Story

ನೀಳ ಗಾಜಿನ ಕಿಟಕಿಗಳಿಂದಾಚೆಗೆ

ಕಾದಂಬರಿಗಾರ್ತಿ, ಕತೆಗಾರ್ತಿ ಆಶಾ ರಘು ಅವರು ಮೂಲತಃ ಬೆಂಗಳೂರಿನವರು. ಇವರು ಬೆಂಗಳೂರು ವಿಶ್ವವಿದ್ಯಾಲಯದಿಂದ ಕನ್ನಡ ಸ್ನಾತಕೋತ್ತರ ಪದವಿ ಪಡೆದಿರುತ್ತಾರೆ. 'ಆವರ್ತ', 'ಗತ', 'ಮಾಯೆ', 'ಆರನೇ ಬೆರಳು', 'ಬೊಗಸೆಯಲ್ಲಿ ಕಥೆಗಳು', 'ಅಪರೂಪದ ಪುರಾಣ ಕಥೆಗಳು', 'ಚೂಡಾಮಣಿ' ಹೀಗೆ ಅನೇಕ ಸಾಹಿತ್ಯ ಕೃಷಿಯನ್ನು ಮಾಡಿರುವ ಅವರ ಬೊಗಸೆಯಲ್ಲಿ ಕಥೆಗಳು ಸಂಕಲದಿಂದ ಆಯ್ದ ‘ನೀಳ ಗಾಜಿನ ಕಿಟಕಿಗಳಿಂದಾಚೆಗೆ ’ ಅತಿ ಸಣ್ಣ ಕತೆನಿಮ್ಮ ಓದಿಗಾಗಿ...

ಸ್ಲಮ್ಮಿನ ಆ ಸಣ್ಣ ಜೋಪಡಿಯಿಂದ ತನ್ನ ಹಳೇ ಜಿಪ್ಪು ಕಿತ್ತು ಸೇಫ್ಟಿಪಿನ್ನು ಹಾಕಿದ್ದ ಕಿಟ್ಟುಬ್ಯಾಗು; ಪೌಂಡರು ಡಬ್ಬ, ಅಲ್ಲಲ್ಲಿ ಬಿಂದಿ ಮೆತ್ತಿ ಕಪ್ಪು ಕಲೆಗಳಾಗಿದ್ದ ಅಂಗೈ ಅಗಲದ ಕನ್ನಡಿ, ತುದಿ ಮುಟ್ಟಿದ್ದ ಲಿಪ್ಸ್ಟಿಕ್, ಗಾಜಿನ ಬಳೆಗಳು, ಕಾಜಲ್ ಡಬ್ಬಿ ಎಲ್ಲವನ್ನು ಸುರಿದುಕೊಂಡ ಇನ್ನೊಂದು ಚಿಕ್ಕ ಹ್ಯಾಂಡ್ ಬ್ಯಾಗು ಹಿಡಿದು ಅಪ್ಪಅಮ್ಮರ ಅಣ್ಣಂದಿರ ಕಣ್ಣು ತಪ್ಪಿಸಿ ಟ್ಯಾಕ್ಸಿಯವನ ಹಿಂದೆ ಗಿಲೀಟು ತಾಳಿ ಕಟ್ಟಿಕೊಂಡು ಹೋಗಿಬಿಟ್ಟಿದ್ದ ಹಾಲುಬಣ್ಣದ ರಮಾಬಾಯಿಗೆ ನೀಳ ಗಾಜಿನ ಕಿಟಕಿಗಳ ದೊಡ್ಡದೊಡ್ಡ ಬಿಲ್ಡಿಂಗ್‌ಗಳೊಳಗೆ ಕಾಲಿಡುವುದೇ ಮೊದಲಿಗೆ ಸಂಭ್ರಮವೆನಿಸುತ್ತಿತ್ತು.

ಗಂಡು ಎಂದು ಅವಳು ಗುರುತಿಸಿಕೊಂಡ ಆ ಟ್ಯಾಕ್ಸಿಯ ಕರಿಬಣ್ಣದ ಬಿಳುಪು ಶರಟಿನ ಆಸಾಮಿಯ ತಲೆ ಬದಲಾಗಿ ಬೇರೆಬೇರೆಯ ತೋಳು, ಬೆವರು ನಾತಗಳ ಕೂಟ ಬೆಳೆಯತೊಡಗಿದಾಗ, ಜೋಪಡಿಯ ಮೋಟು ಗೋಡೆ, ಕ್ಯಾಲೆಂಡರು, ಪ್ಲಾಸ್ಟಿಕ್ ಮೆತ್ತಿದ ತೂತು ಬಕೇಟು, ರಂಗೋಲಿಯ ಕರಟ, ಅಲ್ಯುಮಿನಿಯಂ ಬೋಸಿಗಳು ಅಕ್ಕರೆಯ ದನಿಗಳಾಗಿ ಕರೆಯತೊಡಗಿ, ನೀಳ ಗಾಜಿನ ಕಿಟಕಿಗಳಿಂದಾಚೆಗೆ ಆ ರಸ್ತೆಯಲ್ಲಿ ಎಂದಾದರೂ ಕಾಣಬಹುದಾದ ತನ್ನ ಅಪ್ಪ. ಅಣ್ಣಂದಿರಿಗಾಗಿ ಬಿಡುವಾದಾಗಲೆಲ್ಲಾ ನಿಂತು ನೋಡತೊಡಗಿದಳು.

