಛದ್ಮವೇಷಜಾಲ..

ಹಾಲಲ್ಲದ್ದಿದ ಸಿಹಿಜಿಲೇಬಿ
ಮೊಸರಲ್ಲಿ ನೆನೆಸಿಟ್ಟ ಮೆದುಅವಲಕ್ಕಿ
ಯಾವುದಕ್ಕೂ ಜಗ್ಗದ ಬಗ್ಗದ
ಪ್ರೀತಿಗೆ ಕರಗದ ದ್ವೇಷಕ್ಕೆ ಕೊರಗದ ಹಟಮಾರಿ

ಕಸರತ್ತುಗಳೆಲ್ಲ ವ್ಯರ್ಥ ನುಂಗಿದಾಗ ಮಾತ್ರೆ
ನೋವ ಜಗಿದಾಗಷ್ಟೇ ಮೋಕ್ಷಪಾತ್ರ
ಕಹಿಗುಳಿಗೆಯಿತ್ತ ಸಾಂತ್ವನ ಕ್ಷಣಿಕವೆನ್ನಬಹುದೇ
ಈ ಗಳಿಗೆಯ ನೋವೇ ನಿಜವೆಂದೊಪ್ಪಿರುವಾಗ
ಸುಳ್ಳುಸುಖವೇ ನಿತ್ಯಸತ್ಯ ಪರಮಾಪ್ತವೇ!
----ಅಮೃತಾ ಮೆಹೆಂದಳೆ

ಅಮೃತಾ ಮೆಹೆಂದಳೆ

ಅಮೃತಾ ಮೆಹೆಂದಳೆ ಅವರು ವಾಣಿಜ್ಯ ಪದವೀಧರೆ, ಕನ್ನಡ ಸ್ನಾತಕೋತ್ತರ ಪದವೀಧರೆಯಾಗಿದ್ದು, ಸಾಹಿತ್ಯ ಚಟುವಟಿಕೆ: ನೂರಾರು ಹನಿಗವನಗಳು, ಲೇಖನ, ಕವನ, ಕಥೆಗಳು ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟವಾಗಿವೆ.

ಪ್ರಕಟಿತ ಕೃತಿ: 2003 ರಲ್ಲಿ " ಮೌನದ ಮಾತುಗಳು" ಕವನ ಸಂಕಲನ ಪ್ರಕಟವಾಗಿದೆ. 2017 ರಲ್ಲಿ " ಹನಿಯೆಂಬ ಹೊಸ ಭಾಷ್ಯ " ಹನಿಗವನ ಸಂಕಲನ ಪ್ರಕಟವಾಗಿದ್ದು, " ಚೇತನಾ" ಸಾಹಿತ್ಯ ಪ್ರಶಸ್ತಿ, " ಅಡ್ವೈಸರ್" ಸಾಹಿತ್ಯ ಪ್ರಶಸ್ತಿಗಳಿಗೆ ಭಾಜನವಾಗಿದೆ. ವಿದ್ಯಾರ್ಥಿ ಜೀವನದಲ್ಲಿ ಸಹಪಾಠಿಗಳೊಂದಿಗೆ " ಪರೀಕ್ಷಾ ಪದ್ಧತಿ" ಎಂಬ ಪುಸ್ತಕ ಪ್ರಕಟವಾಗಿದೆ. ಸಾಹಿತ್ಯ ಅಕಾಡೆಮಿಗಾಗಿ "ಕವಿತೆ 2016" ಸಂಪಾದಿತ ಕೃತಿ 2021 ರಲ್ಲಿ ಬಿಡುಗಡೆಯಾಗಿದೆ.

More About Author