Poem

ಮುಖಾಮುಖಿ

ಎಷ್ಟೋ ದಿನಗಳ ಕೆಳಗೆ
ದಾರಿಯಲ್ಲಿ ಸಿಕ್ಕಿದ್ದ ಅವ
ಬಣ್ಣ ಬಣ್ಣದ ಕನಸಿತ್ತು ಕಣ್ಣಲ್ಲಿ
ಜಗವನ್ನೇ ಗೆಲ್ಲುವೆ ಎಂಬ ವಿಶ್ವಾಸವಿತ್ತು

ಪದಗಳ ಪಡೆಯೇ ಇತ್ತು ಆತನಲ್ಲಿ
ಕತೆ,ಕವಿತೆ ಬರೆಯಲು.
ವಿತಂಡ ವಾದಗಳಿಗೆ ಉತ್ತರಿಸಲು,
ಸರಿಯಾಗಿ ಅರ್ಥ ಮಾಡಿಸಲು
ಜ್ಞಾನದ ಭಂಡಾರವೇ ಇತ್ತು,

ಎಲ್ಲಕ್ಕಿಂತ ಹೆಚ್ಚಾಗಿ ಹತ್ತಿರದವರ
ನಾಡಿ ಹಿಡಿದು ಸ್ಪಂದಿಸುವ
ಗುಣವಿತ್ತು, ಕೇಳುವ ಸಹನೆಯಿತ್ತು.

ಮೊನ್ನೆ ಮತ್ತೆ ಕಂಡಿದ್ದ ಪೇಟೆಯ
ನಡುವಿನಲ್ಲಿ
ಮೂರು ದಾರಿ ಸೇರುವಲ್ಲಿ.
ಸಂತೆಯಲ್ಲಿ ತಪ್ಪಿಸಿಕೊಂಡ
ಮಗುವಿನ ಗಾಬರಿಯಿತ್ತು
ಕಣ್ಣಲ್ಲಿ

ಪ್ರಶ್ನಿಸಿದ್ದೆ

ಬದುಕು ಕಟ್ಟಿಕೊಳ್ಳುವ ಭರದಲ್ಲಿ
ನನ್ನತನವ ಮರೆತಿದ್ದೆ,
ಇತರರ ಮೆಚ್ಚಿಸಲು ಹೋಗಿ
ಸ್ವಂತಿಕೆ ಮರೀಚಿಕೆಯಾಗಿತ್ತು
ಹಣದ ಬೆನ್ನೇರಿ ಮೌಲ್ಯವ
ಗಾಳಿಗೆ ತೂರಿದೆ
ಮರಳಿ ಬಾರದಷ್ಟು ದೂರ ನಡೆದಾಗಿತ್ತು, ನಾನು
ಎಡವಿದ್ದೆಲ್ಲಿ? ಪ್ರಶ್ನಿಸಿದ
ಉತ್ತರ ಹುಡುಕುವ ಆಸೆಯಲ್ಲಿ,

ತಿರುವಿನಲ್ಲಿ ನಿಂತು ಹೊಸ ಹಾದಿಗೆ
ಹೊರಳುವಂತೆ ಹಾದು ಹೋದವನ
ಹಿಂದೆಯೇ ನನ್ನ ಮನಸ್ಸು ಹೋಗಿತ್ತು
ನಾ ತಪ್ಪಿದ್ದೆಲ್ಲಿ?

ಅವನೊಬ್ಬ _ ರೂಪಕ,
ನಾವೆಲ್ಲರೂ ಬದುಕಿನ ಪ್ರತೀಕ..?!

- ಆತ್ಮ ಜಿ.ಎಸ್

ವಿಡಿಯೋ
ವಿಡಿಯೋ

ಆತ್ಮ ಜಿ.ಎಸ್.

ಆತ್ಮ ಜಿ.ಎಸ್. ಅವರು ಮೂಲತಃ ಸಾಗರದವರು. ಪ್ರಸ್ತುತ ಬೆಂಗಳೂರಿನಲ್ಲಿ ವಾಸ್ತವ್ಯ. ಬರವಣಿಗೆ ಅವರ ಆಸಕ್ತಿದಾಯಕ ಕ್ಷೇತ್ರವಾಗಿದ್ದು, ಇವರ ಕವನ, ಲೇಖನಗಳು ಬೇರೆ ಬೇರೆ ಪತ್ರಿಕೆಗಳಲ್ಲಿ ಪ್ರಕಟವಾಗಿರುತ್ತದೆ.

More About Author