Poem

ನೀ ಯಾರು 

ನಾ ಹುಟ್ಟಿನಿಂದ ನಾ ನಾನೇ
ನೀ ಯಾರೆಂದು ಕೇಳಲು ನೀ ಯಾರು
ಗಂಡಾಗಿ ಹುಟ್ಟಿ ಹೆಣ್ಣಾಗಿ ಬೆಳೆಯುವ ಪರಿಯಲ್ಲಿ
ಜಡೆ ನನ್ನದು, ಪೌಡರ್ ನನ್ನದು, ಲಿಫ್ ಸ್ಟಿಕ್ ನನ್ನದು
ಮೇಕಪ್ ಸೆಟ್ ನನ್ನದು

ನೀ ಹೆಣ್ಣೊ ಗಂಡೇ ಎಂದು ಕೇಳಲು ನೀ ಯಾರು
ಕುಂಟೇಬಿಲ್ಲೆ, ಕಣ್ಣಮುಚ್ಚಾಲೆಗಳೇ ನನ್ನ ಆಟ
ಕಬ್ಬಡಿ, ಕ್ರಿಕೆಟ್ ನನಗೆ ನಾಟ
ಇದನ್ನೇ ಹಾಡೆನ್ನಲು ನೀ ಯಾರು?

ಅಮ್ಮ ಕೊಡಿಸಿದ್ದು ಅಂಗಿ ಚಡ್ಡಿ
ಅಪ್ಪ ಕೊಡಿಸಿದ್ದು ಪ್ಯಾಂಟ್ ಶರ್ಟ್
ಇದ ನಾ ಬಯಸಿದ್ದು ಲಂಗ, ಕುಬಸ, ಚೂಡಿ, ಸೀರೆ
ಇದನ್ನೇ ಧರಿಸೆನ್ನಲು ನೀ ಯಾರು?

ಕಟ್ಟಿಗೆ ಕಡಿಯುವುದು ನಾನೊಲ್ಲೆ,
ಗ್ಯಾಸನ್ನು ತರುವುದು ನಾನೊಲ್ಲೆ
ಪಾತ್ರೆ ತೊಳೆಯುವುದೇ ನನಗೆ ಇಷ್ಟ
ಅಡುಗೆ ಮಾಡುವುದೇ ನನಗೆ ಇಷ್ಟ

ಇದನ್ನೇ ಮಾಡೆನ್ನಲು ನೀ ಯಾರು?
ಹೆಣ್ಣಿನ ಸಂಗವ ನಾನೊಲ್ಲೆ,
ಅವಳೊಂದಿಗೆ ಮದುವೆಯು ನಾನೊಲ್ಲೆ
ಗಂಡಿನ ಸಂಗವೇ ನನಗಿಷ್ಟ
ಅವನೊಂದಿಗೆ ಮದುವೆಯೇ ನನಗಿಷ್ಟ
ಇವರನ್ನೇ ಮದುವೆಯಾಗು ಎನ್ನಲು ನೀ ಯಾರು?

ನನ್ನ ದೇಹ ನನ್ನ ಹಕ್ಕು
ನನ್ನ ಲಿಂಗ ನನ್ನ ಹಕ್ಕು
ನನ್ನ ಲಿಂಗತ್ವದ ನನ್ನ ಹಕ್ಕು,
ನನ್ನ ಮದುವೆಯು ನನ್ನ ಹಕ್ಕು
ಇದನ್ನು ನಿರಾಕರಿಸಲು ನೀ ಯಾರು?

-ಪಂಚಮಿ ಎಸ್.

ವಿಡಿಯೋ
ವಿಡಿಯೋ

ಪಂಚಮಿ ಎಸ್

ಪಂಚಮಿ ಎಸ್ ತೃತೀಯಲಿಂಗಿ ಸಮುದಾಯದವರು. ಸಾಹಿತ್ಯಕ್ಷೇತ್ರದಲ್ಲಿ ಆಸಕ್ತಿ ಹೊಂದಿರುವ ಅವರು ಕವನ ಬರವಣಿಗೆಯಲ್ಲಿ ತಮ್ಮನು ತೊಡಗಿಸಿಕೊಂಡಿದ್ದಾರೆ . ತೃತೀಯಲಿಂಗಿ ಸಮುದಾಯದ ಹೋರಾಟಗಳಲ್ಲಿಯು ತೊಡಗಿಸಿಕೊಂಡಿದ್ದಾರೆ.

More About Author