(ಇದು ನನ್ನ 'ಬೊಗಸೆಯಲ್ಲಿ ಕಥೆಗಳು' ಸಂಕಲನದಿಂದ ಆಯ್ದ ಕಥೆ -ಆಶಾ ರಘು)

ಆಶಾ ರಘು

ಆಶಾ ರಘು ಅವರು ಕನ್ನಡದ ಪ್ರಮುಖ ಕಾದಂಬರಿಗಾರ್ತಿಯರಲ್ಲಿ ಒಬ್ಬರು. ಇವರು ಕೇಶವ ಅಯ್ಯಂಗಾರ್ ಹಾಗೂ ಸುಲೋಚನ ದಂಪತಿಗಳ ಹಿರಿಯ ಮಗಳಾಗಿ 1979ರ ಜೂನ್ 18 ನೇ ತಾರೀಖಿನಂದು ಬೆಂಗಳೂರಿನಲ್ಲಿ ಹುಟ್ಟಿದರು. ಇವರು ಬೆಂಗಳೂರು ವಿಶ್ವವಿದ್ಯಾಲಯದಿಂದ ಕನ್ನಡ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಉಪನ್ಯಾಸಕರಾಗಿ ಕೆಲಕಾಲ ಕಾರ್ಯ ನಿರ್ವಹಿಸಿರುವ ಇವರು, ರಂಗಭೂಮಿ, ಕಿರುತೆರೆ, ಬೆಳ್ಳಿತೆರೆಗಳಲ್ಲಿಯೂ ಕಲಾವಿದೆಯಾಗಿ, ಸಂಭಾಷಣೆಕಾರರಾಗಿ, ಸಹಾಯಕ ನಿರ್ದೇಶಕರಾಗಿ ಕೂಡ ಕಾರ್ಯ ನಿರ್ವಹಿಸಿದ್ದಾರೆ.

'ಆವರ್ತ', 'ಗತ', 'ಮಾಯೆ', 'ಚಿತ್ತರಂಗ' ಮೊದಲಾದ ಕಾದಂಬರಿಗಳನ್ನೂ, 'ಆರನೇ ಬೆರಳು', 'ಬೊಗಸೆಯಲ್ಲಿ ಕಥೆಗಳು', 'ಅಪರೂಪದ ಪುರಾಣ ಕಥೆಗಳು' ಮೊದಲಾದ ಕಥಾಸಂಕಲನಗಳನ್ನೂ, 'ಚೂಡಾಮಣಿ', 'ಕ್ಷಮಾದಾನ', 'ಬಂಗಾರದ ಪಂಜರ ಮತ್ತು ಇತರ ಮಕ್ಕಳ ನಾಟಕಗಳು' 'ಪೂತನಿ ಮತ್ತಿತರ ನಾಟಕಗಳು'  ಮೊದಲಾದ ನಾಟಕ ಕೃತಿಗಳನ್ನು ರಚಿಸಿದ್ದಾರೆ. ಇವರ 'ಆವರ್ತ' ಕಾದಂಬರಿಯ ಕುರಿತ ಕೃತಿ 'ಆವರ್ತ-ಮಂಥನ' ಕೂಡಾ ಪ್ರಕಟಗೊಂಡಿದೆ. ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ (2014), ಸೂರ್ಯನಾರಾಯಣ ಚಡಗ ಪ್ರಶಸ್ತಿ (2014), ಕನ್ನಡ ಸಾಹಿತ್ಯ ಪರಿಷತ್ತಿನ ಪಳಕಳ ಸೀತಾರಾಮಭಟ್ಟ ಪ್ರಶಸ್ತಿ (2019), ರಾಯಚೂರು ಕನ್ನಡ ಸಾಹಿತ್ಯ ಪರಿಷತ್ತಿನ ರಾಜಲಕ್ಷ್ಮಿ ಬರಗೂರು ರಾಮಚಂದ್ರಪ್ಪ ಪ್ರಶಸ್ತಿ (2020), ಸೇಡಂನ ಅಮ್ಮ (2021), ಕರ್ನಾಟಕ ಲೇಖಕಿಯರ ಸಂಘದ ತ್ರಿವೇಣಿ ದತ್ತಿನಿಧಿ ಪ್ರಶಸ್ತಿ (2023)ಗಳನ್ನು ಪಡೆದಿದ್ದಾರೆ. ಮಂಡ್ಯಾ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು 2023 ರಲ್ಲಿ ಇವರಿಗೆ 'ಸಾಹಿತ್ಯಾಮೃತ ಸರಸ್ವತಿ' ಎಂಬ ಬಿರುದು ನೀಡಿ ಗೌರವಿಸಿದೆ.

More About Author