Poem

ನಾವು ಈ ಮಣ್ಣಿನ ರೈತ ಮಕ್ಕಳ ಪಡೆ

ನಾವು ಈ ಮಣ್ಣಿನ ರೈತ ಮಕ್ಕಳ ಪಡೆ
ನಾವು ಹೆಜ್ಜೆ ಇಡುವುದು ಊರ ಕಟ್ಟುವ ಕಡೆ

ಅಪ್ಪ ಅಮ್ಮರ ಕಷ್ಟಕ್ಕೆ ಹೆಗಲು ನೀಡುತ್ತೇವೆ.
ಅಕ್ಕ ಪಕ್ಕದವರ ಗೆಳತನ ಗಟ್ಟಿ ಮಾಡುತ್ತೇವೆ
ಹಿರಿಯರು ಸಾಗಿದ ಹಾದಿಯಲ್ಲಿ ನಾವು ಸಾಗುತ್ತೇವೆ
ಹಳ್ಳಿ ಜೀವನದ ಮೌಲ್ಯವನ್ನು ಎತ್ತಿ ಹಿಡಿಯುತ್ತೇವೆ.

!!ನಾವು ಈ ಮಣ್ಣಿನ!!

ಹೆಣ್ಣು ಗಂಡು ಎಂಬ ಬೇದ ಮರೆತು ಬಾಳುತ್ತೇವೆ
ಜಾತಿ ಧರ್ಮಗಳ ತೊರೆದು ಸಮನಾಗಿ ನಡೆಯುತ್ತೇವೆ
ಮಾನವೀಯ ಮೌಲ್ಯವನ್ನು ಜನ ಮನಕ್ಕೆ ಸಾರುತ್ತೇವೆ
ಪ್ರೀತಿ ಸ್ನೇಹದಿ ಬೆರೆತು ಒಂದಾಗಿ ಬದುಕುತ್ತೇವೆ.

!!ನಾವು ಈ ಮಣ್ಣಿನ !!

ಅಟ್ಟಿ ಗೊಬ್ಬರ ಹಾಕಿ ಬೇಸಾಯ ಮಾಡುತ್ತೇವೆ
ನಾಟಿ ಬೀಜಗಳ ಬಿತ್ತಿ ಅನ್ನ ಬೆಳೆಯುತ್ತೇವೆ
ಭೂತಾಯಿಗೆ ವಿಷ ಹಾಕೋದಿಲ್ಲ ಶಪಥ ಮಾಡುತ್ತೇವೆ
ಸಹಜ ಕೃಷಿಯ ಮಾಡಿ ಈ ಮಣ್ಣಾ ಉಳಿಸುತ್ತೇವೆ‌

!!ನಾವು ಈ ಮಣ್ಣಿನ!!

ಬೆಟ್ಟ ಗುಡ್ಡಗಳ ಮೇಲೆ ಗಿಡ ಮರ ಬೆಳೆಸುತ್ತೇವೆ.
ಕೆರೆ ಕುಂಟೆ ಕಟ್ಟಿ ನೀರು ಉಳಿಸುತ್ತೇವೆ
ಮರೆಯಾದ ನಮ್ಮ ಮಳೆರಾಯನ ಮರಳಿ ಕರೆಯುತ್ತೇವೆ‌
ಭೂತಾಯಿಯ ಅಂತರಾಳಕೆ ನೀರು ಉಣಿಸುತ್ತೇವೆ‌.

!!ನಾವು ಈ ಮಣ್ಣಿನ!!

ಹಬ್ಬ ಜಾತ್ರೆಗಳ ಮಾಡಿ ಹಂಚಿ ಉಣ್ಣುತ್ತೇವೆ
ಸುಗ್ಗಿಯಲ್ಲಿ ಹಿಗ್ಗಿ ನೆಲದ ಪದ ಹಾಡುತ್ತೇವೆ
ಕಳೆದು ಹೋದ ಈ ನೆಲದ ಸಂಸ್ಕೃತಿ ಮತ್ತೆ ಕಟ್ಟುತ್ತೇವೆ
ಹಿರಿಯರು ಕಟ್ಟಿದ ಹಳ್ಳಿಗಳನ್ನು ಉಳಿಸಿಕೊಳ್ಳುತ್ತೇವೆ.

!!ನಾವು ಈ ಮಣ್ಣಿನ!!

ರಚನೆ ಶಶಿರಾಜ್ ಹರತಲೆ

ಶಶಿರಾಜ್ ಹರತಲೆ

ಶಶಿರಾಜ್ ಹರತಲೆ ಅವರು ಮೂಲತಃ ಕಲಬುರಗಿಯವರು. ಸಾಹಿತ್ಯ ಅವರ ಆಸಕ್ತಿ ಕ್ಷೇತ್ರ, ಕತೆ, ಕವನ, ಲೇಖನ ಬರವಣಿಗೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

More About Author