Poem

ಮಿತಿಯಿರಲಿ ಮತಿಯಿರಲಿ..!

ಬಾಗುತ್ತಾರೆಂದ ಮಾತ್ರಕ್ಕೆ
ಮಿತಿ ಮೀರಿ ಬಗ್ಗಿಸಬೇಡಿ
ಬಾಗಿ ಬಾಗಿ ಬಸವಳಿದು
ಕಡೆಗೊಮ್ಮೆ ಮುರಿದೀತು
ಬಂಧಗಳೇ ಹರಿದೀತು.!

ಕಾಯುತ್ತಾರೆಂದ ಮಾತ್ರಕ್ಕೆ
ತಾಳ್ಮೆಗೆಡುವಷ್ಟು ಕಾಯಿಸಬೇಡಿ.!
ಕಾದು ಕಾದು ಉಕ್ಕುರಿದು
ನಂಬಿಕೆಯೇ ಆವಿಯಾದೀತು
ಭಾವಗಳೇ ಬತ್ತಿಹೋದೀತು.!

ಸಹಿಸುತ್ತಾರೆಂದ ಮಾತ್ರಕ್ಕೆ
ದಹಿಸುವಷ್ಟು ಸತಾಯಿಸಬೇಡಿ.!
ಸಹನೆಯಾ ಕಟ್ಟೆಯೊಡೆದು
ಸೌಜನ್ಯತೆ ಸಮಾಧಿಯಾದೀತು
ಬಾಂಧವ್ಯ ಬೂದಿಯಾದೀತು.!

ನಿಭಾಯಿಸುತ್ತಾರೆಂದ ಮಾತ್ರಕ್ಕೆ
ಸಕಲವನು ಹೊರಿಸಬೇಡಿ
ಹೊರುವ ಹೆಗಲು ಸವೆದು
ಬಾಧ್ಯತೆ ಕರಗಿ ಕುಸಿದೀತು
ಕ್ಷಮತೆಯೇ ಕೊನೆಯಾದೀತು.!

ಪ್ರಜ್ವಲಿಸುತ್ತಾರೆಂದ ಮಾತ್ರಕ್ಕೆ
ಬೇಕಾಬಿಟ್ಟಿ ಉರಿಸಬೇಡಿ
ಬೆಳಕಲ್ಲೂ ಬೆಳಗಿ ದಣಿದು
ಬೆಳಗುವ ನೆಲೆ ಕುರುಡಾದೀತು
ಬದುಕಿನಾ ಸೆಲೆ ಬರಡಾದೀತು.!

“ಇದು ನಮ್ಮ ನಿಮ್ಮದೇ ಬದುಕಿನ ನಡವಳಿಕೆಗಳ ಕವಿತೆ. ನಡೆ-ನುಡಿ ಹಾವಳಿಗಳ ನಿತ್ಯ ಸತ್ಯ ಭಾವಗೀತೆ. ಇಲ್ಲಿ ದೈನಂದಿನ ಜೀವ-ಜೀವನದ ಸಂವೇದನೆಗಳಿವೆ. ನಿತ್ಯದ ಭಾವಾನುಭಾವಗಳ ವೇದನೆ, ನಿವೇದನೆಗಳಿವೆ. ಇಲ್ಲಿ ಆಳಕ್ಕಿಳಿದಷ್ಟೂ ಬದುಕು-ಬಂಧಗಳ ಅನಾವರಣವಿದೆ. ಅರ್ಥೈಸಿದಷ್ಟೂ ಬೆಳಕಿನೆಡೆಗೆ ನಡೆಸುವ ಕಿರಣಗಳ ಸ್ಫುರಣವಿದೆ. ಏನಂತೀರಾ..?” - ಪ್ರೀತಿಯಿಂದ ಎ.ಎನ್.ರಮೇಶ್.ಗುಬ್ಬಿ.

