Poem

ನಮ್ಮವ್ವ

ನೀವು ಫಿಲಾಸಫಿ ಗಿಲಾಸಫಿ
ಅಂತಾಡಿದರ
ಪಿಂಜಾರ ಶಫಿ ಅಂದುಕೊಂಡಾಳು !
ಆಕಿ ನಮ್ಮವ್ವ
ಫಿಲಾಸಫಿಯ ಮಾತೆಲ್ಲಿ ಬಂತು

ಸಾಹಿತ್ಯ ಸಮಾಜಶಾಸ್ತ್ರ
ಮನಶಾಸ್ತ್ರ ಮಾನವಶಾಸ್ತ್ರ ಅಂತಾಡಿದರ
ಅವೆಲ್ಲ ಹುಡಿಯಕ್ಕಿಶಾಸ್ತ್ರ ಸುರಿಗೆ ಶಾಸ್ತ್ರ
ಕುಬುಸದಶಾಸ್ತ್ರ ಅಂತಾದಾವು !
ಆಕಿ ನಮ್ಮವ್ವ
ಶಾಸ್ತ್ರಗಳ ಮಾತೆಲ್ಲಿ ಬಂತು

ಕಳೆ ಕಿತ್ತು ಹುಲ್ಲುಹೊತ್ತು ಉತ್ತು ಬಿತ್ತು
ತುತ್ತು ಕೊಟ್ಟಾಕಿಯಾಕಿ
ಇದನ್ನ ಓದಿ ಅದನ್ನ ಬರ್ದು
ಏನೋ ದೊಡ್ಡದೊಂದು ಆಗಬೇಕೆಂದರ

ಅದೆಲ್ಲದೂ ಆಗು ಅಂದು
ನಮ್ಮ ಮುದಿ ಎಮ್ಮಿಯ ಆರನೇ ತಲೆಮಾರನ್ನ
ಮೊದಲ ಶ್ರದ್ಧೆಯಿಂದಲೇ ಸಾಕುತ್ತಿದ್ದಾಳೆ
ಮುಸುರಿಯಿಟ್ಟು ಉಳಿದ ಮುದ್ದಿಯಿಟ್ಟು

ನೈಸು ಪೈಸು ಗೊತ್ತಿಲ್ಲ
ಮೋಸಗೀಸ ಆಕಿಯ ಜಗತ್ತಲ್ಲ
ಸೈ ಅನಿಸಿದರ ಹರಕೆ ಹಾಕಿ
ಅಲ್ಲವೆನಿಸಿದರ ಅಲ್ಲೇ ಉಸಿರು ಹಾಕಿ
ಭಾರವೆನಿಸಿದರ ಭಾವಗಳ
ಬಯಲಿಗಾಕಿ ಬದುಕುತ್ತಿದ್ದಾಳೆ
ಆಕಿ ನಮ್ಮವ್ವ

ಆಕಿ ನನ್ನೊಳಗಿನ ಜೀವದಕೊಂಡಿ
ಭಾವಗಳ ಬಲೆ

ಬದುಕು ಸಣ್ಣದು
ನೆನಪುಗಳು ಉದ್ದುದ್ದ
ಅವ್ವನ ಪಾತ್ರ ಅಚ್ಚುಕಟ್ಟು
ಅನ್ನುತ್ತಿರುವಾಗಲೇ ಅತ್ತೆಯಾಗಿ ಆಟದ
ಪಟ್ಟುಗಳ ಮೆತ್ತಗೆ ಒಲಿಸಿಕೊಂಡಾಕಿ
ತಪ್ಪುತ್ತಿರುವ ಮನೆಯೊಳಗಿನ ತಾಳಗಳ ಸದ್ದು

ಮರೆಸಲು ಕಟ್ಟೆಯ ಮೇಲೆ ಜನರೊಂದಿಗೆ
ಗಹಗಹಿಸಿ ನಗುವಾಕಿ
ನಕ್ಕವರು ಮರೆಯಾದ ಕೂಡಲೇ ಸೆರಗನ್ನು
ಕಣ್ಣಿಗೆ ಒತ್ತಿಕೊಳ್ಳುವಾಕಿ

ಏರು ಇಳುವಿನ ದೀರ್ಘ ತಿರುವುಗಳ ದಾರಿ
ನಟನೆಯಲ್ಲದ ನಟನೆಯೊಂದನ್ನು
ಈಕೆಗೂ ಕಲಿಸಿರಬಹುದು
ಶಾಸ್ತ್ರಗಳಲ್ಲದ ಶಾಸ್ತ್ರವೊಂದು
ಚಿಗುರೊಡೆದು ಬೆಳೆದಿರಬಹುದು
ಎತ್ತಿ ಆಡಿಸಿದ ಮೊಮ್ಮಕ್ಕಳು
ಸೀಮೆ ಕಟ್ಟಿ ಓಡುತ್ತಿವೆ
ಈಗೀಗ ಈಕಿ ಒಂದೊಂದೇ
ಹೆಜ್ಜೆ ನಡೆಯುತ್ತಾಳೆ
ಈಕಿ ನಮ್ಮವ್ವ

-ಸಿ.ಬಿ. ಐನಳ್ಳಿ

 

 

 

 

ವಿಡಿಯೋ
ವಿಡಿಯೋ

ಸಿ.ಬಿ. ಐನಳ್ಳಿ

ಸಿ.ಬಿ. ಐನಳ್ಳಿ ಅವರು ಮೂಲತಃ ಬಳ್ಳಾರಿ ಜಿಲ್ಲೆಯವರು. ಸಾಹಿತ್ಯ ಕ್ಷೇತ್ರದಲ್ಲಿ ವಿಶೇಷ ಆಸಕ್ತಿ ಹೊಂದಿದ್ದಾರೆ. ಕಾವ್ಯ ಅವರ ಸಾಹಿತ್ಯ ಪ್ರಕಾರ. ಧಾರವಾಡದ ಕರ್ನಾಟಕ ಕಲಾ ಮಹಾವಿದ್ಯಾಲಯಲ್ಲಿ ಇಂಗ್ಲಿಷ್ ವಿಭಾಗದ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿರುವ ಅವರು ಇಂಡಿಯನ್-ಅಮೇರಿಕನ್ ಲೇಖಕಿ ‘ಜುಂಪಾ ಲಾಹಿರಿಯ ಕೃತಿಗಳಲ್ಲಿ ವಸ್ತು ಮತ್ತು ತಂತ್ರಗಳ ಅಧ್ಯಯನ’ ಕ್ಕಾಗಿ ಕರ್ನಾಟಕ ವಿಶ್ವವಿದ್ಯಾಲಯ ಡಾಕ್ಟರೇಟ್ ಪದವಿ ಪಡೆದಿದ್ದಾರೆ.

More About Author