Poem

ನೆನಪು ತರುವ ಹೂ ಮಳೆ

ಧೋ ಎಂದು ಸುರಿಯುವ ಸೋನೆ ಮಳೆ
ಬೇಡ ಬೇಡವೆಂದರೂ ನಿನ್ನ ನೆನಪುಗಳ
ಸಿಹಿ ಮೂಟೆಯ ಹೊತ್ತು ತರುತಿದೆ....

ಮಳೆಯೊಳಗೆ ಲಾಸ್ಯವಾಡುವ ಗಾಳಿ ಸುಯ್ಯನೆ
ಬೀಸಿ ಹೂ ಹನಿಗಳ ಮುಖಕ್ಕೆ ರಾಚುತ್ತಿದೆ
ಮನದ ನೂರು ನೆನಪುಗಳು ಮುದಗೊಂಡಿದೆ...

ಇಳಿ ಸಂಜೆಯ ಈ ಮಳೆಯೇಕೆ ಇಷ್ಟು ಸುಂದರ
ಇನಿಯನ ನೆನಪಿಗೂ ಮಳೆಗೂ ತೀರದ ಬಂಧ
ನನಗೇಕೋ ಕಾಡುತಿದೆ ಪ್ರೀತಿಯ ಅನುಬಂಧ...

ಇಳೆಯ ತೋಯಿಸುವ ಮಳೆಗೆ ಸುಮ್ಮನೆ ಕುಳಿತ
ನನ್ನ ಭಾವನೆಗಳ ಕಂಡು ತೀರ ಹೊಟ್ಟೆಕಿಚ್ಚು
ಅವನ ನೆನಪುಗಳ ತಂದಿಟ್ಟು ತಲ್ಲಣಗೊಳಿಸಿತಲ್ಲ...

ಮಳೆಯ ದೂರುವ ಹುಸಿಕೋಪ ನನಗೇಕೆ
ಸುರಿವ ವರ್ಷಧಾರೆಯ ಸ್ಪರ್ಶ ತಂಪೆನಿಸಿದರೆ
ಆತನ ಒಲವಿನ ನೆನಪುಗಳು ಬೆಚ್ಚಗಾಗಿವೆ....

ಎಡೆಬಿಡದೆ ಜೋರಾಗಿ ಸುರಿದು ಬಿಡು ಮಳೆಯೇ
ನೆನಪುಗಳ ಹಿಡಿದು ನನ್ನೊಳಗೆ ಅಪ್ಪಿಕೊಳ್ಳುವೆ
ಮಳೆದನಿಗೆ ಕೇಳಿಸದಂತೆ ಹೆಸರ ಪಿಸುಗುಡುವೆ.

ಶರಣ್ಯ ಕೋಲ್ಚಾರ್

ಶರಣ್ಯ ಕೋಲ್ಚಾರ್

ಕವಿ ಶರಣ್ಯ ಕೋಲ್ಚಾರ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲ್ಲೂಕಿನ ಕೋಲ್ಚಾರಿನವರು. ತನ್ನ ಪ್ರಾಥಮಿಕ ಶಿಕ್ಷಣವನ್ನು ಪಡ್ಪಿನಂಗಡಿಯಲ್ಲಿ ಪೂರೈಸಿ, ಬಾಳಿಲ ವಿದ್ಯಾಭೋಧಿನಿ ಪ್ರೌಢಶಾಲೆಯಲ್ಲಿ ಪ್ರೌಡ ಶಿಕ್ಷಣ ಪೂರೈಸಿದ ಇವರು ಕಲಾವಿಭಾಗದಲ್ಲಿ ಪದವಿ ಪಡೆದು ನಂತರ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ವಿಚಾರ ವಿಮರ್ಶೆ, ಭಾಷಣ, ಬರವಣಿಗೆ, ಪ್ರವಾಸ, ಓದು ಇವರ ನೆಚ್ಚಿನ ಹವ್ಯಾಸಗಳು

ಪ್ರಸ್ತುತ ಹೊಸದಿಗಂತದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.

More About Author