 

ಎ.ಎನ್.ರಮೇಶ್. ಗುಬ್ಬಿ

ಲೇಖಕ ಎ.ಎನ್.ರಮೇಶ್ ಗುಬ್ಬಿ ಅವರು ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನಲ್ಲಿ ಜನಿಸಿದರು. ವೃತ್ತಿಯಲ್ಲಿ ಕಾರವಾರ ಬಳಿಯ ಕೈಗಾದಲ್ಲಿರುವ ಭಾರತೀಯ ಅಣುಶಕ್ತಿ ನಿಗಮದ ಉದ್ಯೋಗಿ. ಪ್ರವೃತ್ತಿಯಲ್ಲಿ ಸಾಹಿತಿ. ಕವನ, ಚುಟುಕು, ಕಥೆ, ನಾಟಕ, ಚಿತ್ರಕಥೆ ರಚನೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ‘ಗುಬ್ಬಿಯ ಕಲರವ’, ‘ಚುಟುಕು-ಚಿತ್ತಾರ’, ‘ಎಡನೀರೊಡನೆಯನಿಗೆ ಚುಟುಕು ಪುಷ್ರ್ಪಾಚನೆ’, ‘ಕೇಶವನಾಮ ಚೈತನ್ಯಧಾಮ’ ಎಂಬ ಚುಟುಕು ಸಂಕಲನಗಳು, ‘ಹನಿ-ಹನಿ’ ಎಂಬ ಹನಿಗವನ ಸಂಕಲನ, ‘ಭಾವದಂಬಾರಿ’ ಕಥಾಸಂಕಲನ, ‘ಶಕ್ತಿ ಮತ್ತು ಅಂತ’ ಅವಳಿ ನಾಟಕ ಸಂಕಲನ, ‘ಕಿಸ್ ಮಾತ್ರೆ’ ಎನ್ನುವ ಹಾಸ್ಯಗವನ ಸಂಕಲನ, ‘ಹೂವಾಡಿಗ’, ‘ಕಾಡುವ ಕವಿತೆಗಳು’ ಕವನ ಸಂಕಲನಗಳು ಪ್ರಕಟವಾಗಿದೆ.

ಕಾಸರಗೋಡಿನ ಎಡನೀರಿನಲ್ಲಿ ನಡೆದ ಪ್ರಪ್ರಥಮ ಅಂತರರಾಜ್ಯ ಚುಟುಕು ಸಮ್ಮೇಳನದಲ್ಲಿ ‘ಚುಟುಕು ಭಾರ್ಗವ’ ಎಂಬ ಪ್ರಶಂಸೆ ದೊರೆತಿದ್ದು, ‘ಗುಬ್ಬಿಯ ಕಲರವ’ ಕೃತಿಗೆ ‘ಬಿ.ಕೃಷ್ಣ ಪೈ ಬದಿಯಡ್ಕ ಸ್ಮಾರಕ ಪ್ರಶಸ್ತಿ’, 2012ರಲ್ಲಿ ನಡೆದ ಕೇರಳ ರಾಜ್ಯ 5ನೆಯ ಕನ್ನಡ ಸಮ್ಮೇಳನ ಮತ್ತು ಕೇರಳ-ಕರ್ನಾಟಕ ಉತ್ಸವದಲ್ಲಿ ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನದಿಂದ ‘ಕಾವ್ಯ ಪ್ರಶಸ್ತಿ’, ಮಂಡ್ಯದ ‘ಅಡ್ವೈಸರ್’ ಪತ್ರಿಕೆಯ 2012ರ ‘ಅಡ್ವೈಸರ್ ಸಾಹಿತ್ಯ ಪ್ರಶಸ್ತಿ’, ಬೆಂಗಳೂರಿನ ಭಾರತರತ್ನ ಸರ್.ಎಂ.ವಿಶ್ವೇಶ್ವರಯ್ಯ ಇಂಜಿನಿಯರಿಂಗ್ ಪ್ರತಿಷ್ಠಾನ ಟ್ರಸ್ಟ್ ಹಾಗೂ ಸುರ್ವೆ ಪತ್ರಿಕೆಯಿಂದ ‘ಎಡನೀರೊಡೆಯನಿಗೆ ಚುಟುಕು-ಪುಷ್ಪಾರ್ಚನೆ’ ಕೃತಿಗೆ ರಾಜ್ಯಮಟ್ಟದ ವಿಶ್ವೇಶ್ವರಯ್ಯ ಸಾಹಿತ್ಯ ಪ್ರಶಸ್ತಿ ಮತ್ತು ಬೆಳ್ಳಿಪದಕ ಬಹುಮಾನ ಪಡೆದಿದ್ದಾರೆ. ಬಿಜಾಪುರದ ಬಸವಜಯಂತಿ ಶತಮಾನೋತ್ಸವ ಸಂಭ್ರಮ-2013 ಸಮಾರಂಭದಲ್ಲಿ ಪ್ರತಿಷ್ಠಿತ ‘ಬಸವಜ್ಯೋತಿ’ ಪ್ರಶಸ್ತಿ, ಕೆ.ಆರ್.ನಗರದ ಗ್ರಾಮಾಂತರ ಬುದ್ಧಿಜೀವಿಗಳ ಬಳಗದಿಂದ ‘ಕೆ.ಎಸ್.ನ. ರಾಜ್ಯಮಟ್ಟದ ಕಾವ್ಯಪುರಸ್ಕಾರ’, ಅಖಿಲ ಭಾರತ ಅಣುಶಕ್ತಿ ನಿಗಮದ ರಾಷ್ಟ್ರಮಟ್ಟದ 2009, 2013, 2016, 2018ರ ಸಾಂಸ್ಕೃತಿಕ ಸ್ಪರ್ಧಾವಳಿಯಲ್ಲಿ ‘ಸ್ವರಚಿತ ಕವನ ವಾಚನ’ದಲ್ಲಿ ಪ್ರಥಮ ಬಹುಮಾನ, ಹುಣಸೂರಿನ ಚುಟುಕು ಸಾಹಿತ್ಯ ಪರಿಷತ್ತಿನಿಂದ 2014ರ ‘ಚುಟುಕು ಮುಕುಟ’ ರಾಜ್ಯ ಪ್ರಶಸ್ತಿ, ಕೈಗಾದ ಸಹ್ಯಾದ್ರಿ ಕನ್ನಡ ಸಂಘದ ಆಶ್ರಯದಲ್ಲಿ ನಡೆದ ರಾಜ್ಯ ಮಟ್ಟದ ಚುಟುಕು ಸ್ಪರ್ಧೆ-2012 ರಲ್ಲಿ ಬಹುಮಾನ ಮತ್ತು 2013 ರ ‘ಯುವ ಪ್ರತಿಭಾ ಪುರಸ್ಕಾರ’ ಪಡೆದಿದ್ದಾರೆ. ‘ಶಕ್ತಿ ಮತ್ತು ಅಂತ' ನಾಟಕ ಸಂಕಲನಕ್ಕೆ ಸಂತೃಪ್ತಿ ಸಾಹಿತ್ಯ ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಟ್ರಸ್ಟ್‌ನಿಂದ 2017 ನೇ ಸಾಲಿನ `ನೃಪ ಸಾಹಿತ್ಯ ಪ್ರಶಸ್ತಿ', 2019 ರಲ್ಲಿ `ಜನ್ನ’ ಕಾವ್ಯ ಪ್ರಶಸ್ತಿ, ಡಿ.ಎಸ್.ಕರ್ಕಿ ಪ್ರತಿಷ್ಟಾನ ನೀಡುವ 2019 ನೇ ಸಾಲಿನ ಪ್ರತಿಷ್ಟಿತ `ಡಿ.ಎಸ್. ಕರ್ಕಿ ಕಾವ್ಯ ಪ್ರಶಸ್ತಿ’ಗಳು ಲಭಿಸಿವೆ.

 

More About Author